ಹಬ್ಬದ ಗೀತೆ
೧೧೮
(ನೆಹೆ. 8:14-18; ಯೆಶಾ. 12)
೧ ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ;
ಆತನು ಒಳ್ಳೆಯವನು.
ಆತನ ಕೃಪೆಯು ಶಾಶ್ವತವಾಗಿದೆ.
೨ ಇಸ್ರಾಯೇಲರು, “ಆತನ ಕೃಪೆಯು ಶಾಶ್ವತ” ಎಂದು ಹೇಳಲಿ.
೩ ಆರೋನನ ಮನೆತನದವರು, “ಆತನ ಕೃಪೆಯು ಶಾಶ್ವತ” ಎಂದು ಹೇಳಲಿ.
೪ ಯೆಹೋವನ ಭಕ್ತರು, “ಆತನ ಕೃಪೆಯು ಶಾಶ್ವತ” ಎಂದು ಹೇಳಲಿ.
೫ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಟ್ಟೆನು;
ಆತನು ಸದುತ್ತರವನ್ನು ದಯಪಾಲಿಸಿ, ನನ್ನನ್ನು ವಿಶಾಲವಾದಸ್ಥಳದಲ್ಲಿ ನೆಲೆಸುವಂತೆ ಮಾಡಿದನು.
೬ ಯೆಹೋವನು ನನ್ನ ಕಡೆ ಇದ್ದಾನೆ; ಭಯಪಡೆನು.
ಮನುಷ್ಯನು ನನಗೆ ಏನು ಮಾಡಾನು?
೭ ಯೆಹೋವನು ನನಗೆ ಇದ್ದಾನೆ;
ಆತನೇ ನನಗೆ ಸಹಾಯಕನು;
ನನ್ನ ವೈರಿಗಳಿಗಾಗುವ ಶಿಕ್ಷೆಯನ್ನು ನೋಡುವೆನು.
೮ ಮನುಷ್ಯರಲ್ಲಿ ಭರವಸವಿಡುವುದಕ್ಕಿಂತ,
ಯೆಹೋವನನ್ನು ಆಶ್ರಯಿಸುವುದು ಒಳ್ಳೆಯದು.
೯ ಪ್ರಭುಗಳಲ್ಲಿ ಭರವಸವಿಡುವುದಕ್ಕಿಂತ,
ಯೆಹೋವನನ್ನು ಆಶ್ರಯಿಸುವುದು ಒಳ್ಳೆಯದು.
೧೦ ಜನಾಂಗದವರೆಲ್ಲಾ ನನ್ನನ್ನು ಸುತ್ತಿಕೊಂಡರು;
ಯೆಹೋವನ ಹೆಸರಿನಿಂದ ಅವರನ್ನು ಸಂಹರಿಸುವೆನು.
೧೧ ಅವರು ನನ್ನನ್ನು ಸುತ್ತಲೂ ಮುತ್ತಿದರು;
ಯೆಹೋವನ ಹೆಸರಿನ ಬಲದಿಂದ ಅವರನ್ನು ಸಂಹರಿಸುವೆನು.
೧೨ ಅವರು ಜೇನು ನೊಣಗಳಂತೆ ನನ್ನನ್ನು ಕವಿದರೂ;
ಮುಳ್ಳಿನ ಬೆಂಕಿಯಂತೆ ಕ್ಷಣದಲ್ಲಿ ಅಳಿದುಹೋಗುವರು.
ಯೆಹೋವನ ಹೆಸರಿನಿಂದ ಅವರನ್ನು ಸಂಹರಿಸುವೆನು.
೧೩ ವೈರಿಯೇ, ನನ್ನನ್ನು ಬೀಳವಂತೆ ಮಾಡಿದಿ;
ಆದರೆ ಯೆಹೋವನು ನನಗೆ ಸಹಾಯ ಮಾಡಿದನು.
೧೪ ನನ್ನ ಬಲವು, ಕೀರ್ತನೆಯು ಯೆಹೋವನೇ;
ಆತನಿಂದ ನನಗೆ ರಕ್ಷಣೆಯುಂಟಾಯಿತು.
೧೫ ಉತ್ಸಾಹಧ್ವನಿಯು, ಜಯಘೋಷವು ನೀತಿವಂತರ ಗುಡಾರಗಳಲ್ಲಿವೆ;
ಯೆಹೋವನ ಬಲಗೈ ಪರಾಕ್ರಮವನ್ನು ನಡೆಸುತ್ತದೆ.
೧೬ ಯೆಹೋವನ ಬಲಗೈ ಉನ್ನತವಾಗಿದೆ;
ಯೆಹೋವನ ಬಲಗೈ ಪರಾಕ್ರಮವನ್ನು ನಡೆಸುತ್ತದೆ.
೧೭ ನಾನು ಸಾಯುವುದಿಲ್ಲ;
ಜೀವದಿಂದಿದ್ದು ಯೆಹೋವನ ಕ್ರಿಯೆಗಳನ್ನು ಸಾರುವೆನು.
೧೮ ಯೆಹೋವನು ನನ್ನನ್ನು ಕಠಿಣವಾಗಿ ಶಿಕ್ಷಿಸಿದನು;
ಆದರೆ ಮರಣಕ್ಕೆ ಒಪ್ಪಿಸಲಿಲ್ಲ.
೧೯ ನೀತಿದ್ವಾರಗಳನ್ನು ತೆರೆಯಿರಿ;
ನಾನು ಒಳಗೆ ಪ್ರವೇಶಿಸಿ ಯೆಹೋವನನ್ನು ಕೊಂಡಾಡುವೆನು.
೨೦ ಇದು ಯೆಹೋವನ ಮಂದಿರದ್ವಾರವು;
ಇದರೊಳಗೆ ಪ್ರವೇಶಿಸತಕ್ಕವರು ನೀತಿವಂತರೇ.
೨೧ ನನಗೆ ಸದುತ್ತರವನ್ನು ದಯಪಾಲಿಸಿ ರಕ್ಷಿಸಿದಾತನೇ,
ನಿನ್ನನ್ನು ಕೊಂಡಾಡುತ್ತೇನೆ.
೨೨ ಮನೆಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ,
ಮುಖ್ಯವಾದ ಮೂಲೆಗಲ್ಲಾಯಿತು;
೨೩ ಇದು ಯೆಹೋವನಿಂದಲೇ ಆಯಿತು;
ನಮಗೆ ಆಶ್ಚರ್ಯವಾಗಿ ತೋರುತ್ತದೆ.
೨೪ ಈ ದಿನವು ಯೆಹೋವನಿಂದಲೇ ನೇಮಕವಾದದ್ದು;
ಇದರಲ್ಲಿ ನಾವು ಉಲ್ಲಾಸದಿಂದ ಆನಂದಿಸೋಣ.
೨೫ ಯೆಹೋವನೇ, ದಯವಿಟ್ಟು ರಕ್ಷಿಸು;
ಯೆಹೋವನೇ, ದಯವಿಟ್ಟು ಸಾಫಲ್ಯಕೊಡು.
೨೬ ಯೆಹೋವನ ಹೆಸರಿನಲ್ಲಿ ಒಳಗೆ ಬರುವವನಿಗೆ ಆಶೀರ್ವಾದ;
ಯೆಹೋವನ ಮಂದಿರದಲ್ಲಿರುವ ನಾವು ನಿಮ್ಮನ್ನು ಆಶೀರ್ವದಿಸುತ್ತೇವೆ.
೨೭ ಯೆಹೋವನೇ ದೇವರು;
ಆತನು ನಮಗೆ ಪ್ರಕಾಶವನ್ನು ಅನುಗ್ರಹಿಸಿದ್ದಾನೆ.
ರೆಂಬೆಗಳನ್ನು ಹಿಡಿದುಕೊಂಡು ಮೆರವಣಿಗೆಯಾಗಿ
ಯಜ್ಞವೇದಿಯ ಕೊಂಬುಗಳ ಸಮೀಪಕ್ಕೆ ಬನ್ನಿರಿ.
೨೮ ನೀನು ನನ್ನ ದೇವರು; ನಿನ್ನನ್ನು ಕೊಂಡಾಡುತ್ತೇನೆ;
ನನ್ನ ದೇವರೇ, ನಿನ್ನನ್ನು ಘನಪಡಿಸುತ್ತೇನೆ.
೨೯ ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ;
ಆತನು ಒಳ್ಳೆಯವನು.
ಆತನ ಕೃಪೆಯು ಶಾಶ್ವತವಾದದ್ದು.