ಯೆಹೂದದ ಅರಸನಾದ ಮನಸ್ಸೆ
33
1 ಮನಸ್ಸೆಯು ಪಟ್ಟಕ್ಕೆ ಬಂದಾಗ ಹನ್ನೆರಡು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ರಾಜನಾಗಿ ಐವತ್ತೈದು ವರ್ಷ ರಾಜ್ಯಭಾರ ಮಾಡಿದನು.
2 ಯೆಹೋವನು ದುಷ್ಟತನವೆಂದು ಪರಿಗಣಿಸಿದ್ದನ್ನೇ ಮನಸ್ಸೆ ಮಾಡಿದನು. ಇಸ್ರೇಲರು ಆ ದೇಶವನ್ನು ವಶಪಡಿಸುವದಕ್ಕಿಂತ ಮುಂಚೆ ಅಲ್ಲಿ ವಾಸಿಸುತ್ತಿದ್ದ ಜನರ ಪಾಪಕೃತ್ಯಗಳನ್ನು ಅನುಸರಿಸಿದನು.
3 ಮನಸ್ಸೆಯ ತಂದೆಯಾದ ಹಿಜ್ಕೀಯನು ಕೆಡವಿದ ಉನ್ನತಸ್ಥಳಗಳನ್ನು ಅವನು ಮತ್ತೆ ಕಟ್ಟಿಸಿದನು. ಬಾಳ್ ದೇವರ ವೇದಿಕೆಯನ್ನು ಕಟ್ಟಿಸಿ ಅಶೇರಸ್ತಂಭಗಳನ್ನು ನಿಲ್ಲಿಸಿದನು. ಆಕಾಶದ ನಕ್ಷತ್ರಸಮೂಹಗಳನ್ನು ಪೂಜಿಸಿದನು.
4 ದೇವಾಲಯದೊಳಗೆ ಮನಸ್ಸೆಯು ವಿಗ್ರಹಗಳಿಗೆ ವೇದಿಕೆಯನ್ನು ಕಟ್ಟಿಸಿದನು. ಯೆಹೋವನು ದೇವಾಲಯದ ವಿಷಯವಾಗಿ, “ನನ್ನ ಹೆಸರು ಜೆರುಸಲೇಮಿನಲ್ಲಿ ನಿರಂತರಕ್ಕೂ ಸ್ಥಾಪಿತವಾಗುವದು” ಎಂದು ಹೇಳಿದ್ದನು.
5 ಮನಸ್ಸೆಯು ದೇವಾಲಯದ ಎರಡು ಅಂಗಳಗಳಲ್ಲಿ ಎಲ್ಲಾ ನಕ್ಷತ್ರಸಮೂಹಗಳಿಗೆ ವೇದಿಕೆಗಳನ್ನು ಕಟ್ಟಿಸಿದನು.
6 ಬೆನ್‌ಹಿನ್ನೋಮ್ ಕಣಿವೆಯಲ್ಲಿ ಮನಸ್ಸೆಯು ತನ್ನ ಸ್ವಂತ ಮಕ್ಕಳನ್ನು ಅನ್ಯದೇವತೆಗಳಿಗೆ ಯಜ್ಞವಾಗಿ ಅರ್ಪಿಸಿದನು; ಮಾಟಮಂತ್ರಗಳನ್ನು ಮಾಡಿದನು; ಪಿಶಾಚಿಗಳೊಂದಿಗೂ ದುರಾತ್ಮಗಳೊಂದಿಗೂ ಸಂಪರ್ಕವನ್ನಿಟ್ಟುಕೊಂಡಿದ್ದನು. ಯೆಹೋವನು ಕೆಟ್ಟದ್ದು ಎಂದು ಹೇಳಿದ್ದನ್ನೆಲ್ಲಾ ಅವನು ಮಾಡಿದ್ದರಿಂದ ಆತನು ಅವನ ಮೇಲೆ ಬಹಳವಾಗಿ ಕೋಪಗೊಂಡನು.
7 ಮನಸ್ಸೆಯು ಒಂದು ವಿಗ್ರಹವನ್ನು ಯೆಹೋವನ ಮಂದಿರದೊಳಗೆ ಪ್ರತಿಷ್ಠಾಪಿಸಿದನು. ಆ ಮಂದಿರದ ಬಗ್ಗೆ ಯೆಹೋವನು ದಾವೀದನೊಂದಿಗೂ ಸೊಲೊಮೋನನೊಂದಿಗೂ ಮಾತನಾಡಿ, “ನನ್ನ ಹೆಸರನ್ನು ಈ ಆಲಯದಲ್ಲಿಯೂ ಜೆರುಸಲೇಮಿನಲ್ಲಿಯೂ ಸ್ಥಾಪಿಸುವೆನು. ಈ ಪಟ್ಟಣವನ್ನು ಎಲ್ಲಾ ಕುಲಗಳ ಎಲ್ಲಾ ಪಟ್ಟಣಗಳಿಂದ ಆರಿಸಿಕೊಂಡಿರುತ್ತೇನೆ. ಇಲ್ಲಿ ನನ್ನ ನಾಮಸ್ಮರಣೆಯು ಸದಾಕಾಲ ನಡಿಯುವುದು.
8 ನಾನು ಮೋಶೆಯ ಮೂಲಕ ಕೊಟ್ಟಿರುವ ನಿಯಮಗಳಿಗೆ ಮತ್ತು ಆಜ್ಞೆಗಳಿಗೆ ಇಸ್ರೇಲರು ವಿಧೇಯರಾಗಿರುವುದಾದರೆ, ಅವರ ಪೂರ್ವಿಕರಿಗೆ ಕೊಡಲು ನಾನು ಆರಿಸಿಕೊಂಡ ದೇಶದಿಂದ ಅವರನ್ನು ತೆಗೆದುಬಿಡುವುದೇ ಇಲ್ಲ” ಎಂದು ಹೇಳಿದನು.
9 ಮನಸ್ಸೆಯು ಯೆಹೂದದ ಜನರನ್ನೂ ಜೆರುಸಲೇಮಿನಲ್ಲಿದ್ದ ಜನರನ್ನೂ ಕೆಟ್ಟಕಾರ್ಯಗಳನ್ನು ಮಾಡಲು ಪ್ರೋತ್ಸಾಹಿಸಿದನು. ಇಸ್ರೇಲರು ಬರುವದಕ್ಕಿಂತ ಮೊದಲು ಆ ದೇಶದಲ್ಲಿದ್ದ ಜನರಿಗಿಂತಲೂ ಅತ್ಯಂತ ಕೆಟ್ಟವನಾಗಿ ವರ್ತಿಸಿದನು. ಆ ದೇಶದಲ್ಲಿದ್ದ ಜನರನ್ನು ಯೆಹೋವನು ನಾಶಮಾಡಿದ್ದನು.
10 ಯೆಹೋವನು ಮನಸ್ಸೆಯ ಮತ್ತು ಅವನ ಜನರ ಸಂಗಡ ಮಾತಾಡಿದರೂ ಅವರು ಆತನ ಮಾತನ್ನು ಕೇಳಲಿಲ್ಲ.
11 ಆದ್ದರಿಂದ ಅಶ್ಶೂರ್ ದೇಶದ ಅರಸನ ಸೇನಾಪತಿಗಳು ಬಂದು ಯೆಹೂದದ ಮೇಲೆ ಯುದ್ಧ ಮಾಡುವಂತೆ ಯೆಹೋವನು ಮಾಡಿದನು. ಆ ಸೇನಾಪತಿಗಳು ಮನಸ್ಸೆಯನ್ನು ಬಂಧಿಸಿ ಸೆರೆಯಲ್ಲಿಟ್ಟರು. ಅವನಿಗೆ ಕೊಂಡಿಗಳನ್ನು ಸಿಕ್ಕಿಸಿ ಬೇಡಿಹಾಕಿ ಬಾಬಿಲೋನಿಗೆ ಒಯ್ದರು.
12 ಈ ಸಂಕಷ್ಟಗಳು ಅವನಿಗೆ ಒದಗಿದಾಗ ಅವನು ದೇವರಾದ ಯೆಹೋವನನ್ನು ತನಗೆ ಸಹಾಯ ಮಾಡಲು ಬೇಡಿದನು. ತನ್ನ ಪೂರ್ವಿಕರ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡನು.
13 ಯೆಹೋವನು ಮನಸ್ಸೆಯ ಬೇಡಿಕೆಗಳನ್ನು ಕೇಳಿ ಅವನಿಗೆ ಕರುಣೆ ತೋರಿದನು. ಅವನು ಜೆರುಸಲೇಮಿಗೂ ತನ್ನ ಸಿಂಹಾಸನಕ್ಕೂ ಹಿಂತಿರುಗಿ ಬರುವಂತೆ ಮಾಡಿದನು. ಆಗ ಮನಸ್ಸೆಯು ಯೆಹೋವನೇ ನಿಜ ದೇವರೆಂದು ಅರಿತನು.
14 ಇದಾದ ನಂತರ ಮನಸ್ಸೆಯು ದಾವೀದನಗರಕ್ಕೆ ಹೊರಗಿನ ಗೋಡೆಯನ್ನು ಕಟ್ಟಿಸಿದನು. ಈ ಗೋಡೆಯು ಕಿದ್ರೋನಿನಲ್ಲಿದ್ದ ಗೀಹೋನ್ ಬುಗ್ಗೆಯ ಪಶ್ಚಿಮ ದಿಕ್ಕಿನಿಂದ ಮೀನು ಬಾಗಿಲಿನ ಮುಂದೆ ಹೋಗಿ, ಅಲ್ಲಿಂದ ಓಫೆಲ್ ಗುಡ್ಡಕ್ಕೆ ಸುತ್ತುಹಾಕಿತು. ಅವನು ಗೋಡೆಯನ್ನು ಬಹು ಎತ್ತರವಾಗಿ ಕಟ್ಟಿದನು. ಆಮೇಲೆ ಯೆಹೂದದಲ್ಲಿದ್ದ ಎಲ್ಲಾ ಕೋಟೆಗಳಲ್ಲಿ ಸೇನಾಪತಿಗಳನ್ನು ನೇಮಿಸಿದನು;
15 ಅನ್ಯದೇವತೆಗಳ ವಿಗ್ರಹವನ್ನು ತೆಗಿಸಿದನು; ದೇವಾಲಯದೊಳಗಿದ್ದ ವಿಗ್ರಹವನ್ನು ತೆಗೆದುಹಾಕಿಸಿದನು. ಜೆರುಸಲೇಮಿನಲ್ಲಿಯೂ ದೇವಾಲಯದ ಗುಡ್ಡದಲ್ಲಿಯೂ ಪ್ರತಿಷ್ಠಾಪಿಸಿದ್ದ ಎಲ್ಲಾ ವಿಗ್ರಹಗಳನ್ನು ತೆಗೆದುಹಾಕಿಸಿದನು. ಕಟ್ಟಿಸಿದ ಎಲ್ಲಾ ವೇದಿಕೆಗಳನ್ನು ಜೆರುಸಲೇಮಿನಿಂದ ಹೊರಗೆ ಬಿಸಾಡಿಸಿದನು.
16 ಯೆಹೋವನ ಯಜ್ಞವೇದಿಕೆಯನ್ನು ಕಟ್ಟಿಸಿ ಅದರಲ್ಲಿ ಸಮಾಧಾನಯಜ್ಞಗಳನ್ನೂ ಕೃತಜ್ಞತಾಯಜ್ಞಗಳನ್ನೂ ಸಮರ್ಪಿಸಿದನು. ಯೆಹೂದದಲ್ಲಿದ್ದ ಎಲ್ಲಾ ಜನರೂ ದೇವರಾದ ಯೆಹೋವನ ಸೇವೆಮಾಡುವಂತೆ ಆಜ್ಞೆ ವಿಧಿಸಿದನು.
17 ಜನರು ಉನ್ನತಸ್ಥಳಗಳಲ್ಲಿ ಯಜ್ಞವನ್ನು ಮಾಡುತ್ತಿದ್ದರೂ ಅದನ್ನು ಯೆಹೋವನಿಗೋಸ್ಕರವೇ ಮಾಡುತ್ತಿದ್ದರು.
18 ಮನಸ್ಸೆ ಮಾಡಿದ ಇತರ ಕಾರ್ಯಗಳು ಮತ್ತು ಅವನು ಯೆಹೋವನಿಗೆ ಮಾಡಿದ ಪ್ರಾರ್ಥನೆ, ದೇವದರ್ಶಿಗಳು ಅವನಿಗೆ ಇಸ್ರೇಲರ ದೇವರಾದ ಯೆಹೋವನ ಸಂದೇಶವನ್ನು ಕೊಟ್ಟ ವಿಷಯವೆಲ್ಲಾ ಇಸ್ರೇಲ್ ರಾಜರ ಚರಿತ್ರೆ ಎಂಬ ಗ್ರಂಥದಲ್ಲಿ ಬರೆಯಲ್ಪಟ್ಟಿದೆ.
19 ಮನಸ್ಸೆಯ ಪ್ರಾರ್ಥನೆಯ ವಿಷಯವಾಗಿಯೂ ದೇವರ ಪ್ರತಿಕ್ರಿಯೆಯ ವಿಷಯವಾಗಿಯೂ ದೇವದರ್ಶಿಗಳ ಚರಿತ್ರೆಯಲ್ಲಿ ಬರೆಯಲ್ಪಟ್ಟಿದೆ. ಮಾತ್ರವಲ್ಲದೆ ಮನಸ್ಸೆಯು ದೇವರಿಗೆ ವಿರುದ್ಧವಾಗಿ ಮಾಡಿದ ಘೋರಕೃತ್ಯಗಳೂ ಪಶ್ಚಾತ್ತಾಪಪಡುವ ಮೊದಲು ಎಲ್ಲೆಲ್ಲಿ ಅನ್ಯದೇವತೆಗಳಿಗೆ ಪೂಜಾಸ್ಥಳಗಳನ್ನು ಮಾಡಿದ್ದನೆಂದೂ ಎಲ್ಲೆಲ್ಲಿ ಅಶೇರಸ್ತಂಭಗಳನ್ನು ನೆಡಿಸಿದ್ದನೆಂದೂ ದೇವದರ್ಶಿಗಳ ಚರಿತ್ರೆಯಲ್ಲಿ ಬರೆಯಲಾಗಿದೆ.
20 ಮನಸ್ಸೆಯು ಸತ್ತು ತನ್ನ ಪೂರ್ವಿಕರ ಬಳಿಗೆ ಸೇರಿದಾಗ ಅವನ ಶವವನ್ನು ಅವನ ಸ್ವಂತ ಅರಮನೆಯಲ್ಲಿ ಸಮಾಧಿಮಾಡಿದರು. ಮನಸ್ಸೆಯ ಮಗನಾದ ಅಮೋನನು ಅವನ ಬದಲಿಗೆ ಅರಸನಾದನು.
ಯೆಹೂದದ ಅರಸನಾದ ಅಮೋನ
21 ಅಮೋನನು ಪಟ್ಟಕ್ಕೆ ಬರುವಾಗ ಇಪ್ಪತ್ತೆರಡು ವರ್ಷ ಪ್ರಾಯದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಎರಡು ವರ್ಷ ರಾಜ್ಯವನ್ನಾಳಿದನು.
22 ಅವನು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದನು. ಮನಸ್ಸೆಯು ಯೆಹೋವನಿಗೆ ಇಷ್ಟವಾದುದ್ದನ್ನು ಮಾಡಿದಂತೆ ಅವನು ಮಾಡಲಿಲ್ಲ. ಅವನ ತಂದೆಯಾದ ಮನಸ್ಸೆಯು ಮಾಡಿದ ಎರಕದ ಬೊಂಬೆಗಳಿಗೂ ಕೆತ್ತನೆ ಕೆಲಸದ ವಿಗ್ರಹಗಳಿಗೂ ಅಡ್ಡಬಿದ್ದನು.
23 ಮನಸ್ಸೆಯು ಯೆಹೋವನ ಮುಂದೆ ತನ್ನನ್ನು ತಗ್ಗಿಸಿಕೊಂಡಂತೆ ಅಮೋನನು ತಗ್ಗಿಸಿಕೊಳ್ಳಲಿಲ್ಲ. ಅಮೋನನು ಹೆಚ್ಚೆಚ್ಚಾಗಿ ಪಾಪಗಳನ್ನು ಮಾಡಿದನು.
24 ಅಮೋನನ ಸೇವಕರು ಸಂಚುಮಾಡಿ ಅವನ ಅರಮನೆಯಲ್ಲಿಯೇ ಅವನನ್ನು ಕೊಂದುಹಾಕಿದರು.
25 ಆದರೆ ಅರಸನಾದ ಅಮೋನನಿಗೆ ವಿರೋಧವಾಗಿ ಎದ್ದ ಸೇವಕರನ್ನೆಲ್ಲಾ ಯೆಹೂದದ ಜನರು ಸಂಹರಿಸಿದರು. ಅನಂತರ ಅಮೋನನ ಮಗನಾದ ಯೋಷೀಯನನ್ನು ತಮ್ಮ ಅರಸನನ್ನಾಗಿ ಆರಿಸಿದರು.