ಜೆರುಸಲೇಮಿನ ಮೇಲೆ ಭಯಂಕರ ಆಕ್ರಮಣ
4
1 ನೋಡು, ಬಂಗಾರವು ಹೇಗೆ ಕಪ್ಪಾಗಿದೆ.
ನೋಡು, ಶುದ್ಧಬಂಗಾರವು ಹೇಗೆ ಬದಲಾಗಿದೆ.
ಅಮೂಲ್ಯವಾದ ಕಲ್ಲುಗಳು ಎಲ್ಲೆಲ್ಲಿಯೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಅವು ಪ್ರತಿಯೊಂದು ಬೀದಿಯ ಕೊನೆಯಲ್ಲಿಯೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
2 ಚೀಯೋನಿನ ಜನರು ಬಂಗಾರದಂತೆ ಅಮೂಲ್ಯವಾಗಿದ್ದರು.
ಆದರೆ ಈಗ ವೈರಿಗಳು ಅವರನ್ನು ಕುಂಬಾರನಿಂದ ಮಾಡಲ್ಪಟ್ಟಿರುವ ಜೇಡಿಮಣ್ಣಿನ ಹಳೆಯ ಮಡಕೆಗಳೋ ಎಂಬಂತೆ ಪರಿಗಣಿಸಿದ್ದಾರೆ.
3 ಕಾಡುನಾಯಿಯು ಸಹ ತನ್ನ ಮರಿಗಳಿಗೆ ಹಾಲನ್ನು ಕುಡಿಸುತ್ತದೆ.
ನರಿಯು ಸಹ ತನ್ನ ಮರಿಗಳಿಗೆ ಮೊಲೆಗಳಿಂದ ಹಾಲನ್ನು ಕೊಡುತ್ತದೆ.
ಆದರೆ ನನ್ನ ಜನರಾದರೋ,
ಮರುಭೂಮಿಯಲ್ಲಿ ಜೀವಿಸುವ ಉಷ್ಟ್ರಪಕ್ಷಿಯಂತೆ ಕ್ರೂರಿಗಳಾಗಿದ್ದಾರೆ.
4 ಎಳೆಕೂಸಿನ ನಾಲಿಗೆಯು
ಬಾಯಾರಿಕೆಯಿಂದ ಅಂಗಳಿಗೆ ಅಂಟಿಕೊಳ್ಳುತ್ತದೆ.
ಎಳೆಯ ಮಕ್ಕಳು ರೊಟ್ಟಿಯನ್ನು ಕೇಳಿದರೆ
ಅವರಿಗೆ ಯಾರೂ ಏನೂ ಕೊಡುವುದಿಲ್ಲ.
5 ಒಂದು ಕಾಲದಲ್ಲಿ ಮೃಷ್ಟಾನ್ನವನ್ನು ತಿಂದ ಜನರು
ಈಗ ಬೀದಿಗಳಲ್ಲಿ ಸಾಯುತ್ತಿದ್ದಾರೆ.
ಸುಂದರವಾದ ಕೆಂಪು ಉಡುಪುಗಳನ್ನು ಧರಿಸಿಕೊಂಡು ಬೆಳೆದ ಜನರು
ಈಗ ಕಸದ ಗುಂಡಿಗಳಿಂದ ಆಹಾರವನ್ನು ಎತ್ತಿಕೊಳ್ಳುತ್ತಿದ್ದಾರೆ.
6 ನನ್ನ ಜನರ ಪಾಪವು ಬಹಳವಾಗಿತ್ತು.
ಅವರ ಪಾಪವು ಸೊದೋಮ್ ಪಟ್ಟಣದ ಪಾಪಕ್ಕಿಂತಲೂ ಹೆಚ್ಚಾಗಿತ್ತು.
ಸೊದೋಮ್ ಇದ್ದಕ್ಕಿದ್ದಂತೆ ನಾಶವಾಯಿತು.
ಅದು ನಾಶವಾದದ್ದು ಯಾವ ಮಾನವನಿಂದಲೂ ಅಲ್ಲ.
7 ಯೆಹೂದದ ಕೆಲವು ಜನರು
ದೇವರಿಗೆ ವಿಶೇಷವಾದ ರೀತಿಯಲ್ಲಿ ಸಮರ್ಪಿತರಾಗಿದ್ದರು.
ಅವರು ಬಹಳ ಶುದ್ಧರಾಗಿದ್ದರು.
ಅವರು ಹಿಮಕ್ಕಿಂತಲೂ ಹಾಲಿಗಿಂತಲೂ ಬಿಳುಪಾಗಿದ್ದರು.
ಅವರ ದೇಹಗಳು ಹವಳದಂತೆ ಕೆಂಪಾಗಿದ್ದವು.
ಅವರ ಗಡ್ಡಗಳು ಇಂದ್ರನೀಲಮಣಿಯಂತಿದ್ದವು.
8 ಆದರೆ ಈಗ ಅವರ ಮುಖಗಳು ಕಪ್ಪು ಹೊಗೆಗಿಂತಲೂ ಕಪ್ಪಾಗಿವೆ.
ಅವರನ್ನು ಬೀದಿಗಳಲ್ಲಿ ಯಾರೂ ಸಹ ಗುರುತಿಸುವುದಿಲ್ಲ.
ಅವರ ಚರ್ಮವು ಅವರ ಮೂಳೆಗಳ ಮೇಲೆ ಸುಕ್ಕುಗೊಂಡಿದೆ.
ಅವರ ಚರ್ಮವು ಮರದಂತಾಗಿದೆ.
9 ಬರಗಾಲದ ನಿಮಿತ್ತ ಸತ್ತವರಿಗಿಂತಲೂ
ಖಡ್ಗಗಳಿಂದ ಹತರಾದವರ ಸಾವೇ ಮೇಲಾಗಿತ್ತು.
ಹಸಿವೆಯಿಂದಿದ್ದ ಜನರು ನೋವಿನಿಂದ ನರಳಾಡಿದರು.
ಭೂಮಿಯಿಂದ ಆಹಾರವನ್ನು ಪಡೆಯಲಾಗದೆ ಅವರು ಸತ್ತು ಹೋದರು.
10 ಆ ಸಮಯದಲ್ಲಿ, ಕನಿಕರವುಳ್ಳ ಸ್ತ್ರೀಯರು
ಸಹ ತಮ್ಮ ಮಕ್ಕಳನ್ನೇ ಬೇಯಿಸಿ ತಿಂದುಬಿಟ್ಟರು.
ಆ ಮಕ್ಕಳು ಅವರ ತಾಯಂದಿರಿಗೇ ಆಹಾರವಾದರು.
ನನ್ನ ಜನರು ನಾಶಗೊಂಡಾಗ ಇದು ಸಂಭವಿಸಿತು.
11 ಯೆಹೋವನು ತನ್ನ ಕೋಪವನ್ನೆಲ್ಲ ಉಪಯೋಗಿಸಿದನು;
ತನ್ನ ಕೋಪವನ್ನೆಲ್ಲಾ ಸುರಿದುಬಿಟ್ಟನು.
ಆತನು ಚೀಯೋನಿನಲ್ಲಿ ಬೆಂಕಿ ಹೊತ್ತಿಸಿದನು.
ಆ ಬೆಂಕಿಯು ಚೀಯೋನಿನ ಅಡಿಪಾಯಗಳವರೆಗೂ ದಹಿಸಿಬಿಟ್ಟಿತು.
12 ನಡೆದಿದ್ದ ಸಂಗತಿಯನ್ನು ನಂಬುವುದಕ್ಕೂ
ಭೂಲೋಕದ ರಾಜರಿಗೆ ಆಗಲಿಲ್ಲ.
ನಡೆದಿದ್ದ ಸಂಗತಿಯನ್ನು ನಂಬುವುದಕ್ಕೂ
ಲೋಕದ ಜನರಿಗೆ ಆಗಲಿಲ್ಲ.
ಜೆರುಸಲೇಮ್ ಪಟ್ಟಣದ ಬಾಗಿಲುಗಳ ಮೂಲಕ ವೈರಿಗಳು
ಬಂದರೆಂಬುದನ್ನು ಅವರಿಗೆ ನಂಬಲೂ ಆಗಲಿಲ್ಲ.
13 ಜೆರುಸಲೇಮಿನ ಪ್ರವಾದಿಗಳು ಪಾಪ ಮಾಡಿದ್ದರಿಂದಲೇ
ಇದು ಸಂಭವಿಸಿತು.
ಜೆರುಸಲೇಮಿನ ಯಾಜಕರು ದುಷ್ಕೃತ್ಯಗಳನ್ನು ಮಾಡಿದ್ದದರಿಂದಲೇ
ಇದು ಸಂಭವಿಸಿತು.
ಆ ಜನರು ಜೆರುಸಲೇಮ್ ಪಟ್ಟಣದಲ್ಲಿ
ಒಳ್ಳೆಯ ಜನರ ರಕ್ತವನ್ನು ಸುರಿಸಿದ್ದರು.
14 ಆದ್ದರಿಂದ ಆ ಪ್ರವಾದಿಗಳು ಮತ್ತು ಯಾಜಕರು
ಕುರುಡರಂತೆ ಬೀದಿಗಳಲ್ಲಿ ಅಲೆದಾಡಿದರು.
ಅವರು ರಕ್ತದಿಂದ ಹೊಲಸಾಗಿದ್ದರು.
ಅವರು ಹೊಲಸಾಗಿದ್ದದರಿಂದ ಅವರ ಬಟ್ಟೆಯನ್ನು ಮುಟ್ಟುವುದಕ್ಕೂ ಯಾರಿಗೂ ಸಾಧ್ಯವಿರಲಿಲ್ಲ.
15 “ತೊಲಗಿಹೋಗಿ! ತೊಲಗಿಹೋಗಿ!
ನಮ್ಮನ್ನು ಮುಟ್ಟಬೇಡಿ” ಎಂದು ಜನರು ಕೂಗಿಕೊಂಡರು.
ಆ ಜನರು ಅಲೆದಾಡುತ್ತಿದ್ದರು. ಅವರಿಗೆ ಸ್ಥಳವಿರಲಿಲ್ಲ.
ಬೇರೆ ಜನಾಂಗಗಳ ಜನರು,
“ಅವರು ನಮ್ಮೊಂದಿಗೆ ವಾಸಿಸುವುದು ನಮಗೆ ಬೇಕಿಲ್ಲ” ಎಂದು ಹೇಳಿದರು.
16 ಯೆಹೋವನು ತಾನೇ ಆ ಜನರನ್ನು ನಾಶಮಾಡಿದನು.
ಅವರ ಪರಿಪಾಲನೆ ಮಾಡುವುದನ್ನು ನಿಲ್ಲಿಸಿದನು.
ಆತನು ಯಾಜಕರನ್ನು ಗೌರವಿಸಲಿಲ್ಲ.
ಆತನು ಯೆಹೂದದ ಹಿರಿಯರೊಂದಿಗೆ ಕರುಣೆಯಿಂದಿರಲಿಲ್ಲ.
17 ಸಹಾಯಕ್ಕಾಗಿ ಎದುರುನೋಡುತ್ತಾ ನಮ್ಮ ಕಣ್ಣುಗಳು ಮೊಬ್ಬಾದವು.
ಆದರೆ ಯಾವ ಸಹಾಯವೂ ಬರಲಿಲ್ಲ.
ಯಾವ ಜನಾಂಗವಾದರೂ ಬಂದು ನಮ್ಮನ್ನು ರಕ್ಷಿಸುವುದೇನೋ ಎಂದು ಕೋವರದಲ್ಲಿ ನೋಡುತ್ತಲೇ ಇದ್ದೆವು,
ಆದರೆ ಯಾವ ಜನಾಂಗವೂ ಬರಲಿಲ್ಲ.
18 ನಮ್ಮ ವೈರಿಗಳು ನಮ್ಮನ್ನು ಸತತವಾಗಿ ಬೇಟೆಯಾಡುತ್ತಿದ್ದುದರಿಂದ
ನಾವು ಬೀದಿಗಳಿಗೆ ಹೋಗಲೂ ಸಾಧ್ಯವಾಗಲಿಲ್ಲ.
ನಮ್ಮ ಅಂತ್ಯವು ಸಮೀಪಿಸಿತು.
ನಮ್ಮ ಕಾಲವು ಮುಗಿಯಿತು. ನಮ್ಮ ಕೊನೆಯು ಬಂದಿತು!
19 ನಮ್ಮನ್ನು ಅಟ್ಟಿಸಿಕೊಂಡು ಬಂದ ಜನರು
ಆಕಾಶದಲ್ಲಿ ಹಾರುವ ಹದ್ದುಗಳಿಗಿಂತಲೂ ವೇಗಶಾಲಿಗಳಾಗಿದ್ದರು.
ಅವರು ನಮ್ಮನ್ನು ಬೆಟ್ಟಗಳಿಗೆ ಅಟ್ಟಿಸಿಕೊಂಡು ಬಂದರು.
ನಮ್ಮನ್ನು ಹಿಡಿಯುವುದಕ್ಕಾಗಿ ಮರುಭೂಮಿಯಲ್ಲಿ ಅವಿತುಕೊಂಡರು.
20 ನಮಗೆ ರಾಜನು ಬಹಳ ಮುಖ್ಯವಾಗಿದ್ದನು.
ಅವನು ನಮಗೆ ಉಸಿರಿನಷ್ಟೇ ಅಮೂಲ್ಯವಾಗಿದ್ದನು.
ಆದರೆ ಅವರು ರಾಜನನ್ನೇ ಸೆರೆಹಿಡಿದರು.
ಯೆಹೋವನೇ, ಆ ರಾಜನನ್ನು ಆರಿಸಿಕೊಂಡಿದ್ದನು. “ನಾವು ಅವನ ನೆರಳಿನಲ್ಲಿ ಬದುಕುತ್ತೇವೆ.
ಅವನು ನಮ್ಮನ್ನು ಜನಾಂಗಗಳವರಿಂದ ಸಂರಕ್ಷಿಸುವನು”
ಎಂದು ನಾವು ರಾಜನ ಬಗ್ಗೆ ಹೇಳಿಕೊಂಡಿದ್ದೆವು.
21 ಎದೋಮಿನ ಜನರೇ, ಸಂತೋಷವಾಗಿರಿ.
ಊಚ್ ದೇಶದಲ್ಲಿ ವಾಸವಾಗಿರುವ ಜನರೇ, ಸಂತೋಷವಾಗಿರಿ.
ಆದರೆ ಜ್ಞಾಪಕದಲ್ಲಿಟ್ಟುಕೊಂಡಿರಿ, ಯೆಹೋವನ ಕೋಪದ ಪಾತ್ರೆಯು ನಿಮ್ಮ ಬಳಿಗೂ ಬರುವುದು.
ನೀವು ಆ ಪಾತ್ರೆಯಿಂದ ಕುಡಿಯುವಾಗ
ಮತ್ತೇರಿದವರಾಗಿ ನಿಮ್ಮನ್ನು ನೀವೇ ಬೆತ್ತಲು ಮಾಡಿಕೊಳ್ಳುವಿರಿ.
22 ಚೀಯೋನೇ, ನಿನಗಾಗಬೇಕಿದ್ದ ದಂಡನೆಯು ಸಂಪೂರ್ಣವಾಯಿತು.
ಮತ್ತೆ ನೀನು ಸೆರೆವಾಸಕ್ಕೆ ಹೋಗುವುದಿಲ್ಲ.
ಆದರೆ ಎದೋಮಿನ ಜನರೇ, ನಿಮ್ಮ ಪಾಪಗಳಿಗಾಗಿ ಯೆಹೋವನು ನಿಮ್ಮನ್ನು ದಂಡಿಸುವನು.
ಆತನು ನಿಮ್ಮ ಪಾಪಗಳನ್ನು ಬಹಿರಂಗಪಡಿಸುವನು.