3
ಬಂಗಾರದ ವಿಗ್ರಹ ಮತ್ತು ಉರಿಯುವ ಕುಲುಮೆ
ಅರಸನಾದ ನೆಬೂಕದ್ನೆಚ್ಚರನು ಒಂದು ಬಂಗಾರದ ವಿಗ್ರಹವನ್ನು ಮಾಡಿಸಿದ್ದನು. ಆ ವಿಗ್ರಹವು ಅರವತ್ತು ಮೊಳ ಎತ್ತರವಾಗಿತ್ತು. ಆರು ಮೊಳ ಅಗಲವಾಗಿತ್ತು. ಆ ವಿಗ್ರಹವನ್ನು ಬಾಬಿಲೋನ್ ಪ್ರಾಂತ್ಯದ ದೂರಾ ಎಂಬ ಬಯಲಿನಲ್ಲಿ ನಿಲ್ಲಿಸಿದನು. ಅರಸನು ಆ ವಿಗ್ರಹದ ಪ್ರತಿಷ್ಠಾಪನೆಯ ಮಹೋತ್ಸವಕ್ಕೆ ಉಪರಾಜರನ್ನು, ನಾಯಕರನ್ನು, ದೇಶಾಧಿಪತಿಗಳನ್ನು, ಮಂತ್ರಿಗಳನ್ನು, ಕೋಶಾಧ್ಯಕ್ಷರನ್ನು, ನ್ಯಾಯಾಧಿಪತಿಗಳನ್ನು ಮತ್ತು ಉಳಿದೆಲ್ಲ ಅಧಿಕಾರಿಗಳನ್ನು ಕರೆಸಿದನು.
ಅವರೆಲ್ಲರು ಬಂದು ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ವಿಗ್ರಹದ ಎದುರಿಗೆ ನಿಂತುಕೊಂಡರು. ಆಗ ಸಾರುವವನು ದೊಡ್ಡ ಧ್ವನಿಯಲ್ಲಿ, “ವಿವಿಧ ಜನಾಂಗ, ಕುಲ, ಭಾಷೆಗಳ ಜನರೇ, ನಾನು ಹೇಳುವುದನ್ನು ಕೇಳಿರಿ. ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೇ ನೀವು ಅಡ್ಡಬೀಳಬೇಕು. ಇದು ರಾಜಾಜ್ಞೆ. ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ನೀವು ಬಂಗಾರದ ವಿಗ್ರಹವನ್ನು ಪೂಜಿಸಬೇಕು. ಅರಸನಾದ ನೆಬೂಕದ್ನೆಚ್ಚರನು ಈ ವಿಗ್ರಹವನ್ನು ನಿಲ್ಲಿಸಿದ್ದಾನೆ. ಯಾರಾದರೂ ಈ ಬಂಗಾರದ ವಿಗ್ರಹಕ್ಕೆ ಅಡ್ಡಬೀಳದಿದ್ದರೆ ಮತ್ತು ಪೂಜಿಸದಿದ್ದರೆ ತಕ್ಷಣ ಅವರನ್ನು ಬೆಂಕಿಯ ಕೊಂಡಕ್ಕೆ ಎಸೆಯಲಾಗುವುದು” ಎಂದು ಸಾರಿದನು.
ಆದ್ದರಿಂದ ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಅವರು ಅಡ್ಡಬಿದ್ದು ಬಂಗಾರದ ವಿಗ್ರಹವನ್ನು ಪೂಜಿಸಿದರು. ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ವಿಗ್ರಹವನ್ನು ಎಲ್ಲ ಜನಾಂಗಗಳ, ಭಾಷೆಗಳ ಜನರು ಪೂಜಿಸಿದರು.
ಆಗ ಕೆಲವು ಜನ ಕಲ್ದೀಯರು ಅರಸನ ಬಳಿಗೆ ಬಂದು ಅವರು ಯೆಹೂದ್ಯರ ವಿರುದ್ಧ ಮಾತನಾಡತೊಡಗಿದರು. ಅರಸನಾದ ನೆಬೂಕದ್ನೆಚ್ಚರನಿಗೆ ಅವರು, “ಮಹಾರಾಜನೇ, ಚಿರಂಜೀವಿಯಾಗಿರು! 10 ಅರಸನೇ, ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಪ್ರತಿಯೊಬ್ಬನೂ ಅಡ್ಡಬಿದ್ದು ಬಂಗಾರದ ವಿಗ್ರಹವನ್ನು ಪೂಜಿಸಬೇಕು ಎಂದು ತಾವು ಆಜ್ಞೆ ಕೊಟ್ಟಿದ್ದೀರಿ. 11 ಯಾರಾದರೂ ಅಡ್ಡಬಿದ್ದು ಬಂಗಾರದ ವಿಗ್ರಹವನ್ನು ಪೂಜಿಸದಿದ್ದರೆ ಅವರನ್ನು ಉರಿಯುವ ಬೆಂಕಿಯ ಕೊಂಡದಲ್ಲಿ ಎಸೆಯಲಾಗುವುದೆಂದು ಕೂಡ ತಾವು ಹೇಳಿದ್ದೀರಿ. 12 ಅರಸನೇ, ಕೆಲವು ಜನ ಯೆಹೂದ್ಯರು ತಮ್ಮ ಆಜ್ಞೆಯನ್ನು ಪಾಲಿಸಲಿಲ್ಲ. ಆ ಯೆಹೂದ್ಯರನ್ನು ತಾವು ಬಾಬಿಲೋನ್ ಪ್ರಾಂತ್ಯದಲ್ಲಿ ಪ್ರಮುಖ ಅಧಿಕಾರಿಗಳನ್ನಾಗಿ ನೇಮಿಸಿದ್ದೀರಿ. ಅವರ ಹೆಸರುಗಳು, ಶದ್ರಕ್, ಮೇಶಕ್, ಅಬೇದ್‌ನೆಗೋ ಎಂದು. ಅವರು ನಿಮ್ಮ ದೇವರುಗಳನ್ನು ಪೂಜಿಸುವುದಿಲ್ಲ. ನೀವು ನಿಲ್ಲಿಸಿದ ಬಂಗಾರದ ವಿಗ್ರಹಕ್ಕೆ ಅಡ್ಡಬಿದ್ದು ಪೂಜಿಸುವದಿಲ್ಲ” ಎಂದು ಚಾಡಿ ಹೇಳಿದರು.
13 ನೆಬೂಕದ್ನೆಚ್ಚರನಿಗೆ ಬಹಳ ಕೋಪ ಬಂತು. ಅವನು ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳನ್ನು ಕರೆಸಿದನು. ಅವರನ್ನು ಅರಸನ ಬಳಿಗೆ ಕರೆದುತರಲಾಯಿತು. 14 ನೆಬೂಕದ್ನೆಚ್ಚರನು ಅವರಿಗೆ, “ಶದ್ರಕ್, ಮೇಶಕ್, ಅಬೆದ್‌ನೆಗೋ, ನೀವು ನನ್ನ ದೇವರುಗಳನ್ನು ಪೂಜಿಸುವುದಿಲ್ಲವಂತೆ, ಇದು ನಿಜವೇ? ನಾನು ನಿಲ್ಲಿಸಿದ ಬಂಗಾರದ ವಿಗ್ರಹವನ್ನು ನೀವು ಅಡ್ಡಬಿದ್ದು ಪೂಜಿಸಲಿಲ್ಲವಂತೆ, ಇದು ನಿಜವೇ? 15 ಈಗಲಾದರೋ ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ನೀವು ಅಡ್ಡಬಿದ್ದು ಚಿನ್ನದ ವಿಗ್ರಹವನ್ನು ಪೂಜಿಸಬೇಕು. ನಾನು ಮಾಡಿಸಿದ ಈ ವಿಗ್ರಹವನ್ನು ಪೂಜಿಸಲು ನೀವು ಸಿದ್ಧರಾಗಿದ್ದರೆ ಸರಿ. ನೀವು ಅದನ್ನು ಪೂಜಿಸದಿದ್ದರೆ ತಕ್ಷಣ ನಿಮ್ಮನ್ನು ಉರಿಯುವ ಕೊಂಡದಲ್ಲಿ ಎಸೆಯಲಾಗುವುದು. ಆಗ ನನ್ನ ಕೈಯಿಂದ ನಿಮ್ಮನ್ನು ಬಿಡಿಸುವುದು ಯಾವ ದೇವರಿಗೂ ಸಾಧ್ಯವಾಗಲಾರದು” ಎಂದು ಹೇಳಿದನು.
16 ಇದನ್ನು ಕೇಳಿ ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬುವವರು ಅರಸನಿಗೆ, “ನೆಬೂಕದ್ನೆಚ್ಚರನೇ, ಈ ವಿಷಯದಲ್ಲಿ ನಾವು ನಿನಗೆ ಏನೂ ಹೇಳಬೇಕಾಗಿಲ್ಲ. 17 ನೀನು ನಮ್ಮನ್ನು ಉರಿಯುವ ಕೊಂಡದಲ್ಲಿ ಎಸೆದರೆ ನಾವು ಆರಾಧಿಸುವ ದೇವರು ನಮ್ಮನ್ನು ರಕ್ಷಿಸಬಲ್ಲನು. ಆತನು ಇಚ್ಛಿಸಿದರೆ ನಮ್ಮನ್ನು ನಿನ್ನ ಕೈಯಿಂದ ಬಿಡಿಸಬಲ್ಲನು. 18 ಅರಸನೇ, ಒಂದುವೇಳೆ ದೇವರು ನಮ್ಮನ್ನು ರಕ್ಷಿಸದಿದ್ದರೂ ನಾವು ನಿನ್ನ ದೇವರುಗಳನ್ನು ಪೂಜಿಸುವುದಿಲ್ಲ. ನೀನು ನಿಲ್ಲಿಸಿದ ಬಂಗಾರದ ವಿಗ್ರಹವನ್ನು ಪೂಜಿಸುವುದಿಲ್ಲ. ಇದು ನಿನಗೆ ತಿಳಿದಿರಲಿ” ಎಂದು ಖಂಡಿತವಾಗಿ ಹೇಳಿದರು.
19 ಆಗ ನೆಬೂಕದ್ನೆಚ್ಚರನಿಗೆ ಬಹಳ ಕೋಪ ಬಂತು. ಶದ್ರಕ್, ಮೇಶಕ್, ಅಬೇದ್‌ನೆಗೋ ಅವರ ವಿರುದ್ಧವಾಗಿ ಅವನ ಮುಖಭಾವವು ಕೆರಳಿತು. ಕುಲುಮೆಯನ್ನು ಏಳರಷ್ಟು ಹೆಚ್ಚಾಗಿ ಉರಿಸಬೇಕೆಂದು ಆಜ್ಞಾಪಿಸಿದನು. 20 ಆಮೇಲೆ ನೆಬೂಕದ್ನೆಚ್ಚರನು, ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳನ್ನು ಬಂಧಿಸಿ ಉರಿಯುವ ಕೊಂಡದಲ್ಲಿ ಎಸೆಯಬೇಕೆಂದು ತನ್ನ ಸೈನ್ಯದಲ್ಲಿದ್ದ ಅತಿ ಬಲಶಾಲಿಗಳಾದ ಕೆಲವರಿಗೆ ಆಜ್ಞಾಪಿಸಿದನು.
21 ಅವರು ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬವರನ್ನು ಚೆನ್ನಾಗಿ ಬಿಗಿದುಕಟ್ಟಿ ಉರಿಯುವ ಕೊಂಡದಲ್ಲಿ ಎಸೆದರು. ಅವರು ತಮ್ಮ ಶಲ್ಯ, ಇಜಾರು, ಟೊಪ್ಪಿಗೆ ಮೊದಲಾದ ಉಡುಪನ್ನು ಧರಿಸಿಕೊಂಡಿದ್ದರು. 22 ಆಜ್ಞೆಯನ್ನು ಕೊಟ್ಟಾಗ ಅರಸನು ತುಂಬ ಕೋಪದಲ್ಲಿದ್ದನು. ಆದ್ದರಿಂದ ತಕ್ಷಣ ಕುಲುಮೆಯಲ್ಲಿ ಅತಿ ಹೆಚ್ಚು ಬೆಂಕಿಯನ್ನು ಉರಿಸಲಾಯಿತು. ಆ ಜ್ವಾಲೆ ಎಷ್ಟು ಭಯಂಕರವಾಗಿತ್ತೆಂದರೆ ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳನ್ನು ಕುಲುಮೆಯಲ್ಲಿ ಎಸೆಯಲು ಹೋದ ಶಕ್ತಿಶಾಲಿಗಳಾದ ಸೈನಿಕರೇ ಅದರ ತಾಪಕ್ಕೆ ಸತ್ತುಹೋದರು. 23 ಶದ್ರಕ್, ಮೇಶಕ್, ಅಬೇದ್‌ನೆಗೋ ಈ ಮೂವರು ಕಟ್ಟಲ್ಪಟ್ಟವರಾಗಿ ಧಗಧಗನೆ ಉರಿಯುವ ಬೆಂಕಿಯಲ್ಲಿ ಬಿದ್ದುಬಿಟ್ಟರು.
24 ಅರಸನಾದ ನೆಬೂಕದ್ನೆಚ್ಚರನು ಬೆಚ್ಚಿ ತಟ್ಟನೆ ಎದ್ದುನಿಂತನು. ಅವನು ಆಶ್ಚರ್ಯಚಕಿತನಾಗಿ ತನ್ನ ಮಂತ್ರಿಗಳನ್ನು, “ನಾವು ಕೇವಲ ಮೂರು ಜನರನ್ನು ಕಟ್ಟಿದೆವು, ಕೇವಲ ಮೂರು ಜನರನ್ನು ಬೆಂಕಿಯಲ್ಲಿ ಎಸೆದೆವು. ಹೌದಲ್ಲವೇ?” ಎಂದು ಕೇಳಿದನು.
ಅವನ ಮಂತ್ರಿಗಳು, “ಹೌದು, ಮಹಾರಾಜನೇ” ಎಂದು ಉತ್ತರಿಸಿದರು.
25 ಆಗ ಅರಸನು, “ನೋಡಿರಿ, ನಾಲ್ಕು ಜನರು ಬೆಂಕಿಯಲ್ಲಿ ತಿರುಗಾಡುತ್ತಿರುವುದು ನನಗೆ ಕಾಣುತ್ತಿದೆ. ಅವರು ಕಟ್ಟಲ್ಪಟ್ಟಿಲ್ಲ. ಅವರನ್ನು ಬೆಂಕಿಯು ಸುಟ್ಟಿಲ್ಲ. ನಾಲ್ಕನೆಯವನು ದೇವಕುಮಾರನಂತೆ ಕಾಣುತ್ತಾನೆ” ಎಂದು ಹೇಳಿದನು.
26 ಆಗ ನೆಬೂಕದ್ನೆಚ್ಚರನು ಉರಿಯುವ ಕೊಂಡದ ಬಾಯಿಯ ಬಳಿಗೆ ಹೋಗಿ, “ಮಹೋನ್ನತನಾದ ದೇವರ ಸೇವಕರಾದ ಶದ್ರಕ್, ಮೇಶಕ್, ಅಬೆದ್‌ನೆಗೋ ಎಂಬವರೇ ಬನ್ನಿ, ಹೊರಗೆ ಬನ್ನಿ” ಎಂದು ಕೂಗಿದನು.
ಶದ್ರಕ್, ಮೇಶಕ್, ಅಬೇದ್‌ನೆಗೋ ಈ ಮೂವರು ಬೆಂಕಿಯೊಳಗಿಂದ ಹೊರಗೆ ಬಂದರು. 27 ಅವರು ಹೊರಗೆ ಬಂದ ಮೇಲೆ ಉಪರಾಜರು, ನಾಯಕರು, ದೇಶಾಧಿಪತಿಗಳು, ಮಂತ್ರಿಗಳು ಮತ್ತು ಇತರರು ಅವರ ಸುತ್ತಲೂ ನೆರೆದರು. ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳನ್ನು ಬೆಂಕಿಯು ಸುಟ್ಟಿಲ್ಲ. ಅವರ ದೇಹಕ್ಕೆ ಬೆಂಕಿಯು ಮುಟ್ಟಿಲ್ಲ. ಅವರ ಕೂದಲಿಗೂ ವಸ್ತ್ರಗಳಿಗೂ ಬೆಂಕಿಯು ತಾಕಿಲ್ಲ. ಬೆಂಕಿಯ ಸಮೀಪಕ್ಕೆ ಹೋದ ವಾಸನೆಯೂ ಅವರಿಗೆ ಮುಟ್ಟಿಲ್ಲ ಎಂಬುದನ್ನು ಅವರು ತಿಳಿದುಕೊಂಡರು.
28 ಆಗ ನೆಬೂಕದ್ನೆಚ್ಚರನು, “ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳ ದೇವರಿಗೆ ಸ್ತೋತ್ರವಾಗಲಿ. ಅವರ ದೇವರು ತನ್ನ ದೂತನನ್ನು ಕಳುಹಿಸಿ ತನ್ನ ಸೇವಕರನ್ನು ಬೆಂಕಿಯಿಂದ ರಕ್ಷಿಸಿದ್ದಾನೆ. ಈ ಮೂರು ಜನರು ತಮ್ಮ ದೇವರ ಮೇಲೆ ವಿಶ್ವಾಸವಿಟ್ಟರು. ಅವರು ನನ್ನ ಆಜ್ಞೆಯನ್ನು ಪಾಲಿಸಲು ಒಪ್ಪಲಿಲ್ಲ. ಬೇರೆ ಯಾವ ದೇವರನ್ನೂ ಪೂಜಿಸುವುದಕ್ಕೆ ಅಥವಾ ಸೇವಿಸುವುದಕ್ಕೆ ಬದಲಾಗಿ ಸಾಯಲು ಅವರು ಸಿದ್ಧರಾಗಿದ್ದರು. 29 ನಾನು ಈಗ ಸಕಲ ಜನಾಂಗ, ಕುಲ, ಭಾಷೆಗಳ ಜನರಲ್ಲಿ ಯಾರಾದರೂ ಶದ್ರಕ್, ಮೇಶಕ್, ಅಬೇದ್‌ನೆಗೋ ಇವರ ದೇವರ ವಿರುದ್ಧವಾಗಿ ಮಾತನಾಡಿದರೆ ಅವರನ್ನು ತುಂಡುತುಂಡಾಗಿ ಕತ್ತರಿಸಿ ಅವರ ಮನೆಗಳನ್ನು ತಿಪ್ಪೆಯನ್ನಾಗಿ ಮಾಡಬೇಕೆಂಬ ಆಜ್ಞೆಯನ್ನು ವಿಧಿಸುತ್ತೇನೆ. ಬೇರೆ ಯಾವ ದೇವರೂ ತನ್ನ ಭಕ್ತರನ್ನು ಈ ರೀತಿ ರಕ್ಷಿಸಲಾರನು” ಎಂದು ಹೇಳಿದನು. 30 ಬಳಿಕ ರಾಜನು ಶದ್ರಕ್, ಮೇಶಕ್ ಮತ್ತು ಅಬೇದ್‌ನೆಗೋ ಈ ಮೂವರಿಗೆ ಬಾಬಿಲೋನ್ ಸಂಸ್ಥಾನದಲ್ಲಿ ಹೆಚ್ಚು ಮಹತ್ವದ ಪದವಿಗಳನ್ನು ಕೊಟ್ಟನು.