24
ರಾಜನಾದ ನೆಬೂಕದ್ನೆಚ್ಚರನು ಯೆಹೂದಕ್ಕೆ ಬರುವನು
ಯೆಹೋಯಾಕೀಮನ ಕಾಲದಲ್ಲಿ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಯೆಹೂದ ದೇಶಕ್ಕೆ ಬಂದನು. ಯೆಹೋಯಾಕೀಮನು ಮೂರು ವರ್ಷಗಳವರೆಗೆ ನೆಬೂಕದ್ನೆಚ್ಚರನ ಸೇವೆಮಾಡಿದನು. ನಂತರ ಯೆಹೋಯಾಕೀಮನು ನೆಬೂಕದ್ನೆಚ್ಚರನಿಗೆ ವಿರುದ್ಧವಾಗಿ ದಂಗೆ ಎದ್ದು ಅವನ ಆಳ್ವಿಕೆಯಿಂದ ದೂರವಾದನು. ಯೆಹೋವನು ಬಾಬಿಲೋನಿನವರನ್ನು, ಅರಾಮ್ಯರನ್ನು, ಮೋವಾಬ್ಯರನ್ನು ಮತ್ತು ಅಮ್ಮೋನಿಯರನ್ನು ಯೆಹೋಯಾಕೀಮನ ವಿರುದ್ಧ ಹೋರಾಡಲು ಕಳುಹಿಸಿದನು. ಯೆಹೋವನು ಯೆಹೂದವನ್ನು ನಾಶಗೊಳಿಸಲು ಈ ಗುಂಪುಗಳನ್ನು ಕಳುಹಿಸಿದನು. ಯೆಹೋವನು ತನ್ನ ಸೇವಕರಾದ ಪ್ರವಾದಿಗಳ ಮೂಲಕ ತಿಳಿಸಿದ್ದಂತೆಯೇ ಇದು ಸಂಭವಿಸಿತು.
ಆತನು ಯೆಹೂದ್ಯರನ್ನು ತನ್ನ ಸನ್ನಿಧಿಯಿಂದ ತೆಗೆದುಹಾಕಬೇಕೆಂದಿದ್ದ ಕಾರಣ ಆತನ ಆಜ್ಞೆಯ ಪ್ರಕಾರ ಈ ಶಿಕ್ಷೆಯು ಅವರಿಗಾಯಿತು. ಜೆರುಸಲೇಮನ್ನು ನಿರಪರಾಧದ ರಕ್ತದಿಂದ ತುಂಬಿಸಿದ ಮನಸ್ಸೆಯ ದುಷ್ಕೃತ್ಯಗಳನ್ನು ಯೆಹೋವನು ಕ್ಷಮಿಸಲಿಲ್ಲ.
“ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯೆಹೋಯಾಕೀಮನು ಮಾಡಿದ ಇತರ ಕಾರ್ಯಗಳನ್ನು ಬರೆಯಲಾಗಿದೆ. ಯೆಹೋಯಾಕೀಮನು ತೀರಿಕೊಂಡಾಗ ಅವನನ್ನು ಅವನ ಪೂರ್ವಿಕರ ಜೊತೆಯಲ್ಲಿ ಸಮಾಧಿಮಾಡಿದರು. ಯೆಹೋಯಾಕೀಮನ ಮಗನಾದ ಯೆಹೋಯಾಖೀನನು ಅವನ ನಂತರ ಹೊಸ ರಾಜನಾದನು.
ಈಜಿಪ್ಟಿನ ರಾಜನು ಈಜಿಪ್ಟನ್ನು ಬಿಟ್ಟು ಹೊರಗೆ ಹೋಗಲಿಲ್ಲ. ಏಕೆಂದರೆ ಬಾಬಿಲೋನ್ ರಾಜನು, ಈಜಿಪ್ಟಿನ ಹಳ್ಳದಿಂದ ಯೂಫ್ರೇಟೀಸ್ ನದಿಯವರೆಗಿನ ದೇಶವನ್ನೆಲ್ಲಾ ಆಕ್ರಮಿಸಿಕೊಂಡಿದ್ದನು.
ನೆಬೂಕದ್ನೆಚ್ಚರನು ಜೆರುಸಲೇಮನ್ನು ಆಕ್ರಮಿಸಿಕೊಂಡನು
ಯೆಹೋಯಾಖೀನನು ಆಳಲಾರಂಭಿಸಿದಾಗ ಅವನಿಗೆ ಹದಿನೆಂಟು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಮೂರು ತಿಂಗಳ ಕಾಲ ಆಳಿದನು. ಅವನ ತಾಯಿಯು ಜೆರುಸಲೇಮಿನ ಎಲ್ನಾತಾನನ ಮಗಳಾದ ನೆಹುಷ್ಟಾ ಎಂಬ ಹೆಸರಿನವಳು. ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಯೆಹೋಯಾಖೀನನು ಮಾಡಿದನು. ಅವನು ತನ್ನ ತಂದೆಯು ಮಾಡಿದಂತಹ ಕಾರ್ಯಗಳನ್ನೆಲ್ಲ ಮಾಡಿದನು.
10 ಆ ಸಮಯದಲ್ಲಿ ಬಾಬಿಲೋನ್ ರಾಜನಾದ ನೆಬೂಕದ್ನೆಚ್ಚರನ ಅಧಿಕಾರಿಗಳು ಜೆರುಸಲೇಮಿಗೆ ಮುತ್ತಿಗೆ ಹಾಕಿದರು. 11 ಆಗ ಬಾಬಿಲೋನ್ ರಾಜನಾದ ನೆಬೂಕದ್ನೆಚ್ಚರನು ಆ ನಗರಕ್ಕೆ ಬಂದನು. 12 ಯೆಹೂದದ ರಾಜನಾದ ಯೆಹೋಯಾಖೀನನು ಬಾಬಿಲೋನ್ ರಾಜನನ್ನು ಭೇಟಿಮಾಡಲು ಹೋದನು. ಯೆಹೋಯಾಖೀನನ ತಾಯಿ, ಅವನ ಅಧಿಕಾರಿಗಳು, ನಾಯಕರು ಮತ್ತು ಸಿಬ್ಬಂದಿಯೆಲ್ಲವೂ ಅವನೊಂದಿಗೆ ಹೋದರು. ಆಗ ಬಾಬಿಲೋನ್ ರಾಜ ಯೆಹೋಯಾಖೀನನನ್ನು ಸೆರೆಹಿಡಿದನು. ಇದು ಸಂಭವಿಸಿದ್ದು ನೆಬೂಕದ್ನೆಚ್ಚರನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ.
13 ನೆಬೂಕದ್ನೆಚ್ಚರನು ಜೆರುಸಲೇಮಿನ ದೇವಾಲಯದಲ್ಲಿದ್ದ ಭಂಡಾರವನ್ನೆಲ್ಲಾ ಮತ್ತು ರಾಜನ ಅರಮನೆಯಲ್ಲಿದ್ದ ಭಂಡಾರವನ್ನೆಲ್ಲಾ ತೆಗೆದುಕೊಂಡು ಹೋದನು. ಇಸ್ರೇಲರ ರಾಜನಾದ ಸೊಲೊಮೋನನು ದೇವಾಲಯದಲ್ಲಿಟ್ಟಿದ್ದ ಬಂಗಾರವನ್ನೆಲ್ಲಾ ನೆಬೂಕದ್ನೆಚ್ಚರನು ತೆಗೆದುಕೊಂಡನು. ಯೆಹೋವನು ಹೇಳಿದ್ದಂತೆಯೇ ಇದು ಸಂಭವಿಸಿತು.
14 ನೆಬೂಕದ್ನೆಚ್ಚರನು ಜೆರುಸಲೇಮಿನ ಜನರನ್ನೆಲ್ಲಾ ಸೆರೆಹಿಡಿದನು. ಅವನು ಎಲ್ಲಾ ನಾಯಕರನ್ನು ಮತ್ತು ಹಣವಂತರನ್ನು ಸೆರೆಹಿಡಿದನು. ಅವನು ಹತ್ತು ಸಾವಿರ ಜನರನ್ನು ಸೆರೆಯಾಳುಗಳನ್ನಾಗಿ ಒಯ್ದನು. ನೆಬೂಕದ್ನೆಚ್ಚರನು ನುರಿತ ತಜ್ಞರನ್ನು ಮತ್ತು ಕಮ್ಮಾರರನ್ನು ಕರೆದೊಯ್ದನು. ಸಾಮಾನ್ಯ ಜನರನ್ನೂ ಕಡುಬಡವರನ್ನೂ ಬಿಟ್ಟು ಉಳಿದ ಯಾರನ್ನೂ ಬಿಡಲಿಲ್ಲ. 15 ನೆಬೂಕದ್ನೆಚ್ಚರನು ಯೆಹೋಯಾಖೀನನನ್ನು ಸೆರೆಯಾಳಾಗಿ ಬಾಬಿಲೋನಿಗೆ ಕರೆದೊಯ್ದನು. ನೆಬೂಕದ್ನೆಚ್ಚರನು ರಾಜನ ತಾಯಿಯನ್ನು, ಅವನ ಪತ್ನಿಯರನ್ನು, ಅಧಿಕಾರಿಗಳನ್ನು ಮತ್ತು ದೇಶದ ಪ್ರತಿಷ್ಠಿತರನ್ನು ಕರೆದೊಯ್ದನು. ನೆಬೂಕದ್ನೆಚ್ಚರನು ಅವರನ್ನು ಜೆರುಸಲೇಮಿನಿಂದ ಬಾಬಿಲೋನಿಗೆ ಸೆರೆಯಾಳುಗಳನ್ನಾಗಿ ಒಯ್ದನು. 16 ಬಾಬಿಲೋನ್ ರಾಜನು ಏಳು ಸಾವಿರ ಮಂದಿ ಸೈನಿಕರನ್ನು ಮತ್ತು ಒಂದು ಸಾವಿರ ಮಂದಿ ನುರಿತ ತಜ್ಞರನ್ನು ಮತ್ತು ಕಮ್ಮಾರರನ್ನು ಕರೆದೊಯ್ದನು. ಈ ಜನರೆಲ್ಲರೂ ಸೈನಿಕರಾಗಿದ್ದು, ಯುದ್ಧಗಳಲ್ಲಿ ಹೋರಾಡಲು ಸಮರ್ಥರಾಗಿದ್ದರು. ಬಾಬಿಲೋನ್ ರಾಜನು ಅವರನ್ನು ಸೆರೆಯಾಳುಗಳನ್ನಾಗಿ ಬಾಬಿಲೋನಿಗೆ ಒಯ್ದನು.
ರಾಜನಾದ ಚಿದ್ಕೀಯನು
17 ಬಾಬಿಲೋನ್ ರಾಜನು ಮತ್ತನ್ಯನನ್ನು ಹೊಸ ರಾಜನನ್ನಾಗಿ ನೇಮಿಸಿದನು. ಅವನು ಯೆಹೋಯಾಖೀನನ ಸ್ಥಳವನ್ನು ಪಡೆದನು. ಮತ್ತನ್ಯನು ಯೆಹೋಯಾಖೀನನ ಚಿಕ್ಕಪ್ಪ. ಬಾಬಿಲೋನ್ ರಾಜನು ಮತ್ತನ್ಯನ ಹೆಸರನ್ನು ಚಿದ್ಕೀಯ ಎಂದು ಬದಲಾಯಿಸಿದನು. 18 ಚಿದ್ಕೀಯನು ಆಳಲಾರಂಭಿಸಿದಾಗ ಅವನಿಗೆ ಇಪ್ಪತ್ತೊಂದು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಅವನ ತಾಯಿಯು ಲಿಬ್ನದ ಯೆರೆಮೀಯನ ಮಗಳಾದ ಹಮೂಟಲ್ ಎಂಬ ಹೆಸರಿನವಳು. 19 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಚಿದ್ಕೀಯನು ಮಾಡಿದನು. ಚಿದ್ಕೀಯನು ಯೆಹೋಯಾಖೀನನು ಮಾಡಿದಂಥ ಕಾರ್ಯಗಳನ್ನು ಮಾಡಿದನು. 20 ಯೆಹೋವನ ಕೋಪದಿಂದ ಯೆಹೂದಕ್ಕೆ ಮತ್ತು ಜೆರುಸಲೇಮಿಗೆ ಇವೆಲ್ಲವೂ ಸಂಭವಿಸಿದವು. ಹೀಗೆ ಯೆಹೋವನು ಅವರನ್ನು ತನ್ನಿಂದ ದೂರಸರಿಸಿದನು. ಚಿದ್ಕೀಯನು ಬಾಬಿಲೋನ್ ರಾಜನಿಗೆ ವಿರುದ್ಧವಾಗಿ ದಂಗೆ ಎದ್ದನು.