ಯೆಹೋವನ ಸೃಷ್ಟಿಯ ಮಹತ್ವ
ಆದಿ 1
1ನನ್ನ ಮನವೇ, ಯೆಹೋವನನ್ನು ಕೊಂಡಾಡು.
ಯೆಹೋವನೇ, ನನ್ನ ದೇವರೇ, ನೀನು ಸರ್ವೋತ್ತಮನು;
ಪ್ರಭಾವ ಮತ್ತು ಮಹತ್ವಗಳಿಂದ ಭೂಷಿತನಾಗಿರುವೆ.
2ಬೆಳಕನ್ನು ವಸ್ತ್ರದಂತೆ ಹೊದ್ದುಕೊಂಡಿರುವೆ;
ಆಕಾಶವನ್ನು ಗುಡಾರದಂತೆ ಎತ್ತಿ ಹರಡಿರುವೆ.
3ನೀರಿನ ಮೇಲೆ ತೊಳೆಗಳನ್ನು ನಿಲ್ಲಿಸಿ ಉಪ್ಪರಿಗೆಗಳನ್ನು ಕಟ್ಟಿಕೊಂಡು;
ಮೋಡಗಳನ್ನು ವಾಹನವಾಗಿ ಮಾಡಿಕೊಂಡಿರುವೆ;
ವಾಯುವಿನ ರೆಕ್ಕೆಗಳ ಮೇಲೆ ಸಂಚರಿಸುತ್ತೀ.
4 ಗಾಳಿಯನ್ನು ನಿನ್ನ ದೂತರನ್ನಾಗಿಯೂ,
ಅಗ್ನಿಜ್ವಾಲೆಯನ್ನು ಸೇವಕರನ್ನಾಗಿಯೂ ಮಾಡಿಕೊಳ್ಳುತ್ತೀ.
5ಭೂಮಿಯು ಯುಗಯುಗಾಂತರಕ್ಕೂ ಕದಲದ ಹಾಗೆ
ಅದನ್ನು ದೃಢವಾದ ಅಸ್ತಿವಾರದ ಮೇಲೆ ಸ್ಥಾಪಿಸಿದ್ದೀ.
6ನೀನು ಅದನ್ನು ಆದಿಸಾಗರವೆಂಬ ವಸ್ತ್ರದಿಂದ ಹೊದಿಸಿದ್ದೀ;
ನೀರು ಪರ್ವತಗಳನ್ನೂ ಮುಚ್ಚಿಬಿಟ್ಟಿತ್ತು.
7ನೀನು ಗದರಿಸಲು ಅದು ಓಡಿಹೋಯಿತು;
ನಿನ್ನ ಗರ್ಜನೆಗೆ ಹೆದರಿ ನೀನು ನೇಮಿಸಿದ ಸ್ಥಳಕ್ಕೆ ಹೋಗಲು,
8ಪರ್ವತಗಳು ಎದ್ದವು; ತಗ್ಗುಗಳು ಇಳಿದವು.
9ಜಲರಾಶಿಗಳು ಬಂದು ಪುನಃ ಭೂಮಿಯನ್ನು ಮುಚ್ಚಿಕೊಳ್ಳದ ಹಾಗೆ,
ನೀನು ಮೇರೆಗಳನ್ನು ಗೊತ್ತುಮಾಡಿದಿ.
10ಬುಗ್ಗೆಗಳನ್ನು ತಗ್ಗುಗಳಿಗೆ ಬರಮಾಡುತ್ತೀ;
ಅವು ಪರ್ವತಗಳ ನಡುವೆ ಹರಿದುಹೋಗುತ್ತವೆ.
11ಅವು ಅಡವಿಯ ಮೃಗಗಳಿಗೆ ನೀರುಕೊಡುತ್ತವೆ;
ಕಾಡುಕತ್ತೆಗಳು ದಾಹ ತೀರಿಸಿಕೊಳ್ಳುತ್ತವೆ.
12ಪಕ್ಷಿಗಳು ಅವುಗಳ ಬಳಿಯ ಮರಗಳ ಕೊಂಬೆಗಳಲ್ಲಿ ವಾಸವಾಗಿದ್ದು ಗಾನಮಾಡುತ್ತವೆ.
13ನೀನು ನಿನ್ನ ಮೇಲಂತಸ್ತುಗಳಿಂದ ಪರ್ವತಗಳಿಗೆ ನೀರು ಕೊಡುತ್ತೀ;
ನಿನ್ನ ಕಾರ್ಯಫಲದಿಂದ ಭೂಮಿಯು ತೃಪ್ತಿಹೊಂದುತ್ತದೆ.
14ಪಶುಗಳಿಗೋಸ್ಕರ ಹುಲ್ಲನ್ನು ಮೊಳಿಸುತ್ತೀ;
ಮನುಷ್ಯರಿಗೋಸ್ಕರ ಪೈರುಗಳನ್ನು ಹುಟ್ಟಿಸುತ್ತೀ.
ಅವರು ಭೂವ್ಯವಸಾಯಮಾಡಿ ಆಹಾರವನ್ನು,
15ಹೃದಯಾನಂದಕರವಾದ ದ್ರಾಕ್ಷಾರಸವನ್ನು,
ಮುಖಕ್ಕೆ ಕಾಂತಿಯನ್ನು ಉಂಟುಮಾಡುವ ಎಣ್ಣೆಯನ್ನು,
ಪ್ರಾಣಾಧಾರವಾದ ರೊಟ್ಟಿಯನ್ನು ಸಂಪಾದಿಸಿಕೊಳ್ಳುತ್ತಾರೆ.
16ಯೆಹೋವನು ನೆಟ್ಟ ಮರಗಳಾದ ಲೆಬನೋನಿನ ದೇವದಾರು ವೃಕ್ಷಗಳಿಗೆ
ಬೇಕಾದಷ್ಟು ಜಲವಿರುತ್ತದೆ.
17ಪಕ್ಷಿಗಳು ಅವುಗಳಲ್ಲಿ ಗೂಡು ಕಟ್ಟಿಕೊಳ್ಳುತ್ತವೆ;
ತುರಾಯಿ ಮರಗಳಲ್ಲಿ ಬಕಪಕ್ಷಿಗಳು ವಾಸಿಸುತ್ತವೆ.
18ಕಾಡಕುರಿಗಳಿಗೆ ಉನ್ನತವಾದ ಪರ್ವತಗಳೂ,
ಬೆಟ್ಟದ ಮೊಲಗಳಿಗೆ ಬಂಡೆಗಳೂ ಆಶ್ರಯಸ್ಥಾನಗಳಾಗಿವೆ.
19ವಿಶೇಷಕಾಲಗಳ ಸೂಚನೆಗಾಗಿ ಚಂದ್ರನನ್ನು ನಿರ್ಮಿಸಿರುವೆ;
ಸೂರ್ಯನು ತನ್ನ ಅಸ್ತಮಾನ ಸಮಯವನ್ನು ಬಲ್ಲನು.
20ನೀನು ಕತ್ತಲೆಯನ್ನು ಬರಮಾಡಲು ರಾತ್ರಿಯಾಗುತ್ತದೆ.
ಆಗ ಕಾಡಿನ ಮೃಗಗಳೆಲ್ಲಾ ಹೊರಬರುತ್ತವೆ.
21ಪ್ರಾಯದ ಸಿಂಹಗಳು ಬೇಟೆಗಾಗಿ ಗರ್ಜಿಸುತ್ತವೆ;
ದೇವರಿಂದ ಆಹಾರವನ್ನು ಕೇಳಿಕೊಳ್ಳುತ್ತವೆ.
22ಸೂರ್ಯೋದಯವಾಗಲು ಅವು ಬಂದು ತಮ್ಮ ಗವಿಗಳಲ್ಲಿ ಮಲಗಿಕೊಳ್ಳುತ್ತವೆ.
23ಮನುಷ್ಯನು ತನ್ನ ಕೆಲಸಕ್ಕೆ ಹೊರಟು ಹೋಗುತ್ತಾನೆ;
ಸಾಯಂಕಾಲದವರೆಗೆ ದುಡಿಯುತ್ತಾನೆ.
24ಯೆಹೋವನೇ, ನಿನ್ನ ಕೈಕೆಲಸಗಳು ಬಗೆ ಬಗೆಯಾಗಿವೆ.
ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿರುವೆ;
ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ.
25ಇಗೋ, ಬಹುವಿಶಾಲವಾದ ಸಮುದ್ರವು!
ಅದರೊಳಗೆ ಲೆಕ್ಕವಿಲ್ಲದಷ್ಟು ಸಣ್ಣ, ದೊಡ್ಡ ಜೀವಜಂತುಗಳು ಚಲಿಸುತ್ತಿರುತ್ತವೆ.
26ಅದರಲ್ಲಿ ಹಡಗುಗಳು ಸಂಚರಿಸುತ್ತವೆ
ನೀನು ಉಂಟುಮಾಡಿದ ಲಿವ್ಯಾತಾನವು ಅದರಲ್ಲಿ ಆಡುತ್ತದೆ.
27ಇವುಗಳು ಹೊತ್ತುಹೊತ್ತಿಗೆ ಆಹಾರಕ್ಕೋಸ್ಕರ ನಿನ್ನನ್ನೇ ನಿರೀಕ್ಷಿಸುತ್ತವೆ.
28ನೀನು ಕೊಡಲು ಅವು ತೆಗೆದುಕೊಳ್ಳುತ್ತವೆ;
ನೀನು ಕೈತೆರೆಯಲು ಅವು ಒಳ್ಳೇಯದನ್ನು ಹೊಂದಿ ತೃಪ್ತಿಗೊಳ್ಳುತ್ತವೆ.
29ನೀನು ವಿಮುಖನಾಗಲು ತಲ್ಲಣಿಸುತ್ತವೆ;
ಅವುಗಳ ಶ್ವಾಸವನ್ನು ತೆಗೆದುಬಿಡಲು ಅವು ಸತ್ತು ತಿರುಗಿ ಮಣ್ಣಿಗೆ ಸೇರುತ್ತವೆ.
30ನೀನು ಜೀವಶ್ವಾಸವನ್ನು ಊದಲು ಅವು ಹೊಸದಾಗಿ ಹುಟ್ಟುತ್ತವೆ.
ನೀನು ಭೂಮಿಯನ್ನು ನೂತನಪಡಿಸುತ್ತಿರುತ್ತಿ.
31ಯೆಹೋವನ ಮಹಿಮೆಯು ಸದಾಕಾಲವೂ ಇರಲಿ;
ಯೆಹೋವನಿಗೆ ಆತನ ಸೃಷ್ಟಿಗಳಿಂದ ಸಂತೋಷವಾಗಲಿ.
32ಆತನು ದೃಷ್ಟಿಸಿದ ಮಾತ್ರದಿಂದಲೇ ಭೂಮಿಯು ಕಂಪಿಸುತ್ತದೆ;
ಮುಟ್ಟುತ್ತಲೇ ಪರ್ವತಗಳು ಹೊಗೆಹಾಯುತ್ತವೆ.
33ನಾನು ಬದುಕಿರುವವರೆಗೂ ಯೆಹೋವನನ್ನು ಕೀರ್ತಿಸುತ್ತಿರುವೆನು;
ಜೀವಮಾನವೆಲ್ಲಾ ನನ್ನ ದೇವರನ್ನು ಭಜಿಸುತ್ತಿರುವೆನು.
34ನನ್ನ ಧ್ಯಾನದಿಂದ ಆತನಿಗೆ ಮೆಚ್ಚಿಕೆಯಾಗಲಿ;
ನಾನಾದರೋ ಯೆಹೋವನಲ್ಲಿ ಆನಂದಿಸುವೆನು.
35ಪಾಪಾತ್ಮರು ಭೂಲೋಕದಲ್ಲಿ ಮುಗಿದುಹೋಗಲಿ;
ದುಷ್ಟರು ನಿರ್ಮೂಲವಾಗಲಿ.
ನನ್ನ ಮನವೇ, ಯೆಹೋವನನ್ನು ಕೊಂಡಾಡು;
ಯೆಹೋವನಿಗೆ ಸ್ತೋತ್ರ.