ದೇವರ ಮಹತ್ಕಾರ್ಯಗಳಿಗಾಗಿ ಸ್ತುತಿಸುವುದು
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಹಾಡು; ಕೀರ್ತನೆ.
1ಸರ್ವಭೂನಿವಾಸಿಗಳೇ, ದೇವರಿಗೆ ಜಯಧ್ವನಿ ಮಾಡಿರಿ.
2ಆತನ ನಾಮದ ಮಹತ್ತನ್ನು ಕೀರ್ತಿಸಿರಿ;
ಆತನ ಪ್ರಭಾವವನ್ನು ವರ್ಣಿಸುತ್ತಾ ಕೊಂಡಾಡಿರಿ.
3ನೀವು ದೇವರಿಗೆ, “ನಿನ್ನ ಕೃತ್ಯಗಳು ಎಷ್ಟೋ ಭಯಂಕರವಾಗಿವೆ;
ನಿನ್ನ ಪರಾಕ್ರಮದ ಮಹತ್ತಿನ ದೆಸೆಯಿಂದ ನಿನ್ನ ಶತ್ರುಗಳು ನಿನ್ನ ಮುಂದೆ ಮುದುರಿಕೊಳ್ಳುವರು;
4ಸರ್ವಭೂನಿವಾಸಿಗಳು ನಿನಗೆ ಅಡ್ಡಬಿದ್ದು ಭಜಿಸುತ್ತಾ,
ನಿನ್ನ ನಾಮವನ್ನು ಕೀರ್ತಿಸುವರು” ಎಂದು ಹೇಳಿರಿ.
ಸೆಲಾ
5ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ;
ಆತನ ಆಳ್ವಿಕೆ ನರರಲ್ಲಿ ಭಯ ಹುಟ್ಟಿಸತಕ್ಕದ್ದಾಗಿದೆ.
6ಸಮುದ್ರವನ್ನು ಒಣನೆಲವಾಗುವಂತೆ ಮಾಡಿದನು;
ಜನರು ನದಿಯ ಮಧ್ಯದಲ್ಲಿ ಕಾಲಿನಿಂದ ದಾಟಿದರು;
ಅದಕ್ಕಾಗಿ ನಾವು ಆತನಲ್ಲಿ ಆನಂದಪಡೋಣ.
7ಆತನು ಪರಾಕ್ರಮದಿಂದ ಸದಾಕಾಲವೂ ಆಳುತ್ತಾನೆ;
ಜನಾಂಗಗಳನ್ನು ನೋಡಿಕೊಳ್ಳುತ್ತಾನೆ. ದಂಗೆಕೋರರು ಏಳದಿರಲಿ.
ಸೆಲಾ
8ಜನಾಂಗಗಳೇ, ನಮ್ಮ ದೇವರನ್ನು ವಂದಿಸಿರಿ;
ಆತನನ್ನು ಸ್ತುತಿಸುವ ಧ್ವನಿ ಕೇಳಿಸಲಿ.
9ಆತನು ನಮ್ಮನ್ನು ಜೀವದಿಂದುಳಿಸಿ,
ನಮ್ಮ ಕಾಲುಗಳನ್ನು ಜಾರದಂತೆ ಕಾಪಾಡಿದನು.
10ದೇವರೇ, ನಮ್ಮನ್ನು ಶೋಧಿಸಿದಿ;
ಬೆಳ್ಳಿಯನ್ನು ಪುಟಕ್ಕೆ ಹಾಕುವ ಮೇರೆಗೆ ಶುದ್ಧಿಮಾಡಿದಿ.
11ನಮ್ಮನ್ನು ಬಲೆಯಲ್ಲಿ ಸಿಕ್ಕಿಸಿದಿ;
ನಮ್ಮ ಸೊಂಟಕ್ಕೆ ಭಾರವಾದ ಹೊರೆಯನ್ನು ಕಟ್ಟಿದಿ;
12ಮನುಷ್ಯರು ನಮ್ಮ ತಲೆಗಳ ಮೇಲೆಯೇ,
ತಮ್ಮ ರಥಗಳನ್ನು ಹಾಯಿಸುವಂತೆ ಮಾಡಿದಿ.
ನಾವು ಬೆಂಕಿಯನ್ನೂ, ನೀರನ್ನೂ ದಾಟಬೇಕಾಯಿತು;
ಆದರೂ ಸುಸ್ಥಿತಿಗೆ ನಮ್ಮನ್ನು ನಡೆಸಿದಿ.
13ನಾನು ನಿನ್ನ ಆಲಯಕ್ಕೆ ಬಂದು ಸರ್ವಾಂಗಹೋಮಗಳನ್ನು ಸಮರ್ಪಿಸುವೆನು.
14ಇಕ್ಕಟ್ಟಿನ ವೇಳೆಯಲ್ಲಿ ನನ್ನ ತುಟಿಗಳು ಉಚ್ಚರಿಸಿದ
ಬಾಯಿಂದ ಮಾಡಿದ ಹರಕೆಗಳನ್ನು ನಿನಗೆ ಸಲ್ಲಿಸುವೆನು.
15ನಿನಗೆ ಟಗರು ಮುಂತಾದ ಪುಷ್ಟಪಶುಗಳನ್ನು
ಯಜ್ಞರೂಪವಾಗಿ ಸಮರ್ಪಿಸಿ, ಸುವಾಸನೆಯನ್ನು ಉಂಟುಮಾಡುವೆನು;
ಯಜ್ಞಕ್ಕಾಗಿ ಹೋತ ಮತ್ತು ಹೋರಿಗಳನ್ನು ಅರ್ಪಿಸುವೆನು.
ಸೆಲಾ
16ಎಲ್ಲಾ ದೇವಭಕ್ತರೇ, ಬಂದು ಕೇಳಿರಿ;
ಆತನು ನನಗಾಗಿ ಮಾಡಿದ್ದೆಲ್ಲವನ್ನು ನಿಮಗೆ ತಿಳಿಸುವೆನು.
17ನನ್ನ ಮೊರೆಯೊಡನೆ ಕೃತಜ್ಞತಾಸ್ತುತಿಯೂ ನನ್ನ ನಾಲಿಗೆಯ ಮೇಲಿತ್ತು.
18ನಾನು ಕೆಟ್ಟತನದ ಮೇಲೆ ಮನಸ್ಸಿಟ್ಟಿದ್ದರೆ,
ಸ್ವಾಮಿಯು ನನ್ನ ವಿಜ್ಞಾಪನೆಯನ್ನು ಕೇಳುತ್ತಿದ್ದಿಲ್ಲ.
19ಆದರೆ ದೇವರು ನನ್ನ ಮೊರೆಯನ್ನು ಲಕ್ಷಿಸಿ ಕೇಳಿದ್ದಾನಲ್ಲಾ.
20ಆತನು ನನ್ನ ಬಿನ್ನಹವನ್ನು ತಿರಸ್ಕರಿಸಲಿಲ್ಲ;
ನನ್ನ ಮೇಲಿನ ತನ್ನ ದಯೆಯನ್ನು ತಪ್ಪಿಸಿಬಿಡಲಿಲ್ಲ.
ದೇವರಿಗೆ ಸ್ತೋತ್ರವಾಗಲಿ.