೩
ದೇವಭಕ್ತರನ್ನು ಅಗ್ನಿಯು ಸುಡದೆ ಇದ್ದದ್ದು
೧ ರಾಜನಾದ ನೆಬೂಕದ್ನೆಚ್ಚರನು ಅರುವತ್ತು ಮೊಳ ಎತ್ತರದ, ಆರು ಮೊಳ ಅಗಲದ ಒಂದು ಬಂಗಾರದ ಪ್ರತಿಮೆಯನ್ನು ಮಾಡಿಸಿ, ಬಾಬೆಲ್ ಸಂಸ್ಥಾನದ ದೂರಾ ಎಂಬ ಬಯಲಿನಲ್ಲಿ ನಿಲ್ಲಿಸಿದನು. ೨ ಆಗ ರಾಜನಾದ ನೆಬೂಕದ್ನೆಚ್ಚರನು ತಾನು ನಿಲ್ಲಿಸಿದ ಪ್ರತಿಮೆಯ ಪ್ರತಿಷ್ಠೋತ್ಸವಕ್ಕೆ ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿ, ಕೋಶಾಧ್ಯಕ್ಷ, ನ್ಯಾಯಾಧಿಪತಿ, ವಿಚಾರಕ ಮುಂತಾದವರನ್ನೂ, ಸಮಸ್ತ ಸಂಸ್ಥಾನಾಧಿಕಾರಿಗಳನ್ನೂ ಒಟ್ಟುಗೂಡಿಸುವಂತೆ ಸಮಾಚಾರವನ್ನು ಕಳುಹಿಸಿದನು.
೩ ಆ ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿ, ಕೋಶಾಧ್ಯಕ್ಷ, ನ್ಯಾಯಾಧಿಪತಿ, ವಿಚಾರಕ ಇವರೂ ಸಮಸ್ತ ಸಂಸ್ಥಾನಾಧಿಕಾರಿಗಳೂ ರಾಜನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಪ್ರತಿಷ್ಠೋತ್ಸವಕ್ಕೆ ನೆರೆದು, ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಮುಂದೆ ನಿಂತುಕೊಂಡರು. ೪ ಆಗ ಸಾರುವವನು ಗಟ್ಟಿಯಾಗಿ ಕೂಗಿ, “ವಿವಿಧ ಜನಾಂಗ, ಕುಲ, ಭಾಷೆಗಳವರೇ, ನಿಮಗೆ ರಾಜಾಜ್ಞೆಯಾಗಿದೆ. ೫ ನೀವು ತುತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಅಡ್ಡಬಿದ್ದು, ರಾಜನಾದ ನೆಬೂಕದ್ನೆಚ್ಚರನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಪೂಜಿಸಬೇಕು. ೬ ಯಾವನು ಅಡ್ಡಬಿದ್ದು ಪೂಜಿಸುವುದಿಲ್ಲವೋ ಅವನು ತಕ್ಷಣವೇ ಧಗಧಗನೆ ಉರಿಯುವ ಬೆಂಕಿಯೊಳಗೆ ಹಾಕಲ್ಪಡುವನು” ಎಂದು ಸಾರಿದನು. ೭ ಆದಕಾರಣ ಅದೇ ಕಾಲದಲ್ಲಿ ಸಮಸ್ತ ಜನಾಂಗ, ಕುಲ, ಭಾಷೆಗಳವರು ತುತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಎಲ್ಲರೂ ಅಡ್ಡಬಿದ್ದು ರಾಜನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸಿದರು.
೮ ಹೀಗಿರಲು ಆ ಸಮಯದಲ್ಲಿ ಕೆಲವು ಮಂದಿ ಪಂಡಿತರು ಯೆಹೂದ್ಯರ ಮೇಲೆ ದೂರು ಹೊರಿಸುವುದಕ್ಕೆ ರಾಜನ ಸನ್ನಿಧಿಗೆ ಬಂದು ೯ ರಾಜನಾದ ನೆಬೂಕದ್ನೆಚ್ಚರನಿಗೆ, “ಅರಸೇ, ಚಿರಂಜೀವಿಯಾಗಿರು! ೧೦ ಪ್ರಭುವೇ, ತುತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಪ್ರತಿಯೊಬ್ಬನೂ ಅಡ್ಡಬಿದ್ದು, ಬಂಗಾರದ ಪ್ರತಿಮೆಯನ್ನು ಪೂಜಿಸಲಿ.
೧೧ “ಯಾರು ಅಡ್ಡಬಿದ್ದು ಪೂಜಿಸುವುದಿಲ್ಲವೋ ಅವನು ಧಗಧಗಿಸುವ ಬೆಂಕಿಯೊಳಗೆ ಹಾಕಲ್ಪಡಲಿ ಎಂದು ಆಜ್ಞೆಮಾಡಿದಿಯಲ್ಲಾ. ೧೨ ನೀನು ಬಾಬೆಲ್ ಸಂಸ್ಥಾನದ ಕಾರ್ಯಭಾರವನ್ನು ವಹಿಸಿಕೊಟ್ಟ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬ ಕೆಲವು ಮಂದಿ ಯೆಹೂದ್ಯರು ಇದ್ದಾರೆ. ರಾಜನೇ, ಇವರು ನಿನ್ನನ್ನು ಲಕ್ಷಿಸುವುದಿಲ್ಲ, ನಿನ್ನ ದೇವರುಗಳನ್ನು ಸೇವಿಸುವುದಿಲ್ಲ, ನೀನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸುವುದಿಲ್ಲ” ಎಂದು ಅರಿಕೆಮಾಡಿದರು.
೧೩ ನೆಬೂಕದ್ನೆಚ್ಚರನು ಉಗ್ರರೋಷವುಳ್ಳವನಾಗಿ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಹಿಡಿದು ತರಬೇಕೆಂದು ಆಜ್ಞಾಪಿಸಿದನು. ೧೪ ಹಾಗೆ ಅವರನ್ನು ಹಿಡಿದು ತರಲು ನೆಬೂಕದ್ನೆಚ್ಚರನು ಅವರಿಗೆ, “ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರೇ, ನೀವು ನನ್ನ ದೇವರನ್ನು ಸೇವಿಸದೆ, ನಾನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸದೆ ಇರುವುದು ಬೇಕೆಂದೇ ಮಾಡಿದ್ದೋ?
೧೫ “ಈಗಲಾದರೂ ನೀವು ಸಿದ್ಧವಾಗಿದ್ದು ತುತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಅಡ್ಡಬಿದ್ದು, ನಾನು ನಿಲ್ಲಿಸಿದ ಪ್ರತಿಮೆಯನ್ನು ಪೂಜಿಸಿದರೆ ಸರಿ; ಇಲ್ಲವಾದರೆ ತಕ್ಷಣವೇ ಧಗಧಗನೆ ಉರಿಯುವ ಬೆಂಕಿಯೊಳಗೆ ಹಾಕಲ್ಪಡುವಿರಿ; ನಿಮ್ಮನ್ನು ನನ್ನ ಕೈಯೊಳಗಿಂದ ಬಿಡಿಸಬಲ್ಲ ದೇವರು ಯಾರು?” ಎಂದು ಹೇಳಿದನು.
೧೬ ಇದನ್ನು ಕೇಳಿ ಶದ್ರಕ್ ಮೇಶಕ್, ಅಬೇದ್ನೆಗೋ ಎಂಬುವವರು ರಾಜನಿಗೆ, “ನೆಬೂಕದ್ನೆಚ್ಚರನೇ, ಈ ವಿಷಯದಲ್ಲಿ ನಾವು ನಿನಗೆ ಏನೂ ಹೇಳಬೇಕಾಗಿಲ್ಲ. ೧೭ ‘ಅರಸೇ, ನಾವು ಆರಾಧಿಸುವ ದೇವರಿಗೆ ಚಿತ್ತವಿದ್ದರೆ ಆತನು ಧಗಧಗನೆ ಉರಿಯುವ ಬೆಂಕಿಯೊಳಗಿಂದ ನಮ್ಮನ್ನು ಬಿಡಿಸಬಲ್ಲನು; ಹೇಗೂ ನಿನ್ನ ಕೈಯಿಂದ ನಮ್ಮನ್ನು ಬಿಡಿಸುವನು. ೧೮ ಚಿತ್ತವಿಲ್ಲದಿದ್ದರೂ ರಾಜನೇ, ಇದು ನಿನಗೆ ತಿಳಿದಿರಲಿ, ನಾವು ನಿನ್ನ ದೇವರುಗಳನ್ನು ಆರಾಧಿಸುವುದಿಲ್ಲ, ನೀನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸುವುದಿಲ್ಲ’ ” ಎಂದು ಉತ್ತರಕೊಟ್ಟರು.
೧೯ ಆಗ ನೆಬೂಕದ್ನೆಚ್ಚರನು ಕೋಪೋದ್ರೇಕದಿಂದ ಮುಖಭಾವವನ್ನು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರ ಕಡೆಗೆ ತಿರುಗಿಸಿಕೊಂಡು ಬೆಂಕಿಯನ್ನು ನಿತ್ಯಕ್ಕಿಂತ ಏಳರಷ್ಟು ಹೆಚ್ಚಾಗಿ ಉರಿಸಬೇಕು ಎಂದು ಆಜ್ಞಾಪಿಸಿದನು. ೨೦ ಇದಲ್ಲದೆ ತನ್ನ ಸೈನ್ಯದ ಕೆಲವು ಮಂದಿ ಶೂರರಿಗೆ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಕಟ್ಟಿ ಧಗಧಗನೆ ಉರಿಯುವ ಬೆಂಕಿಯೊಳಗೆ ಎತ್ತಿಹಾಕಬೇಕೆಂದು ಅಪ್ಪಣೆಕೊಟ್ಟನು. ೨೧ ಅದರಂತೆ ಶಲ್ಯ, ಇಜಾರು, ಮುಂಡಾಸ ಮೊದಲಾದ ಉಡುಪನ್ನು ಧರಿಸಿಕೊಂಡಿದ್ದ ಹಾಗೆಯೇ ಅವರನ್ನು ಕಟ್ಟಿ ಧಗಧಗನೆ ಉರಿಯುವ ಬೆಂಕಿಯೊಳಗೆ ಹಾಕಿಬಿಟ್ಟರು. ೨೨ ಹೀಗಾಗಿ ರಾಜಾಜ್ಞೆಯು ಖಂಡಿತವಾಗಿದ್ದುದರಿಂದಲೂ ಬೆಂಕಿಯ ಕಾವು ಅತಿ ತೀಕ್ಷ್ಣವಾಗಿದ್ದುದರಿಂದಲೂ ಅಗ್ನಿಜ್ವಾಲೆಯು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಎತ್ತಿ ಹಾಕಿದವರನ್ನೇ ದಹಿಸಿಬಿಟ್ಟಿತು. ೨೩ ಶದ್ರಕ್, ಮೇಶಕ್, ಅಬೇದ್ನೆಗೋ ಈ ಮೂವರು ಕಟ್ಟಲ್ಪಟ್ಟವರಾಗಿ ಧಗಧಗನೆ ಉರಿಯುವ ಬೆಂಕಿಯ ಮಧ್ಯದಲ್ಲಿ ಬಿದ್ದುಬಿಟ್ಟರು.
೨೪ ಆಗ ರಾಜನಾದ ನೆಬೂಕದ್ನೆಚ್ಚರನು ಬೆಚ್ಚಿಬಿದ್ದು, ತಟ್ಟನೆ ಎದ್ದು ತನ್ನ ಮಂತ್ರಿಗಳಿಗೆ, “ಕಟ್ಟಿದ ಮೂವರನ್ನು ನಾವು ಬೆಂಕಿಯೊಳಗೆ ಹಾಕಿಸಲಿಲ್ಲವೋ?” ಎಂದು ಕೇಳಲು ಅವರು ರಾಜನಿಗೆ, “ಅರಸನೇ, ಹೌದು, ಹಾಕಿರುವುದು ಸತ್ಯ” ಎಂದು ಉತ್ತರಕೊಟ್ಟರು. ೨೫ ಅದಕ್ಕೆ ಅವನು, “ಇಗೋ, ಕಟ್ಟಿಲ್ಲದ ನಾಲ್ವರನ್ನು ನೋಡುತ್ತೇನೆ, ಬೆಂಕಿಯಲ್ಲಿ ತಿರುಗಾಡುತ್ತಿದ್ದಾರೆ, ಅವರಿಗೆ ಯಾವ ಹಾನಿಯೂ ಇಲ್ಲ; ನಾಲ್ಕನೆಯವನ ರೂಪವು ದೇವಕುಮಾರನ ರೂಪದಂತಿದೆ” ಎಂದು ಹೇಳಿದನು.
೨೬ ಆಗ ನೆಬೂಕದ್ನೆಚ್ಚರನು ಧಗಧಗನೆ ಉರಿಯುವ ಬೆಂಕಿಯ ಬಾಯಿಯ ಬಳಿಗೆ ಹೋಗಿ, “ಪರಾತ್ಪರದೇವರ ಸೇವಕರಾದ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರೇ ಬನ್ನಿ, ಹೊರಗೆ ಬನ್ನಿ ಎಂದು ಕೂಗಲು, ಶದ್ರಕ್ ಮೇಶಕ್ ಅಬೇದ್ನೆಗೋ ಎಂಬುವವರು ಬೆಂಕಿಯೊಳಗಿಂದ ಹೊರಟು ಬಂದರು. ೨೭ ಅಲ್ಲಿ ಕೂಡಿದ್ದ ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿಗಳು ಅವರನ್ನು ನೋಡಿ ಅವರ ಮೇಲೆ ಬೆಂಕಿಯ ಅಧಿಕಾರವು ನಡೆದಿಲ್ಲ, ಅವರ ತಲೆಕೂದಲೂ ಸುಟ್ಟಿಲ್ಲ, ಅವರ ಶಲ್ಯಗಳಿಗೆ ವಿಕಾರವಿಲ್ಲ, ಬೆಂಕಿಯ ವಾಸನೆಯೇ ಮುಟ್ಟಿಲ್ಲ” ಎಂದು ತಿಳಿದುಕೊಂಡರು.
೨೮ ಆಗ ನೆಬೂಕದ್ನೆಚ್ಚರನು, “ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರ ದೇವರಿಗೆ ಸ್ತೋತ್ರವಾಗಲಿ! ಆತನು ತನ್ನ ದೂತನನ್ನು ಕಳುಹಿಸಿ ತನ್ನಲ್ಲಿ ಭರವಸವಿಟ್ಟು ರಾಜಾಜ್ಞೆಯನ್ನು ಜಯಿಸಿ ತನ್ನನ್ನೇ ಹೊರತು ಇನ್ನಾವ ದೇವರನ್ನೂ ಸೇವಿಸಿ ಪೂಜಿಸಬಾರದೆಂದು ಸ್ವದೇಹಗಳನ್ನು ಮರಣಕ್ಕೆ ಒಪ್ಪಿಸಿದ ತನ್ನ ಸೇವಕರನ್ನು ಉದ್ಧರಿಸಿದ್ದಾನಲ್ಲವೇ. ೨೯ ಸಕಲ ಜನಾಂಗ, ಕುಲ, ಭಾಷೆಗಳವರಲ್ಲಿ ಯಾರಾದರೂ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರ ದೇವರ ವಿಷಯದಲ್ಲಿ ಅಲ್ಲ ಸಲ್ಲದ ಮಾತುಗಳನ್ನಾಡಿದರೆ ಅವರನ್ನು ತುಂಡುತುಂಡಾಗಿ ಕತ್ತರಿಸಿ, ಅವರ ಮನೆಗಳನ್ನು ತಿಪ್ಪೆಯನ್ನಾಗಿ ಮಾಡಬೇಕೆಂಬ ಆಜ್ಞೆಯನ್ನು ವಿಧಿಸುತ್ತೇನೆ; ಹೀಗೆ ಉದ್ಧರಿಸಲು ಸಮರ್ಥನಾದ ಇನ್ಯಾವ ದೇವರೂ ಇಲ್ಲವಲ್ಲಾ” ಎಂದು ಹೇಳಿದನು. ೩೦ ಬಳಿಕ ರಾಜನು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಬಾಬೆಲ್ ಸಂಸ್ಥಾನದಲ್ಲಿ ಉನ್ನತ ಪದವಿ ನೀಡಿ ಗೌರವಿಸಿದನು.