ಜೆರುಸಲೇಮಿನ ವಿರುದ್ಧವಾಗಿ ಯೆಹೆಜ್ಕೇಲನ ಮಾತುಗಳು
22
ಯೆಹೋವನ ಸಂದೇಶವು ನನಗೆ ಬಂತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ನೀನು ಹಂತಕರ ನಗರಕ್ಕೆ ನ್ಯಾಯತೀರಿಸುವೆಯಾ? ಆಕೆಯ ಭಯಂಕರ ದುಷ್ಟತನದ ಬಗ್ಗೆ ಆಕೆಗೆ ತಿಳಿಸು. ನೀನು ಹೀಗೆ ಹೇಳಬೇಕು: ‘ನನ್ನ ಒಡೆಯನಾದ ಯೆಹೋವನ ಮಾತುಗಳಿವು. ಈ ನಗರವು ಕೊಲೆಗಾರರಿಂದ ತುಂಬಿದೆ. ಆದ್ದರಿಂದ ಆಕೆಯ ಶಿಕ್ಷೆಯ ದಿನವು ಬಂದಿದೆ. ಆಕೆ ತನಗೋಸ್ಕರ ಹೊಲಸು ವಿಗ್ರಹಗಳನ್ನು ಮಾಡಿ ತನ್ನನ್ನು ಹೊಲಸು ಮಾಡಿಕೊಂಡಿದ್ದಾಳೆ.
“‘ಜೆರುಸಲೇಮಿನ ನಿವಾಸಿಗಳೇ, ನೀವು ಅನೇಕರನ್ನು ಕೊಂದಿದ್ದೀರಿ. ಆದ್ದರಿಂದ ನೀವು ದೋಷಿಗಳು. ನೀವು ಹೊಲಸು ವಿಗ್ರಹಗಳನ್ನು ಮಾಡಿಕೊಂಡಿದ್ದೀರಿ. ಆದ್ದರಿಂದ ನೀವು ಅಶುದ್ಧರು. ನಿಮ್ಮನ್ನು ಶಿಕ್ಷಿಸುವ ಸಮಯ ಈಗ ಬಂದಿದೆ. ನಿಮ್ಮ ಅಂತ್ಯವು ಬಂದಿದೆ. ಆದ್ದರಿಂದಲೇ ಇತರ ಜನಾಂಗಗಳವರು ನಿನ್ನನ್ನು ಗೇಲಿಮಾಡುವರು. ಎಲ್ಲಾ ದೇಶಗಳು ನಿಮ್ಮನ್ನು ನೋಡಿ ನಗುವವು. ದೂರ ಮತ್ತು ಹತ್ತಿರದಲ್ಲಿರುವ ಎಲ್ಲರೂ ನಿನ್ನನ್ನು ಹಾಸ್ಯ ಮಾಡುವರು. ನಿನ್ನ ಹೆಸರನ್ನು ನೀನು ಕೆಡಿಸಿದ್ದೀ. ನೀನು ಗದ್ದಲದಿಂದ ತುಂಬಿಹೋಗಿರುವೆ.
“‘ಇಗೋ, ಜೆರುಸಲೇಮಿನಲ್ಲಿ ಇತರರನ್ನು ಕೊಲ್ಲುವದಕ್ಕಾಗಿಯೇ ತಮ್ಮನ್ನು ಬಲಿಷ್ಠರನ್ನಾಗಿ ಮಾಡಿಕೊಂಡಿರುವ ಇಸ್ರೇಲಿನ ಅಧಿಪತಿಗಳು ಇದ್ದಾರೆ. ಜೆರುಸಲೇಮಿನ ಜನರು ತಮ್ಮನ್ನು ಹೆತ್ತವರನ್ನು ಸನ್ಮಾನಿಸುವುದಿಲ್ಲ. ಪರದೇಶಸ್ಥರನ್ನು ಹಿಂಸಿಸುವರು. ಆ ಸ್ಥಳದಲ್ಲಿ ವಿಧೆವೆಯರಿಗೂ ಅನಾಥರಿಗೂ ಮೋಸ ಮಾಡುವರು. ನೀವು ನನ್ನ ಪವಿತ್ರ ವಸ್ತುಗಳನ್ನು ಕಡೆಗಾಣಿಸಿರುವಿರಿ. ನಾನು ನೇಮಿಸಿರುವ ವಿಶೇಷ ವಿಶ್ರಾಂತಿಯ ದಿವಸಗಳನ್ನು ಅಲಕ್ಷ್ಯ ಮಾಡುತ್ತೀರಿ. ಜೆರುಸಲೇಮ್ ನಿವಾಸಿಗಳು ಇತರರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಆ ನಿರಪರಾಧಿ ಜನರನ್ನು ಹತ್ಯೆ ಮಾಡಲು ಹಾಗೆ ಮಾಡುತ್ತಾರೆ. ಆ ಜನರು ಬೆಟ್ಟದ ಮೇಲೆ ಹೋಗಿ ಸುಳ್ಳುದೇವರುಗಳನ್ನು ಸನ್ಮಾನಿಸುವುದಕ್ಕಾಗಿ ಊಟಮಾಡುತ್ತಾರೆ.
“‘ಜೆರುಸಲೇಮಿನ ಜನರು ಎಲ್ಲಾ ಬಗೆಯ ಲೈಂಗಿಕ ಪಾಪಗಳನ್ನು ಮಾಡುತ್ತಾರೆ. 10 ತಮ್ಮ ತಂದೆಯ ಹೆಂಡತಿಯರೊಂದಿಗೆ ಅನೈತಿಕ ಸಂಬಂಧವಿಟ್ಟುಕೊಳ್ಳುತ್ತಾರೆ. ಸ್ತ್ರೀಯರ ಮೇಲೆ ಅತ್ಯಾಚಾರ ಮಾಡುತ್ತಾರೆ; ಮುಟ್ಟಾಗಿ ಅಶುದ್ಧರಾಗಿರುವ ಸ್ತ್ರೀಯರ ಮೇಲೂ ಅವರು ಅತ್ಯಾಚಾರ ಮಾಡುತ್ತಾರೆ. 11 ಇಂತಹ ಪಾಪಗಳನ್ನು ತಮ್ಮ ನೆರೆಯವನ ಹೆಂಡತಿಯೊಂದಿಗೆ ನಡಿಸುತ್ತಾರೆ. ಒಬ್ಬನು ತನ್ನ ಸ್ವಂತ ಸೊಸೆಯೊಂದಿಗೆ ಮಲಗಿ ಆಕೆಯನ್ನು ಅಶುದ್ಧಳನ್ನಾಗಿ ಮಾಡಿದನು. ಮತ್ತೊಬ್ಬನು ತನ್ನ ತಂದೆಯ ಮಗಳು, ತನ್ನ ತಂಗಿಯನ್ನೆ ಬಲವಂತದಿಂದ ಕೆಡಿಸಿರುತ್ತಾನೆ. 12 ಜೆರುಸಲೇಮಿನಲ್ಲಿ ನೀವು ಕೊಲೆ ಮಾಡುವದಕ್ಕಾಗಿ ಹಣ ತೆಗೆದುಕೊಳ್ಳುತ್ತೀರಿ. ಸಾಲಕೊಟ್ಟು ಅದಕ್ಕೆ ಬಡ್ಡಿ ತೆಗೆದುಕೊಳ್ಳುತ್ತೀರಿ. ಸ್ವಲ್ಪ ಹಣ ಮಾಡುವದಕ್ಕಾಗಿ ನಿಮ್ಮ ನೆರೆಯವನನ್ನೆ ಮೋಸ ಮಾಡುತ್ತೀರಿ. ನನ್ನನ್ನು ನೀವು ಮರೆತುಬಿಟ್ಟಿರುವಿರಿ.’” ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ.
13 ದೇವರು ಹೀಗೆ ಹೇಳಿದನು: “‘ನೋಡಿರಿ, ನಾನು ಕೈಯನ್ನು ಬಡಿದು ನಿಮ್ಮನ್ನು ನಿಲ್ಲಿಸಿ ಬಿಡುವೆನು. ನೀವು ಮೋಸ ಮಾಡಿದ್ದಕ್ಕಾಗಿಯೂ, ಜನರನ್ನು ಕೊಲೆ ಮಾಡಿದ್ದಕ್ಕಾಗಿಯೂ ನಿಮ್ಮನ್ನು ಶಿಕ್ಷಿಸುವೆನು. 14 ನಾನು ನಿಮ್ಮನ್ನು ಶಿಕ್ಷಿಸಲು ಬಂದಾಗ ನೀವು ಧೈರ್ಯಶಾಲಿಗಳಾಗುವಿರಾ? ನಿಮ್ಮಲ್ಲಿ ಬಲವಿರುವದೊ? ನಾನೇ ಯೆಹೋವನು. ನಾನು ಹೇಳಿದ ಪ್ರಕಾರ ಮಾಡುವೆನು. 15 ನಾನು ನಿಮ್ಮನ್ನು ಜನಾಂಗಗಳ ಮಧ್ಯೆ ಚದರಿಸಿಬಿಡುವೆನು. ನಿಮ್ಮನ್ನು ಬಹುದೇಶಗಳ ಮಧ್ಯೆ ಅಟ್ಟಿಬಿಡುವೆನು. ಈ ನಗರದಲ್ಲಿರುವ ಅಸಹ್ಯ ವಸ್ತುಗಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡುವೆನು. 16 ಜೆರುಸಲೇಮೇ, ನಿನಗೆ ಸಂಭವಿಸುವ ಸಂಗತಿಗಳಿಂದ ಜನಾಂಗಗಳ ಮುಂದೆ ನಿನ್ನ ಕೀರ್ತಿಯು ಹಾಳಾಗುವುದು. ಆಗ ನಾನು ಯೆಹೋವನೆಂದು ನೀನು ತಿಳಿದುಕೊಳ್ಳುವೆ.’”
ಇಸ್ರೇಲ್ ಉಪಯೋಗವಿಲ್ಲದ ಹೊಲಸು
17 ಯೆಹೋವನ ವಾಕ್ಯವು ನನಗೆ ಬಂತು. ಆತನು ಹೀಗೆಂದನು: 18 “ನರಪುತ್ರನೇ, ಇಸ್ರೇಲ್ ಜನಾಂಗವು ನನ್ನ ಪಾಲಿಗೆ ನಿಷ್ಪ್ರಯೋಜಕವಾಗಿದೆ. ಅವರು ತಾಮ್ರದಂತೆ, ತವರದಂತೆ, ಕಬ್ಬಿಣದಂತೆ ಮತ್ತು ಸೀಸದಂತೆ ಮತ್ತು ಬೆಳ್ಳಿಯನ್ನು ಕುಲುಮೆಯಲ್ಲಿ ಕರಗಿಸಿ ಶುದ್ಧೀಕರಿಸಿದಾಗ ಉಳಿಯುವ ಕಂದುಬೆಳ್ಳಿಯಂತೆ ಇದ್ದಾರೆ. 19 ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ. ‘ನೀವೆಲ್ಲರೂ ಪ್ರಯೋಜನವಿಲ್ಲದ ಲೋಹವಾಗಿದ್ದೀರಿ. ಆದ್ದರಿಂದ ನಾನು ನಿಮ್ಮನ್ನು ಜೆರುಸಲೇಮಿನೊಳಗೆ ಒಟ್ಟುಗೂಡಿಸುತ್ತೇನೆ. 20 ಕೆಲಸಗಾರರು ಬೆಳ್ಳಿ, ತಾಮ್ರ, ಸೀಸ, ತವರ, ಕಬ್ಬಿಣ ಇವುಗಳನ್ನೆಲ್ಲಾ ಬೆಂಕಿಗೆ ಹಾಕುವರು. ಬೆಂಕಿಯನ್ನೂದಿ ಶಾಖ ಹೆಚ್ಚು ಮಾಡುವರು. ಆಗ ಲೋಹಗಳು ಕರಗಲು ಪ್ರಾರಂಭವಾಗುವವು. ಅದೇ ರೀತಿಯಲ್ಲಿ ನಾನು ನಿಮ್ಮನ್ನು ನನ್ನ ಬೆಂಕಿಯಲ್ಲಿ ಹಾಕಿ ಕರಗಿಸುವೆನು. ನನ್ನ ರೌದ್ರವೇ ಆ ಬೆಂಕಿ. 21 ನಾನು ನಿಮ್ಮನ್ನು ಆ ಬೆಂಕಿಯಲ್ಲಿ ಹಾಕುವೆನು. ನನ್ನ ರೌದ್ರವೆಂಬ ಬೆಂಕಿಯನ್ನು ಉದಿ ಶಾಖ ಹೆಚ್ಚಿಸುವೆನು. ಆಗ ನೀವು ಕರಗಲು ಪ್ರಾರಂಭಿಸುವಿರಿ. 22 ಬೆಳ್ಳಿಯು ಕುಲುಮೆಯಲ್ಲಿ ಕರಗಿಹೋಗುವಂತೆಯೇ ನೀವು ಪಟ್ಟಣದಲ್ಲಿ ಕರಗಿಹೋಗುವಿರಿ. ಯೆಹೋವನಾದ ನಾನೇ ನನ್ನ ಕೋಪವನ್ನು ನಿಮ್ಮ ಮೇಲೆ ಸುರಿದೆನೆಂದು ಆಗ ನೀವು ಅರ್ಥಮಾಡಿಕೊಳ್ಳುವಿರಿ.’”
ಜೆರುಸಲೇಮ್ ವಿರುದ್ಧ ಯೆಹೆಜ್ಕೇಲನ ಮಾತುಗಳು
23 ಯೆಹೋವನ ವಾಕ್ಯವು ನನಗೆ ಬಂದಿತು. ಆತನು, 24 “ನರಪುತ್ರನೇ, ಇದನ್ನು ಜೆರುಸಲೇಮಿಗೆ ಹೇಳು. ಮಳೆಯನ್ನೆ ಪಡೆದಿಲ್ಲದ ಭೂಮಿಯಂತೆ ಆಕೆ ಇದ್ದಾಳೆಂದು ಆಕೆಗೆ ತಿಳಿಸು. ನನ್ನ ಕೋಪದ ಸಮಯದಲ್ಲಿ ಆಕೆಯ ಮೇಲೆ ಮಳೆಯೇ ಸುರಿದಿಲ್ಲ. 25 ಜೆರುಸಲೇಮಿನ ಪ್ರವಾದಿಗಳು ತಾನು ಬೇಟೆಯಾಡಿ ಕೊಂದ ಪ್ರಾಣಿಯನ್ನು ತಿನ್ನುವ ಗರ್ಜಿಸುವ ಸಿಂಹದಂತಿದ್ದಾರೆ. ಆ ಪ್ರವಾದಿಗಳು ಅನೇಕ ಪ್ರಾಣಗಳನ್ನು ತೆಗೆದುಕೊಂಡಿದ್ದಾರೆ. ಅವರಿಂದ ಬೆಲೆಬಾಳುವ ವಸ್ತುಗಳನ್ನು ಕದ್ದುಕೊಂಡಿದ್ದಾರೆ. ಜೆರುಸಲೇಮಿನಲ್ಲಿ ಅನೇಕ ಸ್ತ್ರೀಯರು ವಿಧವೆಯರಾಗಲು ಅವರೇ ಕಾರಣರಾಗಿದ್ದಾರೆ.
26 “ಯಾಜಕರು ನನ್ನ ಉಪದೇಶವನ್ನು ನಿರಾಕರಿಸಿರುತ್ತಾರೆ; ಪರಿಶುದ್ಧ ವಸ್ತುಗಳನ್ನು ಸರಿಯಾಗಿ ಲಕ್ಷ್ಯ ಮಾಡುತ್ತಿಲ್ಲ; ಅವುಗಳಿಗೆ ಮಹತ್ವವನ್ನು ಕೊಡುತ್ತಿಲ್ಲ. ಅವರು ಪವಿತ್ರ ವಸ್ತುಗಳನ್ನು ಅಪವಿತ್ರ ವಸ್ತುಗಳಂತೆ ನೋಡುತ್ತಿದ್ದಾರೆ. ಯಾವುದು ಶುದ್ಧ, ಯಾವುದು ಅಶುದ್ಧ ಎಂಬುದರ ಬಗ್ಗೆ ಅವರು ಜನರಿಗೆ ಸರಿಯಾಗಿ ಉಪದೇಶಿಸುತ್ತಿಲ್ಲ. ನನ್ನ ವಿಶೇಷ ವಿಶ್ರಾಂತಿ ದಿವಸಗಳನ್ನು ಮಾನ್ಯ ಮಾಡುತ್ತಿಲ್ಲ. ನಾನು ಏನೂ ಅಲ್ಲವೆಂಬಂತೆ ನನ್ನನ್ನು ಅವರು ನೋಡುತ್ತಾರೆ.
27 “ಜೆರುಸಲೇಮಿನ ನಾಯಕರು ತಾನು ಹಿಡಿದ ಪ್ರಾಣಿಯನ್ನು ತಿನ್ನುವ ತೋಳಕ್ಕೆ ಸಮಾನರಾಗಿದ್ದಾರೆ. ಅವರು ಧನಿಕರಾಗುವದಕ್ಕಾಗಿ ಜನರನ್ನು ಹಿಡಿದು ಕೊಲ್ಲುವರು.
28 “ಪ್ರವಾದಿಗಳು ಜನರನ್ನು ಎಚ್ಚರಿಸುವದಿಲ್ಲ. ಸತ್ಯವನ್ನು ಮುಚ್ಚಿಡುತ್ತಾರೆ. ಒಂದು ಗೋಡೆಯನ್ನು ದುರಸ್ತಿ ಮಾಡದೆ ಅದರ ರಂಧ್ರಗಳನ್ನು ಗಾರೆಯಿಂದ ಮುಚ್ಚುವ ಕೆಲಸಗಾರರಂತಿದ್ದಾರೆ. ಅವರು ಸುಳ್ಳುದರ್ಶನಗಳನ್ನೆ ನೋಡುತ್ತಾರೆ. ತಮ್ಮ ಭವಿಷ್ಯದ ಬಗ್ಗೆ ಶಕುನದ ಮೂಲಕ ತಿಳಿದುಕೊಳ್ಳುವುದೆಲ್ಲ ಸುಳ್ಳಾಗಿರುತ್ತದೆ. ಅವರು, ‘ನನ್ನ ಒಡೆಯನಾದ ಯೆಹೋವನು ಹೇಳಿದನು’ ಎಂಬುದಾಗಿ ಸುಳ್ಳು ಹೇಳುವರು. ಆದರೆ ನಿಜವಾಗಿಯೂ ಯೆಹೋವನು ಅವರ ಕೂಡ ಮಾತನಾಡಲಿಲ್ಲ.
29 “ಸಾಮಾನ್ಯ ಜನರು ಮೋಸ ಮಾಡುತ್ತಾರೆ ಮತ್ತು ದರೋಡೆ ಮಾಡುತ್ತಾರೆ. ತಾವು ಧನಿಕರಾಗುವದಕ್ಕೆ ನಿಸ್ಸಹಾಯಕರಾದ ಭಿಕ್ಷೆಗಾರರನ್ನು ಸುಲುಕೊಳ್ಳುವರು. ಅವರು ಪರದೇಶಿಗಳಿಗೆ ಮೋಸಮಾಡಿ ಅವರಿಗೆ ಅನ್ಯಾಯ ಮಾಡುವರು.
30 “ನನ್ನ ಕೋಪದಿಂದ ದೇಶವು ನಾಶವಾಗದಂತೆ ಅದನ್ನು ರಕ್ಷಿಸಲು ಗೋಡೆಯನ್ನು ಸರಿಪಡಿಸುವುದಕ್ಕಾಗಿಯೂ ಗೋಡೆಯು ಒಡೆದುಹೋಗಿದ್ದ ಸ್ಥಳದಲ್ಲಿ ನಿಂತುಕೊಳ್ಳುವುದಕ್ಕಾಗಿ ಅವರಲ್ಲಿ ನಾನು ಒಬ್ಬನನ್ನು ಎದುರುನೋಡಿದೆ. ಆದರೆ ಯಾರೂ ನನಗೆ ಸಿಗಲಿಲ್ಲ. 31 ಅದಕ್ಕಾಗಿ ನಾನು ಅವರಿಗೆ ನನ್ನ ಕೋಪವನ್ನು ತೋರಿಸುವೆನು. ಅವರ ದುಷ್ಟತನಕ್ಕಾಗಿ ನಾನು ಅವರನ್ನು ಶಿಕ್ಷಿಸುವೆನು. ಅವರೇ ಅದಕ್ಕೆ ಜವಾಬ್ದಾರರು.” ಇವು ನನ್ನ ಒಡೆಯನಾದ ಯೆಹೋವನ ನುಡಿಗಳು.