ದಾವೀದನು ಯುದ್ಧಕ್ಕೆ ಸಿದ್ಧನಾಗುವನು
18
1 ದಾವೀದನು ತನ್ನ ಜನರನ್ನು ಲೆಕ್ಕಮಾಡಿದನು. ಅವನು ಸಹಸ್ರಾಧಿಪತಿಗಳನ್ನು ಮತ್ತು ಶತಾಧಿಪತಿಗಳನ್ನು ನೇಮಿಸಿದನು.
2 ದಾವೀದನು ತನ್ನ ಜನರನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಅವರನ್ನು ಹೊರಗೆ ಕಳುಹಿಸಿದನು. ಯೋವಾಬನು ಮೊದಲನೆ ಗುಂಪನ್ನು, ಅಬೀಷೈ ಎರಡನೆ ಗುಂಪನ್ನು, ಗತ್‌ನ ಇತ್ತೈಯನು ಮೂರನೆ ಗುಂಪನ್ನು ನಡೆಸಿದರು.
ರಾಜನಾದ ದಾವೀದನು, “ನಾನೂ ನಿಮ್ಮ ಜೊತೆಯಲ್ಲಿ ಬರುತ್ತೇನೆ” ಎಂದು ಅವರಿಗೆ ಹೇಳಿದನು.
3 ಆದರೆ ಅವರು, “ಬೇಡ, ನೀನು ನಮ್ಮ ಜೊತೆ ಬರುವುದು ಬೇಡ. ಏಕೆಂದರೆ ನಾವು ಯುದ್ಧರಂಗದಿಂದ ಓಡಿಹೋಗಿಬಿಟ್ಟರೆ, ಅಬ್ಷಾಲೋಮನ ಜನರು ಲಕ್ಷಿಸುವುದಿಲ್ಲ. ನಮ್ಮಲ್ಲಿ ಅರ್ಧದಷ್ಟು ಜನರು ಸತ್ತರೂ, ಅಬ್ಷಾಲೋಮನ ಜನರು ಲಕ್ಷಿಸುವುದಿಲ್ಲ. ಆದರೆ ನೀನು ನಮ್ಮ ಹತ್ತು ಸಾವಿರ ಜನರಷ್ಟು ಬೆಲೆಯುಳ್ಳವನಾಗಿರುವೆ! ನೀನು ನಗರದಲ್ಲಿರುವುದೇ ಉತ್ತಮ. ಅಲ್ಲಿಂದಲೇ ನೀನು ನಮಗೆ ಸಹಾಯ ಮಾಡಬಹುದು” ಎಂದು ಹೇಳಿದರು.
4 ರಾಜನು ತನ್ನ ಜನರಿಗೆ, “ನೀವು ಉತ್ತಮವೆಂದು ಯೋಚಿಸಿದ ಕಾರ್ಯವನ್ನು ನಾನು ಮಾಡುತ್ತೇನೆ” ಎಂದು ಹೇಳಿದನು.
ಆಗ ರಾಜನು ಊರಬಾಗಿಲಿನ ಪಕ್ಕದಲ್ಲಿ ನಿಂತುಕೊಂಡನು. ಸೈನ್ಯವು ಹೊರಗೆ ಹೋಯಿತು. ಅವರು ನೂರು ಮತ್ತು ಒಂದು ಸಾವಿರ ಮಂದಿಯ ಗುಂಪುಗಳಾಗಿ ಹೋದರು.
“ಯುವಕನಾದ ಅಬ್ಷಾಲೋಮನಿಗೆ ಕರುಣೆ ತೋರಿಸಿರಿ!”
5 ರಾಜನು ಯೋವಾಬನಿಗೆ, ಅಬೀಷೈಯನಿಗೆ ಮತ್ತು ಇತ್ತೈಯನಿಗೆ, “ನೀವು ನನಗೋಸ್ಕರವಾಗಿ ಯುವಕನಾದ ಅಬ್ಷಾಲೋಮನಿಗೆ ಕರುಣೆ ತೋರಿಸಿ!” ಎಂದು ಆಜ್ಞಾಪಿಸಿದನು. ಅಬ್ಷಾಲೋಮನ ಬಗ್ಗೆ ತನ್ನ ಸೇನಾಪತಿಗಳಿಗೆ ರಾಜನು ನೀಡಿದ ಆಜ್ಞೆಯು ಜನರೆಲ್ಲರಿಗೂ ಕೇಳಿಸಿತು.
ದಾವೀದನ ಸೈನ್ಯವು ಅಬ್ಷಾಲೋಮನ ಸೈನ್ಯವನ್ನು ಸೋಲಿಸಿತು
6 ದಾವೀದನ ಸೈನ್ಯವು ಇಸ್ರೇಲರಾದ ಅಬ್ಷಾಲೋಮನ ವಿರುದ್ಧ ಎಫ್ರಾಯೀಮ್ ಕಾಡಿನಲ್ಲಿ ಯುದ್ಧಮಾಡಿತು.
7 ದಾವೀದನ ಸೈನ್ಯವು ಇಸ್ರೇಲರನ್ನು ಸೋಲಿಸಿತು. ಅಂದು ಇಪ್ಪತ್ತು ಸಾವಿರ ಜನರು ಕೊಲ್ಲಲ್ಪಟ್ಟರು.
8 ಯುದ್ಧವು ದೇಶವನ್ನೆಲ್ಲ ವ್ಯಾಪಿಸಿತು. ಆದರೆ ಅಂದು ಕತ್ತಿಯಿಂದ ಸತ್ತ ಜನರಿಗಿಂತ ಹೆಚ್ಚು ಜನರು ಕಾಡಿನಲ್ಲಿ ಸತ್ತರು.
9 ಅಬ್ಷಾಲೋಮನು ದಾವೀದನ ಸೈನಿಕರ ಕೈಗೆ ಸಿಕ್ಕಿಕೊಂಡನು. ಅವನು ಹೇಸರಕತ್ತೆಯ ಮೇಲೆ ಸವಾರಿ ಮಾಡುತ್ತಾ ತಪ್ಪಿಸಿಕೊಳ್ಳಲು ಹೋದನು. ಆ ಹೇಸರಕತ್ತೆಯು ದೊಡ್ಡ ಓಕ್ ಮರದ ರೆಂಬೆಗಳ ಕೆಳಗೆ ಓಡುತ್ತಾ ಹೋಯಿತು. ಆ ರೆಂಬೆಗಳು ದಟ್ಟವಾಗಿದ್ದುದರಿಂದ ಅಬ್ಷಾಲೋಮನ ತಲೆಯು ಮರದಲ್ಲಿ ಸಿಕ್ಕಿಹಾಕಿಕೊಂಡಿತು. ಅವನು ಕುಳಿತುಕೊಂಡಿದ್ದ ಹೇಸರಕತ್ತೆಯು ಓಡಿಹೋದುದರಿಂದ ಅಬ್ಷಾಲೋಮನು ಮರದಲ್ಲಿ ನೇತಾಡುವವನಾದನು.
10 ಇದನ್ನು ಕಂಡ ಒಬ್ಬನು ಯೋವಾಬನ ಬಳಿಗೆ ಹೋಗಿ, “ಅಬ್ಷಾಲೋಮನು ಒಂದು ಓಕ್ ಮರದಲ್ಲಿ ನೇತಾಡುತ್ತಿದ್ದುದನ್ನು ನಾನು ನೋಡಿದೆ” ಎಂದು ತಿಳಿಸಿದನು.
11 ಯೋವಾಬನು ಆ ಮನುಷ್ಯನಿಗೆ, “ನೀನು ಅವನನ್ನು ಕೊಂದು ನೆಲಕ್ಕುರುಳಿಸಲಿಲ್ಲವೇಕೆ? ನಾನು ನಿನಗೆ ಒಂದು ಸೊಂಟಪಟ್ಟಿಯನ್ನು ಮತ್ತು ಹತ್ತು ಬೆಳ್ಳಿರೂಪಾಯಿಗಳನ್ನು ಕೊಡುತ್ತಿದ್ದೆನಲ್ಲ!” ಎಂದನು.
12 ಆ ಮನುಷ್ಯನು ಯೋವಾಬನಿಗೆ, “ನೀನು ಒಂದು ಸಾವಿರ ಬೆಳ್ಳಿನಾಣ್ಯಗಳನ್ನು ಕೊಟ್ಟಿದ್ದರೂ ನಾನು ರಾಜನ ಮಗನನ್ನು ಕೊಲ್ಲಲು ಪ್ರಯತ್ನಿಸುತ್ತಿರಲಿಲ್ಲ. ಏಕೆಂದರೆ ನಿನಗೆ, ಅಬೀಷೈಯನಿಗೆ ಮತ್ತು ಇತ್ತೈಯನಿಗೆ ರಾಜನು ನೀಡಿದ್ದ ಆಜ್ಞೆಯನ್ನು ನಾವು ಕೇಳಿದ್ದೇವೆ. ‘ಎಚ್ಚರದಿಂದಿರಿ, ಯುವಕನಾದ ಅಬ್ಷಾಲೋಮನಿಗೆ ಕೇಡುಮಾಡದಿರಿ’ ಎಂದು ರಾಜನು ಹೇಳಿದ್ದಾನೆ.
13 ನಾನು ಅಬ್ಷಾಲೋಮನನ್ನು ಕೊಂದಿದ್ದರೆ ಸ್ವತಃ ರಾಜನೇ ಕಂಡು ಹಿಡಿಯುತ್ತಿದ್ದನು. ನೀನೇ ನನ್ನನ್ನು ದಂಡಿಸುತ್ತಿದ್ದೆ” ಎಂದು ಹೇಳಿದನು.
14 ಯೋವಾಬನು, “ನಿನ್ನೊಂದಿಗೆ ನಾನಿಲ್ಲಿ ನನ್ನ ಕಾಲವನ್ನು ವ್ಯರ್ಥಮಾಡುವುದಿಲ್ಲ” ಎಂದನು.
ಅಬ್ಷಾಲೋಮನು ಓಕ್ ಮರದಲ್ಲಿ ನೇತಾಡುತ್ತಾ ಇನ್ನೂ ಜೀವಂತವಾಗಿದ್ದನು. ಯೋವಾಬನು ಮೂರು ಬರ್ಜಿಗಳನ್ನು ತೆಗೆದುಕೊಂಡು ಅಬ್ಷಾಲೋಮನತ್ತ ಎಸೆದನು. ಬರ್ಜಿಗಳು ಅಬ್ಷಾಲೋಮನ ಹೃದಯವನ್ನು ಛೇದಿಸಿಕೊಂಡು ಹೋದವು.
15 ಯೋವಾಬನೊಂದಿಗೆ ಹತ್ತು ಮಂದಿ ಯುವಕರು ಅವನಿಗೆ ಯುದ್ಧದಲ್ಲಿ ಸಹಾಯ ಮಾಡಿದರು. ಈ ಹತ್ತು ಜನರೂ ಅಬ್ಷಾಲೋಮನನ್ನು ಸುತ್ತುವರಿದು ಅವನನ್ನು ಕೊಂದರು.
16 ಯೋವಾಬನು ಕಹಳೆಯನ್ನು ಊದಿ, ಅಬ್ಷಾಲೋಮನ ಕಡೆಯವರಾದ ಇಸ್ರೇಲರನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ಜನರನ್ನು ನಿಲ್ಲಿಸಿದನು.
17 ನಂತರ ಯೋವಾಬನ ಜನರು ಅಬ್ಷಾಲೋಮನ ದೇಹವನ್ನು ತೆಗೆದುಕೊಂಡು ಹೋಗಿ, ಕಾಡಿನ ಒಂದು ದೊಡ್ಡ ಕುಣಿಯಲ್ಲಿ ಎಸೆದರು. ಅವರು ಆ ದೊಡ್ಡ ಕುಣಿಯನ್ನು ಕಲ್ಲುಗಳಿಂದ ತುಂಬಿಸಿದರು.
ಅಬ್ಷಾಲೋಮನನ್ನು ಹಿಂಬಾಲಿಸಿಕೊಂಡು ಬಂದಿದ್ದ ಇಸ್ರೇಲರೆಲ್ಲ ಮನೆಗೆ ಓಡಿಹೋದರು.
18 ಅಬ್ಷಾಲೋಮನು ಬದುಕಿದ್ದಾಗ, ರಾಜನ ಕಣಿವೆಯಲ್ಲಿ ಒಂದು ಸ್ತಂಭವನ್ನು ನೆಡಿಸಿದ್ದನು. ಅಬ್ಷಾಲೋಮನು, “ನನ್ನ ಹೆಸರನ್ನು ಜೀವಂತವಾಗಿರಿಸಲು ನನಗೆ ಗಂಡುಮಕ್ಕಳಿಲ್ಲ” ಎಂದು ಹೇಳಿ ಆ ಸ್ತಂಭಕ್ಕೆ ತನ್ನ ಹೆಸರನ್ನೇ ಕೊಟ್ಟಿದ್ದನು. ಆ ಸ್ತಂಭವನ್ನು “ಅಬ್ಷಾಲೋಮನ ಸ್ಮಾರಕಸ್ತಂಭ” ಎಂದು ಇಂದಿಗೂ ಕರೆಯುತ್ತಾರೆ.
ಯೋವಾಬನು ದಾವೀದನಿಗೆ ವರ್ತಮಾನವನ್ನು ಕಳುಹಿಸಿದನು
19 ಚಾದೋಕನ ಮಗನಾದ ಅಹೀಮಾಚನು ಯೋವಾಬನಿಗೆ, “ಈಗ ಓಡುತ್ತಾಹೋಗಿ ರಾಜನಾದ ದಾವೀದನಿಗೆ ಈ ವರ್ತಮಾನವನ್ನು ತಿಳಿಸುತ್ತೇನೆ. ಯೆಹೋವನು ನಿನ್ನ ಶತ್ರುವನ್ನು ನಾಶಮಾಡಿದನೆಂದು ನಾನು ಅವನಿಗೆ ಹೇಳುತ್ತೇನೆ” ಎಂದನು.
20 ಯೋವಾಬನು ಅಹೀಮಾಚನಿಗೆ, “ಇಲ್ಲ, ದಾವೀದನಿಗೆ ಇಂದು ನೀನು ಈ ವರ್ತಮಾನವನ್ನು ತಿಳಿಸುವಂತಿಲ್ಲ. ನೀನು ಬೇರೊಂದು ದಿನದಲ್ಲಿ ವರ್ತಮಾನವನ್ನು ತಿಳಿಸಬಹುದು, ಏಕೆಂದರೆ ಇಂದು ರಾಜನ ಮಗನು ಸತ್ತಿದ್ದಾನೆ” ಎಂದು ಉತ್ತರಿಸಿದನು.
21 ಆಗ ಯೋವಾಬನು ಇಥಿಯೋಪ್ಯನಾದ ಒಬ್ಬನಿಗೆ, “ಹೋಗು, ನೀನು ನೋಡಿದ ಸಂಗತಿಗಳನ್ನು ರಾಜನಿಗೆ ತಿಳಿಸು” ಎಂದು ಹೇಳಿದನು.
ಇಥಿಯೋಪ್ಯನು ಯೋವಾಬನಿಗೆ ಸಾಷ್ಟಾಂಗನಮಸ್ಕಾರಮಾಡಿ ದಾವೀದನಿಗೆ ಹೇಳಲು ಓಡಿಹೋದನು.
22 ಆದರೆ ಚಾದೋಕನ ಮಗನಾದ ಅಹೀಮಾಚನು ಯೋವಾಬನನ್ನು ಮತ್ತೆ ಬೇಡುತ್ತಾ, “ಏನು ಸಂಭವಿಸುತ್ತದೆಯೊ ಸಂಭವಿಸಲಿ, ಇಥಿಯೋಪ್ಯದವನ ಹಿಂದೆ ಓಡಿಹೋಗಲು ನನಗೆ ಅವಕಾಶಕೊಡು!” ಎಂದನು.
ಯೋವಾಬನು, “ಮಗನೇ, ಈ ವರ್ತಮಾನವನ್ನು ತೆಗೆದುಕೊಂಡು ಹೋಗಲು ನೀನು ಏಕೆ ಇಚ್ಛಿಸುವೆ? ನೀನು ತೆಗೆದುಕೊಂಡು ಹೋಗುವ ವರ್ತಮಾನಕ್ಕೆ ನಿನಗೆ ಯಾವ ಬಹುಮಾನವೂ ಸಿಕ್ಕುವುದಿಲ್ಲ” ಎಂದನು.
23 ಅಹೀಮಾಚನು, “ಏನಾದರೂ ಆಗಲಿ, ನಾನು ಓಡಿಹೋಗುತ್ತೇನೆ” ಎಂದು ಉತ್ತರಿಸಿದನು.
“ಓಡು” ಎಂದು ಯೋವಾಬನು ಅಹೀಮಾಚನಿಗೆ ಹೇಳಿದನು.
ಆಗ ಅಹೀಮಾಚನು ಜೋರ್ಡನ್ ಕಣಿವೆಯ ಮೂಲಕ ಓಡಿಹೋದನು. ಅವನು ಇಥಿಯೋಪ್ಯದವನಿಗಿಂತ ಮೊದಲೇ ಹೋದನು.
ದಾವೀದನು ಸುದ್ದಿಯನ್ನು ಕೇಳಿದ್ದು
24 ದಾವೀದನು ನಗರದ ಎರಡು ಬಾಗಿಲುಗಳ ನಡುವೆ ಕುಳಿತಿದ್ದನು. ಕಾವಲುಗಾರನು ಊರಬಾಗಿಲುಗಳ ಮಾಳಿಗೆಯ ಮೇಲಕ್ಕೆ ಹೋದನು. ಕಾವಲುಗಾರನು ದೃಷ್ಟಿಸಿ ನೋಡಿದಾಗ, ಒಬ್ಬ ಮನುಷ್ಯನು ಒಬ್ಬಂಟಿಗನಾಗಿ ಓಡಿಬರುತ್ತಿರುವುದನ್ನು ನೋಡಿದನು.
25 ರಾಜನಿಗೆ ಹೇಳುವುದಕ್ಕಾಗಿ ಕಾವಲುಗಾರನು ಜೋರಾಗಿ ಕೂಗಿದನು.
ರಾಜನಾದ ದಾವೀದನು, “ಆ ಮನುಷ್ಯನು ಒಬ್ಬಂಟಿಗನಾಗಿದ್ದರೆ ಅವನು ಸುದ್ದಿಯನ್ನು ತರುತ್ತಿದ್ದಾನೆ” ಎಂದನು.
ಆ ಮನುಷ್ಯನು ಓಡುತ್ತಾ ನಗರದ ಹತ್ತಿರಕ್ಕೆ ಬಂದನು.
26 ಅವನ ಹಿಂದೆ ಇನ್ನೊಬ್ಬ ಮನುಷ್ಯನು ಓಡಿಬರುತ್ತಿರುವುದನ್ನು ಕಾವಲುಗಾರನು ನೋಡಿದನು. ಕಾವಲುಗಾರನು ದ್ವಾರಪಾಲಕನನ್ನು ಕರೆದು, “ನೋಡು! ಇನ್ನೊಬ್ಬ ಮನುಷ್ಯನು ಒಬ್ಬಂಟಿಗನಾಗಿ ಓಡುತ್ತಾ ಬರುತ್ತಿದ್ದಾನೆ” ಎಂದನು.
ರಾಜನು, “ಅವನು ಸಹ ಸುದ್ದಿಯನ್ನು ತರುತ್ತಿದ್ದಾನೆ” ಎಂದನು.
27 ಕಾವಲುಗಾರನು, “ಮೊದಲನೆಯ ಮನುಷ್ಯನು ಓಡುತ್ತಿರುವುದು ಚಾದೋಕನ ಮಗನಾದ ಅಹೀಮಾಚನಂತಿದೆಯೆಂದು ನನ್ನ ಭಾವನೆ” ಎಂದು ಹೇಳಿದನು.
ರಾಜನು, “ಅಹೀಮಾಚನು ಒಳ್ಳೆಯ ಮನುಷ್ಯ. ಅವನು ಶುಭಸಮಾಚಾರವನ್ನು ತರುತ್ತಿರಬೇಕು” ಎಂದನು.
28 ಅಹೀಮಾಚನು ರಾಜನ ಬಳಿಗೆ ಬಂದು, “ಎಲ್ಲವೂ ಶುಭಕರವಾಗಿದೆ” ಎಂದು ಹೇಳಿ ರಾಜನಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. ಅಹೀಮಾಚನು, “ನಿನ್ನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ! ರಾಜನಾದ ಒಡೆಯನೇ, ನಿನ್ನ ವಿರುದ್ಧವಾಗಿದ್ದ ಜನರನ್ನು ಯೆಹೋವನು ಸೋಲಿಸಿದ್ದಾನೆ” ಎಂದು ಹೇಳಿದನು.
29 ರಾಜನು, “ಯುವಕನಾದ ಅಬ್ಷಾಲೋಮನು ಕ್ಷೇಮವಾಗಿರುವನೇ?” ಎಂದು ಕೇಳಿದನು.
ಅಹೀಮಾಚನು, “ಯೋವಾಬನು ನನ್ನನ್ನು ಕಳುಹಿಸಿದಾಗ, ನಾನು ಒಂದು ದೊಡ್ಡ ಕೋಲಾಹಲವನ್ನು ನೋಡಿದೆನು. ಆದರೆ ಅದು ಏನೆಂದು ನನಗೆ ಗೊತ್ತಿಲ್ಲ” ಎಂದು ಉತ್ತರಿಸಿದನು.
30 ಆಗ ರಾಜನು, “ಅತ್ತ ಸರಿದು ನಿಲ್ಲು” ಎಂದನು. ಅಹೀಮಾಚನು ಸರಿದು ನಿಂತುಕೊಂಡನು.
31 ಇಥಿಯೋಪ್ಯದವನು ಬಂದನು. ಅವನು, “ನನ್ನ ರಾಜನಾದ ಪ್ರಭುವಿಗೆ ಸುದ್ದಿಯಿದೆ, ನಿನ್ನ ವಿರುದ್ಧವಾಗಿದ್ದ ಜನರನ್ನು ಇಂದು ಯೆಹೋವನು ದಂಡಿಸಿದನು!” ಎಂದು ಹೇಳಿದನು.
32 ರಾಜನು ಅವನಿಗೆ, “ಯುವಕನಾದ ಅಬ್ಷಾಲೋಮನು ಕ್ಷೇಮವಾಗಿರುವನೇ?” ಎಂದು ಕೇಳಿದನು.
ಇಥಿಯೋಪ್ಯದವನು, “ನಿನ್ನ ಶತ್ರುಗಳು ಮತ್ತು ನಿನಗೆ ಕೇಡುಮಾಡಲು ನಿನಗೆ ವಿರುದ್ಧವಾಗಿ ಬಂದ ಜನರೆಲ್ಲರು ಈ ಯುವಕನಂತೆಯೇ ದಂಡಿಸಲ್ಪಡುವರು” ಎಂದು ಉತ್ತರಿಸಿದನು.
33 ಅಬ್ಷಾಲೋಮನು ಸತ್ತಿದ್ದಾನೆಂಬುದು ಆಗ ರಾಜನಿಗೆ ತಿಳಿಯಿತು. ರಾಜನು ಬಹಳ ತಳಮಳಗೊಂಡನು. ಅವನು ನಗರ ದ್ವಾರದಲ್ಲಿದ್ದ ಕೊಠಡಿಗೆ ಹೋಗಿ ಅಲ್ಲಿ ಗೋಳಾಡಿದನು. ಬಳಿಕ ಅಲ್ಲಿಂದ ತನ್ನ ಕೊಠಡಿಗೆ ಹೋಗುತ್ತಾ, “ನನ್ನ ಮಗನೇ, ಅಬ್ಷಾಲೋಮನೇ, ನನ್ನ ಮಗನಾದ ಅಬ್ಷಾಲೋಮನೇ! ನಿನಗೆ ಬದಲಾಗಿ ನಾನು ಸತ್ತಿದ್ದರೆ ಚೆನ್ನಾಗಿತ್ತು. ನನ್ನ ಮಗನಾದ ಅಬ್ಷಾಲೋಮನೇ, ನನ್ನ ಮಗನೇ!” ಎಂದು ಗೋಳಾಡಿದನು.