22
ಯೆಹೂದ ದೇಶದ ಅರಸನಾದ ಅಹಜ್ಯ
1 ಜೆರುಸಲೇಮಿನ ಜನರು ಯೆಹೋರಾಮನ ಕೊನೆಯ ಮಗನಾದ ಅಹಜ್ಯನನ್ನು ತಮ್ಮ ರಾಜನನ್ನಾಗಿ ಆರಿಸಿಕೊಂಡರು. ಯೆಹೋರಾಮನೊಂದಿಗೆ ಯುದ್ಧಕ್ಕೆ ಬಂದಿದ್ದ ಅರಬ್ಬಿಯರು ಅವನ ಮಕ್ಕಳನ್ನೆಲ್ಲಾ ಕೊಂದಿದ್ದರು. ಹೀಗಾಗಿ ಉಳಿದುಕೊಂಡಿದ್ದ ಅಹಜ್ಯನು ಜೆರುಸಲೇಮಿನಲ್ಲಿ ಯೆಹೂದ ರಾಜ್ಯವನ್ನು ಆಳತೊಡಗಿದನು. 2 ಆಗ ಅವನಿಗೆ ಇಪ್ಪತ್ತೆರಡು ವರ್ಷ ಪ್ರಾಯ. ಅವನು ಜೆರುಸಲೇಮಿನಲ್ಲಿ ಒಂದು ವರ್ಷ ಆಳಿದನು. ಅವನ ತಾಯಿ ಒಮ್ರಿಯ ಮಗಳಾದ ಅತಲ್ಯಳು. 3 ಅಹಾಬನು ಮತ್ತು ಅವನ ಕುಟುಂಬದವರು ಜೀವಿಸಿದ ಪ್ರಕಾರವೇ ಅಹಜ್ಯನೂ ಜೀವಿಸಿದನು. ದುಷ್ಕೃತ್ಯಗಳನ್ನು ಮಾಡಲು ಅವನ ತಾಯಿಯೇ ಅವನನ್ನು ಪ್ರೋತ್ಸಾಹಿಸಿದಳು. 4 ಯೆಹೋವನ ದೃಷ್ಟಿಯಲ್ಲಿ ಅಹಜ್ಯನು ದುಷ್ಕೃತ್ಯಗಳನ್ನು ಮಾಡಿದನು. ಅಹಜ್ಯನ ತಂದೆಯು ಸತ್ತುಹೋದ ಬಳಿಕ ಅಹಾಬನ ಕುಟುಂಬದವರು ಅಹಜ್ಯನಿಗೆ ಕೆಟ್ಟ ಸಲಹೆಗಳನ್ನು ಕೊಟ್ಟರು. ಆ ಕೆಟ್ಟ ಸಲಹೆಗಳು ಅವನನ್ನು ಮರಣಕ್ಕೆ ನಡೆಸಿದವು. 5 ಅಹಾಬನ ಕುಟುಂಬದವರ ಸಲಹೆಯ ಮೇರೆಗೆ ಅಹಜ್ಯನು ರಾಜನಾದ ಯೋರಾವುನ ಜೊತೆಯಲ್ಲಿ ಅರಾಮ್ಯರ ಅರಸನಾದ ಹಜಾಯೇಲನೊಂದಿಗೆ ಯುದ್ಧಮಾಡಲು ರಾಮೋತ್‌ಗಿಲ್ಯಾದ್ ಎಂಬ ಪಟ್ಟಣಕ್ಕೆ ಹೋದನು. ಯೋರಾವುನು ಇಸ್ರೇಲರ ಅರಸನಾದ ಅಹಾಬನ ಮಗನು. ಅರಾಮ್ಯರು ಯುದ್ಧದಲ್ಲಿ ಯೋರಾವುನನ್ನು ಗಾಯಗೊಳಿಸಿದರು. 6 ಗಾಯವನ್ನು ವಾಸಿಮಾಡಿಸಿಕೊಳ್ಳಲು ಯೋರಾವುನು ಇಜ್ರೇಲಿಗೆ ಹೋದನು. ಅರಾಮ್ಯರ ರಾಜನಾದ ಹಜಾಯೇಲನೊಡನೆ ಯುದ್ಧಮಾಡುತ್ತಿರುವಾಗ ಯೋರಾವುನು ಗಾಯಗೊಂಡಿದ್ದನು. ಇಜ್ರೇಲಿನಲ್ಲಿ ಅಸ್ವಸ್ಥನಾಗಿದ್ದ ಯೋರಾವುನನ್ನು ಸಂಧಿಸಲು ಯೆಹೂದ್ಯರ ಅರಸನೂ ಯೆಹೋರಾಮನ ಮಗನೂ ಆಗಿರುವ ಅಹಜ್ಯನು ಹೋದನು.
7 ಯೋರಾವುನನ್ನು ಸಂಧಿಸಲು ಹೋದಾಗ ಅಹಜ್ಯನು ಕೊಲ್ಲಲ್ಪಡುವಂತೆ ಯೆಹೋವನು ಮಾಡಿದನು. ಅಹಜ್ಯನು ಯೇಹುವನ್ನು ಭೇಟಿಯಾಗಲು ಯೋರಾವುನೊಂದಿಗೆ ಹೋದನು. ಯೇಹುವಿನ ತಂದೆ ನಿಂಷಿ. ಅಹಾಬನ ಕುಟುಂಬವನ್ನು ನಾಶಗೊಳಿಸಲು ಯೆಹೋವನು ಯೇಹುವನ್ನು ಆರಿಸಿಕೊಂಡನು. 8 ಯೇಹುವು ಅಹಾಬನ ವಂಶದವರನ್ನು ಹತಿಸುತ್ತಿದ್ದಾಗ ಯೆಹೂದದ ರಾಜನಾದ ಅಹಜ್ಯನ ಕುಟುಂಬದವರನ್ನೂ ಯೆಹೂದದ ಮುಖಂಡರನ್ನೂ ಅಲ್ಲಿ ಕಂಡನು. ಯೇಹು ಆ ಮುಖಂಡರನ್ನೂ ಅಹಜ್ಯನ ಕುಟುಂಬದವರನ್ನೂ ಕೊಂದನು. 9 ಆ ಬಳಿಕ ಯೇಹು ಅಹಜ್ಯನಿಗಾಗಿ ಹುಡುಕಿದನು. ಅಹಜ್ಯನು ಸಮಾರ್ಯದಲ್ಲಿ ಅವಿತುಕೊಂಡಿರುವದನ್ನು ಕಂಡ ಯೇಹುವಿನ ಸಂಗಡಿಗರು ಅವನನ್ನು ಹಿಡಿದು ಯೇಹುವಿನ ಬಳಿಗೆ ತಂದರು. ಅಲ್ಲಿ ಅಹಜ್ಯನನ್ನು ಕೊಂದು ಅವನ ದೇಹವನ್ನು ಹೂಳಿಟ್ಟರು. ಅವರು, “ಅಹಜ್ಯನು ಯೆಹೋಷಾಫಾಟನ ಸಂತತಿಯವನಾಗಿದ್ದನು. ಯೆಹೋಷಾಫಾಟನು ತನ್ನ ಪೂರ್ಣಹೃದಯದಿಂದ ಯೆಹೋವನನ್ನು ಹಿಂಬಾಲಿಸಿದನಲ್ಲವೇ?” ಎಂದು ಹೇಳಿದರು. ಯೆಹೂದ ಸಾಮ್ರಾಜ್ಯವನ್ನು ಒಂದಾಗಿಡಲು ಅಹಜ್ಯನ ಕುಟುಂಬಕ್ಕೆ ಶಕ್ತಿಯಿರಲಿಲ್ಲ.
ರಾಣಿ ಅತಲ್ಯ
10 ಅತಲ್ಯಳು ಅಹಜ್ಯನ ತಾಯಿ. ತನ್ನ ಮಗನು ಸತ್ತನೆಂಬ ವರ್ತಮಾನ ಸಿಕ್ಕದ ಕೂಡಲೇ ಆಕೆ ಯೆಹೂದದಲ್ಲಿದ್ದ ಎಲ್ಲಾ ರಾಜಕುಮಾರರನ್ನು ಕೊಲ್ಲಿಸಿದಳು. 11 ಆದರೆ ಅರಸನಾದ ಯೋರಾವುನ ಮಗಳಾದ ಯೆಹೋಷಬತಳು ಅಹಜ್ಯನ ಮಗನಾದ ಯೆಹೋವಾಷನನ್ನು ಅಡಗಿಸಿಟ್ಟಳು. ಆಕೆಯು ಅವನನ್ನೂ ಅವನ ದಾದಿಯನ್ನೂ ಒಳಗಿನ ಕೋಣೆಯಲ್ಲಿ ಅಡಗಿಸಿಟ್ಟಳು. ಆಕೆಯು ಯಾಜಕನಾದ ಯೆಹೋಯಾದನ ಹೆಂಡತಿಯಾಗಿದ್ದಳು. ಆಕೆಯು ಸಹ ಅಹಜ್ಯನ ಸೋದರಿ. ಯೆಹೋವಾಷನು ಅತಲ್ಯಳಿಗೆ ಸಿಗದೆಹೋದುದರಿಂದ ಬದುಕಿಕೊಂಡನು. 12 ಯೆಹೋವಾಷನು ಆರು ವರ್ಷಗಳ ಕಾಲ ಯಾಜಕರೊಂದಿಗೆ ದೇವಾಲಯದೊಳಗೆ ಯಾರಿಗೂ ತಿಳಿಯದಂತೆ ಇದ್ದನು. ಆ ದಿನಗಳಲ್ಲಿ ಅತಲ್ಯಳು ರಾಣಿಯಾಗಿ ದೇಶವನ್ನು ಆಳಿದಳು.