ಯೆಹೋವನ ಭಕ್ತಪಾಲನೆ
ಯಾತ್ರಾಗೀತೆ.
ಆದಿ 28:15
1ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ;
ನನ್ನ ಸಹಾಯವು ಎಲ್ಲಿಂದ ಬರುವುದು?
2ಭೂಮಿ, ಆಕಾಶಗಳನ್ನು ನಿರ್ಮಿಸಿದ ಯೆಹೋವನಿಂದಲೇ,
ನನ್ನ ಸಹಾಯವು ಬರುತ್ತದೆ.
3ಆತನು ನಿನ್ನ ಪಾದಗಳನ್ನು ಕದಲಗೊಡಿಸುವುದಿಲ್ಲ;
ನಿನ್ನನ್ನು ಕಾಯುವವನು ತೂಕಡಿಸದಿರಲಿ.
4ಇಗೋ, ಇಸ್ರಾಯೇಲರನ್ನು ಕಾಯುವಾತನು,
ತೂಕಡಿಸುವುದೂ ಇಲ್ಲ, ನಿದ್ರಿಸುವುದೂ ಇಲ್ಲ.
5ನಿನ್ನನ್ನು ಕಾಯುವವನು ಯೆಹೋವನೇ;
ನಿನ್ನ ಬಲಗಡೆಯಲ್ಲಿ ನೆರಳಿನಂತೆ ನಿಂತಿರುವಾತನು ಯೆಹೋವನೇ.
6ಹಗಲಿನಲ್ಲಿ ಸೂರ್ಯನೂ, ಇರುಳಿನಲ್ಲಿ ಚಂದ್ರನೂ,
ನಿನ್ನನ್ನು ಬಾಧಿಸುವುದಿಲ್ಲ.
7ಯೆಹೋವನು ನಿನ್ನನ್ನು ಎಲ್ಲಾ ಕೇಡಿನಿಂದ ತಪ್ಪಿಸುವನು;
ನಿನ್ನ ಪ್ರಾಣವನ್ನು ಕಾಯುವನು.
8ನೀನು ಹೋಗುವಾಗಲೂ, ಬರುವಾಗಲೂ,
ಈಗಿನಿಂದ ಸದಾಕಾಲವೂ ಯೆಹೋವನು ನಿನ್ನನ್ನು ಕಾಪಾಡುವನು.