14
ಸಬ್ಬತ್‌ದಿನದಲ್ಲಿ ವಾಸಿಮಾಡುವುದು ಸರಿಯೋ?
ಒಂದು ಸಬ್ಬತ್ ದಿನದಲ್ಲಿ ಯೇಸು ಒಬ್ಬ ಪ್ರಮುಖ ಫರಿಸಾಯನ ಮನೆಗೆ ಊಟಕ್ಕೆ ಹೋದನು. ಅಲ್ಲಿದ್ದ ಜನರೆಲ್ಲರೂ ಯೇಸುವನ್ನೇ ದೃಷ್ಟಿಸಿ ನೋಡುತ್ತಿದ್ದರು. ಯೇಸುವಿನ ಎದುರಿನಲ್ಲಿಯೇ ಜಲೋದರ* ಜಲೋದರ ಈ ರೋಗದಿಂದ ದೇಹ ಉಬ್ಬುತ್ತಾ ಹೋಗುವುದು. ರೋಗವುಳ್ಳ ಒಬ್ಬನನ್ನು ಇರಿಸಿದ್ದರು. ಯೇಸು ಫರಿಸಾಯರಿಗೂ ಧರ್ಮೋಪದೇಶಕರಿಗೂ, “ಸಬ್ಬತ್‌ದಿನದಲ್ಲಿ ವಾಸಿಮಾಡುವುದು ಸರಿಯೋ? ತಪ್ಪೋ?” ಎಂದು ಕೇಳಿದನು. ಅವರು ಉತ್ತರಕೊಡಲಿಲ್ಲ. ಆಗ ಯೇಸು ಆ ಮನುಷ್ಯನ ಕೈಮುಟ್ಟಿ ವಾಸಿಮಾಡಿ ಅವನನ್ನು ಕಳುಹಿಸಿಬಿಟ್ಟನು. ಯೇಸು ಫರಿಸಾಯರಿಗೂ ಧರ್ಮೋಪದೇಶಕರಿಗೂ, “ಸಬ್ಬತ್ ದಿನದಲ್ಲಿ ನಿಮ್ಮ ಮಗನಾಗಲಿ ನಿಮ್ಮ ದುಡಿಯುವ ಪಶುವಾಗಲಿ ಬಾವಿಗೆ ಬಿದ್ದರೆ, ಆ ಕೂಡಲೇ ನೀವು ಬಾವಿಯಿಂದ ಮೇಲಕ್ಕೆ ಎತ್ತಿ ಬದುಕಿಸುತ್ತೀರಿ ಎಂಬುದು ನಿಮಗೆ ಗೊತ್ತೇ ಇದೆ” ಎಂದು ಹೇಳಿದನು. ಫರಿಸಾಯರಾಗಲಿ ಧರ್ಮೋಪದೇಶಕರಾಗಲಿ ಯೇಸುವಿನ ಈ ಮಾತಿಗೆ ಉತ್ತರ ಕೊಡಲಾಗಲಿಲ್ಲ.
ನಿನ್ನನ್ನು ಪ್ರಮುಖನನ್ನಾಗಿ ಮಾಡಿಕೊಳ್ಳಬೇಡ
ಅತಿಥಿಗಳಾಗಿ ಬಂದಿದ್ದ ಕೆಲವರು ಊಟಕ್ಕೆ ಕುಳಿತುಕೊಳ್ಳಲು ಉತ್ತಮವಾದ ಸ್ಥಳಗಳನ್ನು ಆರಿಸಿಕೊಳ್ಳುತ್ತಿರುವುದನ್ನು ಕಂಡ ಯೇಸು ಈ ಸಾಮ್ಯವನ್ನು ಹೇಳಿದನು: “ಒಬ್ಬನು ನಿನ್ನನ್ನು ಮದುವೆಗೆ ಆಮಂತ್ರಿಸಿದರೆ, ಉನ್ನತವಾದ ಆಸನದಲ್ಲಿ ಕುಳಿತುಕೊಳ್ಳಬೇಡ. ಅವನು ನಿನಗಿಂತಲೂ ಪ್ರಮುಖನಾದವನನ್ನು ಆಮಂತ್ರಿಸಿದ್ದಿರಬಹುದು. ನೀನು ಉನ್ನತವಾದ ಸ್ಥಳದಲ್ಲಿ ಕುಳಿತುಕೊಂಡಿದ್ದರೆ, ನಿನಗೆ ಆಮಂತ್ರಣ ನೀಡಿರುವವನು ಬಂದು, ‘ಈ ಸ್ಥಳವನ್ನು ಇವನಿಗೆ ಬಿಟ್ಟುಕೊಡು’ ಎಂದು ನಿನಗೆ ಹೇಳಬಹುದು. ಆಗ ನೀನು ನಾಚಿಕೆಯಿಂದ ಕೊನೆಯ ಸ್ಥಳದಲ್ಲಿ ಕುಳಿತುಕೊಳ್ಳಬೇಕಾಗುವುದು.
10 “ಆದ್ದರಿಂದ ಒಬ್ಬನು ನಿನ್ನನ್ನು ಆಮಂತ್ರಿಸುವಾಗ, ಕೊನೆಯ ಸ್ಥಳದಲ್ಲಿ ಹೋಗಿ ಕುಳಿತುಕೊ. ಆಗ ನಿನ್ನನ್ನು ಆಮಂತ್ರಿಸಿದ ವ್ಯಕ್ತಿಯು ಬಂದು, ‘ಸ್ನೇಹಿತನೇ, ಉನ್ನತವಾದ ಈ ಸ್ಥಳದಲ್ಲಿ ಕುಳಿತುಕೊ!’ ಎಂದು ನಿನಗೆ ಹೇಳುವನು. ಆಗ ನೆರೆದು ಬಂದ ಅತಿಥಿಗಳೆಲ್ಲಾ ನಿನ್ನನ್ನು ಗೌರವಿಸುವರು. 11 ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನೂ ತಗ್ಗಿಸಲ್ಪಡುವನು. ತನ್ನನ್ನು ತಗ್ಗಿಸಿಕೊಳ್ಳುವ ಪ್ರತಿಯೊಬ್ಬನೂ ಹೆಚ್ಚಿಸಲ್ಪಡುವನು.”
ನಿಮಗೆ ಪ್ರತಿಫಲ ದೊರೆಯುವುದು
12 ಬಳಿಕ ಯೇಸು ತನ್ನನ್ನು ಆಮಂತ್ರಿಸಿದ ಫರಿಸಾಯನಿಗೆ, “ನೀನು ಮಧ್ಯಾಹ್ನದ ಊಟಕ್ಕೆ ಅಥವಾ ರಾತ್ರಿಯ ಊಟಕ್ಕೆ ನಿನ್ನ ಸ್ನೇಹಿತರನ್ನು, ಸಹೋದರರನ್ನು, ಸಂಬಂಧಿಕರನ್ನು ಮತ್ತು ಶ್ರೀಮಂತರಾದ ನೆರೆಯವರನ್ನು ಆಮಂತ್ರಿಸಿದರೆ, ಅವರೂ ನಿನ್ನನ್ನು ಮತ್ತೊಮ್ಮೆ ಊಟಕ್ಕೆ ಆಮಂತ್ರಿಸುವರು. ಆಗ ಅದೇ ನಿನಗೆ ಪ್ರತಿಫಲವಾಗುವುದು. 13 ಅದರ ಬದಲು, ನೀನು ಔತಣ ಮಾಡಿಸುವಾಗ ಬಡಜನರನ್ನು, ಕುಂಟರನ್ನು ಮತ್ತು ಕುರುಡರನ್ನು ಆಮಂತ್ರಿಸು. 14 ಆಗ ನಿನಗೆ ಆಶೀರ್ವಾದ ದೊರೆಯುವುದು. ಏಕೆಂದರೆ, ಈ ಜನರು ನಿನ್ನನ್ನು ಔತಣಕ್ಕೆ ಆಮಂತ್ರಿಸಲಾರರು. ಅವರಲ್ಲಿ ಏನೂ ಇಲ್ಲ. ಆದರೆ ನೀತಿವಂತರು ಜೀವಂತವಾಗಿ ಎದ್ದುಬರುವಾಗ, ನಿನಗೆ ಪ್ರತಿಫಲ ದೊರೆಯುವುದು” ಎಂದು ಹೇಳಿದನು.
ಔತಣಕೂಟದ ಸಾಮ್ಯ
(ಮತ್ತಾಯ 22:1-10)
15 ಯೇಸುವಿನೊಡನೆ ಊಟಕ್ಕೆ ಕುಳಿತಿದ್ದವರಲ್ಲಿ ಒಬ್ಬನು ಈ ವಿಷಯಗಳನ್ನು ಕೇಳಿ ಯೇಸುವಿಗೆ, “ದೇವರ ರಾಜ್ಯದಲ್ಲಿ ಊಟಮಾಡುವವರೇ ಧನ್ಯರು!” ಎಂದನು.
16 ಯೇಸು ಅವನಿಗೆ ಹೇಳಿದ್ದೇನೆಂದರೆ: “ಒಬ್ಬನು ಒಂದು ದೊಡ್ಡ ಔತಣವನ್ನು ಮಾಡಿಸಿ ಅನೇಕ ಜನರನ್ನು ಆಮಂತ್ರಿಸಿದನು. 17 ಊಟದ ಸಮಯ ಬಂದಾಗ, ಅವನು ತನ್ನ ಸೇವಕನನ್ನು ಕಳುಹಿಸಿ, ‘ಬನ್ನಿರಿ! ಊಟ ಸಿದ್ಧವಾಗಿದೆ’ ಎಂದು ಅತಿಥಿಗಳಿಗೆ ತಿಳಿಸಿದನು. 18 ಆದರೆ ಎಲ್ಲಾ ಅತಿಥಿಗಳು ತಾವು ಬರಲಾಗುವುದಿಲ್ಲವೆಂದು ಹೇಳಿದರು. ಪ್ರತಿಯೊಬ್ಬನೂ ಒಂದೊಂದು ನೆವ ಹೇಳಿದನು. ಮೊದಲನೆಯವನು, ‘ನಾನು ಇದೀಗ ಒಂದು ಹೊಲವನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ. ಆದ್ದರಿಂದ ನಾನು ಹೋಗಿ ಅದನ್ನು ನೋಡಬೇಕು. ದಯಮಾಡಿ ಕ್ಷಮಿಸು’ ಎಂದು ಹೇಳಿದನು. 19 ಎರಡನೆಯವನು, ‘ನಾನು ಇದೀಗ ಐದು ಜೊತೆ ಎತ್ತುಗಳನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ. ನಾನು ಹೋಗಿ ಅವುಗಳನ್ನು ಪರೀಕ್ಷಿಸಬೇಕು. ದಯಮಾಡಿ ಕ್ಷಮಿಸು’ ಎಂದು ಹೇಳಿದನು. 20 ಮೂರನೆಯವನು, ‘ನಾನು ಇದೀಗ ಮದುವೆಯಾಗಿದ್ದೇನೆ, ನಾನು ಬರಲಾರೆ’ ಎಂದನು.
21 “ಆದ್ದರಿಂದ ಆ ಸೇವಕನು ಹಿಂತಿರುಗಿ ಹೋಗಿ ಅವರು ಹೇಳಿದ್ದನ್ನೆಲ್ಲ ತನ್ನ ಯಜಮಾನನಿಗೆ ತಿಳಿಸಿದನು. ಆಗ ಯಜಮಾನನು ಬಹಳ ಕೋಪಗೊಂಡು ಆ ಸೇವಕನಿಗೆ, ‘ಈ ಊರಿನ ಬೀದಿಗಳಿಗೂ ಸಂದಿಗಳಿಗೂ ಬೇಗನೆ ಹೋಗಿ ಬಡವರನ್ನೂ ಅಂಗವಿಕಲರನ್ನೂ ಕುರುಡರನ್ನೂ ಕುಂಟರನ್ನೂ ಇಲ್ಲಿಗೆ ಕರೆದುಕೊಂಡು ಬಾ’ ಎಂದು ಹೇಳಿದನು.
22 “ತರುವಾಯ ಆ ಸೇವಕನು ಬಂದು, ‘ಸ್ವಾಮೀ, ನೀನು ಹೇಳಿದಂತೆಯೇ ಮಾಡಿದೆನು. ಆದರೆ ನಮ್ಮಲ್ಲಿ ಇನ್ನೂ ಹೆಚ್ಚು ಜನರಿಗೆ ಸ್ಥಳವಿದೆ.’ ಎಂದು ಹೇಳಿದನು. 23 ಆಗ ಯಜಮಾನನು ಆ ಸೇವಕನಿಗೆ, ‘ಹೆದ್ದಾರಿಗಳಿಗೂ ರಸ್ತೆಗಳಿಗೂ ಹೋಗಿ, ಅಲ್ಲಿರುವ ಜನರನ್ನೆಲ್ಲಾ ಆಮಂತ್ರಿಸು. ನನ್ನ ಮನೆಯು ಜನರಿಂದ ತುಂಬಿಹೋಗಬೇಕೆಂಬುದೇ ನನ್ನ ಅಪೇಕ್ಷೆ. 24 ನಾನು ಮೊದಲನೆ ಸಲ ಆಮಂತ್ರಿಸಿದ ಆ ಜನರಲ್ಲಿ ಒಬ್ಬರಾದರೂ ನನ್ನೊಂದಿಗೆ ಊಟಮಾಡಕೂಡದು!’ ಎಂದು ಹೇಳಿದನು.”
ಯೋಜನೆಯ ಅಗತ್ಯತೆ
(ಮತ್ತಾಯ 10:37-38)
25 ಅನೇಕ ಜನರು ಯೇಸುವಿನೊಂದಿಗೆ ಗುಂಪುಗುಂಪಾಗಿ ಹೋಗುತ್ತಿದ್ದಾಗ ಆತನು ಅವರಿಗೆ ಹೀಗೆಂದನು: 26 “ನನ್ನ ಬಳಿಗೆ ಬರುವವನು ನನ್ನನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ತನ್ನ ತಂದೆತಾಯಿಗಳನ್ನು, ಹೆಂಡತಿಯನ್ನು, ಮಕ್ಕಳನ್ನು, ಸಹೋದರ ಸಹೋದರಿಯರನ್ನು ಮತ್ತು ತನ್ನನ್ನು ಪ್ರೀತಿಸುವುದಾದರೆ, ಅವನು ನನ್ನ ಶಿಷ್ಯನಾಗಿರಲು ಸಾಧ್ಯವಿಲ್ಲ. 27 ನನ್ನನ್ನು ಹಿಂಬಾಲಿಸುವವನು ತನಗೆ ಕೊಡಲ್ಪಟ್ಟಿರುವ ಶಿಲುಬೆಯನ್ನು (ಶ್ರಮೆ) ಹೊತ್ತುಕೊಂಡು ಹೋಗದಿದ್ದರೆ, ಅವನು ನನ್ನ ಶಿಷ್ಯನಾಗಿರಲು ಸಾಧ್ಯವಿಲ್ಲ.
28 “ನೀನು ಒಂದು ಕಟ್ಟಡವನ್ನು ಕಟ್ಟಬೇಕೆಂದಿದ್ದರೆ ಮೊದಲು ನೀನು ಕುಳಿತುಕೊಂಡು ಅದಕ್ಕೆ ಎಷ್ಟು ಖರ್ಚಾಗುತ್ತದೆ ಎಂಬುದನ್ನು ಆಲೋಚಿಸು. ಆ ಕಟ್ಟಡವನ್ನು ಪೂರೈಸಲು ನಿನ್ನಲ್ಲಿ ಸಾಕಷ್ಟು ಹಣವಿದೆಯೋ ಎಂದು ಲೆಕ್ಕಹಾಕಿ ನೋಡು. 29 ಇಲ್ಲವಾದರೆ, ನೀನು ಕಟ್ಟಡದ ಕೆಲಸವನ್ನು ಪ್ರಾರಂಭಿಸಿದರೂ ಅದನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಜನರು ನಿನ್ನನ್ನು ನೋಡಿ, 30 ‘ಇವನು ಈ ಕಟ್ಟಡದ ಕೆಲಸವನ್ನು ಪ್ರಾರಂಭಿಸಿದನು. ಆದರೆ ಪೂರೈಸಲು ಅವನಿಂದಾಗಲಿಲ್ಲ’ ಎಂದು ಗೇಲಿ ಮಾಡುವರು.
31 “ಒಬ್ಬ ಅರಸನು ಇನ್ನೊಬ್ಬ ಅರಸನ ವಿರುದ್ಧ ಯುದ್ಧಕ್ಕೆ ಹೋಗುವಾಗ, ಮೊದಲು ಅವನು ಕುಳಿತುಕೊಂಡು ಯೋಜನೆ ಮಾಡುವನು. ಅರಸನ ಬಳಿಯಲ್ಲಿ ಕೇವಲ ಹತ್ತುಸಾವಿರ ಮಂದಿ ಸೈನಿಕರಿದ್ದರೆ, ಇಪ್ಪತ್ತುಸಾವಿರ ಮಂದಿ ಸೈನಿಕರಿರುವ ಇನ್ನೊಬ್ಬ ಅರಸನನ್ನು ಸೋಲಿಸಲು ತನಗೆ ಸಾಧ್ಯವೇ ಎಂದು ಆಲೋಚಿಸುವನು. 32 ಅವನು ಇನ್ನೊಬ್ಬ ಅರಸನನ್ನು ಸೋಲಿಸಲಾಗದಿದ್ದರೆ, ತನ್ನ ರಾಯಭಾರಿಗಳನ್ನು ಕಳುಹಿಸಿ, ಶಾಂತಿಒಪ್ಪಂದಕ್ಕಾಗಿ ಕೇಳಿಕೊಳ್ಳುವನು.
33 “ಅದೇರೀತಿಯಲ್ಲಿ ನೀವೆಲ್ಲರೂ ಮೊದಲು ಯೋಜನೆ ಮಾಡಬೇಕು. ನೀವು ನನ್ನನ್ನು ಹಿಂಬಾಲಿಸಬೇಕೆಂದಿದ್ದರೆ ನಿಮ್ಮಲ್ಲಿರುವ ಪ್ರತಿಯೊಂದನ್ನೂ ತ್ಯಜಿಸಿಬಿಡಬೇಕು. ಇಲ್ಲವಾದರೆ, ನನ್ನ ಶಿಷ್ಯರಾಗಲು ಸಾಧ್ಯವಿಲ್ಲ!
ನಿಮ್ಮ ಪ್ರಭಾವವನ್ನು ಕಳೆದುಕೊಳ್ಳಬೇಡಿರಿ
(ಮತ್ತಾಯ 5:13; ಮಾರ್ಕ 9:50)
34 “ಉಪ್ಪು ಒಳ್ಳೆಯ ಪದಾರ್ಥ. ಆದರೆ ಉಪ್ಪು ತನ್ನ ರುಚಿ ಕಳೆದುಕೊಂಡರೆ ಅದಕ್ಕೆ ಯಾವ ಬೆಲೆಯೂ ಇಲ್ಲ. ನೀವು ಅದಕ್ಕೆ ಮತ್ತೆ ಉಪ್ಪಿನ ರುಚಿಯನ್ನು ಕೊಡಲು ಸಾಧ್ಯವಿಲ್ಲ. 35 ಅದರಿಂದ ಮಣ್ಣಿಗಾಗಲಿ ಗೊಬ್ಬರಕ್ಕಾಗಲಿ ಪ್ರಯೋಜನವಿಲ್ಲ. ಜನರು ಅದನ್ನು ಹೊರಗೆ ಬಿಸಾಡುತ್ತಾರೆ.
“ನನ್ನ ಮಾತನ್ನು ಕೇಳುವ ಜನರೇ, ಆಲಿಸಿರಿ!”

*14:2: ಜಲೋದರ ಈ ರೋಗದಿಂದ ದೇಹ ಉಬ್ಬುತ್ತಾ ಹೋಗುವುದು.