ಭಕ್ತರ ಧನ್ಯತೆ
ಕೀರ್ತ 111
1ಯೆಹೋವನಿಗೆ ಸ್ತೋತ್ರ!
ಯಾರು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ,
ಆತನ ಆಜ್ಞೆಗಳಲ್ಲಿ ಅತ್ಯಾನಂದಪಡುವನೋ ಅವನೇ ಧನ್ಯನು.
2ಅವನ ಸಂತಾನವು ಲೋಕದಲ್ಲಿ ಬಲಿಷ್ಠವಾಗುವುದು;
ನೀತಿವಂತನ ವಂಶವು ಶುಭಹೊಂದುವುದು.
3ಅವನ ಮನೆಯಲ್ಲಿ ಸಿರಿಸಂಪತ್ತುಗಳು ಇರುವವು;
ಅವನ ನೀತಿಯು ಸದಾಕಾಲವೂ ಫಲಿಸುತ್ತಿರುವುದು.
4ಯಥಾರ್ಥರಿಗೆ ಕತ್ತಲೆಯಲ್ಲಿಯೂ ಜ್ಯೋತಿ ಮೂಡುವುದು;
ದಯೆಯೂ, ಕನಿಕರವೂ, ನೀತಿಯುಳ್ಳ ದೇವರೇ ಆ ಜ್ಯೋತಿ.
5ದಯಾಳುವಾಗಿ ಧನಸಹಾಯ ಮಾಡುವವನೂ,
ತನ್ನ ಕಾರ್ಯಗಳನ್ನು ನೀತಿಯಿಂದ ನಡೆಸುವವನೂ ಭಾಗ್ಯವಂತನು.
6ಅವನು ಎಂದಿಗೂ ಕದಲುವುದಿಲ್ಲ;
ನೀತಿವಂತನನ್ನು ಯಾವಾಗಲೂ ಸ್ಮರಿಸುವರು.
7ಅವನಿಗೆ ಕೆಟ್ಟ ಸುದ್ದಿಯ ಭಯವಿರುವುದಿಲ್ಲ;
ಯೆಹೋವನಲ್ಲಿ ಭರವಸವಿಟ್ಟಿರುವುದರಿಂದ,
ಅವನ ಮನಸ್ಸು ಸ್ಥಿರವಾಗಿರುವುದು.
8ದುಷ್ಟರಿಗಾಗುವ ಶಿಕ್ಷೆಯನ್ನು ಕಣ್ಣಾರೆ ಕಾಣುವೆನೆಂಬ ಭರವಸೆ ಇರುವುದರಿಂದ
ಅವನ ಮನಸ್ಸು ದೃಢವಾಗಿದೆ, ಹೆದರುವುದಿಲ್ಲ.
9ಬಡವರಿಗೆ ಉದಾರವಾಗಿ ಕೊಡುತ್ತಾನೆ;
ಅವನ ನೀತಿಯ ಫಲವು ಸದಾಕಾಲವೂ ಇರುವುದು.
ಮಹಿಮೆಯೊಡನೆ ಅವನ ಕೊಂಬು ಎತ್ತಲ್ಪಡುವುದು.
10ದುಷ್ಟನು ನೋಡಿ ವ್ಯಥೆಪಡುವನು;
ಅವನು ಹಲ್ಲುಕಡಿಯುತ್ತಾ ನಾಶವಾಗುವನು.
ದುಷ್ಟರ ನಿರೀಕ್ಷೆಯು ಭಂಗವಾಗುವುದು.

Notes


*112:9 112:9 ಅಥವಾ ಅವನು ಬಲಿಷ್ಠನಾಗುವನು.