9
ಆಮೇಲೆ ಯೇಸು ಜನರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಇಲ್ಲಿ ನಿಂತಿರುವ ನಿಮ್ಮಲ್ಲಿ ಕೆಲವು ಜನರು ತಾವು ಸಾಯುವುದಕ್ಕೆ ಮುಂಚೆ ದೇವರ ರಾಜ್ಯವು ಅಧಿಕಾರದೊಡನೆ ಬರುವುದನ್ನು ನೋಡುತ್ತಾರೆ” ಎಂದು ಹೇಳಿದನು.
ಮೋಶೆ ಮತ್ತು ಎಲೀಯರೊಡನೆ ಯೇಸು
(ಮತ್ತಾಯ 17:1-13; ಲೂಕ 9:28-36)
ಆರು ದಿನಗಳ ನಂತರ ಪೇತ್ರ, ಯಾಕೋಬ ಮತ್ತು ಯೋಹಾನರನ್ನು ಕರೆದುಕೊಂಡು ಯೇಸು ಎತ್ತರವಾದ ಬೆಟ್ಟದ ಮೇಲೆ ಹೋದನು. ಅಲ್ಲಿ ಅವರು ಮಾತ್ರ ಇದ್ದರು. ಈ ಶಿಷ್ಯರು ಯೇಸುವನ್ನು ನೋಡುತ್ತಿರಲು, ಇದ್ದಕ್ಕಿದ್ದಂತೆ ಆತನು ರೂಪಾಂತರ ಹೊಂದಿದನು. ಯೇಸುವಿನ ಬಟ್ಟೆಗಳು ಬಿಳುಪಾಗಿ ಹೊಳೆಯುತ್ತಿದ್ದವು. ಅಷ್ಟು ಬಿಳುಪಾದ ಬಟ್ಟೆಗಳನ್ನು ತಯಾರಿಸಲು ಸಾಧ್ಯವಿರಲಿಲ್ಲ. ಆಗ ಮೋಶೆ ಮತ್ತು ಎಲೀಯ ಅಲ್ಲಿ ಪ್ರತ್ಯಕ್ಷರಾಗಿ ಯೇಸುವಿನೊಂದಿಗೆ ಮಾತಾಡುತ್ತಿದ್ದರು.
ಪೇತ್ರನು ಯೇಸುವಿಗೆ, “ಗುರುವೇ, ನಾವು ಇಲ್ಲೇ ಇರುವುದು ಒಳ್ಳೆಯದು. ನಾವು ಇಲ್ಲಿ ಮೂರು ಗುಡಾರಗಳನ್ನು ಹಾಕುತ್ತೇವೆ. ಒಂದು ನಿನಗೆ, ಒಂದು ಮೋಶೆಗೆ ಮತ್ತೊಂದು ಎಲೀಯನಿಗೆ” ಎಂದು ಹೇಳಿದನು. ಪೇತ್ರನಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಏಕೆಂದರೆ ಅವನು ಮತ್ತು ಉಳಿದ ಇನ್ನಿಬ್ಬರು ಶಿಷ್ಯರು ಬಹಳ ಭಯಗೊಂಡಿದ್ದರು.
ಆಗ ಮೋಡವು ಬಂದು, ಅವರನ್ನು ಮುಸುಕಿತು. ಆ ಮೋಡದ ಒಳಗಿಂದ ಒಂದು ಧ್ವನಿಯು, “ಈತನು ನನ್ನ ಪ್ರಿಯ ಮಗನು. ಈತನಿಗೆ ವಿಧೇಯರಾಗಿ” ಎಂದು ಹೇಳಿತು.
ಆಗ ಪೇತ್ರ, ಯಾಕೋಬ ಮತ್ತು ಯೋಹಾನರು ಕಣ್ಣೆತ್ತಿ ನೋಡಿದಾಗ ಯೇಸು ಒಬ್ಬನೇ ಅಲ್ಲಿದ್ದನು.
ಯೇಸು ಮತ್ತು ಆ ಶಿಷ್ಯರು ಹಿಂತಿರುಗಿ ಬೆಟ್ಟದಿಂದ ಕೆಳಗಿಳಿದು ಬರುತ್ತಿರುವಾಗ, ಆತನು ಅವರಿಗೆ, “ನೀವು ಬೆಟ್ಟದ ಮೇಲೆ ನೋಡಿದ ಸಂಗತಿಗಳ ಬಗ್ಗೆ ಯಾರಿಗೂ ಹೇಳಬೇಡಿ. ಮನುಷ್ಯಕುಮಾರನು ಸತ್ತು ಜೀವಂತವಾಗಿ ಎದ್ದುಬರುವವರೆಗೆ ಕಾದುಕೊಂಡಿರಿ” ಎಂದು ಆಜ್ಞಾಪಿಸಿದನು.
10 ಆದ್ದರಿಂದ ಆ ಶಿಷ್ಯರು ಈ ಸಂಗತಿಗಳನ್ನು ಯಾರಿಗೂ ತಿಳಿಸಲಿಲ್ಲ. ಆದರೆ “ಸತ್ತು ಜೀವಂತವಾಗಿ ಎದ್ದುಬರುವುದು” ಎಂದರೇನು? ಎಂದು ತಮ್ಮತಮ್ಮಲ್ಲಿಯೇ ಚರ್ಚಿಸಿದರು. 11 ಶಿಷ್ಯರು ಯೇಸುವಿಗೆ, “ಎಲೀಯನೇ ಮೊದಲು ಬರಬೇಕೆಂದು ಧರ್ಮೋಪದೇಶಕರು ಹೇಳಲು ಕಾರಣವೇನು?” ಎಂದು ಕೇಳಿದರು.
12 ಯೇಸು ಅವರಿಗೆ, “ಎಲೀಯನೇ ಮೊದಲು ಬರಬೇಕೆಂದು ಅವರು ಹೇಳುವುದು ಸರಿ. ಎಲೀಯನು ಎಲ್ಲವನ್ನು ಸರಿಪಡಿಸುತ್ತಾನೆ. ಆದರೆ ಮನುಷ್ಯಕುಮಾರನು ಬಹಳ ಸಂಕಟವನ್ನು ಅನುಭವಿಸುವನೆಂತಲೂ ಜನರು ಆತನನ್ನು ಹೀನೈಸುವರೆಂತಲೂ ಪವಿತ್ರಗ್ರಂಥವು ಏಕೆ ಹೇಳುತ್ತದೆ? 13 ಎಲೀಯನು ಈಗಾಗಲೇ ಬಂದಿದ್ದಾನೆಂದು ನಾನು ನಿಮಗೆ ಹೇಳುತ್ತೇನೆ ಮತ್ತು ಜನರು ತಮ್ಮ ಮನಸ್ಸಿಗೆ ಬಂದಂತೆ ಅವನಿಗೆ ಕೇಡನ್ನು ಮಾಡಿದರು. ಅವನಿಗೆ ಹೀಗಾಗುವುದೆಂದು ಪವಿತ್ರಗ್ರಂಥದಲ್ಲಿ ಮೊದಲೇ ಬರೆದಿತ್ತು” ಎಂದು ಉತ್ತರಿಸಿದನು.
ಯೇಸುವಿನಿಂದ ಕಾಯಿಲೆ ಹುಡುಗನಿಗೆ ಸ್ವಸ್ಥತೆ
(ಮತ್ತಾಯ 17:14-20; ಲೂಕ 9:37-43)
14 ನಂತರ ಯೇಸು, ಪೇತ್ರ, ಯಾಕೋಬ ಮತ್ತು ಯೋಹಾನ ಇತರ ಶಿಷ್ಯರ ಬಳಿಗೆ ಹೋದರು. ಆ ಶಿಷ್ಯರ ಸುತ್ತಲೂ ಅನೇಕ ಜನರು ನೆರೆದಿದ್ದರು. ಧರ್ಮೋಪದೇಶಕರು ಅವರೊಡನೆ ವಾದ ಮಾಡುತ್ತಾ ಇದ್ದರು. 15 ಆ ಜನರು ಯೇಸುವನ್ನು ನೋಡಿದಾಗ ಬಹಳ ಆಶ್ಚರ್ಯಪಟ್ಟು ಆತನನ್ನು ಸ್ವಾಗತಿಸಲು ಆತನ ಬಳಿಗೆ ಬಂದರು.
16 ಯೇಸು, “ನೀವು ಯಾವುದರ ಬಗ್ಗೆ ವಾದಿಸುತ್ತಿದ್ದೀರಿ?” ಎಂದು ಕೇಳಿದನು.
17 ಒಬ್ಬನು, “ಗುರುವೇ, ನನ್ನ ಮಗನಿಗೆ ದೆವ್ವ ಹಿಡಿದಿದ್ದ ಕಾರಣ ನಾನು ಅವನನ್ನು ನಿನ್ನ ಶಿಷ್ಯರ ಬಳಿಗೆ ತಂದೆನು. ಅವನು ಮಾತಾಡಲಾರ. 18 ಆ ದೆವ್ವವು ಅವನ ಮೇಲೆ ಆಕ್ರಮಣ ಮಾಡಿದಾಗಲೆಲ್ಲಾ ಅವನನ್ನು ನೆಲಕ್ಕೆ ಕೆಡವುತ್ತದೆ. ನನ್ನ ಮಗನು ಬಾಯಿಂದ ನೊರೆ ಸುರಿಸುತ್ತಾ ಹಲ್ಲುಗಳನ್ನು ಕಟಕಟನೆ ಕಡಿಯುತ್ತಾನೆ ಮತ್ತು ಬಹಳ ಬಿರುಸಾಗುತ್ತಾನೆ. ಅವನನ್ನು ಆ ದೆವ್ವದಿಂದ ಬಿಡಿಸುವಂತೆ ನಾನು ನಿನ್ನ ಶಿಷ್ಯರನ್ನು ಕೇಳಿಕೊಂಡೆನು. ಆದರೆ ಅವರಿಗೆ ಸಾಧ್ಯವಾಗಲಿಲ್ಲ” ಎಂದು ಹೇಳಿದನು.
19 ಯೇಸು, “ವಿಶ್ವಾಸವಿಲ್ಲದ ಸಂತಾನವೇ, ನಾನು ನಿಮ್ಮೊಡನೆ ಇನ್ನೆಷ್ಟು ಕಾಲ ಇರಲಿ? ಇನ್ನೆಷ್ಟು ಕಾಲ ಸಹಿಸಿಕೊಳ್ಳಲಿ? ಆ ಹುಡುಗನನ್ನು ನನ್ನ ಬಳಿಗೆ ತನ್ನಿರಿ!” ಎಂದು ಉತ್ತರಿಸಿದನು.
20 ಆಗ ಶಿಷ್ಯರು ಆ ಹುಡುಗನನ್ನು ಯೇಸುವಿನ ಬಳಿಗೆ ತಂದರು. ಆ ದೆವ್ವವು ಯೇಸುವನ್ನು ನೋಡಿದ ಕೂಡಲೇ ಆ ಹುಡುಗನ ಮೇಲೆ ಆಕ್ರಮಣ ಮಾಡಿತು. ಆ ಹುಡುಗನು ಕೆಳಗೆ ಬಿದ್ದು, ಬಾಯಿಂದ ನೊರೆಯನ್ನು ಸುರಿಸುತ್ತಾ ಒದ್ದಾಡತೊಡಗಿದನು.
21 ಯೇಸು, “ಎಷ್ಟು ಕಾಲದಿಂದ ಹೀಗಾಗುತ್ತಿದೆ?” ಎಂದು ಆ ಹುಡುಗನ ತಂದೆಯನ್ನು ಕೇಳಿದನು.
ಅದಕ್ಕೆ ತಂದೆಯು, “ಬಾಲ್ಯದಿಂದಲೇ ಹೀಗಾಗುತ್ತಿದೆ. 22 ಆಗಿಂದಾಗ್ಗೆ ದೆವ್ವವು ಅವನನ್ನು ಕೊಲ್ಲಲು ಬೆಂಕಿಯೊಳಗೆ ಅಥವಾ ನೀರಿನೊಳಗೆ ಎಸೆಯುತ್ತದೆ. ನಿನಗೆ ಸಾಧ್ಯವಿರುವುದಾದರೆ, ದಯವಿಟ್ಟು ನಮ್ಮ ಮೇಲೆ ಕರುಣೆಯಿಟ್ಟು ಸಹಾಯಮಾಡು” ಎಂದು ಉತ್ತರಿಸಿದನು.
23 ಅದಕ್ಕೆ ಯೇಸು, “ ‘ನಿನಗೆ ಸಾಧ್ಯವಿರುವುದಾದರೆ’ ಎಂದು ನೀನು ಹೇಳುವುದೇಕೆ? ನಂಬಿಕೆಯಿಡುವ ವ್ಯಕ್ತಿಗೆ ಎಲ್ಲವೂ ಸಾಧ್ಯ” ಎಂದು ಹೇಳಿದನು.
24 ಆ ಹುಡುಗನ ತಂದೆಯು ಸಂತೋಷದಿಂದ, “ನಾನು ನಂಬುತ್ತೇನೆ. ಇನ್ನೂ ಹೆಚ್ಚಾಗಿ ನಂಬಲು ನನಗೆ ಸಹಾಯ ಮಾಡು” ಎಂದನು.
25 ಅಲ್ಲಿ ನಡೆಯುತ್ತಿರುವುದನ್ನು ನೋಡಲು ಜನರೆಲ್ಲರೂ ಓಡಿಬರುತ್ತಿರುವುದನ್ನು ಕಂಡ ಯೇಸು, ಆ ದೆವ್ವಕ್ಕೆ, “ಎಲೈ ಕಿವುಡು ಮೂಕ ದೆವ್ವವೇ, ಈ ಹುಡುಗನಿಂದ ಹೊರಗೆ ಬರುವಂತೆಯೂ ಇವನೊಳಗೆ ಇನ್ನೆಂದಿಗೂ ಪ್ರವೇಶಿಸದಂತೆಯೂ ನಾನು ನಿನಗೆ ಆಜ್ಞಾಪಿಸುತ್ತೇನೆ!” ಎಂದನು.
26 ಆ ದೆವ್ವವು ಅರಚಿತು. ಅದು ಆ ಹುಡುಗನನ್ನು ಮತ್ತೆ ನೆಲದ ಮೇಲೆ ಬೀಳಿಸಿ, ಒದ್ದಾಡಿಸಿ ಹೊರಬಂದಿತು. ಆ ಹುಡುಗನು ಸತ್ತವನಂತೆ ಬಿದ್ದಿದ್ದನು. ಅನೇಕ ಜನರು, “ಅವನು ಸತ್ತುಹೋದನು” ಎಂದರು. 27 ಆದರೆ ಯೇಸು ಆ ಹುಡುಗನ ಕೈ ಹಿಡಿದೆತ್ತಿ, ಎದ್ದುನಿಲ್ಲಲು ಅವನಿಗೆ ಸಹಾಯಮಾಡಿದನು.
28 ಯೇಸು ಮನೆಯೊಳಗೆ ಹೋದ ಮೇಲೆ ಆತನ ಶಿಷ್ಯರು ಪ್ರತ್ಯೇಕವಾದ ಸ್ಥಳದಲ್ಲಿ ಆತನಿಗೆ, “ಆ ದೆವ್ವವನ್ನು ಬಿಡಿಸಲು ನಮಗೆ ಏಕೆ ಸಾಧ್ಯವಾಗಲಿಲ್ಲ?” ಎಂದು ಕೇಳಿದರು.
29 ಯೇಸು, “ಈ ಬಗೆಯ ದೆವ್ವವನ್ನು ಪ್ರಾರ್ಥನೆಯಿಂದ ಮಾತ್ರ ಬಿಡಿಸಲು ಸಾಧ್ಯ” ಎಂದು ಉತ್ತರಿಸಿದನು.
ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟನೆ
(ಮತ್ತಾಯ 17:22-23; ಲೂಕ 9:43-45)
30 ನಂತರ ಯೇಸು ಮತ್ತು ಆತನ ಶಿಷ್ಯರು ಆ ಸ್ಥಳದಿಂದ ಹೊರಟು ಗಲಿಲಾಯದ ಮೂಲಕ ಪ್ರಯಾಣ ಮಾಡಿದರು. ತಾವು ಎಲ್ಲಿದ್ದೇವೆಂಬುದು ಜನರಿಗೆ ತಿಳಿಯಬಾರದೆಂಬುದು ಯೇಸುವಿನ ಉದ್ದೇಶವಾಗಿತ್ತು. 31 ಏಕೆಂದರೆ ಆತನು ತನ್ನ ಶಿಷ್ಯರಿಗೆ ಏಕಾಂತವಾಗಿ ಉಪದೇಶಿಸಬೇಕೆಂದಿದ್ದನು. ಯೇಸು ಅವರಿಗೆ, “ಮನುಷ್ಯಕುಮಾರನನ್ನು ಜನರ ವಶಕ್ಕೆ ಕೊಡುವರು. ಜನರು ಆತನನ್ನು ಕೊಲ್ಲುವರು. ಕೊಲ್ಲಲ್ಪಟ್ಟ ಮೂರನೆಯ ದಿನದಲ್ಲಿ ಆತನು ಜೀವಂತವಾಗಿ ಎದ್ದುಬರುವನು” ಎಂದು ಹೇಳಿದನು. 32 ಆದರೆ ಯೇಸು ಹೇಳಿದ್ದು ಶಿಷ್ಯರಿಗೆ ಅರ್ಥವಾಗಲಿಲ್ಲ. ಮತ್ತು ಅದರ ಅರ್ಥವನ್ನು ಕೇಳುವುದಕ್ಕೂ ಅವರು ಭಯಪಟ್ಟರು.
ಯಾರು ಅತ್ಯಂತ ದೊಡ್ಡವರು?
(ಮತ್ತಾಯ 18:1-5; ಲೂಕ 9:46-48)
33 ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮಿಗೆ ಹೋದರು. ಅವರು ಒಂದು ಮನೆಯೊಳಗಿದ್ದಾಗ ಆತನು ತನ್ನ ಶಿಷ್ಯರಿಗೆ, “ಈ ದಿನ ನೀವು ದಾರಿಯಲ್ಲಿ ವಾದಮಾಡುತ್ತಿದ್ದುದ್ದನ್ನು ಕೇಳಿಸಿಕೊಂಡೆ. ನೀವು ಯಾವುದರ ಬಗ್ಗೆ ವಾದಮಾಡುತ್ತಿದ್ದಿರಿ?” ಎಂದನು. 34 ಆದರೆ ಶಿಷ್ಯರು ಉತ್ತರಿಸಲಿಲ್ಲ. ಏಕೆಂದರೆ ತಮ್ಮಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರೆಂಬುದರ ಕುರಿತು ಅವರು ವಾಗ್ವಾದ ಮಾಡಿದ್ದರು.
35 ಯೇಸು ಕುಳಿತುಕೊಂಡು, ಹನ್ನೆರಡು ಜನ ಅಪೊಸ್ತಲರನ್ನು ತನ್ನ ಬಳಿಗೆ ಕರೆದು ಅವರಿಗೆ, “ನಿಮ್ಮಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಬೇಕೆಂದು ಬಯಸುವವನು ಉಳಿದ ಎಲ್ಲರನ್ನು ತನಗಿಂತಲೂ ಹೆಚ್ಚು ಪ್ರಮುಖರೆಂದು ಭಾವಿಸಿಕೊಂಡು ಎಲ್ಲರ ಸೇವೆಮಾಡಬೇಕು” ಎಂದು ಹೇಳಿದನು.
36 ನಂತರ ಯೇಸು ಒಂದು ಚಿಕ್ಕ ಮಗುವನ್ನು ಕರೆದು, ಆ ಮಗುವನ್ನು ಶಿಷ್ಯರ ಮುಂದೆ ನಿಲ್ಲಿಸಿ, ಅದನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ಅವರಿಗೆ, 37 “ನನ್ನ ಹೆಸರಿನಲ್ಲಿ ಇಂಥ ಮಕ್ಕಳನ್ನು ಸ್ವೀಕರಿಸಿಕೊಳ್ಳುವವನು ನನ್ನನ್ನೇ ಸ್ವೀಕರಿಸಿಕೊಂಡಂತಾಯಿತು. ನನ್ನನ್ನು ಸ್ವೀಕರಿಸಿಕೊಳ್ಳುವವನು, ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸಿಕೊಂಡಂತಾಯಿತು” ಎಂದು ಹೇಳಿದನು.
ನಮ್ಮ ವೈರಿಯಲ್ಲದವನು ನಮ್ಮ ಮಿತ್ರನೇ
(ಲೂಕ 9:49-50)
38 ಆಗ ಯೋಹಾನನು, “ಗುರುವೇ, ಯಾರೋ ಒಬ್ಬನು ನಿನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸುತ್ತಿರುವುದನ್ನು ನಾವು ನೋಡಿದೆವು. ಅವನು ನಮ್ಮವನಲ್ಲ. ಆದ್ದರಿಂದ ನಿನ್ನ ಹೆಸರನ್ನು ಹೇಳಕೂಡದೆಂದು ಅವನಿಗೆ ಹೇಳಿದೆವು” ಎಂದನು.
39 ಯೇಸು ಅವರಿಗೆ, “ಅವನನ್ನು ತಡೆಯಬೇಡಿ. ನನ್ನ ಹೆಸರಿನ ಮೂಲಕ ಅದ್ಭುತಕಾರ್ಯಗಳನ್ನು ಮಾಡುವವನು ಆ ಕೂಡಲೇ ನನ್ನ ಬಗ್ಗೆ ಕೆಟ್ಟ ಸಂಗತಿಗಳನ್ನು ಹೇಳಲು ಸಾಧ್ಯವಿಲ್ಲ. 40 ನಮ್ಮ ವೈರಿಯಲ್ಲದವನು ನಮ್ಮ ಮಿತ್ರನೇ ಸರಿ. 41 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಕ್ರಿಸ್ತನವರೆಂದು ಯಾವನಾದರೂ ನಿಮಗೆ ಕುಡಿಯಲು ನೀರು ಕೊಟ್ಟರೂ ಅವನಿಗೆ ಅದರ ಪ್ರತಿಫಲ ಖಂಡಿತವಾಗಿ ಸಿಕ್ಕುವುದು.
ಇತರರನ್ನು ಪಾಪಕ್ಕೆ ನಡೆಸುವುದರ ಬಗ್ಗೆ ಯೇಸುವಿನ ಎಚ್ಚರಿಕೆ
(ಮತ್ತಾಯ 18:6-9; ಲೂಕ 17:1-2)
42 “ನನ್ನಲ್ಲಿ ನಂಬಿಕೆಯಿಟ್ಟಿರುವ ಈ ಚಿಕ್ಕ ಮಕ್ಕಳಲ್ಲಿ ಒಬ್ಬನನ್ನು ಪಾಪಕ್ಕೆ ನಡೆಸುವ ವ್ಯಕ್ತಿಯು ತನ್ನ ಕುತ್ತಿಗೆಗೆ ಬೀಸುವ ಕಲ್ಲನ್ನು ಕಟ್ಟಿಕೊಂಡು, ಸಮುದ್ರದಲ್ಲಿ ಮುಳುಗುವುದೇ ಒಳ್ಳೆಯದು. 43 ನಿನ್ನ ಕೈ ನಿನ್ನನ್ನು ಪಾಪದಲ್ಲಿ ಸಿಲುಕಿಸುವುದಾದರೆ ಅದನ್ನು ಕತ್ತರಿಸಿಬಿಡು. ಎರಡು ಕೈಗಳನ್ನು ಇಟ್ಟುಕೊಂಡು, ನಂದಿಹೋಗದ ಬೆಂಕಿಯಿರುವ ನರಕಕ್ಕೆ ಹೋಗುವುದಕ್ಕಿಂತ ಅಂಗವಿಕಲನಾಗಿದ್ದು ನಿತ್ಯಜೀವವನ್ನು ಪಡೆಯುವುದೇ ಮೇಲು. ಆ ಸ್ಥಳದಲ್ಲಿ ಬೆಂಕಿ ಆರಿಹೋಗುವುದೇ ಇಲ್ಲ. 44  * ಕೆಲವು ಗ್ರೀಕ್ ಪ್ರತಿಗಳು 44ನೇ ವಚನವನ್ನು ಹೊಂದಿವೆ. ಈ ವಚನವು 48ನೇ ವಚನವೇ ಆಗಿದೆ. 45 ನಿನ್ನ ಕಾಲು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ, ಅದನ್ನು ಕತ್ತರಿಸಿಬಿಡು. ಎರಡು ಕಾಲುಗಳನ್ನು ಇಟ್ಟುಕೊಂಡು ನರಕದೊಳಗೆ ಎಸೆಯಲ್ಪಡುವುದಕ್ಕಿಂತ ಕುಂಟನಾಗಿರುವುದೇ ಮೇಲು. 46  ಕೆಲವು ಗ್ರೀಕ್ ಪ್ರತಿಗಳು 46ನೇ ವಚನವನ್ನು ಹೊಂದಿವೆ. ಈ ವಚನವು 48ನೇ ವಚನವೇ ಆಗಿದೆ. 47 ನಿನ್ನ ಕಣ್ಣು ನಿನ್ನನ್ನು ಪಾಪದಲ್ಲಿ ಸಿಲುಕಿಸುವುದಾದರೆ, ಅದನ್ನು ಕಿತ್ತುಬಿಡು. ಎರಡು ಕಣ್ಣುಗಳನ್ನಿಟ್ಟುಕೊಂಡು ನರಕದೊಳಗೆ ಎಸೆಯಲ್ಪಡುವುದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ನಿತ್ಯಜೀವವನ್ನು ಹೊಂದಿಕೊಳ್ಳುವುದೇ ಮೇಲು. 48 ನರಕದಲ್ಲಿ ಮನುಷ್ಯರನ್ನು ತಿನ್ನುವ ಹುಳಗಳು ಸಾಯುವುದೇ ಇಲ್ಲ ಮತ್ತು ಬೆಂಕಿಯು ಆರುವುದೇ ಇಲ್ಲ.
49 “ಪ್ರತಿಯೊಬ್ಬನನ್ನೂ ಬೆಂಕಿಯಿಂದ ಶಿಕ್ಷಿಸಲಾಗುತ್ತದೆ.
50 “ಉಪ್ಪು ಒಳ್ಳೆಯದು. ಆದರೆ ಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ, ಅದನ್ನು ಮತ್ತೆ ನೀವು ಉಪ್ಪನ್ನಾಗಿ ಮಾಡಲಾರಿರಿ. ಆದ್ದರಿಂದ ಒಳ್ಳೆಯತನದಿಂದ ಒಳ್ಳೆಯತನ ಅಕ್ಷರಶಃ, “ನಿಮ್ಮಲ್ಲಿ ಉಪ್ಪನ್ನು ಹೊಂದಿರಿ.” ತುಂಬಿದವರಾಗಿರಿ ಮತ್ತು ಒಬ್ಬರೊಡನೊಬ್ಬರು ಸಮಾಧಾನದಿಂದಿರಿ” ಎಂದು ಹೇಳಿದನು.

*9:44: ಕೆಲವು ಗ್ರೀಕ್ ಪ್ರತಿಗಳು 44ನೇ ವಚನವನ್ನು ಹೊಂದಿವೆ. ಈ ವಚನವು 48ನೇ ವಚನವೇ ಆಗಿದೆ.

9:46: ಕೆಲವು ಗ್ರೀಕ್ ಪ್ರತಿಗಳು 46ನೇ ವಚನವನ್ನು ಹೊಂದಿವೆ. ಈ ವಚನವು 48ನೇ ವಚನವೇ ಆಗಿದೆ.

9:50: ಒಳ್ಳೆಯತನ ಅಕ್ಷರಶಃ, “ನಿಮ್ಮಲ್ಲಿ ಉಪ್ಪನ್ನು ಹೊಂದಿರಿ.”