ಕಣ
3
ರೂತಳ ಅತ್ತೆಯಾದ ನೊವೊಮಿಯು ಅವಳಿಗೆ, “ನನ್ನ ಮಗಳೇ, ನೀನು ಮದುವೆಮಾಡಿಕೊಂಡು ಕುಟುಂಬಸ್ತಳಾಗಿರುವುದು ಎಷ್ಟೋ ಒಳ್ಳೆಯದು. ಬೋವಜನು ನಮ್ಮ ಸಂಬಂಧಿಕನಾಗಿದ್ದಾನೆ. ನೀನು ಅವನ ಹೆಣ್ಣಾಳುಗಳ ಜೊತೆಯಲ್ಲಿದ್ದುಕೊಂಡು ಹಕ್ಕಲಾಯ್ದಿರುವೆ. ಇಂದು ರಾತ್ರಿ ಅವನು ಕಣದಲ್ಲಿ ಜವೆಗೋಧಿಯನ್ನು ತೂರುವನು. ನೀನು ಸ್ನಾನ ಮಾಡಿ ಶೃಂಗರಿಸಿಕೊಂಡು ಶ್ರೇಷ್ಠವಾದ ಉಡುಪುಗಳನ್ನು ಧರಿಸಿಕೊಂಡು ಕಣಕ್ಕೆ ಹೋಗು. ಆದರೆ ಅವನು ಅನ್ನಪಾನಗಳನ್ನು ತೆಗೆದುಕೊಳ್ಳುವವರೆಗೆ ಅವನಿಗೆ ಮರೆಯಾಗಿರು. ಊಟವಾದ ಮೇಲೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕಾಗಿ ಅವನು ಮಲಗುತ್ತಾನೆ. ಅವನು ಎಲ್ಲಿ ಮಲಗುತ್ತಾನೆಂಬುದನ್ನು ನೋಡಿಕೊಂಡಿದ್ದು ಅಲ್ಲಿಗೆ ಹೋಗಿ ಅವನ ಪಾದಗಳ ಮೇಲಿನ ಹೊದಿಕೆಯನ್ನು ತೆಗೆದು ಅಲ್ಲಿಯೇ ಮಲಗಿಕೋ. ನೀನು ಮಾಡತಕ್ಕದ್ದನ್ನು ಅವನು ನಿನಗೆ ತಿಳಿಸುತ್ತಾನೆ” ಎಂದಳು.
ಆಗ ರೂತಳು, “ನೀನು ಹೇಳಿದಂತೆಯೇ ಮಾಡುತ್ತೇನೆ” ಎಂದು ಉತ್ತರಕೊಟ್ಟಳು.
ರೂತಳು ಕಣಕ್ಕೆ ಹೋದಳು. ಅತ್ತೆಯು ಹೇಳಿದಂತೆಯೇ ರೂತಳು ಮಾಡಿದಳು. ಅನ್ನಪಾನಗಳನ್ನು ತೆಗೆದುಕೊಂಡು ಸಂತೃಪ್ತನಾಗಿದ್ದ ಬೋವಜನು ಧಾನ್ಯದ ರಾಶಿಯ ಹತ್ತಿರ ಮಲಗಲು ಹೋದನು. ಆಗ ರೂತಳು ರಹಸ್ಯವಾಗಿ ಬಂದು ಅವನ ಪಾದಗಳ ಮೇಲಿನ ಹೊದಿಕೆಯನ್ನು ತೆಗೆದು ಅವನ ಪಾದಗಳ ಬಳಿಯಲ್ಲಿಯೇ ಮಲಗಿದಳು.
ಮಧ್ಯರಾತ್ರಿಯ ಸುಮಾರಿನಲ್ಲಿ ಬೋವಜನು ನಿದ್ರೆಯಲ್ಲಿ ಹೊರಳಾಡಿ ಎಚ್ಚೆತ್ತನು. ಒಬ್ಬ ಸ್ತ್ರೀಯು ತನ್ನ ಪಾದಗಳ ಬಳಿಯಲ್ಲಿ ಮಲಗಿರುವುದನ್ನು ಕಂಡು ಅವನಿಗೆ ಬಹಳ ಆಶ್ಚರ್ಯವಾಯಿತು. “ನೀನು ಯಾರು?” ಎಂದು ಬೋವಜನು ಕೇಳಿದನು.
“ನಾನು ನಿಮ್ಮ ದಾಸಿಯಾದ ರೂತಳು. ನೀನು ನನ್ನ ಸಂರಕ್ಷಕ. ನಿನ್ನ ಹೊದಿಕೆಯನ್ನು ನನ್ನ ಮೇಲೆ ಹಾಕು” ಎಂದು ಅವಳು ಬೇಡಿಕೊಂಡಳು.
10 ಆಗ ಬೋವಜನು, “ಯುವತಿಯೇ, ಯೆಹೋವನು ನಿನಗೆ ದಯೆತೋರಲಿ. ನೀನು ನನ್ನ ಮೇಲೆ ತುಂಬಾ ಕರುಣೆಯನ್ನು ತೋರಿರುವೆ. ನೀನು ಮೊದಲು ನೊವೊಮಿಗೆ ತೋರಿದ ಕರುಣೆಗಿಂತಲೂ ಹೆಚ್ಚಿನ ಕರುಣೆಯನ್ನು ನನಗೆ ತೋರಿರುವೆ. ನೀನು ಒಬ್ಬ ತರುಣನನ್ನು ಅವನು ಬಡವನಾಗಿರಲಿ ಅಥವಾ ಶ್ರೀಮಂತನಾಗಿರಲಿ ಮದುವೆಗಾಗಿ ಆರಿಸಿಕೊಳ್ಳಬಹುದಾಗಿತ್ತು. ಆದರೆ ನೀನು ಹಾಗೆ ಮಾಡಲಿಲ್ಲ. 11 ತರುಣಿಯೇ, ಹೆದರಬೇಡ, ನಿನ್ನ ಇಚ್ಛೆಯನ್ನು ನೆರವೇರಿಸುತ್ತೇನೆ. ನೀನು ಒಳ್ಳೆಯ ಸ್ತ್ರೀ ಎಂಬುದನ್ನು ನಮ್ಮ ಪಟ್ಟಣದ ಎಲ್ಲರೂ ಬಲ್ಲರು. 12 ನಾನು ಹತ್ತಿರದ ಸಂಬಂಧಿ ಎಂಬುದು ನಿಜ. ಆದರೆ ನನಗಿಂತಲೂ ಹತ್ತಿರದ ಸಂಬಂಧಿ ಇನ್ನೊಬ್ಬನಿದ್ದಾನೆ. 13 ಈ ರಾತ್ರಿ ಇಲ್ಲಿಯೇ ಇರು. ಆ ಮನುಷ್ಯನು ನಿನಗೆ ಸಹಾಯ ಮಾಡುವನೋ ಎಂಬುದನ್ನು ನಾಳೆ ಬೆಳಿಗ್ಗೆ ನೋಡೋಣ. ಅವನು ನಿನಗೆ ಸಹಾಯ ಮಾಡಲು ಒಪ್ಪಿದರೆ ಒಳ್ಳೆಯದು. ಅವನು ನಿನಗೆ ಸಹಾಯ ಮಾಡಲು ಒಪ್ಪದಿದ್ದರೆ ನಾನು ನಿನ್ನನ್ನು ಮದುವೆಯಾಗುತ್ತೇನೆ. ಅಲ್ಲದೆ ಎಲೀಮೆಲೆಕನ ಭೂಮಿಯನ್ನು ನಿನಗೋಸ್ಕರ ಕೊಂಡುಕೊಳ್ಳುತ್ತೇನೆಂದು ಯೆಹೋವನ ಆಣೆಯಾಗಿ ಹೇಳುತ್ತೇನೆ. ಬೆಳಗಾಗುವವರೆಗೆ ಇಲ್ಲಿ ಮಲಗಿರು” ಎಂದು ಹೇಳಿದನು.
14 ರೂತಳು ಬೆಳಗಿನ ಜಾವದವರೆಗೂ ಬೋವಜನ ಪಾದಗಳ ಬಳಿಯಲ್ಲಿಯೇ ಮಲಗಿದ್ದು ಇನ್ನೂ ಕತ್ತಲಿರುವಾಗಲೇ ಎದ್ದಳು.
ಬೋವಜನು ಅವಳಿಗೆ, “ನೀನು ನಿನ್ನೆ ರಾತ್ರಿ ನನ್ನಲ್ಲಿಗೆ ಬಂದಿದ್ದೆ ಎಂಬ ಸಂಗತಿಯು ರಹಸ್ಯವಾಗಿರಲಿ” ಎಂದು ಹೇಳಿದನು. 15 ಬೋವಜನು, “ನಿನ್ನ ಹೊದಿಕೆಯನ್ನು ಇಲ್ಲಿ ತೆಗೆದುಕೊಂಡು ಬಾ. ಅದನ್ನು ಸ್ವಲ್ಪ ಅಗಲಮಾಡಿ ಹಿಡಿದುಕೋ” ಎಂದನು.
ರೂತಳು ತನ್ನ ಹೊದಿಕೆಯನ್ನು ಅಗಲಮಾಡಿ ಹಿಡಿದಳು. ಬೋವಜನು ಆರು ಸೇರಿನಷ್ಟು ಜವೆಗೋಧಿಯನ್ನು ಅದರಲ್ಲಿ ಸುರಿದು ಚೆನ್ನಾಗಿ ಕಟ್ಟಿ ಅವಳ ಮೇಲೆ ಹೊರಿಸಿದನು. ಬಳಿಕ ಆಕೆ ಊರೊಳಗೆ ಹೋದಳು.
16 ರೂತಳು ತನ್ನ ಅತ್ತೆಯಾದ ನೊವೊಮಿಯ ಮನೆಗೆ ಬಂದಳು. ನೊವೊಮಿಯು ಆಕೆಗೆ, “ನನ್ನ ಮಗಳೇ, ನಿನ್ನ ಕಾರ್ಯವೇನಾಯಿತು?” ಎಂದು ಕೇಳಿದಳು.
ರೂತಳು ನಡೆದ ಸಂಗತಿಯನ್ನೂ ಬೋವಜನು ತನಗೆ ಹೇಳಿದ್ದನ್ನೂ ಅತ್ತೆಗೆ ತಿಳಿಸಿದಳು. 17 ಅಲ್ಲದೆ “ನೀನು ಅತ್ತೆಯ ಬಳಿಗೆ ಬರಿಗೈಲಿ ಹೋಗಬಾರದೆಂದು ಆರು ಸೇರು ಜವೆಗೋಧಿಯನ್ನು ಕೊಟ್ಟನು” ಎಂದು ಹೇಳಿದಳು.
18 ನೊವೊಮಿಯು, “ನನ್ನ ಮಗಳೇ, ಈ ಕಾರ್ಯದ ಫಲಿತಾಂಶ ಗೊತ್ತಾಗುವವರೆಗೆ ತಾಳ್ಮೆಯಿಂದಿರು. ಈ ಹೊತ್ತು ಅದನ್ನು ಇತ್ಯರ್ಥಪಡಿಸುವವರೆಗೆ ಅವನಿಗೆ ಸಮಾಧಾನವಿರಲಾರದು” ಎಂದು ಹೇಳಿದಳು.