ಹಿಜ್ಕೀಯನ ಅಸ್ವಸ್ಥತೆ
38
ಆ ಸಮಯದಲ್ಲಿ ಹಿಜ್ಕೀಯನು ರೋಗಗ್ರಸ್ತನಾಗಿ ಸಾಯುವ ಸ್ಥಿತಿಯಲ್ಲಿದ್ದನು. ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನನ್ನು ನೋಡಲು ಹೋದನು. ಯೆಶಾಯನು ಅರಸನಿಗೆ, “ಯೆಹೋವನು ಈ ವಿಷಯಗಳನ್ನು ನಿನಗೆ ತಿಳಿಸಲು ಹೇಳಿದ್ದಾನೆ: ‘ನೀನು ಬೇಗನೇ ಸಾಯುವೆ. ಆದ್ದರಿಂದ ನೀನು ಸಾಯುವಾಗ ನಿನ್ನ ಕುಟುಂಬದವರು ಮಾಡಬೇಕಾದದ್ದನ್ನು ಅವರಿಗೆ ತಿಳಿಸು. ನಿನಗೆ ಗುಣವಾಗುವುದಿಲ್ಲ’” ಎಂದು ಹೇಳಿದನು.
ಹಿಜ್ಕೀಯನು ದೇವಾಲಯದ ಕಡೆಗಿರುವ ಗೋಡೆಯ ಕಡೆಗೆ ಮುಖ ಮಾಡಿ ದೇವರಿಗೆ, “ಯೆಹೋವನೇ, ನಾನು ನಿನಗೆ ಪೂರ್ಣಹೃದಯದಿಂದ ನಂಬಿಗಸ್ತನಾಗಿ ಸೇವೆಮಾಡಿದ್ದನ್ನು ಜ್ಞಾಪಿಸಿಕೋ. ನಿನಗೆ ಇಷ್ಟವಾದದ್ದನ್ನೆಲ್ಲ ನಾನು ಮಾಡಿದ್ದೇನೆ” ಎಂದು ಪ್ರಾರ್ಥಿಸಿ ಬಹಳವಾಗಿ ಅತ್ತನು.
ಆಗ ಯೆಶಾಯನಿಗೆ ಈ ಸಂದೇಶವು ಯೆಹೋವನಿಂದ ಬಂದಿತು: “ಹಿಜ್ಕೀಯನ ಬಳಿಗೆ ಹೋಗಿ ಹೇಳು, ನಿನ್ನ ಪೂರ್ವಿಕನಾದ ದಾವೀದನ ದೇವರಾದ ಯೆಹೋವನು ಹೇಳುವುದೇನೆಂದರೆ: ‘ನಿನ್ನ ಪ್ರಾರ್ಥನೆಯನ್ನು ನಾನು ಕೇಳಿದೆನು; ನಿನ್ನ ಕಣ್ಣೀರನ್ನು ನೋಡಿದೆನು. ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನು ಸೇರಿಸಿದ್ದೇನೆ. ನಾನು ನಿನ್ನನ್ನೂ ಈ ಪಟ್ಟಣವನ್ನೂ ಕಾಪಾಡುವೆನು. ಅಶ್ಶೂರದ ಅರಸನಿಂದ ರಕ್ಷಿಸುವೆನು.’”
“ದೇವರು ತಾನು ಹೇಳಿದ್ದನ್ನು ನೆರವೇರಿಸುತ್ತಾನೆ ಎಂಬುದಕ್ಕೆ ಗುರುತೇನೆಂದರೆ: ಇಗೋ, ಆಹಾಜನ ಮೆಟ್ಟಿಲಲ್ಲಿರುವ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಹೋಗುವಂತೆ ಮಾಡುವೆನು ಎಂದು ನಿನ್ನ ದೇವರಾಗಿರುವ ಯೆಹೋವನು ಹೇಳುತ್ತಾನೆಂಬದಾಗಿ ತಿಳಿಸು” ಎಂದು ಹೇಳಿದನು. ಅದರಂತೆ ಮೆಟ್ಟಿಲಲ್ಲಿರುವ ಸೂರ್ಯನ ನೆರಳು ಹತ್ತು ಮೆಟ್ಟಿಲು ಹಿಂದಕ್ಕೆ ಹೋಯಿತು.
ಹಿಜ್ಕೀಯನ ಹಾಡು
ಹಿಜ್ಕೀಯನು ತನ್ನ ಕಾಯಿಲೆಯಿಂದ ಗುಣಹೊಂದಿದ ಬಳಿಕ ಬರೆದ ಪತ್ರ:
10 ನಾನು ವೃದ್ಧನಾಗುವ ತನಕ ಬದುಕುವೆನೆಂದು ನಾನು ನನ್ನೊಳಗೆ ಅಂದುಕೊಂಡಿದ್ದೆನು.
ಆದರೆ ನಾನು ಮರಣದ್ವಾರದ ಮೂಲಕ ಹೋಗುವ ಸಮಯ ಬಂತು. ನನ್ನ ಜೀವಮಾನವೆಲ್ಲ ಅಲ್ಲಿ ಕಳೆಯುವೆನು.
11 ಅದಕ್ಕೆ ನಾನೆಂದೆ: “ಇನ್ನು ಮೇಲೆ ಜೀವಿತರ ಲೋಕದಲ್ಲಿ ಇನ್ನು ದೇವರಾದ ಯೆಹೋವನನ್ನು ನೋಡುವದಿಲ್ಲ.
ಇನ್ನು ಮೇಲೆ ಜನರು ಲೋಕದಲ್ಲಿ ಜೀವಿಸುವದನ್ನು ನಾನು ನೋಡುವದಿಲ್ಲ.
12 ನನ್ನ ಮನೆಯು ಅಂದರೆ ನನ್ನ ಕುರುಬನ ಗುಡಾರವು ಕೀಳಲ್ಪಟ್ಟು ನನ್ನಿಂದ ತೆಗೆಯಲ್ಪಡುತ್ತಿದೆ.
ಒಬ್ಬನು ಮಗ್ಗದಲ್ಲಿ ಬಟ್ಟೆಯನ್ನು ಸುತ್ತಿ ಕತ್ತರಿಸಿಬಿಡುವಂತೆ ನಾನು ಕತ್ತರಿಸಲ್ಪಟ್ಟಿದ್ದೇನೆ.
ನನ್ನ ಆಯುಷ್ಯವನ್ನು ಚಿಕ್ಕ ವಯಸ್ಸಿನಲ್ಲಿಯೇ ಮುಗಿಸಿಬಿಟ್ಟಿರುವೆ.
13 ಇಡೀರಾತ್ರಿ ನಾನು ಸಿಂಹದಂತೆ ಗರ್ಜಿಸಿದೆನು.
ಆದರೆ ಸಿಂಹವು ಎಲುಬುಗಳನ್ನು ಜಗಿದು ಪುಡಿಮಾಡುವಂತೆ ನನ್ನ ನಿರೀಕ್ಷೆಯೆಲ್ಲಾ ಜಜ್ಜಿಹೋಯಿತು.
ನೀನು ನನ್ನ ಜೀವಿತವನ್ನು ಅಷ್ಟು ಅಲ್ಪಕಾಲಕ್ಕೇ ಕೊನೆಗೊಳಿಸಿದೆ!
14 ನಾನು ಪಾರಿವಾಳದಂತೆ ಕೂಗಿಕೊಂಡೆನು.
ಪಕ್ಷಿಯಂತೆ ಅರಚಿಕೊಂಡೆನು.
ನನ್ನ ಕಣ್ಣುಗಳು ಸ್ವರ್ಗದ ಕಡೆಗೆ
ನೋಡುತ್ತಾ ಆಯಾಸಗೊಂಡವು.
ನನ್ನ ಒಡೆಯನೇ, ನಾನು ತುಂಬಾ ಚಿಂತಾಕ್ರಾಂತನಾಗಿದ್ದೇನೆ.
ನೀನು ನನಗೆ ಸಹಾಯ ಮಾಡುವುದಾಗಿ ವಾಗ್ದಾನ ಮಾಡು.”
15 ನಾನೇನು ಹೇಳಲಿ?
ನನಗೆ ಸಂಭವಿಸಲಿರುವುದನ್ನು ನನ್ನ ಒಡೆಯನು ತಿಳಿಸಿದ್ದಾನೆ.
ನನ್ನ ಒಡೆಯನು ಅದನ್ನು ನೆರವೇರಿಸುತ್ತಾನೆ.
ನನ್ನ ಆತ್ಮದಲ್ಲಿ ಸಂಕಟಗಳೆಲ್ಲಾ ತುಂಬಿವೆ.
ನಾನು ನನ್ನ ಜೀವಮಾನವೆಲ್ಲಾ ದೀನನಾಗುವೆನು.
16 ನನ್ನ ಒಡೆಯನೇ, ನನ್ನ ಆತ್ಮವು ಪುನರುಜ್ಜೀವಿಸುವಂತೆ ಮಾಡು.
ನನ್ನ ಆತ್ಮವು ಬಲಗೊಂಡು ಆರೋಗ್ಯದಾಯಕವಾಗುವಂತೆ ಸಹಾಯಮಾಡು.
ನಾನು ತಿರುಗಿ ಸ್ವಸ್ಥತೆ ಹೊಂದುವಂತೆ ಮಾಡು.
ನಾನು ಮತ್ತೆ ಜೀವಿಸುವಂತೆ ಮಾಡು.
17 ಇಗೋ, ನನ್ನ ಸಂಕಟವೆಲ್ಲಾ ಹೊರಟುಹೋಯಿತು.
ನನಗೀಗ ಸಮಾಧಾನವಿದೆ.
ನೀನು ನನ್ನನ್ನು ಬಹಳವಾಗಿ ಪ್ರೀತಿಸುವದರಿಂದ
ನನ್ನ ಶರೀರವು ಸಮಾಧಿಯಲ್ಲಿ ಕೊಳೆಯುವಂತೆ ಮಾಡಲಿಲ್ಲ.
ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
ನನ್ನ ಪಾಪಗಳನ್ನು ಬಹುದೂರ ಬಿಸಾಡಿದೆ.
18 ಸತ್ತವರು ನಿನ್ನನ್ನು ಸ್ತುತಿಸುವದಿಲ್ಲ.
ಪಾತಾಳದಲ್ಲಿರುವ ಜನರು ನಿನ್ನನ್ನು ಸ್ತುತಿಸುವದಿಲ್ಲ.
ಸತ್ತುಹೋದವರು ಸಹಾಯಕ್ಕಾಗಿ ನಿನ್ನ ಮೇಲೆ ಭರವಸವಿಡರು. ಅವರು ಭೂಮಿಯಲ್ಲಿರುವ ಆಳವಾದ ಕುಣಿಗೆ ಸೇರುವರು. ಅವರು ತಿರುಗಿ ಮಾತನಾಡುವದೇ ಇಲ್ಲ.
19 ನನ್ನ ಹಾಗೆ ಈ ದಿನ ಜೀವಿಸುವವರೆಲ್ಲಾ ನಿನ್ನನ್ನು ಕೊಂಡಾಡುವರು.
ತಂದೆಯು ತನ್ನ ಮಕ್ಕಳಿಗೆ ನಿನ್ನ ಮೇಲೆ ಭರವಸವಿಡಲು ಕಲಿಸುವರು.
20 ನಾನು ಹೇಳುವುದೇನೆಂದರೆ: “ಯೆಹೋವನು ನನ್ನನ್ನು ರಕ್ಷಿಸಿದನು.
ನಮ್ಮ ಜೀವಮಾನದ ಕಾಲವೆಲ್ಲಾ ಯೆಹೋವನ ಆಲಯದಲ್ಲಿ ನಾವು ಹಾಡುತ್ತಾ ವಾದ್ಯಬಾರಿಸುತ್ತಾ ಆತನನ್ನು ಸ್ತುತಿಸುವೆವು.”
21 ಆಗ ಯೆಶಾಯನು ಹಿಜ್ಕೀಯನಿಗೆ, “ನೀನು ಅಂಜೂರದ ಉಂಡೆ ಮಾಡಿ ಅದನ್ನು ನಿನ್ನ ಗಾಯದ ಮೇಲಿಡು. ಆಗ ನೀನು ಗುಣಹೊಂದುವೆ” ಎಂದು ಹೇಳಿದನು.*
22 ಆಗ ಹಿಜ್ಕೀಯನು ಯೆಶಾಯನಿಗೆ, “ನಾನು ಸ್ವಸ್ಥ ಹೊಂದುವೆನೆಂಬುದಕ್ಕೆ ಗುರುತೇನು? ನಾನು ದೇವರ ಆಲಯಕ್ಕೆ ಮತ್ತೆ ಹೋಗುವೆನೆಂಬುದಕ್ಕೆ ಗುರುತೇನು?” ಎಂದು ಕೇಳಿದನು.

* 38:21: ಈ ವಚನಗಳು ಕ್ರಮವಾಗಿ ಹೀಬ್ರೂ ಪ್ರತಿಯಲ್ಲಿ ಅಧ್ಯಾಯದ ಕೊನೆಯಲ್ಲಿ ಬರೆಯಲ್ಲಟ್ಟಿವೆ.