ದಾವೀದನ ರಾಜ್ಯವಿಸ್ತರಣೆ
14
ತೂರ್ ಪಟ್ಟಣದ ರಾಜನಾದ ಹೀರಾಮನು ದಾವೀದನ ಬಳಿಗೆ ತನ್ನ ಸಂದೇಶಕರನ್ನು ಕಳುಹಿಸಿದನು. ಇವರೊಂದಿಗೆ ದೇವದಾರು ಮರದ ತೊಲೆಗಳನ್ನು, ಕಲ್ಲುಕುಟಿಗರನ್ನು ಮತ್ತು ಬಡಗಿಯರನ್ನು ಕಳುಹಿಸಿದನು. ದಾವೀದನಿಗೊಂದು ಮನೆಯನ್ನು ಕಟ್ಟಲು ಇವರನ್ನು ಕಳುಹಿಸಿದನು. ದೇವರು ತನ್ನನ್ನು ಇಸ್ರೇಲರ ಅರಸನನ್ನಾಗಿ ಆಗಲೇ ಮಾಡಿದ್ದಾನೆಂದು ದಾವೀದನಿಗೆ ತಿಳಿದುಬಂತು. ಆತನು ದಾವೀದನ ಸಾಮ್ರಾಜ್ಯವನ್ನು ವಿಸ್ತರಿಸಿ ಬಲಿಷ್ಠಗೊಳಿಸಿದನು. ಯೆಹೋವನು ದಾವೀದನನ್ನೂ ಇಸ್ರೇಲರನ್ನೂ ಪ್ರೀತಿಸಿದ್ದರಿಂದ ಹಾಗೆ ಮಾಡಿದನು.
ಜೆರುಸಲೇಮಿನಲ್ಲಿ ದಾವೀದನು ಇನ್ನೂ ಹಲವು ಸ್ತ್ರೀಯರನ್ನು ಮದುವೆಯಾದನು. ಅವನಿಗೆ ಅನೇಕ ಗಂಡುಹೆಣ್ಣು ಮಕ್ಕಳು ಹುಟ್ಟಿದರು. ಜೆರುಸಲೇಮಿನಲ್ಲಿ ಅವನಿಗೆ ಹುಟ್ಟಿದ ಮಕ್ಕಳು ಯಾರೆಂದರೆ: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ, ಇಬ್ಹಾರ್, ಎಲೀಷೂವ, ಎಲ್ಪೆಲೆಟ್, ನೋಗಹ, ನೆಫೆಗ್, ಯಾಫೀಯ, ಎಲೀಷಾಮಾ, ಬೇಲ್ಯಾದ ಮತ್ತು ಎಲೀಫೆಲೆಟ್.
ದಾವೀದನು ಫಿಲಿಷ್ಟಿಯರನ್ನು ಸೋಲಿಸಿದ್ದು
ದಾವೀದನು ಇಸ್ರೇಲರ ಅರಸನಾಗಿ ಆರಿಸಲ್ಪಟ್ಟಿದ್ದನ್ನು ಕೇಳಿ ಎಲ್ಲಾ ಫಿಲಿಷ್ಟಿಯರು ಅವನೊಂದಿಗೆ ಯುದ್ಧಮಾಡಲು ಬಂದರು. ದಾವೀದನು ಇದನ್ನು ಅರಿತು ಯುದ್ಧಸನ್ನದ್ಧನಾಗಿ ಫಿಲಿಷ್ಟಿಯರ ವಿರುದ್ಧವಾಗಿ ಯುದ್ಧಕ್ಕೆ ಹೊರಟನು. ಫಿಲಿಷ್ಟಿಯರು ರೆಫಾಯೀಮ್ ತಗ್ಗಿನಲ್ಲಿ ವಾಸಿಸುತ್ತಿದ್ದ ಇಸ್ರೇಲರ ಮೇಲೆ ದಾಳಿಮಾಡಿ ಅವರದನ್ನೆಲ್ಲಾ ದೋಚಿಕೊಂಡರು. 10 ದಾವೀದನು ಯೆಹೋವನಿಗೆ, “ನಾನು ಫಿಲಿಷ್ಟಿಯರ ಸಂಗಡ ಯುದ್ಧಕ್ಕೆ ಹೋಗಬಹುದೇ?” ಎಂದು ವಿಚಾರಿಸಲಾಗಿ ಯೆಹೋವನು ಅವನಿಗೆ, “ಹೋಗು, ನಾನು ನಿನಗೆ ಫಿಲಿಷ್ಟಿಯರ ಮೇಲೆ ಜಯ ಕೊಡುವೆನು” ಎಂದು ಹೇಳಿದನು.
11 ಆಗ ದಾವೀದನೂ ಅವನ ಸಂಗಡಿಗರೂ ಬಾಳ್ ಪೆರಾಚೀಮ್ ಎಂಬ ಸ್ಥಳದವರೆಗೆ ಹೋಗಿ ಫಿಲಿಷ್ಟಿಯರನ್ನು ನಾಶಮಾಡಿದನು. “ದೇವರು ಕಟ್ಟೆಯೊಡೆದ ಪ್ರವಾಹದಂತೆ ತನ್ನ ಶತ್ರುಗಳ ಮೇಲೆ ದಾಳಿಮಾಡಿ ಅವರನ್ನು ನನ್ನ ಮುಖಾಂತರವಾಗಿ ನಾಶಮಾಡಿದ್ದಾನೆ” ಎಂದು ದಾವೀದನು ಹೇಳಿದನು. ಆದ್ದರಿಂದ ಆ ಸ್ಥಳಕ್ಕೆ ಬಾಳ್‌ಪೆರಾಚೀಮ್ ಎಂದು ಹೆಸರಾಯಿತು. 12 ಫಿಲಿಷ್ಟಿಯರು ತಮ್ಮ ವಿಗ್ರಹಗಳನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದರು. ದಾವೀದನು ಅವುಗಳನ್ನೆಲ್ಲಾ ಒಟ್ಟುಸೇರಿಸಿ ಸುಡಿಸಿಬಿಟ್ಟನು.
ಫಿಲಿಷ್ಟಿಯರ ಮೇಲೆ ಇನ್ನೊಂದು ಜಯ
13 ಫಿಲಿಷ್ಟಿಯರು ಮತ್ತೆ ರೆಫಾಯೀಮ್ ತಗ್ಗಿನಲ್ಲಿ ವಾಸಮಾಡುತ್ತಿದ್ದ ಇಸ್ರೇಲರ ಮೇಲೆ ದಾಳಿಮಾಡಿದರು. 14 ದಾವೀದನು ಮತ್ತೆ ಯೆಹೋವನಿಗೆ ಪ್ರಾರ್ಥಿಸಿ ವಿಚಾರಿಸಿದನು. ಯೆಹೋವನು ಅವನ ಪ್ರಾರ್ಥನೆಗೆ ಉತ್ತರಕೊಟ್ಟು, “ದಾವೀದನೇ, ಫಿಲಿಷ್ಟಿಯರನ್ನು ಬೆಟ್ಟದ ಮೇಲೆ ನೀನು ಹಿಂಬಾಲಿಸದಿರು. ಅವರ ಹಿಂದಿನಿಂದ ಹೋಗಿ ಬಾಲ್ಸಾಮ್ ಮರಗಳ ಹಿಂದೆ ಅವಿತುಕೊಂಡಿರು. 15 ಒಬ್ಬ ಕಾವಲುಗಾರನನ್ನು ಮರಕ್ಕೆ ಹತ್ತಿಸು; ಫಿಲಿಷ್ಟಿಯರು ಬರುವ ಸಪ್ಪಳ ಕೇಳಿದೊಡನೆ ಅವರ ಮೇಲೆ ದಾಳಿಮಾಡು. ನಾನು ನಿನ್ನ ಮುಂದಾಗಿ ಹೋಗಿ ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವೆನು” ಎಂದು ಹೇಳಿದನು. 16 ಯೆಹೋವನು ಹೇಳಿದಂತೆಯೇ ದಾವೀದನು ಮಾಡಿದನು. ದಾವೀದನೂ ಅವನ ಸೈನಿಕರೂ ಫಿಲಿಷ್ಟಿಯರನ್ನು ಸೋಲಿಸಿ ಗಿಬ್ಯೋನಿನಿಂದ ಹಿಡಿದು ಗೆಜೆರ್ ಪಟ್ಟಣದವರೆಗೂ ಅವರನ್ನು ಕೊಲ್ಲುತ್ತಾ ಹೋದರು. 17 ಹೀಗೆ ದಾವೀದನು ಎಲ್ಲಾ ದೇಶಗಳಲ್ಲಿ ಹೆಸರುವಾಸಿಯಾದನು. ಎಲ್ಲಾ ಜನಾಂಗಗಳವರು ಅವನಿಗೆ ಭಯಪಡುವಂತೆ ಯೆಹೋವನು ಮಾಡಿದನು.