ಜೆಕರ್ಯ
ತನ್ನ ಜನರು ಹಿಂದಿರುಗಿ ಬರಬೇಕೆಂದು ಯೆಹೋವನು ಆಶಿಸುತ್ತಾನೆ
1
ಪರ್ಶಿಯಾದಲ್ಲಿ ರಾಜನಾದ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ಎಂಟನೆಯ ತಿಂಗಳಲ್ಲಿ ಬೆರೆಕ್ಯನ ಮಗನಾದ ಜೆಕರ್ಯನಿಗೆ ಯೆಹೋವನಿಂದ ಸಂದೇಶವು ದೊರಕಿತು. ಬೆರೆಕ್ಯನು ಪ್ರವಾದಿಯಾದ ಇದ್ದೋವಿನ ಮಗನು. ಇದು ಆತನ ಸಂದೇಶ:
ನಿಮ್ಮ ಪೂರ್ವಿಕರ ಮೇಲೆ ಯೆಹೋವನು ಬಹಳವಾಗಿ ಕೋಪಗೊಂಡಿದ್ದಾನೆ. ಆದ್ದರಿಂದ ನಿನ್ನ ಜನರಿಗೆ ನೀನು ಈ ವಿಷಯಗಳನ್ನು ತಿಳಿಸಬೇಕು. ಯೆಹೋವನು ಹೇಳುವುದೇನೆಂದರೆ, “ನನ್ನ ಬಳಿಗೆ ಹಿಂದಿರುಗಿರಿ. ಆಗ ನಾನು ನಿಮ್ಮ ಬಳಿಗೆ ಹಿಂದಿರುಗುವೆನು” ಇದು ಸರ್ವಶಕ್ತನಾದ ಯೆಹೋವನ ಮಾತುಗಳು.
ಯೆಹೋವನು ಹೀಗೆನ್ನುತ್ತಾನೆ: “ನಿಮ್ಮ ಪೂರ್ವಿಕರಂತೆ ಆಗಬೇಡಿರಿ. ಹಿಂದಿನ ಕಾಲದಲ್ಲಿ ಪ್ರವಾದಿಗಳು ಅವರ ಸಂಗಡ ಮಾತನಾಡಿದರು. ಅವರು, ‘ಸರ್ವಶಕ್ತನಾದ ಯೆಹೋವನು ನಿಮ್ಮ ಕೆಟ್ಟಜೀವಿತವನ್ನು ಬದಲಾಯಿಸಲು ಇಷ್ಟಪಡುತ್ತಾನೆ. ದುಷ್ಕೃತ್ಯಗಳನ್ನು ಮಾಡುವದನ್ನು ನಿಲ್ಲಿಸಿರಿ.’ ಆದರೆ ನಿಮ್ಮ ಪೂರ್ವಿಕರು ನನ್ನ ಮಾತುಗಳನ್ನು ಕೇಳಲಿಲ್ಲ.” ಇದು ಯೆಹೋವನ ನುಡಿ.
ಯೆಹೋವನು ಹೀಗೆನ್ನುತ್ತಾನೆ: “ನಿಮ್ಮ ಪೂರ್ವಿಕರು ದಾಟಿಹೋದರು. ಆ ಪ್ರವಾದಿಗಳು ನಿತ್ಯಕಾಲಕ್ಕೂ ಜೀವಿಸಲಿಲ್ಲ. ಪ್ರವಾದಿಗಳು ನನ್ನ ಸೇವಕರು. ನಿಮ್ಮ ಪೂರ್ವಿಕರಿಗೆ ನ್ಯಾಯಪ್ರಮಾಣಗಳನ್ನು ಬೋಧಿಸಲು ನಾನು ಅವರನ್ನು ಉಪಯೋಗಿಸಿದೆನು. ನಿಮ್ಮ ಪೂರ್ವಿಕರು ಕಟ್ಟಕಡೆಗೆ ಪಾಠವನ್ನು ಕಲಿತರು. ಅವರು, ‘ಸರ್ವಶಕ್ತನಾದ ಯೆಹೋವನು ತಾನು ಹೇಳಿದ್ದನ್ನು ನೆರವೇರಿಸಿದನು. ನಮ್ಮ ದುಷ್ಕೃತ್ಯಗಳಿಗಾಗಿ ನಮ್ಮನ್ನು ಶಿಕ್ಷಿಸಿದನು’ ಎಂದು ಹೇಳಿದರು ಮತ್ತು ದೇವರ ಕಡೆಗೆ ತಿರುಗಿದರು.”
ನಾಲ್ಕು ಕುದುರೆಗಳು
ಪರ್ಶಿಯದ ರಾಜನಾದ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ಹನ್ನೊಂದನೇ ತಿಂಗಳಿನ (ಶೆಬಾಟ್) ಇಪ್ಪತ್ತನಾಲ್ಕನೆಯ ದಿವಸ ಜೆಕರ್ಯನು ಯೆಹೋವನಿಂದ ಇನ್ನೊಂದು ಸಂದೇಶವನ್ನು ಪಡೆದನು. ಈತನು ಪ್ರವಾದಿಯಾದ ಇದ್ದೋವಿನ ಮಗನಾದ ಬೆರೆಕ್ಯನ ಮಗನು. ಆ ಸಂದೇಶವು ಹೀಗಿತ್ತು.
ರಾತ್ರಿವೇಳೆಯಲ್ಲಿ ಒಬ್ಬ ಮನುಷ್ಯನು ಕೆಂಪು ಬಣ್ಣದ ಕುದುರೆಯ ಮೇಲೆ ಸವಾರಿ ಮಾಡುವದನ್ನು ಕಂಡೆನು. ಅವನು ಕಣಿವೆಯ ಸುಗಂಧ ಮರಗಳ ಬಳಿ ನಿಂತಿದ್ದನು. ಅವನ ಹಿಂದೆ ಕೆಂಪು, ಕಂದು ಮತ್ತು ಬಿಳಿ ಕುದುರೆಗಳು ನಿಂತಿದ್ದವು. ಆಗ ನಾನು, “ಸ್ವಾಮೀ, ಈ ಕುದುರೆಗಳು ಯಾಕೆ?” ಎಂದು ವಿಚಾರಿಸಿದೆನು.
ಆಗ ನನ್ನೊಡನೆ ಮಾತಾಡುತ್ತಿದ್ದ ದೇವದೂತನು ಉತ್ತರಿಸುತ್ತಾ, “ಈ ಕುದುರೆಗಳು ಯಾತಕ್ಕಾಗಿ ಎಂದು ನಾನು ನಿನಗೆ ತೋರಿಸುತ್ತೇನೆ” ಅಂದನು.
10 ಆಗ ಸುಗಂಧ ಮರಗಳ ಬಳಿ ನಿಂತಿದ್ದ ಮನುಷ್ಯನು, “ಈ ಕುದುರೆಗಳು ಭೂಮಿಯ ಮೇಲೆ ಅತ್ತಿತ್ತ ತಿರುಗಾಡುವಂತೆ ಯೆಹೋವನು ಕಳುಹಿಸಿದನು” ಎಂದನು.
11 ಆಗ ಯೆಹೋವನ ದೂತನೊಂದಿಗೆ ಆ ಕುದುರೆಗಳು ಮಾತನಾಡುತ್ತಾ, “ನಾವು ಭೂಮಿಯ ಮೇಲೆ ಅತ್ತಿತ್ತ ಸಂಚರಿಸಿದೆವು. ಎಲ್ಲೆಲ್ಲಿಯೂ ಶಾಂತಿ ಸಮಾಧಾನವಿದೆ” ಎಂದವು.
12 ಆಗ ಯೆಹೋವನ ದೂತನು, “ಯೆಹೋವನೇ, ಜೆರುಸಲೇಮನ್ನೂ ಯೆಹೂದದ ಇತರ ನಗರಗಳನ್ನೂ ಸಂತೈಸಲು ಇನ್ನೆಷ್ಟು ಕಾಲಬೇಕು? ಈ ಪಟ್ಟಣಗಳ ಮೇಲೆ ಈಗಾಗಲೇ ಎಪ್ಪತ್ತು ವರ್ಷಗಳ ಕಾಲ ನಿನ್ನ ಕೋಪವನ್ನು ಪ್ರದರ್ಶಿಸಿರುವೆ” ಎಂದು ಹೇಳಿದನು.
13 ಆಗ ನನ್ನೊಡನೆ ಮಾತಾಡುತ್ತಿದ್ದ ದೇವದೂತನಿಗೆ ಯೆಹೋವನು ಉತ್ತರಿಸಿ ಅವನನ್ನು ಒಳ್ಳೆಯ ಆದರಣೆಯ ಮಾತುಗಳಿಂದ ಸಂತೈಸಿದನು.
14 ಆಗ ಆ ದೂತನು ಜನರಿಗೆ ತಿಳಿಸಲು ಈ ವಿಷಯವನ್ನು ನನಗೆ ಹೇಳಿದನು: ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ,
“ಜೆರುಸಲೇಮಿನ ಮೇಲೆಯೂ ಚೀಯೋನಿನ ಮೇಲೆಯೂ ನನಗೆ ಆಳವಾದ ಪ್ರೀತಿಯಿದೆ.
15 ತಾವು ಸುರಕ್ಷಿತರಾಗಿದ್ದೇವೆ ಎಂದು ನೆನಸುವ ಜನಾಂಗಗಳ ಮೇಲೆ ನಾನು ಕೋಪಗೊಳ್ಳುವೆನು.
ನಾನು ಸ್ವಲ್ಪ ಕೋಪಗೊಂಡಿದ್ದರಿಂದ
ನನ್ನ ಜನರನ್ನು ಶಿಕ್ಷಿಸಲು ಆ ಜನಾಂಗಗಳನ್ನು ಉಪಯೋಗಿಸಿಕೊಂಡೆನು.
ಆದರೆ ಆ ಜನಾಂಗಗಳು ಅತಿಯಾಗಿ ಅವರನ್ನು ಹಾನಿಮಾಡಿದರು.”
16 ಆದ್ದರಿಂದ ಯೆಹೋವನು ಹೀಗೆನ್ನುತ್ತಾನೆ: “ನಾನು ಜೆರುಸಲೇಮಿಗೆ ಹಿಂತಿರುಗಿ ಬರುವೆನು. ಬಂದು ಆಕೆಯನ್ನು ಸಂತೈಸುವೆನು.”
ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಜೆರುಸಲೇಮ್ ತಿರುಗಿ ಕಟ್ಟಲ್ಪಡುವದು ಮತ್ತು ನನ್ನ ಆಲಯವು ಅಲ್ಲಿ ಕಟ್ಟಲ್ಪಡುವದು.”
17 ಆಗ ದೂತನು: “ಈ ವಿಷಯವನ್ನು ಜನರಿಗೆ ತಿಳಿಸು, ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ:
‘ನನ್ನ ಪಟ್ಟಣಗಳು ತಿರುಗಿ ಐಶ್ವರ್ಯದಿಂದ ತುಂಬುವವು.
ಚೀಯೋನನ್ನು ನಾನು ಸಂತೈಸುವೆನು.
ನಾನು ಜೆರುಸಲೇಮನ್ನು ನನ್ನ ವಿಶೇಷ ನಗರವನ್ನಾಗಿ ಆರಿಸಿಕೊಳ್ಳುವೆನು’” ಎಂದನು.
ನಾಲ್ಕುಕೊಂಬುಗಳೂ ನಾಲ್ಕು ಕೆಲಸಗಾರರೂ
18 ಆಗ ನಾನು ಮೇಲೆ ನೋಡಿದಾಗ ನಾಲ್ಕು ಕೊಂಬುಗಳನ್ನು ಕಂಡೆನು. 19 “ಈ ಕೊಂಬುಗಳೇನು?” ಎಂದು ನಾನು ದೇವದೂತನೊಂದಿಗೆ ವಿಚಾರಿಸಿದೆನು.
ಅದಕ್ಕವನು, “ಇವು ಬಲಿಷ್ಠವಾದ ಕೊಂಬುಗಳು (ಬಲಿಷ್ಠವಾದ ಜನಾಂಗಗಳು); ಇಸ್ರೇಲ್, ಯೆಹೊದ ಮತ್ತು ಜೆರುಸಲೇಮಿನ ಜನರನ್ನು ಪರದೇಶಗಳಿಗೆ ಚದರಿಹೋಗುವಂತೆ ಮಾಡಿವೆ” ಅಂದನು.
20 ಯೆಹೋವನು ನನಗೆ ನಾಲ್ಕು ಮಂದಿ ಕೆಲಸಗಾರರನ್ನು ತೋರಿಸಿದನು. 21 “ಯಾವ ಕೆಲಸಕ್ಕಾಗಿ ಈ ಕೆಲಸಗಾರರು ಬರುತ್ತಿದ್ದಾರೆ?” ಎಂದು ನಾನು ವಿಚಾರಿಸಿದೆನು.
ಅದಕ್ಕಾತನು, “ಯೆಹೂದದ ಜನರನ್ನು ವಿದೇಶಗಳಲ್ಲಿ ಚದರಿ ಹೋಗುವಂತೆ ಮಾಡಿದ ಜನಾಂಗಗಳನ್ನು ಈ ಕೊಂಬುಗಳು ಸೂಚಿಸುತ್ತವೆ. ಈ ಕೊಂಬುಗಳು ಯೆಹೂದದ ಜನರನ್ನು ಎತ್ತಿ ಪರದೇಶಗಳಿಗೆ ಬಿಸಾಡಿದವು. ಈ ಕೊಂಬುಗಳು ಯಾರಿಗೂ ದಯೆ ತೋರಿಸಲಿಲ್ಲ. ಆದರೆ ಈ ನಾಲ್ಕು ಮಂದಿ ಕೆಲಸಗಾರರು ಆ ಕೊಂಬುಗಳಿಗೆ ಭಯಪಡಿಸಿ ಅವುಗಳನ್ನು ಎತ್ತಿ ಬಿಸಾಡಲು ಬಂದಿದ್ದಾರೆ” ಎಂದು ಹೇಳಿದನು.