೩
ಮಹಾಯಾಜಕನ ಉಡುಪು ಮಾರ್ಪಡುವ ಕನಸು
೧ ಅನಂತರ ಮಹಾಯಾಜಕನಾದ ಯೆಹೋಶುವನು ಯೆಹೋವನ ದೂತನ ಮುಂದೆ ನಿಂತಿರುವುದನ್ನು ಯೆಹೋವನು ನನಗೆ ತೋರಿಸಿದನು. ಸೈತಾನನು ಯೆಹೋಶುವನಿಗೆ ಪ್ರತಿವಾದಿಯಾಗಿ ಅವನ ಬಲಗಡೆಯಲ್ಲಿ ನಿಂತಿದ್ದನು. ೨ ಆಗ ಯೆಹೋವನ ದೂತನು ಸೈತಾನನಿಗೆ, “ಯೆಹೋವನು ನಿನ್ನನ್ನು ಖಂಡಿಸಲಿ! ಹೌದು, ಯೆರೂಸಲೇಮನ್ನು ಆರಿಸಿಕೊಂಡಿರುವ ಯೆಹೋವನು ನಿನ್ನನ್ನು ಖಂಡಿಸಲಿ! ಅದು ಉರಿಯುವ ಬೆಂಕಿಯಿಂದ ಎಳೆದ ಕೊಳ್ಳಿಯಾಗಿದೆಯಲ್ಲಾ?” ಎಂದು ಹೇಳಿದನು. ೩ ಯೆಹೋಶುವನು ದೇವದೂತನ ಮುಂದೆ ಕೊಳೆಯಾದ ಬಟ್ಟೆಯನ್ನು ಧರಿಸಿ ನಿಂತಿರಲು,
೪ ದೇವದೂತನು ತನ್ನ ಸೇವಕರಿಗೆ, “ಇವನ ಕೊಳೆಬಟ್ಟೆಗಳನ್ನು ತೆಗೆದುಬಿಡಿರಿ” ಎಂದು ಅಪ್ಪಣೆ ಕೊಟ್ಟು ಅವನಿಗೆ, “ಇಗೋ, ನಿನ್ನ ದೋಷವನ್ನು ನಿನ್ನಿಂದ ತೊಲಗಿಸಿದ್ದೇನೆ, ನಿನಗೆ ಶ್ರೇಷ್ಠವಸ್ತ್ರವನ್ನು ತೊಡಿಸುವೆನು” ಎಂದು ಹೇಳಿದನು. ೫ “ಇವನ ತಲೆಗೆ ಶುಭ್ರವಾದ ಮುಂಡಾಸವನ್ನು ಸುತ್ತಿರಿ” ಎಂದು ಅವನು ಅಪ್ಪಣೆಕೊಡಲು ಅವರು ಅವನ ತಲೆಗೆ ಶುಭ್ರವಾದ ಮುಂಡಾಸವನ್ನು ಸುತ್ತಿ ಅವನಿಗೆ ವಸ್ತ್ರಗಳನ್ನು ತೊಡಿಸಿದರು, ಆಗ ಯೆಹೋವನ ದೂತನು ಎದ್ದು ನಿಂತನು.
೬ ಆಗ ಯೆಹೋವನ ದೂತನು ಯೆಹೋಶುವನಿಗೆ ಈ ಮಾತನ್ನು ಕೊಟ್ಟನು. ೭ ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ,
“ನೀನು ನನ್ನ ಮಾರ್ಗಗಳಲ್ಲಿ ನಡೆದು, ನಾನು ನಿನಗೆ ವಹಿಸಿದ ಪಾರುಪತ್ಯವನ್ನು ನೆರವೇರಿಸಿದರೆ
ನನ್ನ ಆಲಯದ ಮುಖ್ಯಾಧಿಕಾರಿಯಾಗಿ ನನ್ನ ಪ್ರಾಕಾರಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡುವೆ;
ನನ್ನ ಸನ್ನಿಧಾನದೂತರ ನಡುವೆ ಪ್ರವೇಶಿಸುವ ಹಕ್ಕನ್ನು ನಿನಗೆ ಕೊಡುವೆನು.
೮ ಮಹಾಯಾಜಕನಾದ ಯೆಹೋಶುವನೇ, ನೀನೂ, ನಿನ್ನ ಮುಂದೆ ಕುಳಿತುಕೊಳ್ಳುವ ನಿನ್ನ ಸಂಗಡಿಗರೂ ಕೇಳಿರಿ.
ಇಗೋ, ಮೊಳಕೆ ಎಂಬ ನನ್ನ ಸೇವಕನನ್ನು ಹೊರಡಿಸುತ್ತೆನೆಂಬುದಕ್ಕೆ ಇವರೇ ಮುಂಗುರುತು.
೯ ನಾನು ಯೆಹೋಶುವನ ಮುಂದೆ ಇಟ್ಟಿರುವ ಕಲ್ಲನ್ನು ನೋಡಿರಿ; ಆ ಒಂದೇ ಕಲ್ಲಿನಲ್ಲಿ ಏಳು ಕಣ್ಣುಳ್ಳಾತನ ದೃಷ್ಟಿಯು ಬಿದ್ದಿದೆ;
ಇಗೋ ನಾನೇ ಅದರಲ್ಲಿ ಕೆತ್ತನೆ ಕೆತ್ತುವೆನು. ಇದು ಸೇನಾಧೀಶ್ವರನಾದ ಯೆಹೋವನ ನುಡಿ.
‘ಒಂದೇ ದಿನದೊಳಗೆ ಈ ದೇಶದ ಪಾಪವನ್ನು ಪರಿಹರಿಸುವೆನು.’
೧೦ “ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ‘ಆ ದಿನದಲ್ಲಿ ನೀವೆಲ್ಲರೂ ನಿಮ್ಮ ನಿಮ್ಮ ನೆರೆಹೊರೆಯವರನ್ನು ದ್ರಾಕ್ಷಾಲತೆ, ಅಂಜೂರಗಿಡ ಇವುಗಳ ನೆರಳಿನಲ್ಲಿ ನೆಮ್ಮದಿಯಿಂದ ವಿಶ್ರಮಿಸಲು ಕರೆಯುವಿರಿ.’ ”