20
ಅಶ್ಶೂರವು ಈಜಿಪ್ಟ್ ಮತ್ತು ಇಥಿಯೋಪ್ಯವನ್ನು ಸೋಲಿಸುವದು
ಸರ್ಗೋನ್ ಅಶ್ಶೂರದ ರಾಜನಾಗಿದ್ದನು. ಇವನು ತರ್ತಾನನ್ನು ಅಷ್ಡೋದಿಗೆ ವಿರುದ್ಧವಾಗಿ ಯುದ್ಧಮಾಡಲು ಕಳುಹಿಸಿದನು. ತರ್ತಾನ್ ಎಂಬವನು ಅಷ್ಡೋದ್ ನಗರಕ್ಕೆ ಹೋಗಿ ಅದನ್ನು ವಶಪಡಿಸಿಕೊಂಡನು. ಆ ಸಮಯದಲ್ಲಿ ಆಮೋಚನ ಮಗನಾದ ಯೆಶಾಯನೊಂದಿಗೆ ಯೆಹೋವನು ಮಾತನಾಡಿದನು. “ನಿನ್ನ ಶೋಕವಸ್ತ್ರಗಳನ್ನು ತೆಗೆದುಹಾಕು. ನಿನ್ನ ಕಾಲುಗಳಿಂದ ಪಾದರಕ್ಷೆಗಳನ್ನು ತೆಗೆದುಬಿಡು” ಎಂದು ಯೆಹೋವನು ಹೇಳಿದಾಗ ಯೆಶಾಯನು ಆತನಿಗೆ ವಿಧೇಯನಾದನು. ಯೆಶಾಯನು ಪಾದರಕ್ಷೆಗಳಿಲ್ಲದೆ, ಬಟ್ಟೆಗಳಿಲ್ಲದೆ ಅಡ್ಡಾಡಿದನು.
ಆಗ ಯೆಹೋವನು, “ಮೂರು ವರ್ಷಗಳ ತನಕ ನನ್ನ ಸೇವಕನಾದ ಯೆಶಾಯನು ಬಟ್ಟೆ ಇಲ್ಲದೆ, ಪಾದರಕ್ಷೆ ಇಲ್ಲದೆ ನಡೆದಾಡಿದ್ದಾನೆ. ಇದು ಈಜಿಪ್ಟಿಗೂ ಇಥಿಯೋಪ್ಯಕ್ಕೂ ಗುರುತಾಗಿದೆ. ಅಶ್ಶೂರದ ಅರಸನು ಈಜಿಪ್ಟನ್ನೂ ಇಥಿಯೋಪ್ಯವನ್ನೂ ಸೋಲಿಸುವನು. ಅಶ್ಶೂರವು ಜನರನ್ನು ಸೆರೆಹಿಡಿದು ಅವರ ರಾಜ್ಯಗಳಿಂದ ಹೊರಗೆ ಕೊಂಡುಹೋಗುವದು. ವೃದ್ಧರೂ ಬಾಲಕರೂ ಬಟ್ಟೆಯಿಲ್ಲದೆಯೂ ಪಾದರಕ್ಷೆಗಳಿಲ್ಲದೆಯೂ ಇರುವರು. ಅವರು ಪೂರ್ಣ ಬೆತ್ತಲೆಯಾಗಿರುವರು. ಈಜಿಪ್ಟಿನ ಜನರು ನಾಚಿಕೆಗೆ ತುತ್ತಾಗುವರು. ಜನರು ಇಥಿಯೋಪ್ಯದ ಕಡೆಗೆ ಸಹಾಯಕ್ಕಾಗಿ ನೋಡುವರು. ಅವರು ಕಂಗೆಟ್ಟು ಹೋಗುವರು. ಈಜಿಪ್ಟಿನ ಮಹಿಮೆಯನ್ನು ಗಮನಿಸಿದವರು ಈಗ ನಾಚಿಕೆಯಲ್ಲಿ ಬೀಳುವರು” ಎನ್ನುವನು.
ಸಮುದ್ರ ತೀರದಲ್ಲಿ ವಾಸಿಸುವವರು ಹೀಗೆ ಹೇಳುವರು: “ಆ ದೇಶದವರು ನಮಗೆ ಸಹಾಯ ಮಾಡುವರೆಂದು ಅವರನ್ನು ನಂಬಿದೆವು. ಅಶ್ಶೂರದ ಅರಸನಿಂದ ನಮ್ಮನ್ನು ಕಾಪಾಡುವಂತೆ ನಾವು ಅವರ ಬಳಿಗೆ ಓಡಿಹೋದೆವು. ಆದರೆ ಈಗ ನೋಡಿ, ಆ ದೇಶದವರು ಸೋತು ಹೋಗಿ ವೈರಿವಶವಾಗಿದ್ದಾರೆ. ಈಗ ನಾವು ಪಾರಾಗಲು ಹೇಗೆ ಸಾಧ್ಯ?”