ದೇವರನ್ನು ವಿಶ್ವಾಸದಿಂದ ಆರಾಧಿಸುವುದು
ಕೀರ್ತ 81; 96-100
1ಬನ್ನಿರಿ, ಯೆಹೋವನಿಗೆ ಉತ್ಸಾಹದಿಂದ ಹಾಡೋಣ;
ನಮ್ಮ ರಕ್ಷಕನಾದ ಶರಣನಿಗೆ ಜಯಘೋಷ ಮಾಡೋಣ.
2ಕೃತಜ್ಞತಾಸ್ತುತಿಯೊಡನೆ ಆತನ ಸನ್ನಿಧಿಗೆ ಸೇರೋಣ;
ಕೀರ್ತನೆಗಳಿಂದ ಆತನಿಗೆ ಜಯಘೋಷ ಮಾಡೋಣ.
3ಯೆಹೋವನು ಮಹಾದೇವರೂ,
ಎಲ್ಲಾ ದೇವರುಗಳಲ್ಲಿ ಮಹಾರಾಜನೂ ಆಗಿದ್ದಾನೆ.
4ಭೂಮಿಯ ಅಗಾಧವು ಆತನ ಕೈಯಲ್ಲಿರುತ್ತದೆ;
ಪರ್ವತಶಿಖರಗಳು ಆತನವೇ.
5ಆತನೇ ಸಮುದ್ರವನ್ನು ನಿರ್ಮಿಸಿದವನು;
ಅದು ಆತನದೇ, ಒಣನೆಲವು ಆತನ ಕೈಕೆಲಸವೇ.
6ಬನ್ನಿರಿ; ನಮ್ಮ ನಿರ್ಮಾಣಿಕನಾದ ಯೆಹೋವನಿಗೆ
ಸಾಷ್ಟಾಂಗವೆರಗಿ ಆರಾಧಿಸೋಣ.
7ಆತನು ನಮ್ಮ ದೇವರು;
ನಾವೋ ಆತನು ಪಾಲಿಸುವ ಪ್ರಜೆಯೂ,
ಆತನ ಕೈಕೆಳಗಿರುವ ಹಿಂಡೂ ಆಗಿದ್ದೇವೆ.
ನೀವು ಈ ಹೊತ್ತು ಆತನ ಶಬ್ದಕ್ಕೆ ಕಿವಿಗೊಟ್ಟರೆ ಎಷ್ಟೋ ಒಳ್ಳೇಯದು.
8ನಿಮ್ಮ ಹಿರಿಯರು ಅರಣ್ಯದಲ್ಲಿರುವ ಮೆರೀಬದಲ್ಲಿ,
ಮಸ್ಸಾದಲ್ಲಿ ಮಾಡಿದ ದಿನದಂತೆ,
ನೀವು ನಿಮ್ಮ ಹೃದಯವನ್ನು ಕಠಿಣಮಾಡಿಕೊಳ್ಳಬೇಡಿರಿ.
9ಅಲ್ಲಿ ಅವರು ನನ್ನನ್ನು ಪರೀಕ್ಷಿಸಿದರು;
ನನ್ನ ಮಹತ್ಕಾರ್ಯಗಳನ್ನು ನೋಡಿದರೂ ನನ್ನನ್ನು ಪರಿಶೋಧಿಸಿದರು.
10ನಾನು ನಲ್ವತ್ತು ವರ್ಷ ಆ ಸಂತತಿಯವರ ವಿಷಯದಲ್ಲಿ ಬೇಸರಗೊಂಡೆನು;
“ಈ ಜನರು ಹೃದಯದಲ್ಲಿ ತಪ್ಪಿಹೋಗುವವರು,
ನನ್ನ ಆಜ್ಞೆಗಳಿಗೆ ವಿಧೇಯರಾಗದವರು” ಎಂದು ಹೇಳಿದೆನು.
11ಆದುದರಿಂದ ಇವರು, “ನನ್ನ ವಿಶ್ರಾಂತಿಯಲ್ಲಿ ಸೇರಬಾರದು” ಎಂದು
ಕೋಪಗೊಂಡು ಪ್ರಮಾಣಮಾಡಿದೆನು.

Notes


*95:8 95:8 ಮೆರೀಬ ಅಂದರೆ ವಾಗ್ವಾದ.

95:8 95:8 ಮಸ್ಸಾದಲ್ಲಿ ಅಂದರೆ ಪರೀಕ್ಷೆ, ವಿಮೋ 17:1-17, ಅರಣ್ಯ 20:1-13, ಧರ್ಮೋ 6:16, 33:8.

95:10 95:10 ನನ್ನ ಆಜ್ಞೆಗಳಿಗೆ ವಿಧೇಯರಾಗದವರು ಅಥವಾ ನನ್ನ ಮಾರ್ಗವನ್ನು ತಿಳಿಯದವರು.