ಪ್ರಸಂಗಿ
1
1 ದಾವೀದನ ಮಗನೂ ಜೆರುಸಲೇಮಿನಲ್ಲಿ ಆಳುತ್ತಿದ್ದ ರಾಜನೂ ಆಗಿದ್ದ ಪ್ರಸಂಗಿಯ ಮಾತುಗಳು. ಪ್ರಸಂಗಿಯು ಹೇಳುವುದೇನೆಂದರೆ,
2 ವ್ಯರ್ಥವೇ ವ್ಯರ್ಥ, ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ!
3 ಈ ಲೋಕದಲ್ಲಿ ಮನುಷ್ಯರು ಪಡುವ ಪ್ರಯಾಸದಿಂದ ಅವರಿಗೇನು ಲಾಭ?
ಪ್ರಕೃತಿಯಲ್ಲಿ ಬದಲೇನೂ ಇಲ್ಲ
4 ಒಂದು ತಲೆಮಾರು ಹೋಗಿ ಮತ್ತೊಂದು ತಲೆಮಾರು ಬರುವುದು. ಆದರೆ ಭೂಮಿ ಎಂದೆಂದಿಗೂ ಮುಂದುವರಿಯುವುದು.
5 ಸೂರ್ಯನು ಏರುವನು ಮತ್ತು ಇಳಿಯುವನು; ಬಳಿಕ ಅದೇ ಸ್ಥಳದಲ್ಲಿ ಮತ್ತೆ ಏರಲು ಅವಸರಪಡುವನು.
6 ಗಾಳಿಯು ದಕ್ಷಿಣಕ್ಕೆ ಬೀಸುವುದು; ನಂತರ ಉತ್ತರಕ್ಕೆ ತಿರುಗಿಕೊಳ್ಳುವುದು; ಅದು ತಿರುತಿರುಗುತ್ತಾ ಹೋಗಿ ತಿರುತಿರುಗುತ್ತಾ ಬರುವುದು.
7 ನದಿಗಳು ಎಲ್ಲಿಗೆ ಹರಿದುಹೋಗುತ್ತವೋ ಅಲ್ಲಿಗೇ ತಿರಿಗಿ ಹೋಗುವವು. ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುತ್ತಲೇ ಇರುತ್ತವೆ; ಆದರೂ ಸಮುದ್ರವು ತುಂಬುವುದಿಲ್ಲ.
8 ಮಾತುಗಳಿಂದ ಯಾವುದನ್ನೂ ಸಂಪೂರ್ಣವಾಗಿ ವಿವರಿಸಲು ಸಾಧ್ಯವಿಲ್ಲ; ಆದರೂ ಜನರು ಮಾತಾಡುತ್ತಲೇ ಇರುವರು. ನಮ್ಮ ಕಿವಿಗಳು ಮಾತುಗಳನ್ನು ಕೇಳುತ್ತಲೇ ಇರುತ್ತವೆ; ಆದರೂ ನಮ್ಮ ಕಿವಿಗಳು ತುಂಬುವುದಿಲ್ಲ. ನಮ್ಮ ಕಣ್ಣುಗಳು ನೋಡುತ್ತಲೇ ಇರುತ್ತವೆ; ಆದರೂ ಅವು ತುಂಬುವುದಿಲ್ಲ.
ಲೋಕದಲ್ಲಿ ಹೊಸದೇನೂ ಇಲ್ಲ
9 ಇದ್ದದ್ದೇ ಇರುವುದು; ನಡೆದದ್ದೇ ನಡೆಯುವುದು. ಲೋಕದಲ್ಲಿ ಹೊಸದೇನೂ ಇಲ್ಲ.
10 “ಇಗೋ, ಇದು ಹೊಸದು!” ಎಂದು ಒಬ್ಬನು ಹೇಳಬಹುದು. ಆದರೆ ಅದು ಸಹ ಮೊದಲಿಂದ ಇಲ್ಲಿ ಇದ್ದದ್ದೇ. ನಮಗಿಂತ ಮೊದಲೇ ಅದು ಇಲ್ಲಿತ್ತು.
11 ಬಹುಕಾಲದ ಹಿಂದಿನ ಘಟನೆಗಳನ್ನು ಜನರು ಜ್ಞಾಪಿಸಿಕೊಳ್ಳುವುದಿಲ್ಲ. ಈಗ ನಡೆಯುತ್ತಿರುವ ಸಂಗತಿಗಳನ್ನು ಮುಂದಿನ ಕಾಲದ ಜನರು ಜ್ಞಾಪಿಸಿಕೊಳ್ಳುವುದಿಲ್ಲ. ಹೀಗೆ, ತಮಗಿಂತ ಮುಂಚೆ ಇದ್ದವರು ಮಾಡಿದ್ದನ್ನು ಜನರು ಜ್ಞಾಪಿಸಿಕೊಳ್ಳುವುದಿಲ್ಲ.
ಜ್ಞಾನದಿಂದ ಸಂತೋಷವಾಗುವುದೇ?
12 ಪ್ರಸಂಗಿಯಾದ ನಾನು ಜೆರುಸಲೇಮಿನಲ್ಲಿ ಇಸ್ರೇಲರಿಗೆ ರಾಜನಾಗಿದ್ದೆನು.
13 ಈ ಜೀವಿತದ ಎಲ್ಲಾ ವಿಷಯಗಳನ್ನು ಜ್ಞಾನದಿಂದ ವಿಮರ್ಶಿಸಿ ಕಲಿತುಕೊಳ್ಳಲು ನಿರ್ಧರಿಸಿದೆನು. ದೇವರು ಮನುಷ್ಯರಿಗೆ ಕೊಟ್ಟಿರುವ ಕೆಲಸವೆಲ್ಲ ಬಹು ಪ್ರಯಾಸವೇ.
14 ಈ ಲೋಕದ ಕೆಲಸಗಳನ್ನೆಲ್ಲ ನೋಡಿದಾಗ ಅವೆಲ್ಲ ಕೇವಲ ವ್ಯರ್ಥವೆಂದು ಕಂಡುಕೊಂಡೆನು. ಅವು ಗಾಳಿಯನ್ನು ಹಿಡಿಯಲು ಪ್ರಯತ್ನಿಸಿದಷ್ಟೇ ವ್ಯರ್ಥವಾಗಿವೆ.
15 ವಕ್ರವಾದದ್ದನ್ನು ನೆಟ್ಟಗೆ ಮಾಡಲು ಸಾಧ್ಯವಿಲ್ಲ. ಇಲ್ಲದ್ದನ್ನು ಲೆಕ್ಕಿಸುವುದಕ್ಕೂ ಸಾಧ್ಯವಿಲ್ಲ.
16 ನಾನು ಮನಸ್ಸಿನಲ್ಲಿ, “ನಾನು ಬಹು ಜ್ಞಾನಿ. ನನಗಿಂತ ಮೊದಲು ಜೆರುಸಲೇಮನ್ನು ಆಳಿದ ಏಲ್ಲಾ ರಾಜರುಗಳಿಗಿಂತ ನಾನು ಜ್ಞಾನಿ. ನಾನು ಜ್ಞಾನವನ್ನೂ ವಿವೇಕವನ್ನೂ ಚೆನ್ನಾಗಿ ತಿಳಿದುಕೊಂಡಿರುವೆ” ಎಂದುಕೊಂಡೆನು.
17 ಜ್ಞಾನವನ್ನಲ್ಲದೆ ಮೂಢತನವನ್ನೂ ಬುದ್ಧಿಹೀನತೆಯನ್ನೂ ಗ್ರಹಿಸಿಕೊಳ್ಳಲು ನಿರ್ಧರಿಸಿದೆನು. ಆದರೆ ಇದು ಸಹ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವೆಂದು ಕಲಿತುಕೊಂಡೆನು.
18 ಬಹು ಜ್ಞಾನದಿಂದ ಬಹು ಸಂಕಟ; ಹೆಚ್ಚು ತಿಳುವಳಿಕೆಯಿಂದ ಹೆಚ್ಚು ದುಃಖ.