ಸೊಲೊಮೋನನ ಜ್ಞಾನೋಕ್ತಿಗಳು
10
ಇವು ಸೊಲೊಮೋನನ ಜ್ಞಾನೋಕ್ತಿಗಳು:
ಜ್ಞಾನಿಯಾದ ಮಗನಿಂದ ತಂದೆಗೆ ಸಂತೋಷ. ಮೂಢನಾದ ಮಗನಿಂದ ತಾಯಿಗೆ ದುಃಖ.
ಅನ್ಯಾಯದ ಹಣವು ನಿಷ್ಪ್ರಯೋಜಕವಾಗಿದೆ. ನೀತಿಯ ಜೀವಿತವು ಮರಣದಿಂದ ರಕ್ಷಿಸಬಲ್ಲದು.
ನೀತಿವಂತರು ಹಸಿವೆಯಿಂದಿರಲು ಯೆಹೋವನು ಬಿಡುವುದಿಲ್ಲ. ದುಷ್ಟರ ಆಸೆಯನ್ನಾದರೋ ಆತನು ಭಂಗಪಡಿಸುತ್ತಾನೆ.
ಸೋಮಾರಿಯು ಬಡವನಾಗಿರುತ್ತಾನೆ. ಕಷ್ಟಪಟ್ಟು ಕೆಲಸ ಮಾಡುವವನು ಐಶ್ವರ್ಯವಂತನಾಗುತ್ತಾನೆ.
ಬುದ್ಧಿವಂತನು ತಕ್ಕಕಾಲದಲ್ಲಿ ಬೆಳೆಯನ್ನು ಕೊಯ್ಯುತ್ತಾನೆ. ಸುಗ್ಗೀಕಾಲದಲ್ಲಿ ತೂಕಡಿಸುವವನು ನಾಚಿಕೆಗೆಟ್ಟವನು.
ಒಳ್ಳೆಯವನನ್ನು ಆಶೀರ್ವದಿಸುವಂತೆ ಜನರು ದೇವರನ್ನು ಪ್ರಾರ್ಥಿಸುವರು. ದುಷ್ಟನ ಮಾತುಗಳಲ್ಲಾದರೋ ಕುತಂತ್ರವೇ ಅಡಗಿಕೊಂಡಿದೆ.
ನೀತಿವಂತರ ನೆನಪು ಆಶೀರ್ವಾದದಾಯಕ. ಕೆಡುಕರಾದರೋ ಬಹುಬೇಗನೆ ಮರೆಯಲ್ಪಡುವರು.
ಜ್ಞಾನಿಯು ಆಜ್ಞೆಗಳಿಗೆ ವಿಧೇಯನಾಗುತ್ತಾನೆ. ಮೂಢನಾದರೋ ವಾದಮಾಡಿ ತನಗೇ ತೊಂದರೆ ತಂದುಕೊಳ್ಳುತ್ತಾನೆ.
ಒಳ್ಳೆಯವನೂ ಯಥಾರ್ಥನೂ ಆದ ಮನುಷ್ಯನು ಕ್ಷೇಮವಾಗಿರುವನು. ಮೋಸಮಾಡುವ ಕುಟಿಲ ಮನುಷ್ಯನಾದರೋ ಸಿಕ್ಕಿಕೊಳ್ಳುವನು.
10 ಸತ್ಯವನ್ನು ಅಡಗಿಸಿಕೊಳ್ಳುವವನು ತೊಂದರೆಯನ್ನು ಉಂಟುಮಾಡುವನು. ಧೈರ್ಯದಿಂದ ಮಾತಾಡುವವನು ಸಮಾಧಾನಕರನು.
11 ಒಳ್ಳೆಯವನ ಮಾತುಗಳು ನೀರಿನ ಬುಗ್ಗೆಯಂತೆ ಜೀವದಾಯಕ. ಕೆಡುಕನ ಮಾತುಗಳಲ್ಲಿ ಕೆಟ್ಟದ್ದೇ ಅಡಗಿಕೊಂಡಿರುತ್ತದೆ.
12 ದ್ವೇಷವು ವಾದವನ್ನು ಉಂಟುಮಾಡುತ್ತದೆ. ಆದರೆ ಪ್ರೀತಿಯು ಎಲ್ಲಾ ತಪ್ಪುಗಳನ್ನು ಕ್ಷಮಿಸುತ್ತದೆ.
13 ಬುದ್ಧಿವಂತನು ವಿವೇಕದಿಂದ ಮಾತಾಡುತ್ತಾನೆ. ಆದರೆ ಬುದ್ಧಿಹೀನನಿಗೆ ಹೊಡೆತ ಬೀಳುವುದು.
14 ಜ್ಞಾನಿಗಳು ಮೌನವಾಗಿದ್ದು ಹೊಸ ಸಂಗತಿಗಳನ್ನು ಕಲಿತುಕೊಳ್ಳುತ್ತಾರೆ. ಮೂಢರಾದರೋ ಮಾತಾಡಿ ತಮಗೇ ತೊಂದರೆಯನ್ನು ತಂದುಕೊಳ್ಳುತ್ತಾರೆ.
15 ಐಶ್ವರ್ಯವು ಸಾಹುಕಾರನನ್ನು ಕಾಪಾಡುತ್ತದೆ. ಬಡತನವಾದರೋ ಬಡವನನ್ನು ನಾಶಗೊಳಿಸುತ್ತದೆ.
16 ಒಳ್ಳೆಯವರಿಗೆ ಪ್ರತಿಫಲವಾಗಿ ಜೀವ ದೊರೆಯುವುದು. ಕೆಡುಕರಿಗೆ ದಂಡನೆಯೇ ಸಂಬಳ.
17 ಶಿಸ್ತನ್ನು ಸ್ವೀಕರಿಸಿಕೊಳ್ಳುವವನು ಜೀವಮಾರ್ಗವನ್ನು ತೋರಿಸುತ್ತಾನೆ. ತಿದ್ದುಪಡಿಯನ್ನು ಅಲಕ್ಷಿಸುವವನು ಇತರರನ್ನು ದಾರಿ ತಪ್ಪಿಸುತ್ತಾನೆ.
18 ದ್ವೇಷವನ್ನು ಮರೆಮಾಡಲು ಒಬ್ಬನು ಸುಳ್ಳು ಹೇಳಬೇಕಾಗಬಹುದು. ಆದರೆ ಹರಟೆಗಾರನು ನಿಜವಾಗಿಯೂ ಮೂಢನಾಗಿದ್ದಾನೆ.
19 ಅತಿಯಾಗಿ ಮಾತಾಡುವವನು ತನ್ನನ್ನೇ ತೊಂದರೆಗೆ ಸಿಕ್ಕಿಸಿಕೊಳ್ಳುತ್ತಾನೆ. ವಿವೇಕಿಯು ಮೌನವಾಗಿರಲು ಕಲಿತುಕೊಳ್ಳುತ್ತಾನೆ.
20 ಒಳ್ಳೆಯವನ ಮಾತುಗಳು ಶುದ್ಧ ಬೆಳ್ಳಿಯಂತಿವೆ. ಕೆಡುಕನ ಆಲೋಚನೆಗಳಾದರೋ ಪ್ರಯೋಜನಕ್ಕೆ ಬಾರವು.
21 ಒಳ್ಳೆಯವನ ಮಾತುಗಳು ಅನೇಕರಿಗೆ ಸಹಾಯಮಾಡುತ್ತವೆ. ಮೂಢನ ಮೂಢತನವಾದರೋ ಅನೇಕರನ್ನು ಕೊಲ್ಲುವುದು.
22 ಐಶ್ವರ್ಯವು ಯೆಹೋವನ ಆಶೀರ್ವಾದವೇ. ಶ್ರಮದ ಕೆಲಸವು ಅದನ್ನು ಹೆಚ್ಚಿಸಲಾರದು.
23 ಅವಿವೇಕಿಯು ಕೆಟ್ಟದ್ದನ್ನು ಮಾಡುವುದರಲ್ಲಿ ಸಂತೋಷಿಸುತ್ತಾನೆ. ವಿವೇಕಿಯು ಜ್ಞಾನದಲ್ಲಿ ಸಂತೋಷಿಸುತ್ತಾನೆ.
24 ಕೆಡುಕನಿಗೆ ಅವನು ಭಯಪಡುವುದೇ ಸಂಭವಿಸುವುದು. ಒಳ್ಳೆಯವನಾದರೋ ತನಗೆ ಬೇಕಾದದ್ದನ್ನೆಲ್ಲ ಪಡೆದುಕೊಳ್ಳುವನು.
25 ಆಪತ್ತು ಬಂದಾಗ ದುಷ್ಟನು ನಾಶವಾಗುವನು. ಆದರೆ ಒಳ್ಳೆಯವರು ಸದಾಕಾಲ ಬಲವಾಗಿ ನಿಲ್ಲುವರು.
26 ಸೋಮಾರಿಗೆ ಯಾವ ಕೆಲಸವನ್ನೂ ಒಪ್ಪಿಸಬೇಡಿ. ಅವನು ಬಾಯಿಗೆ ಹುಳಿಯಂತೆಯೂ ಕಣ್ಣುಗಳಿಗೆ ಹೊಗೆಯಂತೆಯೂ ನಿಮ್ಮನ್ನು ಬೇಸರಗೊಳಿಸುವನು.
27 ನೀವು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿದ್ದರೆ ಬಹುಕಾಲ ಬದುಕುವಿರಿ. ಆದರೆ ಕೆಡುಕರು ತಮ್ಮ ಜೀವಮಾನದ ವರ್ಷಗಳನ್ನು ಕಳೆದುಕೊಳ್ಳುವರು.
28 ಒಳ್ಳೆಯವರ ನಿರೀಕ್ಷೆಗೆ ಸಂತೋಷವೇ ಫಲಿತಾಂಶ. ಕೆಟ್ಟವರ ನಿರೀಕ್ಷೆಗೆ ಶೂನ್ಯವೇ ಫಲಿತಾಂಶ.
29 ಯೆಹೋವನು ಒಳ್ಳೆಯವರನ್ನು ಕೋಟೆಯಂತೆ ಕಾಪಾಡುತ್ತಾನೆ; ಕೆಡುಕರನ್ನಾದರೊ ನಾಶಮಾಡುತ್ತಾನೆ.
30 ಒಳ್ಳೆಯವರು ಯಾವಾಗಲೂ ಕ್ಷೇಮವಾಗಿರುವರು. ಆದರೆ ಕೆಡುಕರನ್ನು ದೇಶದಿಂದ ಬಲವಂತವಾಗಿ ಹೊರಗಟ್ಟಲಾಗುವುದು.
31 ಒಳ್ಳೆಯವರು ಯಾವಾಗಲೂ ಜ್ಞಾನದ ಮಾತುಗಳನ್ನು ಹೇಳುತ್ತಾರೆ; ಕೆಡುಕರ ಮಾತನ್ನು ಜನರು ಕೇಳುವುದಿಲ್ಲ.
32 ಒಳ್ಳೆಯವನು ಯೋಗ್ಯವಾದವುಗಳನ್ನು ಹೇಳುವನು. ಕೆಡುಕನು ಸುಳ್ಳನ್ನು ಮಾತ್ರ ಹೇಳುತ್ತಾನೆ.