ಸದ್ಭಕ್ತರು ನಂಬಿಕೆಯಿಂದಲೇ ಜೀವಿಸಬೇಕೆಂದು ಬೋಧಿಸುವ ಇಬ್ರಿಯ ಅಕ್ಷರಕ್ರಮಾನುಸಾರವಾದ ಕೀರ್ತನೆ
ದಾವೀದನ ಕೀರ್ತನೆ.
ಕೀರ್ತ 39; 73
1ಕೆಟ್ಟ ನಡತೆಯುಳ್ಳವರನ್ನು ನೋಡಿ ತಳಮಳಗೊಳ್ಳಬೇಡ;
ದುರಾಚಾರಿಗಳನ್ನು ನೋಡಿ ಅಸೂಯೆಪಡಬೇಡ.
2ಅವರು ಹುಲ್ಲಿನಂತೆ ಬೇಗ ಒಣಗಿಹೋಗುವರು;
ಹಸಿರು ಸಸಿಯಂತೆ ಬಾಡಿಹೋಗುವರು.
3ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು;
ದೇಶದಲ್ಲಿ ವಾಸವಾಗಿದ್ದು ನಂಬಿಕೆಯನ್ನು ಅನುಸರಿಸು.
4ನೀನು ಯೆಹೋವನಲ್ಲಿ ಸಂತೋಷಿಸು;
ಆಗ ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು.
5ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು;
ಆತನೇ ಅದನ್ನು ಸಾಗಿಸುವನು.
6ಆತನು ನಿನ್ನ ನೀತಿಯನ್ನು ಉದಯದ ಬೆಳಕಿನಂತೆಯೂ,
ನಿನ್ನ ನ್ಯಾಯವನ್ನು ಮಧ್ಯಾಹ್ನದ ತೇಜಸ್ಸಿನಂತೆಯೂ ಪ್ರಕಾಶಗೊಳಿಸುವನು.
7ಯೆಹೋವನ ಸನ್ನಿಧಿಯಲ್ಲಿ ಶಾಂತನಾಗಿ ಆತನಿಗೋಸ್ಕರ ಕಾದಿರು;
ಕುಯುಕ್ತಿಗಳನ್ನು ನೆರವೇರಿಸಿಕೊಂಡು ಅಭಿವೃದ್ಧಿ ಹೊಂದುವವನನ್ನು ನೋಡಿ ಉರಿಗೊಳ್ಳಬೇಡ.
8ಕೋಪವನ್ನು ಅಡಗಿಸಿಕೋ; ರೋಷವನ್ನು ಬಿಡು.
ತಳಮಳಗೊಳ್ಳಬೇಡ; ಕೆಡುಕಿಗೆ ಕಾರಣವಾದೀತು.
9ಕೆಡುಕರು ತೆಗೆದುಹಾಕಲ್ಪಡುವರು;
ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು.
10ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ನಿರ್ನಾಮವಾಗಿ ಹೋಗುವನು;
ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವುದೇ ಇಲ್ಲ.
11ಆದರೆ ದೀನರು ದೇಶವನ್ನು ಅನುಭವಿಸುವರು;
ಅವರು ಮಹಾಸೌಖ್ಯದಿಂದ ಆನಂದಿಸುವರು.
12ದುಷ್ಟನು ನೀತಿವಂತನಿಗೆ ವಿರುದ್ಧವಾಗಿ ಆಲೋಚಿಸುತ್ತಾನೆ;
ಅವನನ್ನು ನೋಡಿ ಹಲ್ಲುಕಡಿಯುತ್ತಾನೆ.
13ಆದರೆ ಕರ್ತನು ಅವನಿಗೆ ಶಿಕ್ಷಾಕಾಲ ಬರುತ್ತದೆಂದು ನಗುತ್ತಾನೆ.
14ದುಷ್ಟರು ದೀನದರಿದ್ರರನ್ನು ಕಡಿದುಬಿಡಬೇಕೆಂದು ಕತ್ತಿಯನ್ನು ಹಿರಿದಿದ್ದಾರೆ;
ಯಥಾರ್ಥರನ್ನು ಕೊಂದು ಹಾಕಬೇಕೆಂದು ಬಿಲ್ಲನ್ನು ಎತ್ತಿದ್ದಾರೆ.
15ಆದರೆ ಅವರ ಕತ್ತಿ ಅವರ ಎದೆಯನ್ನೇ ಇರಿದುಬಿಡುವುದು;
ಅವರ ಬಿಲ್ಲುಗಳು ಸಿಡಿದು ಮುರಿದುಹೋಗುವವು;
16ದುಷ್ಟರ ಮಹಾಸಮೃದ್ಧಿಗಿಂತಲೂ ನೀತಿವಂತನ ಬಡತನವೇ ಲೇಸು.
17ದುಷ್ಟರ ತೋಳುಗಳು ಮುರಿದುಹೋಗುವವು;
ನೀತಿವಂತರನ್ನು ಯೆಹೋವನೇ ಉದ್ಧರಿಸುವನು.
18ಯೆಹೋವನು ನಿರ್ದೋಷಿಗಳ ಜೀವಮಾನವನ್ನು ಲಕ್ಷಿಸುತ್ತಾನೆ;
ಅವರ ಸ್ವತ್ತು ಶಾಶ್ವತವಾಗಿ ನಿಲ್ಲುವುದು.
19ಅವರಿಗೆ ವಿಪತ್ಕಾಲದಲ್ಲಿಯೂ ಅಪಮಾನವಾಗುವುದಿಲ್ಲ;
ಬರಗಾಲದಲ್ಲಿಯೂ ಅವರಿಗೆ ಕೊರತೆಯಿರುವುದಿಲ್ಲ.
20ದುಷ್ಟರೋ ನಾಶವಾಗಿ ಹೋಗುವರು;
ಯೆಹೋವನ ವೈರಿಗಳು ಹುಲ್ಲುಗಾವಲುಗಳ ಸೊಗಸಿನಂತಿದ್ದು ಮಾಯವಾಗುವರು.
ಅವರು ಹಬೆಯಂತೆ ತೋರಿ ಅಡಗಿಹೋಗುವರು.
21ದುಷ್ಟನು ಸಾಲಮಾಡಿಕೊಂಡು ತೀರಿಸಲಾರದೆ ಹೋಗುವನು;
ನೀತಿವಂತನು ಪರೋಪಕಾರಿಯಾಗಿ ಧರ್ಮಕೊಡುವನು.
22ಯೆಹೋವನ ಆಶೀರ್ವಾದವು ಯಾರಿಗಿರುವುದೋ ಅವರು ದೇಶವನ್ನು ಅನುಭವಿಸುವರು;
ಆತನ ಶಾಪವು ಯಾರಿಗಿರುವುದೋ ಅವರು ತೆಗೆದುಹಾಕಲ್ಪಡುವರು.
23ಸತ್ಪುರುಷನ ಗತಿಸ್ಥಾಪನೆಯು ಯೆಹೋವನಿಂದಲೇ ಆಗಿದೆ,
ಆತನು ಅವನ ಪ್ರವರ್ತನೆಯನ್ನು ಮೆಚ್ಚುತ್ತಾನೆ.
24ಅವನು ಕೆಳಗೆ ಬಿದ್ದರೂ ಏಳದೆ ಹೋಗುವುದಿಲ್ಲ;
ಯೆಹೋವನು ಅವನನ್ನು ಕೈಹಿಡಿದು ಉದ್ಧಾರ ಮಾಡುವನು.
25ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ;
ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವುದನ್ನಾಗಲಿ,
ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವುದನ್ನಾಗಲಿ ನೋಡಲಿಲ್ಲ.
26ಅವನು ಯಾವಾಗಲೂ ಧರ್ಮಿಷ್ಠನಾಗಿ ಹಣ ಸಹಾಯವನ್ನು ಮಾಡುತ್ತಾನೆ;
ಅವನ ಸಂತತಿಯವರು ಆಶೀರ್ವಾದ ಹೊಂದುವರು.
27ಕೆಟ್ಟದ್ದಕ್ಕೆ ಹೋಗದೆ ಒಳ್ಳೆಯದನ್ನೇ ಮಾಡು;
ಆಗ ನೀನು ಯಾವಾಗಲೂ ದೇಶದಲ್ಲಿ ವಾಸವಾಗಿರುವಿ.
28ಯೆಹೋವನು ನ್ಯಾಯವನ್ನು ಮೆಚ್ಚುವವನು;
ತನ್ನ ಭಕ್ತರನ್ನು ಎಂದಿಗೂ ಕೈಬಿಡುವವನಲ್ಲ. ಅವರು ಸದಾಕಾಲವೂ ಸುರಕ್ಷಿತರಾಗಿರುವರು.
ದುಷ್ಟರ ಸಂತತಿ ತೆಗೆದುಹಾಕಲ್ಪಡುವುದು.
29ನೀತಿವಂತರೋ ದೇಶವನ್ನು ಅನುಭವಿಸುವವರಾಗಿ,
ಅದರಲ್ಲಿ ಶಾಶ್ವತವಾಗಿ ವಾಸಿಸುವರು.
30ನೀತಿವಂತನ ಬಾಯಿಯು ಸುಜ್ಞಾನವನ್ನು ನುಡಿಯುತ್ತದೆ,
ಅವನ ನಾಲಿಗೆ ನ್ಯಾಯವನ್ನೇ ಹೇಳುತ್ತದೆ.
31ದೇವರ ಧರ್ಮೋಪದೇಶವು ಅವನ ಹೃದಯದಲ್ಲಿರುವುದು;
ಅವನು ಜಾರುವುದೇ ಇಲ್ಲ.
32ದುಷ್ಟನು ಹೊಂಚುಹಾಕಿ ನೀತಿವಂತನನ್ನು ಕೊಲ್ಲಬೇಕೆಂದು ಸಮಯನೋಡುತ್ತಾನೆ.
33ಆದರೆ ಯೆಹೋವನು ಅವನನ್ನು ಅವರ ಕೈಗೆ ಸಿಕ್ಕಗೊಡಿಸುವುದಿಲ್ಲ;
ಅವನನ್ನು ನ್ಯಾಯವಿಚಾರಣೆಯಲ್ಲಿ ಅಪರಾಧಿಯೆಂದು ಎಣಿಸುವುದಿಲ್ಲ.
34ಯೆಹೋವನನ್ನು ನಿರೀಕ್ಷಿಸುವವನಾಗಿ ಆತನ ಮಾರ್ಗವನ್ನೇ ಅನುಸರಿಸು;
ಆಗ ಆತನು ನಿನ್ನನ್ನು ಮುಂದಕ್ಕೆ ತಂದು ದೇಶವನ್ನು ಅನುಭವಿಸುವಂತೆ ಮಾಡುವನು;
ದುಷ್ಟರು ತೆಗೆದುಹಾಕಲ್ಪಡುವುದನ್ನು ನೀನು ನೋಡುವಿ.
35ದುಷ್ಟನು ಭೀಕರನಾಗಿ ಸ್ವಸ್ಥಳದಲ್ಲಿ ಹಸಿರಾಗಿ ಬೆಳೆದ ಮರದಂತೆ
ವಿಸ್ತರಿಸಿಕೊಂಡಿರುವುದನ್ನು ನೋಡಿದ್ದೆನು.
36ತರುವಾಯ ನಾನು ಆ ದಾರಿಯಲ್ಲಿ ಹೋಗಿ ನೋಡಲಾಗಿ,
ಅವನು ಇಲ್ಲದೆ ಹೋಗಿದ್ದನು,
ಅವನನ್ನು ಹುಡುಕಿದರೂ ಸಿಕ್ಕಲಿಲ್ಲ.
37ಒಳ್ಳೇ ನಡತೆಯುಳ್ಳವನನ್ನು ನೋಡು,
ಯಥಾರ್ಥನನ್ನು ಲಕ್ಷಿಸು;
ಶಾಂತನಿಗೆ ಸಂತಾನವೃದ್ಧಿ ಆಗುವುದು.
38ದ್ರೋಹಿಗಳೆಲ್ಲರೂ ನಾಶವಾಗುವರು;
ದುಷ್ಟರ ಸಂತಾನವು ತೆಗೆದುಹಾಕಲ್ಪಡುವುದು.
39ನೀತಿವಂತರ ರಕ್ಷಣೆ ಯೆಹೋವನಿಂದಲೇ;
ಇಕ್ಕಟ್ಟಿನಲ್ಲಿ ಆತನೇ ಅವರಿಗೆ ದುರ್ಗಸ್ಥಾನ.
40ಯೆಹೋವನು ಸಹಾಯಕನಾಗಿ ಅವರನ್ನು ತಪ್ಪಿಸಿ ಬಿಡುವನು;
ಅವರು ಆತನ ಆಶ್ರಿತರಾದುದರಿಂದ,
ಆತನು ಅವರನ್ನು ದುಷ್ಟರ ಕೈಯಿಂದ ತಪ್ಪಿಸಿ ರಕ್ಷಿಸುವನು.

Notes


*37:35 37:35 ಹಸಿರಾಗಿ ಬೆಳೆದ ಮರದಂತೆ ಅಂದರೆ ಲೆಬನೋನ್ ದೇಶದ ದೇವದಾರಿನಂತೆ.

37:36 37:36 ಅಥವಾ ಅವನು.