14
ದಾವೀದನ ಬಳಿಗೆ ಒಬ್ಬ ಬುದ್ಧಿವಂತಳಾದ ಸ್ತ್ರೀಯನ್ನು ಕಳುಹಿಸಿದ್ದು
1 ರಾಜನಾದ ದಾವೀದನಿಗೆ ಅಬ್ಷಾಲೋಮನ ಅಗಲಿಕೆಯಿಂದಾದ ಯಾತನೆಯು ಚೆರೂಯಳ ಮಗನಾದ ಯೋವಾಬನಿಗೆ ತಿಳಿಯಿತು. 2 ಆದ್ದರಿಂದ ಯೋವಾಬನು ಒಬ್ಬ ಬುದ್ಧಿವಂತ ಸ್ತ್ರೀಯನ್ನು ತೆಕೋವದಿಂದ ಕರೆತರಲು ಸಂದೇಶಕರನ್ನು ಅಲ್ಲಿಗೆ ಕಳುಹಿಸಿದನು. ಈ ಬುದ್ಧಿವಂತಳಾದ ಸ್ತ್ರೀಗೆ ಯೋವಾಬನು, “ದಯವಿಟ್ಟು ನಿನ್ನ ಚರ್ಮಕ್ಕಾಗಲಿ ತಲೆಕೂದಲಿಗಾಗಲಿ ಎಣ್ಣೆಯನ್ನು ಹಚ್ಚಿಕೊಳ್ಳಬೇಡ; ಚೆನ್ನಾಗಿರುವ ವಸ್ತ್ರಗಳನ್ನು ತೊಟ್ಟುಕೊಳ್ಳದೆ ಶೋಕಸೂಚಕ ವಸ್ತ್ರಗಳನ್ನು ಧರಿಸಿಕೋ. ಸತ್ತವನಿಗಾಗಿ ಅನೇಕ ದಿನಗಳಿಂದ ರೋಧಿಸುತ್ತಿರುವ ಸ್ತ್ರೀಯಂತೆ ನಟಿಸು. 3 ರಾಜನ ಬಳಿಗೆ ಹೋಗಿ, ನಾನು ಹೇಳಿಕೊಟ್ಟ ಮಾತುಗಳನ್ನು ಅವನಿಗೆ ಹೇಳು” ಎಂದು ಹೇಳಿದನು. ಯೋವಾಬನು ಬುದ್ಧಿವಂತಳಾದ ಆ ಸ್ತ್ರೀಗೆ ಮಾತಾಡಬೇಕಾದದ್ದನ್ನು ಹೇಳಿಕೊಟ್ಟನು.
4 ತೆಕೋವದ ಆ ಸ್ತ್ರೀಯು ರಾಜನ ಬಳಿಗೆ ಬಂದಾಗ ಅವನಿಗೆ ಸಾಷ್ಟಾಂಗನಮಸ್ಕಾರ ಮಾಡಿ, “ರಾಜನೇ, ನನಗೆ ಸಹಾಯಮಾಡು” ಎಂದು ಹೇಳಿದಳು.
5 ರಾಜನಾದ ದಾವೀದನು ಅವಳಿಗೆ, “ನಿನ್ನ ಸಮಸ್ಯೆ ಏನು?” ಎಂದು ಕೇಳಿದನು.
ಆ ಸ್ತ್ರೀಯು, “ನಾನೊಬ್ಬ ವಿಧವೆ. ನನ್ನ ಗಂಡನು ತೀರಿಕೊಂಡಿದ್ದಾನೆ. 6 ನನಗೆ ಇಬ್ಬರು ಗಂಡುಮಕ್ಕಳಿದ್ದರು. ಈ ಇಬ್ಬರು ಗಂಡುಮಕ್ಕಳು ಜಗಳಮಾಡುತ್ತಾ ಹೊರಗೆ ಮೈದಾನದಲ್ಲಿದ್ದರು. ಅವರನ್ನು ತಡೆಯುವ ಬೇರೊಬ್ಬನು ಅಲ್ಲಿರಲಿಲ.್ಲ ಒಬ್ಬ ಮಗನು ಮತ್ತೊಬ್ಬನನ್ನು ಕೊಂದನು. 7 ಈಗ ನಮ್ಮ ಕುಟುಂಬದವರೆಲ್ಲಾ ನನಗೆ ವಿರುದ್ಧವಾಗಿದ್ದಾರೆ. ಅವರು ನನಗೆ, ‘ತನ್ನ ಸೋದರನನ್ನೇ ಕೊಂದ ಮಗನನ್ನು ಕರೆದುಕೊಂಡು ಬಾ. ಅವನು ತನ್ನ ಸೋದರನನ್ನೇ ಕೊಂದುಹಾಕಿದ್ದರಿಂದ ಅವನನ್ನು ನಾವು ಕೊಂದುಹಾಕುತ್ತೇವೆ’ ಎಂದು ಹೇಳಿದರು. ನನ್ನ ಮಗನನ್ನು ಕೊಲ್ಲಲು ನಾನು ಅವರಿಗೆ ಬಿಟ್ಟುಕೊಟ್ಟರೆ, ತನ್ನ ತಂದೆಯ ಆಸ್ತಿಗೆ ವಾರಸುದಾರನಾದ ಮಗನನ್ನೇ ಕೊಂದುಹಾಕಿದಂತಾಗುತ್ತದೆ. ನನ್ನ ಮಗ ನನ್ನ ಬದುಕಿನ ಕೊನೆಯ ಆಶಾಕಿರಣ. ಆ ಕೊನೆಯ ಆಶಾಕಿರಣವು ಸುಟ್ಟು ನಾಶವಾಗಿಬಿಡುತ್ತದೆ. ನಂತರ ನನ್ನ ಸತ್ತ ಗಂಡನ ಆಸ್ತಿ ಬೇರೊಬ್ಬನಿಗೆ ಹೋಗುತ್ತದೆ ಮತ್ತು ಅವನ ಹೆಸರು ದೇಶದೊಳಗಿಂದ ತೆಗೆದುಹಾಕಲ್ಪಡುತ್ತದೆ” ಎಂದು ಹೇಳಿದಳು.
8 ಆಗ ರಾಜನು ಆ ಸ್ತ್ರೀಗೆ, “ಮನೆಗೆ ಹಿಂದಿರುಗು. ನಾನು ನಿನ್ನ ವಿಷಯದಲ್ಲಿ ಆಜ್ಞೆಗಳನ್ನು ಕೊಡುತ್ತೇನೆ” ಎಂದು ಹೇಳಿದನು.
9 ತೆಕೋವದ ಆ ಸ್ತ್ರೀಯು ರಾಜನಿಗೆ, “ರಾಜನಾದ ನನ್ನ ಒಡೆಯನೇ, ದೋಷವೆಲ್ಲವೂ ನನ್ನ ಮೇಲೆಯೇ ಬರಲಿ. ನನ್ನ ಒಡೆಯನಾದ ರಾಜನೇ, ನೀನೂ ನಿನ್ನ ರಾಜ್ಯವೂ ನಿರ್ದೋಷಿಗಳಾಗಿದ್ದೀರಿ” ಎಂದು ಹೇಳಿದಳು.
10 ರಾಜನಾದ ದಾವೀದನು “ನಿನ್ನನ್ನು ದೋಷಿ ಎಂದವರನ್ನು ನನ್ನ ಬಳಿಗೆ ಕರೆದುಕೊಂಡು ಬಾ. ಅವನು ನಿನಗೆ ಮತ್ತೆ ತೊಂದರೆ ಕೊಡದಂತೆ ನಾನು ನೋಡಿಕೊಳ್ಳುವೆ” ಎಂದು ಹೇಳಿದನು.
11 ಆ ಸ್ತ್ರೀಯು, “ಅವರು ನನಗೆ ತೊಂದರೆ ಕೊಡದಂತೆ ನೀನು ನೋಡಿಕೊಳ್ಳುವುದಾಗಿ ನಿನ್ನ ದೇವರಾದ ಯೆಹೋವನ ಮೇಲೆ ದಯವಿಟ್ಟು ಪ್ರಮಾಣ ಮಾಡು. ಆಗ ಕೊಲೆಗಾರರನ್ನು ದಂಡಿಸಲು ಇಚ್ಛಿಸುವ ಈ ಜನರು, ನನ್ನ ಮಗನನ್ನು ದಂಡಿಸುವುದಿಲ್ಲ” ಎಂದು ಹೇಳಿದಳು.
ದಾವೀದನು, “ಯೆಹೋವನಾಣೆ, ನಿನ್ನ ಮಗನನ್ನು ಯಾವ ವ್ಯಕ್ತಿಯೂ ತೊಂದರೆಗೊಳಿಸುವುದಿಲ್ಲ. ನಿನ್ನ ಮಗನ ತಲೆಯ ಮೇಲಿನ ಕೂದಲುಗಳಲ್ಲಿ ಒಂದಾದರೂ ನೆಲಕ್ಕೆ ಬೀಳುವುದಿಲ್ಲ” ಎಂದನು.
12 ಆ ಸ್ತ್ರೀಯು, “ರಾಜನಾದ ನನ್ನ ಒಡಯನೇ, ದಯವಿಟ್ಟು ನಾನು ನಿನಗೆ ಕೆಲವು ಮಾತುಗಳನ್ನು ಹೇಳಲು ಬಿಡು” ಎಂದಳು.
“ಹೇಳು” ಎಂದು ರಾಜನು ಹೇಳಿದನು.
13 ಆಗ ಆ ಸ್ತ್ರೀಯು, “ದೇವರ ಜನರ ವಿರುದ್ಧವಾಗಿ ನೀನು ಈ ಕಾರ್ಯಗಳನ್ನು ಮಾಡಲು ಯೋಚಿಸಿರುವುದಾದರೂ ಏಕೆ? ಹೌದು, ನೀನು ಕೊಟ್ಟ ತೀರ್ಪಿನ ಮೂಲಕ ನೀನು ನನ್ನನ್ನು ತಪ್ಪಿತಸ್ಥನೆಂದು ತೋರಿಸಿ ಕೊಟ್ಟಿರುವೆ. ಏಕೆಂದರೆ ನೀನು ಬಲಾತ್ಕಾರದಿಂದ ಮನೆ ಬಿಡಿಸಿದ ಮಗನನ್ನು ಮನೆಗೆ ಕರೆದು ತಂದಿಲ್ಲ. 14 ನಾವೆಲ್ಲ ಎಂದಾದರೂ ಒಂದು ದಿನ ಸಾಯುತ್ತೇವೆ ಎನ್ನುವುದು ನಿಜ. ನಾವೆಲ್ಲ ನೆಲದ ಮೇಲೆ ಚೆಲ್ಲಿದ ನೀರಿನಂತಿದ್ದೇವೆ. ಈ ನೀರನ್ನು ನೆಲದಿಂದ ಮತ್ತೆ ಒಟ್ಟುಗೂಡಿಸುವುದು ಯಾವ ವ್ಯಕ್ತಿಯಿಂದಲೂ ಸಾಧ್ಯವಿಲ್ಲ. ಆದರೆ ಜೀವವನ್ನು ತೆಗೆದುಬಿಡಲು ದೇವರು ಇಚ್ಛಿಸುವುದಿಲ್ಲ. ಬಲಾತ್ಕಾರವಾಗಿ ಹೊರಗೆ ನೂಕಲ್ಪಟ್ಟವನು ತಿರುಗಿ ತನ್ನ ಬಳಿಗೆ ಬರುವ ಹಾಗೆ ಆತನದೇ ಆದ ಉಪಾಯವಿದೆ. 15 ರಾಜನಾದ ನನ್ನ ಒಡೆಯನೇ, ನಾನು ಈ ಮಾತುಗಳನ್ನು ನಿನಗೆ ಹೇಳುವುದಕ್ಕೆಂದೇ ಬಂದೆನು. ಏಕೆಂದರೆ ಜನರು ನನ್ನನ್ನು ಹೆದರಿಸಿದರು. ನಾನು ನನ್ನೊಳಗೆ ಹೀಗೆಂದುಕೊಂಡೆನು. ‘ನಾನು ರಾಜನೊಂದಿಗೆ ಮಾತಾಡುತ್ತೇನೆ. ಬಹುಶಃ ರಾಜನು ನನ್ನ ಮಾತುಗಳನ್ನು ಕೇಳಿ ಸಹಾಯ ಮಾಡಬಹುದು. 16 ರಾಜನು ನನ್ನನ್ನೂ ನನ್ನ ಮಗನನ್ನೂ ಕೊಲ್ಲಲು ಇಚ್ಛಿಸುವ ವ್ಯಕ್ತಿಯಿಂದ ನಮ್ಮಿಬ್ಬರನ್ನೂ ರಕ್ಷಿಸಬಹುದು; ದೇವರು ನಮಗೆ ಕೊಟ್ಟಿರುವ ಸ್ವಾಸ್ತ್ಯವನ್ನು ನಮ್ಮಿಂದ ಕಸಿದುಕೊಳ್ಳದಂತೆ ಕಾಪಾಡಬಹುದು.’ 17 ರಾಜನಾದ ನನ್ನ ಒಡೆಯನ ಮಾತುಗಳು ನನಗೆ ವಿಶ್ರಾಂತಿಯನ್ನು ಕೊಡುತ್ತವೆ ಎಂದು ನನಗೆ ತಿಳಿದಿರುವುದರಿಂದ ನಿನ್ನ ಬಳಿಗೆ ಬಂದಿರುವೆನು. ಏಕೆಂದರೆ ನೀನು ದೇವದೂತನಂತಿರುವೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದು ನಿನಗೆ ತಿಳಿದಿದೆ. ನಿನ್ನ ದೇವರಾದ ಯೆಹೋವನು ನಿನ್ನೊಂದಿಗಿರುವನು” ಎಂದು ಹೇಳಿದಳು.
18 ರಾಜನಾದ ದಾವೀದನು ಆ ಸ್ತ್ರೀಗೆ, “ನಾನು ಕೇಳುವ ಪ್ರಶ್ನೆಗೆ ನೀನು ಉತ್ತರವನ್ನು ಹೇಳಲೇಬೇಕು” ಎಂದು ಉತ್ತರಿಸಿದನು.
ಆ ಸ್ತ್ರೀಯು, “ರಾಜನಾದ ನನ್ನ ಒಡಯನೇ, ದಯವಿಟ್ಟು ನಿನ್ನ ಪ್ರಶ್ನೆಯನ್ನು ಕೇಳು” ಎಂದಳು.
19 ರಾಜನು, “ಈ ವಿಚಾರಗಳನ್ನೆಲ್ಲ ಹೇಳಲು ಯೋವಾಬನು ನಿನಗೆ ತಿಳಿಸಿದನಲ್ಲವೇ?” ಎಂದನು.
ಆ ಸ್ತ್ರೀಯು, “ರಾಜನಾದ ನನ್ನ ಒಡಯನೇ, ನಿಮ್ಮ ಆಣೆಯಾಗಿಯೂ, ನೀನು ಹೇಳಿದ್ದು ಸರಿ! ನಿಮ್ಮ ಸೇವಕನಾದ ಯೋವಾಬನು ಈ ವಿಷಯಗಳನ್ನು ಹೇಳಲು ನನಗೆ ತಿಳಿಸಿದನು. 20 ಈ ವಿಷಯಗಳ ಬಗ್ಗೆ ನಿಮ್ಮ ದೃಷ್ಟಿಯು ಬದಲಾಗಲೆಂಬುದಕ್ಕಾಗಿ ಯೋವಾಬನು ಹೀಗೆ ಮಾಡಿದನು. ನನ್ನ ಒಡೆಯನೇ, ನೀನು ದೇವದೂತನಂತೆ ಬುದ್ಧಿವಂತನಾಗಿರುವೆ. ಈ ಲೋಕದಲ್ಲಿ ನಡೆಯುತ್ತಿರುವುದೆಲ್ಲವನ್ನೂ ನೀನು ತಿಳಿದಿರುವೆ” ಎಂದಳು.
ಅಬ್ಷಾಲೋಮನು ಜೆರುಸಲೇಮಿಗೆ ಹಿಂದಿರುಗಿದ್ದು
21 ರಾಜನು ಯೋವಾಬನಿಗೆ, “ನೀನು ಕೇಳಿಕೊಂಡದ್ದನ್ನು ಅನುಗ್ರಹಿಸಿದ್ದೇನೆ. ಈಗ ಯುವಕನಾದ ಅಬ್ಷಾಲೋಮನನ್ನು ಹಿಂದಕ್ಕೆ ಕರೆದುಕೊಂಡು ಬಾ” ಎಂದು ಹೇಳಿದನು.
22 ಯೋವಾಬನು ಅರಸನಾದ ದಾವೀದನಿಗೆ ಸಾಷ್ಟಾಂಗನಮಸ್ಕಾರಮಾಡಿ, “ನಾನು ಕೇಳಿಕೊಂಡದ್ದನ್ನು ನೀನು ನೆರವೇರಿಸಿದ್ದರಿಂದ, ನೀನು ನನ್ನ ವಿಷಯದಲ್ಲಿ ಸಂತೋಷದಿಂದಿರುವೆ ಎಂಬುದು ಇಂದು ನನಗೆ ಗೊತ್ತಾಯಿತು” ಎಂದನು.
23 ನಂತರ ಯೋವಾಬನು ಮೇಲೆದ್ದು ಗೆಷೂರಿಗೆ ಹೋಗಿ ಅಬ್ಷಾಲೋಮನನ್ನು ಜೆರುಸಲೇಮಿಗೆ ಕರೆದುತಂದನು. 24 ಆದರೆ ರಾಜನಾದ ದಾವೀದನು, “ಅಬ್ಷಾಲೋಮನು ತನ್ನ ಸ್ವಂತ ಮನೆಗೆ ಹಿಂದಿರುಗಿ ಹೋಗಲಿ. ಅವನು ನನ್ನನ್ನು ನೋಡಲು ಬರುವುದು ಬೇಡ” ಎಂದನು. ಆದ್ದರಿಂದ ಅಬ್ಷಾಲೋಮನು ತನ್ನ ಸ್ವಂತ ಮನೆಗೆ ಹಿಂದಿರುಗಿಹೋದನು. ಅಬ್ಷಾಲೋಮನು ರಾಜನನ್ನು ನೋಡಲು ಹೋಗಲಿಲ್ಲ.
25 ಜನರು ಅಬ್ಷಾಲೋಮನನ್ನು, ಅವನ ಸುಂದರ ರೂಪಕ್ಕಾಗಿ ಬಹಳ ಹೊಗಳುತ್ತಿದ್ದರು. ಇಸ್ರೇಲಿನಲ್ಲಿ ಅವನಷ್ಟು ರೂಪವಂತನು ಬೇರೆ ಯಾರೂ ಇರಲಿಲ್ಲ. ಅಬ್ಷಾಲೋಮನ ತಲೆಯಿಂದ ಪಾದಗಳವರೆಗೆ ಯಾವ ಕಳಂಕವೂ ಇರಲಿಲ್ಲ. 26 ಪ್ರತಿ ವರ್ಷಾಂತ್ಯದಲ್ಲಿಯೂ ಅಬ್ಷಾಲೋಮನು ತನ್ನ ತಲೆಕೂದಲನ್ನು ಕತ್ತರಿಸಿ ಅದನ್ನು ತೂಕ ಮಾಡಿಸುತ್ತಿದ್ದನು. ಅವನ ತಲೆಕೂದಲು ಐದು ಪೌಂಡುಗಳಷ್ಟು ಭಾರವಾಗಿರುತ್ತಿತ್ತು. 27 ಅಬ್ಷಾಲೋಮನಿಗೆ ಮೂವರು ಗಂಡುಮಕ್ಕಳು ಮತ್ತು ಒಬ್ಬ ಮಗಳು ಇದ್ದರು. ಮಗಳ ಹೆಸರು ತಾಮಾರ್; ಈಕೆಯು ಬಹು ಸುಂದರಿಯಾಗಿದ್ದಳು.
ಯೋವಾಬನು ಬಂದು ತನ್ನನ್ನು ನೋಡಬೇಕೆಂದು ಅಬ್ಷಾಲೋಮನು ಒತ್ತಾಯಿಸಿದ್ದು
28 ಅಬ್ಷಾಲೋಮನು ಎಂಡು ವರ್ಷಗಳ ಕಾಲ ಜೆರುಸಲೇಮಿನಲ್ಲಿ ಇದ್ದನು. ಆದರೂ ರಾಜನಾದ ದಾವೀದನನ್ನು ಭೇಟಿಯಾಗಲು ಅವನಿಗೆ ಅವಕಾಶ ದೊರಕಲಿಲ್ಲ. 29 ಆದ್ದರಿಂದ ಅಬ್ಷಾಲೋಮನು ಯೋವಾಬನ ಬಳಿಗೆ ಸಂದೇಶಕರನ್ನು ಕಳುಹಿಸಿದನು. ಅಬ್ಷಾಲೋಮನನ್ನು ರಾಜನ ಹತ್ತಿರಕ್ಕೆ ಕಳುಹಿಸಿ ಕೊಡುವಂತೆ ಈ ಸಂದೇಶಕರು ಯೋವಾಬನನ್ನು ಕೇಳಿದರು. ಆದರೆ ಯೋವಾಬನು ಅಬ್ಷಾಲೋಮನ ಬಳಿಗೆ ಬರಲಿಲ್ಲ. ಅಬ್ಷಾಲೋಮನು ಎರಡನೆಯ ಬಾರಿ ಸಂದೇಶವನ್ನು ಕಳುಹಿಸಿದನು. ಆದರೂ ಯೋವಾಬನು ಬರಲಿಲ್ಲ.
30 ಆಗ ಅಬ್ಷಾಲೋಮನು ತನ್ನ ಸೇವಕರಿಗೆ, “ನೋಡಿರಿ, ನನ್ನ ಹೊಲದ ಪಕ್ಕದಲ್ಲಿ ಯೋವಾಬನ ಹೊಲವಿದೆ. ಅವನು ಆ ಹೊಲದಲ್ಲಿ ಜವೆಗೋಧಿಯನ್ನು ಬೆಳೆದಿದ್ದಾನೆ. ಹೋಗಿ ಆ ಜವೆಗೋಧಿಯನ್ನು ಸುಟ್ಟುಬಿಡಿರಿ” ಎಂದು ಹೇಳಿದನು.
ಅಬ್ಷಾಲೋಮನ ಸೇವಕರು ಹೋಗಿ ಯೋವಾಬನ ಹೊಲದಲ್ಲಿ ಬೆಂಕಿಯನ್ನು ಹಚ್ಚಿದರು. 31 ಆಗ ಯೋವಾಬನು ಅಬ್ಷಾಲೋಮನ ಮನೆಗೆ ಬಂದನು. ಯೋವಾಬನು ಅಬ್ಷಾಲೋಮನಿಗೆ, “ನಿನ್ನ ಸೇವಕರು ನನ್ನ ಹೊಲವನ್ನು ಏಕೆ ಸುಟ್ಟರು?” ಎಂದು ಕೇಳಿದನು.
32 ಅಬ್ಷಾಲೋಮನು ಯೋವಾಬನಿಗೆ, “ನಾನು ನಿನಗೆ ಸಂದೇಶವನ್ನು ಕಳುಹಿಸಿ ಇಲ್ಲಿಗೆ ಬರಲು ಹೇಳಿ ಕಳುಹಿಸಿದ್ದೆನು. ರಾಜನ ಬಳಿಗೆ ನಿನ್ನನ್ನು ಕಳುಹಿಸಲು ನಾನು ಅಪೇಕ್ಷಿಸಿದೆನು. ಗೆಷೂರಿನಿಂದ ನನ್ನನ್ನು ಮನೆಗೆ ಕರೆಸಲು ಅವನು ಇಚ್ಛಿಸಿದ್ದು ಏಕೆ ಎಂಬುದನ್ನು ನೀನು ಕೇಳಬೇಕೆಂದು ನಾನು ಅಪೇಕ್ಷಿಸಿದೆನು. ನಾನು ಅವನನ್ನು ನೋಡಲಾಗದಿದ್ದರೆ ಗೆಷೂರಿನಲ್ಲಿ ವಾಸಿಸುವುದೇ ನನಗೆ ಚೆನ್ನಾಗಿರುತ್ತಿತ್ತು. ಈಗ ರಾಜನನ್ನು ನೋಡಲು ನನಗೆ ಅವಕಾಶವನ್ನು ಕೊಡು. ನಾನು ಪಾಪವನ್ನು ಮಾಡಿದ್ದರೆ ಅವನು ನನ್ನನ್ನು ಕೊಂದುಬಿಡಲಿ!” ಎಂದನು.
ರಾಜನಾದ ದಾವೀದನನ್ನು ಅಬ್ಷಾಲೋಮನು ಭೇಟಿಮಾಡಿದ್ದು
33 ಯೋವಾಬನು ರಾಜನ ಬಳಿಗೆ ಅಬ್ಷಾಲೋಮನು ಹೇಳಿದ್ದನ್ನೆಲ್ಲ ತಿಳಿಸಿದನು. ರಾಜನು ಅಬ್ಷಾಲೋಮನನ್ನು ಕರೆಸಿದನು. ಅಬ್ಷಾಲೋಮನು ರಾಜನ ಬಳಿಗೆ ಬಂದನು. ರಾಜನ ಎದುರಿನಲ್ಲಿ ಅಬ್ಷಾಲೋಮನು ಸಾಷ್ಟಾಂಗನಮಸ್ಕಾರ ಮಾಡಿದನು. ರಾಜನು ಅಬ್ಷಾಲೋಮನಿಗೆ ಮುದ್ದಿಟ್ಟನು.