52
ಎದೋಮ್ಯನಾದ ದೋಯೇಗನು ಸೌಲನ ಬಳಿಗೆ ಹೋಗಿ, “ದಾವೀದನು ಅಹೀಮೆಲೆಕನ ಮನೆಯಲ್ಲಿದ್ದಾನೆ” ಎಂದು ತಿಳಿಸಿದಾಗ ರಚಿಸಲ್ಪಟ್ಟ ಕೀರ್ತನೆಯಿದು. ರಚನೆಗಾರ: ದಾವೀದ.
1 ದುಷ್ಟಾಧಿಕಾರಿಯೇ, ನಿನ್ನ ದುಷ್ಕೃತ್ಯಗಳ ಕುರಿತು ಜಂಬಪಡುವುದೇಕೇ?
ದೇವರ ದೃಷ್ಟಿಗೆ ನೀನು ಅಸಹ್ಯಕರವಾಗಿರುವೆ.
2 ಮೋಸಗಾರನೇ, ನಿನ್ನ ನಾಲಗೆಯು ಹರಿತವಾದ ಕ್ಷೌರ ಕತ್ತಿಯಂತಿದ್ದು
ನಾಶನದ ಸಂಚುಗಳನ್ನೇ ಮಾಡುವುದು.
3 ಒಳ್ಳೆಯದಕ್ಕಿಂತಲೂ ಕೆಟ್ಟದ್ದನ್ನೇ ನೀನು ಹೆಚ್ಚು ಪ್ರೀತಿಸುವೆ.
ನಿನಗೆ ಸತ್ಯಕ್ಕಿಂತಲೂ ಸುಳ್ಳೇ ಇಷ್ಟ.
4 ಮೋಸದ ನಾಲಿಗೆಯೇ, ಹಾನಿಕರವಾದ ಮಾತುಗಳೇ ನಿನಗೆ ಇಷ್ಟ.
5 ದೇವರು ನಿನ್ನನ್ನು ಶಾಶ್ವತವಾಗಿ ನಾಶಮಾಡುವನು,
ಗಿಡವನ್ನು ಬೇರು ಸಹಿತ ಕಿತ್ತುಹಾಕುವಂತೆ ಆತನು ನಿನ್ನನ್ನು ಹಿಡಿದು ನಿನ್ನ ಮನೆಯೊಳಗಿಂದ ಕಿತ್ತು ಬೀಸಾಡುವನು.
6 ಒಳ್ಳೆಯವರು ಇದನ್ನು ಕಂಡು
ದೇವರಲ್ಲಿ ಭಯಭಕ್ತಿಯುಳ್ಳವರಾಗುವರು.
ಅವರು ನಿಮ್ಮನ್ನು ನೋಡಿ ನಗುತ್ತಾ ಹೀಗೆನ್ನುವರು:
7 “ದೇವರ ಮೇಲೆ ಅವಲಂಬಿಸಿಕೊಳ್ಳದ ಇವನಿಗೆ ಏನಾಯಿತು?
ತನ್ನ ಐಶ್ವರ್ಯವೂ ಸುಳ್ಳುಗಳೂ ತನ್ನನ್ನು ಕಾಪಾಡುತ್ತವೆ ಎಂದು ಭಾವಿಸಿಕೊಂಡವನು ಇವನೇ.”
8 ನಾನಾದರೋ ದೇವರ ಆಲಯದ ಅಂಗಳದಲ್ಲಿ ಹಸಿರಸಿರಾಗಿ ಬೆಳೆಯುವ ಆಲೀವ್ ಮರದಂತಿದ್ದೇನೆ.
ನಾನು ದೇವರ ಶಾಶ್ವತವಾದ ಪ್ರೀತಿಯಲ್ಲೇ ಯಾವಾಗಲೂ ಭರವಸವಿಟ್ಟಿರುವೆ.
9 ದೇವರೇ, ನಿನ್ನ ಉಪಕಾರಗಳಿಗಾಗಿ ನಾನು ನಿನ್ನನ್ನು ಎಂದೆಂದಿಗೂ ಕೊಂಡಾಡುವೆನು.
ನಿನ್ನ ಹೆಸರಿನಲ್ಲೇ ಭರವಸವಿಟ್ಟಿರುವೆ; ಯಾಕೆಂದರೆ ನಿನ್ನ ಹೆಸರು ಎಷ್ಟೋ ಒಳ್ಳೆಯದು.
ನಿನ್ನ ಪವಿತ್ರ ಜನರ ಸನ್ನಿಧಿಯಲ್ಲಿ ನಿನ್ನನ್ನು ಕೊಂಡಾಡುವೆನು.