ದೇವಭಕ್ತಿಯ ವಿಷಯದಲ್ಲಿ ಪ್ರೋತ್ಸಾಹ ಮತ್ತು ಎಚ್ಚರಿಕೆ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಗಿತ್ತೀಯ ರಾಗದಿಂದ ಹಾಡತಕ್ಕದ್ದು; ಆಸಾಫನ ಕೀರ್ತನೆ.
ಧರ್ಮೋ 32; ಕೀರ್ತ 8; 84
1ನಮಗೆ ಬಲಪ್ರದನಾಗಿರುವ ದೇವರಿಗೆ ಉತ್ಸಾಹಧ್ವನಿ ಮಾಡಿರಿ;
ಯಾಕೋಬ್ಯರ ದೇವರಿಗೆ ಜಯಘೋಷಮಾಡಿರಿ.
2ರಾಗವನ್ನು ಎತ್ತಿರಿ; ದಮ್ಮಡಿಯನ್ನು ಬಡಿಯಿರಿ;
ಇಂಪಾದ ಕಿನ್ನರಿಯನ್ನೂ, ಸ್ವರಮಂಡಲವನ್ನೂ ಬಾರಿಸಿರಿ.
3ಅಮಾವಾಸ್ಯೆಯಲ್ಲಿಯೂ, ನಮ್ಮ ಉತ್ಸವದಿನವಾಗಿರುವ ಹುಣ್ಣಿಮೆಯಲ್ಲಿಯೂ ಕೊಂಬನ್ನು ಊದಿರಿ.
4ಇದು ಇಸ್ರಾಯೇಲರಲ್ಲಿ ಒಂದು ಕಟ್ಟಳೆ;
ಇದು ಯಾಕೋಬ್ಯರ ದೇವರು ವಿಧಿಸಿದ್ದು.
5ಆತನು ಐಗುಪ್ತ ದೇಶವನ್ನು ಬಾಧಿಸಲಿಕ್ಕೆ ಹೊರಟಾಗ,
ನೆನಪಿಗಾಗಿ ಯೋಸೇಫ್ಯರಲ್ಲಿ ಈ ಕಟ್ಟಳೆಯನ್ನು ನೇಮಿಸಿದನು.
ಪರಿಚಯವಿಲ್ಲದವನ ಮಾತು ನನಗೆ ಕೇಳಿಸುತ್ತದೆ; ಏನೆಂದರೆ,
6“ಅವನ ಹೆಗಲನ್ನು ಹೊರೆಗೆ ತಪ್ಪಿಸಿದೆನು;
ಅವನ ಕೈಗಳನ್ನು ಪುಟ್ಟಿಯಿಂದ ಬಿಡಿಸಿದೆನು.
7ಕಷ್ಟದಲ್ಲಿ ಮೊರೆಯಿಟ್ಟ ನಿನ್ನನ್ನು ವಿಮೋಚಿಸಿದೆನು;
ಗುಡುಗುವ ಮೋಡದಲ್ಲಿದ್ದು ನಿನಗೆ ಉತ್ತರವನ್ನು ಕೊಟ್ಟೆನು;
ಮೆರೀಬಾ ಪ್ರವಾಹಗಳ ಬಳಿಯಲ್ಲಿ ನಿನ್ನನ್ನು ಪರೀಕ್ಷಿಸಿದೆನು.
ಸೆಲಾ.
8ನನ್ನ ಜನರೇ, ಕೇಳಿರಿ; ಖಂಡಿತವಾಗಿ ಹೇಳುತ್ತೇನೆ,
ಇಸ್ರಾಯೇಲರೇ, ಕಿವಿಗೊಟ್ಟರೆ ಎಷ್ಟೋ ಒಳ್ಳೇದು,
9ನಿಮ್ಮಲ್ಲಿ ಅನ್ಯದೇವತೆಗಳು ಇರಬಾರದು;
ಪರರ ದೇವತೆಗಳನ್ನು ಪೂಜಿಸಬಾರದು;
10ನಿಮ್ಮನ್ನು ಐಗುಪ್ತದಿಂದ ಕರೆತಂದ ಯೆಹೋವನೆಂಬ ನಾನೇ ನಿಮ್ಮ ದೇವರು;
ಅಗಲವಾಗಿ ಬಾಯಿತೆರೆಯಿರಿ; ಅದನ್ನು ತುಂಬಿಸುವೆನು ಅಂದೆನು.
11ಆದರೆ ನನ್ನ ಜನರು ನನ್ನ ಮಾತು ಕೇಳಲಿಲ್ಲ;
ಇಸ್ರಾಯೇಲರು ನನಗೆ ಸಮ್ಮತಿಸಲಿಲ್ಲ.
12ಆದುದರಿಂದ ಇವರು ಹಟಮಾರಿಗಳು;
ತಮ್ಮ ಮನಸ್ಸಿನಂತೆ ನಡೆಯಲಿ ಎಂದು ಬಿಟ್ಟುಬಿಟ್ಟೆನು.
13ನನ್ನ ಪ್ರಜೆಗಳಾದ ಇಸ್ರಾಯೇಲರು ನನ್ನ ಮಾತನ್ನು ಕೇಳಿ,
ನನ್ನ ಮಾರ್ಗದಲ್ಲಿ ನಡೆದರೆ ಎಷ್ಟೋ ಒಳ್ಳೆಯದು!
14ನಾನು ಅವರ ಎದುರಾಳಿಗಳ ಮೇಲೆ ಕೈಯೆತ್ತಿ,
ಅವರ ಶತ್ರುಗಳನ್ನು ಸುಲಭವಾಗಿ ಬಗ್ಗಿಸುವೆನು.
15ಯೆಹೋವನ ದ್ವೇಷಿಗಳು ಅವರ ಮುಂದೆ ಮುದುರಿಕೊಳ್ಳುವರು;
ಅವರಾದರೋ ಸದಾಕಾಲವೂ ಇರುವರು.
16ನಾನು ಅವರಿಗೆ ಶ್ರೇಷ್ಠವಾದ ಗೋದಿಯನ್ನು ಊಟಕ್ಕೆ ಕೊಟ್ಟು,
ಬಂಡೆಯೊಳಗಿನ ಜೇನಿನಿಂದ ತೃಪ್ತಿಪಡಿಸುವೆನು” ಎಂಬುದೇ.