1ಐದನೆಯ ದೇವದೂತನು ತುತ್ತೂರಿಯನ್ನೂದಿದಾಗ ಆಕಾಶದಿಂದ ಭೂಮಿಗೆ ಬಿದ್ದ ಒಂದು ನಕ್ಷತ್ರವನ್ನು ಕಂಡೆನು. ಅವನಿಗೆ ಅಧೋಲೋಕಕ್ಕೆ ಹೋಗುವ ಕೂಪದ ಬೀಗದ ಕೈ ಕೊಡಲ್ಪಟ್ಟಿತು. 2ಅವನು ಅಧೋಲೋಕದ ಕೂಪವನ್ನು ತೆರೆಯಲು ಕೂಪದಿಂದ ಬಂದ ಹೊಗೆ ದೊಡ್ಡ ಕುಲುಮೆಯ ಹೊಗೆಯಂತೆ ಏರಿತು. ಕೂಪದ ಹೊಗೆಯಿಂದ ಸೂರ್ಯನೂ ಆಕಾಶವೂ ಕಪ್ಪಾಗಿ ಹೋದವು. 3ಹೊಗೆಯೊಳಗಿಂದ ಮಿಡತೆಗಳು ಭೂಮಿಯ ಮೇಲೆ ಹೊರಟುಬಂದವು. ಭೂಮಿಯಲ್ಲಿರುವ ಚೇಳುಗಳಿಗಿರುವಂಥ ಶಕ್ತಿಯನ್ನು ಅವುಗಳಿಗೆ ಕೊಡಲಾಯಿತು. 4 ಭೂಮಿಯ ಮೇಲಿರುವ ಹುಲ್ಲನ್ನಾಗಲಿ ಯಾವ ಹಣ್ಣು ತರಕಾರಿಗಳನ್ನಾಗಲಿ, ಮರವನ್ನಾಗಲಿ ನಾಶಮಾಡದೆ, ಹಣೆಯ ಮೇಲೆ ದೇವರ ಮುದ್ರೆಯಿಲ್ಲದವರಾದ ಮನುಷ್ಯರನ್ನು ಮಾತ್ರ ನಾಶಮಾಡಬಹುದೆಂದು ಅವುಗಳಿಗೆ ಅಪ್ಪಣೆಯಾಯಿತು. 5ಅವರನ್ನು ಕೊಲ್ಲದೆ ಐದು ತಿಂಗಳುಗಳವರೆಗೂ ಹಿಂಸಿಸುವುದಕ್ಕೆ ಅಧಿಕಾರವು ದೊರೆಯಿತು. ಅವರಿಗುಂಟಾದ ಯಾತನೆಯು ಮನುಷ್ಯನಿಗೆ ಚೇಳು ಕಡಿತದಿಂದುಂಟಾಗುವ ಯಾತನೆಗೆ ಸಮಾನವಾಗಿತ್ತು. 6ಆ ಕಾಲದಲ್ಲಿ ಮನುಷ್ಯರು ಮರಣವನ್ನು ಬಯಸುವರು, ಆದರೆ ಅದು ಪ್ರಾಪ್ತವಾಗುವುದಿಲ್ಲ. ಸಾಯಬೇಕೆಂದು ಕೋರುವರು, ಆದರೆ ಮೃತ್ಯುವು ಅವರನ್ನು ಬಿಟ್ಟು ಓಡಿಹೋಗುವುದು.
7 ಆ ಮಿಡತೆಗಳ ರೂಪವು ಯುದ್ಧಕ್ಕೆ ಸನ್ನದ್ಧವಾಗಿರುವ ಕುದುರೆಗಳ ರೂಪದಂತೆ ಇತ್ತು. ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳಂತೆಯೂ, ಅವುಗಳ ಮುಖಗಳು ಮನುಷ್ಯರ ಮುಖಗಳಂತೆಯೂ ಇದ್ದವು. 8ಅವುಗಳ ಕೂದಲು ಸ್ತ್ರೀಯರ ಕೂದಲಿನಂತೆಯೂ ಹಲ್ಲುಗಳು ಸಿಂಹದ ಹಲ್ಲುಗಳಂತೆಯೂ ಇದ್ದವು. 9ಅವುಗಳಿಗೆ ಉಕ್ಕಿನ ಕವಚಗಳಂತಿದ್ದ ಕವಚಗಳು ಇದ್ದವು. ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುವ ರಥಾಶ್ವಗಳ ಶಬ್ದದಂತೆ ಇತ್ತು. 10ಚೇಳಿಗಿರುವಂತೆ ಅವುಗಳಿಗೆ ಬಾಲಗಳೂ, ಕೊಂಡಿಗಳೂ ಇದ್ದವು. ಮನುಷ್ಯರನ್ನು ಐದು ತಿಂಗಳುಗಳವರೆಗೂ ಪೀಡಿಸುವ ಸಾಮರ್ಥ್ಯವು ಅವುಗಳ ಬಾಲಗಳಲ್ಲಿಯೇ ಇರುವುದು. 11ಅಧೋಲೋಕದ ಅಧಿಕಾರಿಯಾದ ದೂತನೇ ಅವುಗಳನ್ನಾಳುವ ಅರಸನು. ಅವನಿಗೆ ಇಬ್ರಿಯ ಭಾಷೆಯಲ್ಲಿ ಅಬದ್ದೋನನೆಂತಲೂ, ಗ್ರೀಕ್ ಭಾಷೆಯಲ್ಲಿ ಅಪೊಲ್ಲುವೋನನೆಂತಲೂ ಹೆಸರುಂಟು.
12 ಮೊದಲನೆಯ ವಿಪತ್ತು ಕಳೆದು ಹೋಯಿತು. ಇಗೋ, ಇನ್ನೂ ಎರಡು ವಿಪತ್ತುಗಳು ಅದರ ಬೆನ್ನಹಿಂದೆಯೇ ಬಂದವು.
13ಆರನೆಯ ದೇವದೂತನು ತುತ್ತೂರಿಯನ್ನೂದಿದಾಗ ದೇವರ ಸಮ್ಮುಖದಲ್ಲಿರುವ ಚಿನ್ನದ ಯಜ್ಞವೇದಿಯ ಕೊಂಬುಗಳಿಂದ ಹೊರಟ ಒಂದು ಧ್ವನಿಯನ್ನು ಕೇಳಿದೆನು. 14ಅದು ತುತ್ತೂರಿಯನ್ನು ಹಿಡಿದಿದ್ದ ಆರನೆಯ ದೇವದೂತನಿಗೆ, “ಯೂಫ್ರೆಟಿಸ್ ಎಂಬ ಮಹಾ ನದಿಯ ಬಳಿಯಲ್ಲಿ ಕಟ್ಟಿಹಾಕಿರುವ ನಾಲ್ಕು ಮಂದಿ ದೇವದೂತರನ್ನು ಬಿಚ್ಚಿಬಿಡು” ಎಂದು ಹೇಳಿತು. 15ಆಗ ಮನುಷ್ಯರೊಳಗೆ ಮೂರರಲ್ಲಿ ಒಂದು ಭಾಗದ ಜನರನ್ನು ಸಂಹಾರಮಾಡುವುದಕ್ಕಾಗಿ ಗಂಟೆ, ದಿನ, ತಿಂಗಳು, ವರ್ಷ ಎಲ್ಲವನ್ನೂ ನಿಗದಿಮಾಡಲಾಗಿತ್ತು. ಅದಕ್ಕೆ ಸಿದ್ಧರಿದ್ದ ಆ ನಾಲ್ಕು ಮಂದಿ ದೇವದೂತರನ್ನು ಬಿಡುಗಡೆ ಮಾಡಲಾಯಿತು. 16ಕುದುರೆ ದಂಡಿನವರ ಸಂಖ್ಯೆಯು ಇಪ್ಪತ್ತು ಕೋಟಿ ಎಂದು ನನಗೆ ಕೇಳಿಸಿತು. 17ನಾನು ದರ್ಶನದಲ್ಲಿ ಕಂಡ ಕುದುರೆಗಳ ಮತ್ತು ಸವಾರರ ವಿವರಣೆ ಹೇಗಿತ್ತೆಂದರೆ, ಸವಾರರ ಕವಚಗಳ ಬಣ್ಣವು ಬೆಂಕಿ, ಹೊಗೆ, ಗಂಧಕ ಇವುಗಳ ಬಣ್ಣದ ಹಾಗಿತ್ತು ಕುದುರೆಗಳ ತಲೆಗಳು ಸಿಂಹಗಳ ತಲೆಗಳಂತಿದ್ದವು. 18ಅವುಗಳ ಬಾಯಿಂದ ಹೊರಟ ಆ ಬೆಂಕಿ, ಹೊಗೆ, ಗಂಧಕ ಎಂಬ ಮೂರು ಉಪದ್ರವಗಳಿಂದ ಮನುಷ್ಯರೊಳಗೆ ಮೂರರಲ್ಲಿ ಒಂದು ಭಾಗವು ಹತವಾಯಿತು. 19ಆ ಕುದುರೆಗಳ ಸಾಮರ್ಥ್ಯವು ಅವುಗಳ ಬಾಯಲ್ಲಿಯೂ ಬಾಲಗಳಲ್ಲಿಯೂ ಇದ್ದವು. ಅವುಗಳ ಬಾಲಗಳು ತಲೆಗಳುಳ್ಳವುಗಳಾಗಿ ಸರ್ಪಗಳ ಹಾಗೆ ಇದ್ದವು. ಅವುಗಳಿಂದಲೇ ಕೇಡನ್ನುಂಟುಮಾಡುವುದು. 20ಉಪದ್ರವಗಳಿಂದ ಸಾಯದೆ ಉಳಿದ ಜನರು ತಾವೇ ಮಾಡಿಕೊಂಡ ವಿಗ್ರಹಗಳನ್ನು ಬಿಟ್ಟು ದೇವರ ಕಡೆಗೆ ತಿರುಗಲಿಲ್ಲ. ಅವರು ಭೂತ, ಪ್ರೇತಗಳ ಪೂಜೆಯನ್ನೂ ಬಂಗಾರ, ಬೆಳ್ಳಿ, ತಾಮ್ರ, ಕಲ್ಲು, ಮರ ಮೊದಲಾದವುಗಳಿಂದ ಮಾಡಲ್ಪಟ್ಟ ನೋಡಲಾರದೆ, ಕೇಳಲಾರದೆ, ನಡೆಯಲಾರದೆ ಇರುವ ವಿಗ್ರಹಗಳ ಪೂಜೆಯನ್ನೂ ಬಿಡಲಿಲ್ಲ. 21ಇದಲ್ಲದೆ ತಾವು ನಡೆಸುತ್ತಿದ್ದ ಕೊಲೆ, ಮಾಟ, ಜಾರತ್ವ, ಕಳ್ಳತನ ಇವುಗಳೊಳಗೆ ಒಂದನ್ನೂ ಬಿಡದೆ ಮಾನಸಾಂತರಪಡಲಿಲ್ಲ.

Notes


*9:1 9:1 ಅಥವಾ, ನಕ್ಷತ್ರದವನೊಬ್ಬನನ್ನು; ಪ್ರಕ 8:10; ಯೆಶಾ 14:12; ಲೂಕ 10:18; ಪ್ರಕ 12:9:

9:1 9:1 ಪ್ರಕ 9:2, 11; 11:7; 17:8; 20:1, 3. ಅಧೋಲೋಕವೆಂಬ ಅಭಿಪ್ರಾಯವುಳ್ಳ ಮೂಲದಲ್ಲಿನ ಪದವು ಲೂಕ 8:31; ರೋಮಾ. 10:7 ಈ ವಚನಗಳಲ್ಲಿಯೂ ಉಪಯೋಗಿಸಲ್ಪಟ್ಟಿದೆ.

9:1 9:1 ಅಗಾಧ ಸ್ಥಳ, ಅಂಧಕಾರದ ಸ್ಥಳ.

§9:1 9:1 ಪ್ರಕ 1:18:

*9:2 9:2 ಯೆಶಾ 34:10:

9:3 9:3 ವಿಮೋ 10:4, 5, 12, 15; ಯೋವೇ. 2:2:

9:4 9:4 ಪ್ರಕ 8:7:

§9:4 9:4 ಪ್ರಕ 7:2, 3; ಯೆಹೆ. 9:4:

*9:5 9:5 ವ. 10:

9:6 9:6 ಯೋಬ. 3:21; 7:15, 16; ಯೆರೆ 8:3:

9:6 9:6 ಪ್ರಕ 6:16:

§9:7 9:7 ಯೋವೇ. 2:4-7:

*9:7 9:7 ನಹೂ. 3:17:

9:7 9:7 ದಾನಿ. 7:8:

9:8 9:8 ಯೋವೇ. 1:6:

§9:9 9:9 ಯೋವೇ. 2:5:

*9:10 9:10 ವ. 5:

9:11 9:11 ಯೋಬ. 26:6:

9:11 9:11 ಅಂದರೆ, ನಾಶ ಮಾಡುವವನು, ಸಂಹಾರಕನು.

§9:12 9:12 ಪ್ರಕ 8:13; 11:14:

*9:13 9:13 ವಿಮೋ 30:3. ಪಾಠಾಂತರ: ನಾಲ್ಕು ಕೊಂಬುಗಳಿಂದ.

9:14 9:14 ಪ್ರಕ 16:12:

9:14 9:14 ಪ್ರಕ 7:1:

§9:15 9:15 ಪ್ರಕ 8:7:

*9:16 9:16 ಕೀರ್ತ 68:17; ದಾನಿ. 7:10:

9:16 9:16 ಪ್ರಕ 7:4:

9:17 9:17 1ಪೂರ್ವ 12:8; ಯೆಶಾ 5:28, 29:

§9:18 9:18 ಪ್ರಕ 8:7:

*9:20 9:20 ಧರ್ಮೋ 31:29; ಯೆರೆ 1:16; 25:14:

9:20 9:20 ಪ್ರಕ 2:21:

9:20 9:20 1 ಕೊರಿ 10:20:

§9:20 9:20 ಕೀರ್ತ 115:4-7; 135:15-17; ದಾನಿ. 5:4, 23:

*9:21 9:21 ಪ್ರಕ 21:8; 22:15; ಗಲಾ. 5:20: