ಅತ್ಯುತ್ತಮ ಸ್ಥಾನ ಯಾರಿಗೆ?
(ಮಾರ್ಕ 9:33-37; ಲೂಕ 9:46-48)
18
1 ಆ ಸಮಯದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಪರಲೋಕರಾಜ್ಯದಲ್ಲಿ ಯಾರಿಗೆ ಅತ್ಯುತ್ತಮ ಸ್ಥಾನ ದೊರೆಯುತ್ತದೆ” ಎಂದು ಕೇಳಿದರು.
2 ಯೇಸು ಚಿಕ್ಕ ಮಗುವನ್ನು ತನ್ನ ಹತ್ತಿರಕ್ಕೆ ಕರೆದು ತನ್ನ ಶಿಷ್ಯರ ಮುಂದೆ ಆ ಮಗುವನ್ನು ನಿಲ್ಲಿಸಿ ಹೀಗೆಂದನು:
3 “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ನೀವು ಬದಲಾವಣೆ ಹೊಂದಿಕೊಂಡು ನಿಮ್ಮ ಹೃದಯದಲ್ಲಿ ಚಿಕ್ಕ ಮಕ್ಕಳಂತೆ ಆಗಬೇಕು. ಇಲ್ಲವಾದರೆ, ನೀವು ಪರಲೋಕರಾಜ್ಯಕ್ಕೆ ಸೇರುವುದೇ ಇಲ್ಲ.
4 ಈ ಚಿಕ್ಕ ಮಗುವಿನಂತೆ ತನ್ನನ್ನು ತಗ್ಗಿಸಿಕೊಳ್ಳುವವನೇ ಪರಲೋಕರಾಜ್ಯದಲ್ಲಿ ಅತ್ಯುತ್ತಮ ಸ್ಥಾನ ಪಡೆಯುತ್ತಾನೆ.
5 “ಯಾವನಾದರೂ ನನ್ನ ಹೆಸರಿನಲ್ಲಿ ಒಂದು ಚಿಕ್ಕ ಮಗುವನ್ನು ಸ್ವೀಕರಿಸಿಕೊಂಡರೆ ಅವನು ನನ್ನನ್ನೇ ಸ್ವೀಕರಿಸಿಕೊಂಡಂತಾಯಿತು.
ಇತರರನ್ನು ಪಾಪಕ್ಕೆ ನಡೆಸುವುದರ ಬಗ್ಗೆ ಯೇಸುವಿನ ಎಚ್ಚರಿಕೆ
(ಮಾರ್ಕ 9:42-48; ಲೂಕ 17:1-2)
6 “ದೀನತೆಯಿಂದ ನನ್ನನ್ನು ಹಿಂಬಾಲಿಸುವವರಲ್ಲಿ ಯಾರನ್ನಾದರೂ ಪಾಪಕ್ಕೆ ನಡೆಸುವವನಿಗೆ ಬಹಳ ಕೇಡಾಗುವುದು. ಅವನು ತನ್ನ ಕೊರಳಿಗೆ ಬೀಸುವ ಕಲ್ಲನ್ನು ಕಟ್ಟಿಕೊಂಡು, ಆಳವಾದ ಸಮುದ್ರದಲ್ಲಿ ಮುಳುಗುವುದೇ ಉತ್ತಮ.
7 ಜನರನ್ನು ಪಾಪಕ್ಕೆ ನಡೆಸುವ ಸಂಗತಿಗಳ ನಿಮಿತ್ತ ನಾನು ಈ ಲೋಕದ ವಿಷಯದಲ್ಲಿ ದುಃಖಪಡುತ್ತೇನೆ. ಅವು ಯಾವಾಗಲೂ ಇರುತ್ತವೆ. ಆದರೆ ಅವುಗಳಿಗೆ ಕಾರಣವಾಗುವ ವ್ಯಕ್ತಿಗೆ ಬಹಳ ಕೇಡಾಗುವುದು.
8 “ನಿನ್ನ ಕೈಯಾಗಲಿ, ನಿನ್ನ ಕಾಲಾಗಲಿ ನಿನ್ನ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಎಸೆದುಬಿಡು. ಕೈಯನ್ನಾಗಲಿ ಕಾಲನ್ನಾಗಲಿ ಕಳೆದುಕೊಂಡು ನಿತ್ಯಜೀವ ಹೊಂದುವುದೇ ನಿನಗೆ ಉತ್ತಮ. ಎರಡು ಕೈ ಮತ್ತು ಎರಡು ಕಾಲುಳ್ಳವನಾಗಿದ್ದು ಶಾಶ್ವತವಾದ ಬೆಂಕಿಯ ನರಕದಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಅದು ಎಷ್ಟೋ ಉತ್ತಮ.
9 ನಿನ್ನ ಕಣ್ಣು ನಿನ್ನನ್ನು ಪಾಪಕ್ಕೆ ನಡೆಸಿದರೆ, ಅದನ್ನು ಕಿತ್ತು ಎಸೆದುಬಿಡು. ಎರಡು ಕಣ್ಣುಳ್ಳವನಾಗಿದ್ದು ಬೆಂಕಿಯ ನರಕದಲ್ಲಿ ಹಾಕಿಸಿಕೊಳ್ಳುವದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ನಿತ್ಯಜೀವ ಹೊಂದುವುದೇ ನಿನಗೆ ಉತ್ತಮ.
ತಪ್ಪಿಸಿಕೊಂಡ ಕುರಿಯ ಸಾಮ್ಯ
(ಲೂಕ 15:3-7)
10 “ಎಚ್ಚರವಾಗಿರಿ! ಈ ಚಿಕ್ಕ ಮಕ್ಕಳಿಗೆ ಬೆಲೆಯೇ ಇಲ್ಲವೆಂದು ನೆನೆಸಬೇಡಿ. ಇವರಿಗಾಗಿ ಪರಲೋಕದಲ್ಲಿ ದೂತರನ್ನು ನೇಮಿಸಲಾಗಿದೆ. ಆ ದೂತರು ಪರಲೋಕದಲ್ಲಿರುವ ನನ್ನ ತಂದೆಯ ಸಮ್ಮುಖದಲ್ಲಿ ಇರುತ್ತಾರೆ.
11
12 “ಒಬ್ಬ ಮನುಷ್ಯನಿಗೆ ನೂರು ಕುರಿಗಳಿದ್ದು ಅದರಲ್ಲಿ ಒಂದು ಕುರಿಯು ತಪ್ಪಿಸಿಕೊಂಡರೆ, ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಬೆಟ್ಟದ ಮೇಲೆಯೇ ಬಿಟ್ಟು ತಪ್ಪಿಸಿಕೊಂಡ ಕುರಿಯನ್ನು ಹುಡುಕಲು ಹೋಗುತ್ತಾನಲ್ಲವೇ?
13 ತಪ್ಪಿಸಿಕೊಂಡ ಕುರಿಯು ಸಿಕ್ಕಿದರೆ, ತಪ್ಪಿಸಕೊಳ್ಳದಿದ್ದ ತೊಂಭತ್ತೊಂಭತ್ತು ಕುರಿಗಳಿಗಿಂತ ಆ ಒಂದು ಕುರಿಯ ವಿಷಯದಲ್ಲಿ ಅವನು ಬಹಳ ಸಂತೋಷಪಡುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
14 ಅದೇ ರೀತಿ ಈ ಚಿಕ್ಕ ಮಕ್ಕಳಲ್ಲಿ ಒಬ್ಬರಾದರೂ ತಪ್ಪಿಸಿಕೊಳ್ಳಬಾರದೆಂಬುದೇ ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಾಗಿದೆ.
ನಿಮಗೆ ತಪ್ಪುಮಾಡಿದಾಗ ಮಾಡತಕ್ಕದ್ದೇನು?
(ಲೂಕ 17:3)
15 “ನಿನ್ನ ಸಹೋದರನಾಗಲಿ ಸಹೋದರಿಯಾಗಲಿ ನಿನಗೆ ಯಾವುದಾದರೂ ತಪ್ಪು ಮಾಡಿದರೆ, ನೀನು ಹೋಗಿ ಅವನೊಬ್ಬನೇ ಇರುವಾಗ ಅವನ ತಪ್ಪನ್ನು ತಿಳಿಸು. ಅವನು ನಿನ್ನ ಮಾತಿಗೆ ಕಿವಿಗೊಟ್ಟರೆ, ಮತ್ತೆ ನಿನ್ನ ಸಹೋದರನಾಗಿರಲು ನೀನೇ ಅವನಿಗೆ ಸಹಾಯ ಮಾಡಿದಂತಾಗುವುದು.
16 ಆದರೆ ಅವನು ನಿನ್ನ ಮಾತನ್ನು ಕೇಳದಿದ್ದರೆ, ನಿನ್ನೊಂದಿಗೆ ಒಬ್ಬಿಬ್ಬರನ್ನು ಕರೆದುಕೊಂಡು ಮತ್ತೆ ಅವನ ಬಳಿಗೆ ಹೋಗು. ಆಗ ಪ್ರತಿಯೊಂದು ದೂರಿನ ವಿಷಯದಲ್ಲೂ ಇಬ್ಬರು ಅಥವಾ ಮೂವರು ಸಾಕ್ಷಿಗಳಿರುವರು.
17 ಅವನು ಅವರ ಮಾತನ್ನೂ ಕೇಳದಿದ್ದರೆ, ಸಭೆಗೆ ತಿಳಿಸು. ಅವನು ಸಭೆಯ ಮಾತನ್ನೂ ಕೇಳದಿದ್ದರೆ ಅವನನ್ನು ದೇವರಲ್ಲಿ ನಂಬಿಕೆ ಇಡದ ಮನುಷ್ಯನಂತಾಗಲಿ ಸುಂಕವಸೂಲಿಗಾರನಂತಾಗಲಿ ಪರಿಗಣಿಸಿರಿ.
18 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಈ ಲೋಕದಲ್ಲಿ ನೀಡುವ ನಿಷಿದ್ಧಾಜ್ಞೆಯು ದೇವರೇ ನೀಡಿದ ನಿಷಿದ್ಧಾಜ್ಞೆಯಾಗಿರುತ್ತದೆ. ನೀವು ಭೂಲೋಕದಲ್ಲಿ ನೀಡುವ ಅನುಮತಿಯು ದೇವರೇ ನೀಡಿದ ಅನುಮತಿಯಾಗಿರುತ್ತದೆ.
19 ಇದಲ್ಲದೆ ನಿಮ್ಮಲ್ಲಿ ಇಬ್ಬರು ಈ ಲೋಕದಲ್ಲಿ ಒಮ್ಮನಸ್ಸಿನಿಂದ ಏನನ್ನೇ ಬೇಡಿಕೊಂಡರೂ ಪರಲೋಕದಲ್ಲಿರುವ ನನ್ನ ತಂದೆ ಅದನ್ನು ನೆರವೇರಿಸುತ್ತಾನೆ.
20 ಇದು ಸತ್ಯ. ಏಕೆಂದರೆ ಎಲ್ಲಿ ಇಬ್ಬರಾಗಲಿ ಮೂವರಾಗಲಿ ನನ್ನಲ್ಲಿ ನಂಬಿಕೆಯನ್ನಿಟ್ಟು ಒಟ್ಟಾಗಿ ಸೇರಿಬಂದಿರುತ್ತಾರೋ ಅವರ ಮಧ್ಯದಲ್ಲಿ ನಾನಿರುತ್ತೇನೆ.”
ಕ್ಷಮಾಪಣೆಯನ್ನು ಕುರಿತ ಸಾಮ್ಯ
21 ಆಗ ಪೇತ್ರನು ಯೇಸುವಿನ ಬಳಿಗೆ ಬಂದು, “ಪ್ರಭುವೇ, ನನ್ನ ಸಹೋದರನು ನನಗೆ ಯಾವುದಾದರೂ ತಪ್ಪು ಮಾಡುತ್ತಲೇ ಇದ್ದರೆ ನಾನು ಎಷ್ಟು ಸಲ ಅವನನ್ನು ಕ್ಷಮಿಸಬೇಕು? ನಾನು ಅವನನ್ನು ಏಳು ಸಲ ಕ್ಷಮಿಸಬೇಕೋ?” ಎಂದು ಕೇಳಿದನು.
22 ಯೇಸು, “ಏಳು ಸಲಕ್ಕಿಂತಲೂ ಹೆಚ್ಚಾಗಿ ಕ್ಷಮಿಸಬೇಕು. ಅವನು ನಿನಗೆ ಎಪ್ಪತ್ತೇಳು ಸಲ ತಪ್ಪು ಮಾಡಿದರೂ ನೀನು ಅವನನ್ನು ಕ್ಷಮಿಸುತ್ತಲೇ ಇರಬೇಕೆಂದು ನಾನು ನಿನಗೆ ಹೇಳುತ್ತೇನೆ” ಎಂದನು.
23 “ಪರಲೋಕರಾಜ್ಯವು ತನ್ನ ಸೇವಕರು ತನಗೆ ಕೊಡಬೇಕಿದ್ದ ಸಾಲದ ಹಣವನ್ನು ವಸೂಲಿ ಮಾಡಲು ತೀರ್ಮಾನಿಸಿದ ಒಬ್ಬ ರಾಜನಿಗೆ ಹೋಲಿಕೆಯಾಗಿದೆ.
24 ರಾಜನು ತನ್ನ ಹಣವನ್ನು ವಸೂಲಿ ಮಾಡುವುದಕ್ಕೆ ಪ್ರಾರಂಭಿಸಿದನು. ಒಬ್ಬ ಸೇವಕನು ಹತ್ತು ಸಾವಿರ ಬೆಳ್ಳಿಯ ನಾಣ್ಯಗಳನ್ನು ರಾಜನಿಗೆ ಸಾಲ ಕೊಡಬೇಕಿತ್ತು.
25 ಆ ಸೇವಕನು ತನ್ನ ಯಜಮಾನನಾದ ರಾಜನಿಗೆ ಹಣವನ್ನು ಕೊಡಲು ಸಮರ್ಥನಾಗಿರಲಿಲ್ಲ. ಆದ್ದರಿಂದ ಆ ಸೇವಕನನ್ನು ಮತ್ತು ಅವನಲ್ಲಿದ್ದ ಪ್ರತಿಯೊಂದನ್ನೂ ಅವನ ಹೆಂಡತಿ ಮತ್ತು ಮಕ್ಕಳ ಸಮೇತವಾಗಿ ಮಾರಿ, ಬಂದ ಹಣವನ್ನೆಲ್ಲಾ ಕೊಡಬೇಕಾದ ಸಾಲಕ್ಕೆ ವಜಾ ಮಾಡಬೇಕೆಂದು ರಾಜನು ಆಜ್ಞಾಪಿಸಿದನು.
26 “ಆಗ ಸೇವಕನು ರಾಜನ ಕಾಲಿಗೆ ಬಿದ್ದು, ‘ಸ್ವಲ್ಪ ತಾಳ್ಮೆ ತಂದುಕೊಳ್ಳಿ. ನಾನು ನಿಮಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುತ್ತೇನೆ.’ ಎಂದು ಬೇಡಿಕೊಂಡನು.
27 ರಾಜನು ತನ್ನ ಸೇವಕನ ವಿಷಯದಲ್ಲಿ ದುಃಖಪಟ್ಟು ಅವನು ಕೊಡಬೇಕಾದ ಸಾಲವನ್ನು ಮನ್ನಿಸಿ ಅವನನ್ನು ಬಿಡುಗಡೆ ಮಾಡಿದನು.
28 “ತರುವಾಯ, ಅದೇ ಸೇವಕನು ತನಗೆ ನೂರು ಬೆಳ್ಳಿಯ ನಾಣ್ಯಗಳನ್ನು ಕೊಡಬೇಕಾಗಿದ್ದ ಬೇರೊಬ್ಬ ಸೇವಕನನ್ನು ಕಂಡು ಅವನ ಕುತ್ತಿಗೆ ಹಿಡಿದು, ‘ನೀನು ನನಗೆ ಕೊಡಬೇಕಾಗಿರುವ ಹಣವನ್ನು ಕೊಡು’ ಎಂದನು.
29 “ಆ ಸೇವಕನು ಅವನ ಕಾಲಿಗೆ ಬಿದ್ದು, ‘ಸ್ವಲ್ಪ ತಾಳ್ಮೆಯಿಂದಿರು. ನಾನು ನಿನಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುತ್ತೇನೆ’ ಎಂದು ಬೇಡಿಕೊಂಡನು.
30 “ಆದರೆ ಮೊದಲನೇ ಸೇವಕನು ತಾಳಿಕೊಳ್ಳಲಿಲ್ಲ. ತನಗೆ ಸಾಲ ಕೊಡಬೇಕಾಗಿದ್ದ ಸೇವಕನ ವಿಷಯದಲ್ಲಿ ನ್ಯಾಯಾಧಿಪತಿಗೆ ದೂರುಕೊಟ್ಟು ಅವನನ್ನು ಸೆರೆಮನೆಗೆ ಹಾಕಿಸಿದನು. ಆ ಸೇವಕನು ಸಾಲ ತೀರಿಸುವವರೆಗೂ ಸೆರೆಮನೆಯಲ್ಲಿ ಇರಬೇಕಾಯಿತು.
31 ಇದನ್ನು ಕಂಡ ಇತರ ಸೇವಕರೆಲ್ಲರೂ ಬಹಳವಾಗಿ ದುಃಖಪಟ್ಟು ನಡೆದ ಸಂಗತಿಯನ್ನೆಲ್ಲಾ ಯಜಮಾನನಿಗೆ ತಿಳಿಸಿದರು.”
32 “ಆಗ ಯಜಮಾನನು ತನ್ನ ಸೇವಕನನ್ನು ಒಳಗೆ ಕರೆದು, ‘ನೀನು ದುಷ್ಟ ಸೇವಕನು. ನೀನು ನನಗೆ ಹೆಚ್ಚು ಹಣ ಕೊಡಬೇಕಾಗಿತ್ತು. ಆದರೆ ನೀನು ನನ್ನನ್ನು ಬೇಡಿಕೊಂಡದ್ದರಿಂದ ನಿನ್ನ ಸಾಲವನ್ನೆಲ್ಲ ನಾನು ಮನ್ನಿಸಿಬಿಟ್ಟೆ.
33 ಹೀಗಿರಲು ನಾನು ನಿನಗೆ ಕರುಣೆ ತೋರಿದಂತೆ ನಿನ್ನ ಜೊತೆ ಸೇವಕನಿಗೂ ನೀನು ಕರುಣೆ ತೋರಿಸಬೇಕಿತ್ತು’ ಎಂದು ಹೇಳಿ
34 ಬಹುಕೋಪಗೊಂಡು ಅವನನ್ನು ಶಿಕ್ಷಿಸುವುದಕ್ಕಾಗಿ ಸೆರೆಮನೆಗೆ ಹಾಕಿಸಿದನು. ಆ ಸೇವಕನು ತನ್ನ ಸಾಲವನ್ನೆಲ್ಲಾ ತೀರಿಸುವ ತನಕ ಸೆರೆಮನೆಯಲ್ಲಿ ಇರಬೇಕಾಯಿತು.
35 “ಪರಲೋಕದ ನನ್ನ ತಂದೆಯು ನಿಮಗೆ ಮಾಡುವಂತೆಯೇ ಈ ರಾಜನು ಮಾಡಿದನು. ನೀವು ನಿಮ್ಮ ಸಹೋದರನನ್ನಾಗಲಿ ಸಹೋದರಿಯನ್ನಾಗಲಿ ನಿಜವಾಗಿಯೂ ಕ್ಷಮಿಸಬೇಕು. ಇಲ್ಲದಿದ್ದರೆ ಪರಲೋಕದ ನನ್ನ ತಂದೆಯೂ ನಿಮ್ಮನ್ನು ಕ್ಷಮಿಸುವುದಿಲ್ಲ” ಎಂದು ಹೇಳಿದನು.