33
“ಈಗಲಾದರೋ ಯೋಬನೇ, ನನ್ನ ಸಂದೇಶಕ್ಕೆ ಕಿವಿಗೊಡು.
ನನ್ನ ಮಾತುಗಳಿಗೆ ಗಮನ ಕೊಡು.
ಈಗ ನಾನು ನನ್ನ ಬಾಯಿ ತೆರೆಯುವೆನು; ನಾನು ಮಾತಾಡಲು ಸಿದ್ಧನಾಗಿದ್ದೇನೆ.
ನನ್ನ ಹೃದಯವು ಯಥಾರ್ಥವಾಗಿದೆ; ಆದ್ದರಿಂದ ನಾನು ಯಥಾರ್ಥವಾದ ಮಾತುಗಳನ್ನು ಹೇಳುವೆನು,
ನನಗೆ ತಿಳಿದಿರುವ ಸಂಗತಿಗಳ ಬಗ್ಗೆ ಸತ್ಯವನ್ನು ಹೇಳುವೆನು.
ದೇವರಾತ್ಮನು ನನ್ನನ್ನು ನಿರ್ಮಿಸಿದನು.
ಸರ್ವಶಕ್ತನಾದ ದೇವರ ಉಸಿರು ನನಗೆ ಜೀವವನ್ನು ಕೊಟ್ಟಿತು.
ಯೋಬನೇ, ಕಿವಿಗೊಡು! ನಿನಗೆ ಸಾಧ್ಯವೆನಿಸಿದರೆ ನನಗೆ ಉತ್ತರಕೊಡು.
ನಿನ್ನ ವಾದವನ್ನು ಸಿದ್ಧಪಡಿಸಿಕೊ; ನನ್ನೆದುರಿನಲ್ಲಿ ನಿನ್ನ ಪರವಾಗಿ ಪ್ರತಿವಾದಿಸು!
ನೀನು ಮತ್ತು ನಾನು ದೇವರ ಎದುರಿನಲ್ಲಿ ಒಂದೇ ರೀತಿಯಲ್ಲಿದ್ದೇವೆ.
ದೇವರು ನಮ್ಮಿಬ್ಬರನ್ನು ಮಣ್ಣಿನಿಂದ ನಿರ್ಮಿಸಿದನು.
ಯೋಬನೇ, ನನಗೆ ಭಯಪಡಬೇಡ.
ನಾನು ನಿನ್ನನ್ನು ಸೋಲಿಸುವುದಿಲ್ಲ.
“ಆದರೆ ಯೋಬನೇ,
ನೀನು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
‘ಯೋಬನಾದ ನಾನು ಪರಿಶುದ್ಧನು; ನಾನು ನಿರಪರಾಧಿ;
ನಾನು ಯಾವ ತಪ್ಪನ್ನೂ ಮಾಡಲಿಲ್ಲ; ನಾನು ದೋಷಿಯಲ್ಲ!
10 ನಾನು ತಪ್ಪು ಮಾಡಿಲ್ಲದಿದ್ದರೂ ದೇವರು ನನಗೆ ವಿರೋಧವಾಗಿದ್ದಾನೆ.
ದೇವರು ನನ್ನನ್ನು ತನ್ನ ವೈರಿಯೆಂದು ಪರಿಗಣಿಸಿದ್ದಾನೆ;
11 ದೇವರು ನನ್ನ ಕಾಲುಗಳನ್ನು ಸರಪಣಿಯಿಂದ ಕಟ್ಟಿದ್ದಾನೆ;
ನಾನು ಮಾಡುವ ಪ್ರತಿಯೊಂದನ್ನೂ ದೇವರು ಗಮನಿಸುತ್ತಿದ್ದಾನೆ.’
12 “ಆದರೆ ಯೋಬನೇ, ಈ ವಿಷಯದಲ್ಲಿ ನೀನು ತಪ್ಪಿತಸ್ಥನಾಗಿರುವೆ. ನಾನು ಅದನ್ನು ನಿರೂಪಿಸುವೆ.
ದೇವರು ಮನುಷ್ಯನಿಗಿಂತ ದೊಡ್ಡವನು.
13 ಯೋಬನೇ, ನೀನು ದೇವರೊಂದಿಗೆ ವಾದಿಸುವುದೇಕೆ?
ದೇವರು ನಿನಗೆ ಪ್ರತಿಯೊಂದನ್ನೂ ವಿವರಿಸಬೇಕೆಂದು ಭಾವಿಸಿಕೊಂಡಿರುವೆಯೋ?
14 ಒಂದುವೇಳೆ ದೇವರು ತನ್ನ ಕಾರ್ಯದ ಕುರಿತಾಗಿ ವಿವರಿಸಬಹುದು.
ಒಂದುವೇಳೆ ನಮಗೆ ಅರ್ಥವಾಗದ ರೀತಿಯಲ್ಲಿ ಆತನು ಮಾತಾಡಬಹುದು.
15 ಜನರು ಗಾಢನಿದ್ರೆಯಲ್ಲಿರುವಾಗ
ದೇವರು ಕನಸಿನ ಮೂಲಕವಾಗಲಿ ದರ್ಶನದ ಮೂಲಕವಾಗಲಿ ಮಾತಾಡಬಹುದು.
16 ಆತನು ಅವರ ಕಿವಿಗಳಲ್ಲಿ ಮಾತಾಡಬಹುದು.
ಆಗ ಅವರು ದೇವರ ಎಚ್ಚರಿಕೆಗಳಿಂದ ಬಹು ಭಯಗೊಳ್ಳುವರು.
17 ಜನರು ತಪ್ಪು ಮಾಡಬಾರದೆಂದೂ ಅಹಂಕಾರಿಗಳಾಗಿರಬಾರದೆಂದೂ
ದೇವರು ಅವರಿಗೆ ಎಚ್ಚರಿಕೆ ಕೊಡುತ್ತಾನೆ.
18 ಮರಣದ ಸ್ಥಳಕ್ಕೆ ಹೋಗುತ್ತಿರುವ ಜನರನ್ನು ರಕ್ಷಿಸುವುದಕ್ಕಾಗಿ ದೇವರು ಎಚ್ಚರಿಕೆ ಕೊಡುತ್ತಾನೆ.
ನಾಶವಾಗುತ್ತಿರುವವನನ್ನು ರಕ್ಷಿಸುವುದಕ್ಕಾಗಿ ದೇವರು ಎಚ್ಚರಿಸುತ್ತಾನೆ.
19 “ಇದಲ್ಲದೆ ಒಬ್ಬನು ದೇವರ ಶಿಕ್ಷೆಯಿಂದ ಹಾಸಿಗೆಹಿಡಿದು ಸಂಕಟಪಡುತ್ತಿರುವಾಗ ದೇವರ ಸ್ವರಕ್ಕೆ ಕಿವಿಗೊಟ್ಟರೂ ಕೊಡಬಹುದು.
ದೇವರು ಅವನನ್ನು ಎಲುಬುಗಳೆಲ್ಲಾ ಬಾಧಿಸುವಂಥ ನೋವಿನಿಂದ ಎಚ್ಚರಿಸುತ್ತಾನೆ.
20 ಅವನಿಗೆ ಊಟಮಾಡಲೂ ಸಾಧ್ಯವಿಲ್ಲ.
ಅವನು ಅತ್ಯಧಿಕವಾದ ನೋವಿನಿಂದ ಬಳಲುತ್ತಿರುವುದರಿಂದ ಮೃಷ್ಠಾನ್ನಕ್ಕೂ ಅಸಹ್ಯಪಡುವನು.
21 ಅವನು ಆಸ್ತಿಪಂಜರದಂತೆ ಕ್ಷೀಣವಾಗುವನು.
ಕಾಣದಿದ್ದ ಅವನ ಎಲುಬುಗಳು ಚರ್ಮಕ್ಕೆ ಅಂಟಿಕೊಂಡು ಅವು ಹೊರತೋರುತ್ತವೆ.
22 ಅವನಿಗೆ ಸಾವು ಸಮೀಪವಾಗಿದೆ;
ಅವನ ಜೀವವು ಪಾತಾಳಕ್ಕೆ ಹತ್ತಿರವಾಗಿದೆ.
23 ಒಂದುವೇಳೆ ದೇವರ ದೂತರಲ್ಲೊಬ್ಬನು ಮಧ್ಯಸ್ಥಗಾರನಾಗಿ ಬಂದು
ಅವನ ನೀತಿಕಾರ್ಯಗಳನ್ನು ದೃಢಪಡಿಸಿ ಅವನ ಮೇಲೆ ಪ್ರೀತಿಯುಳ್ಳವನಾಗಿ,
24 ‘ಇವನನ್ನು ಪಾತಾಳದಿಂದ ರಕ್ಷಿಸು!
ಇವನಿಗೋಸ್ಕರ ಪ್ರಾಯಶ್ಚಿತ್ತದ ಮಾರ್ಗವೊಂದನ್ನು ಕಂಡುಕೊಂಡಿದ್ದೇನೆ’ ಎಂದು ಹೇಳಿದರೆ
25 ಅವನ ದೇಹವು ಬಾಲ್ಯದಂತೆ ಕೋಮಲವಾಗುವುದು;
ಯೌವನಪ್ರಾಯದಂತೆ ದೃಢಕಾಯವಾಗುವುದು.
26 ಆಗ ಅವನು ದೇವರಿಗೆ ಪ್ರಾರ್ಥಿಸಲು ಆತನು ಅವನ ಪ್ರಾರ್ಥನೆಗೆ ಉತ್ತರಕೊಡುವನು.
ಅವನು ಆನಂದ ಧ್ವನಿಗೈದು ದೇವರನ್ನು ಆರಾಧಿಸುವನು;
ಆತನ ಮುಂದೆ ನೀತಿವಂತನಾಗಿ ಜೀವಿಸುವನು.
27 ಬಳಿಕ ಅವನು ಜನರ ಮುಂದೆ ನಿಂತುಕೊಂಡು, ‘ನಾನು ಪಾಪಮಾಡಿದೆನು;
ಒಳ್ಳೆಯದನ್ನು ಕೆಟ್ಟದ್ದನ್ನಾಗಿ ಮಾಡಿದೆನು.
ಆದರೆ ದೇವರು ಅದಕ್ಕೆ ತಕ್ಕಂತೆ ನನ್ನನ್ನು ದಂಡಿಸಲಿಲ್ಲ!
28 ದೇವರು ನನ್ನ ಆತ್ಮವನ್ನು ಪಾತಾಳಕ್ಕೆ ಹೋಗದಂತೆ ರಕ್ಷಿಸಿದನು.
ಆದ್ದರಿಂದ ನಾನು ಜೀವನದಲ್ಲಿ ಮತ್ತೆ ಸುಖಪಡುವಂತಾಯಿತು’ ಎಂದು ಅರಿಕೆಮಾಡಿಕೊಳ್ಳುವನು.
29-30 “ಅವನನ್ನು ಎಚ್ಚರಿಸಿ ಅವನ ಆತ್ಮವನ್ನು ಪಾತಾಳದಿಂದ ರಕ್ಷಿಸಬೇಕೆಂದೂ ಜೀವನದ ಸುಖವನ್ನು ಅವನು ಮತ್ತೆ ಅನುಭವಿಸಲೆಂದೂ
ದೇವರು ಈ ಕಾರ್ಯಗಳನ್ನು ಪದೇಪದೇ ಮಾಡುವನು.
31 “ಯೋಬನೇ, ನನ್ನ ಮಾತುಗಳಿಗೆ ಗಮನಕೊಟ್ಟು ಕೇಳು, ಮೌನವಾಗಿರು.
ನಾನು ಮಾತಾಡುವೆನು.
32 ಯೋಬನೇ, ನೀನು ಏನಾದರೂ ಹೇಳಬೇಕೆಂದಿದ್ದರೆ, ಅದನ್ನು ನಾನು ಕೇಳುವಂತಾಗಲಿ.
ಮುನ್ನಡೆದು ಮಾತಾಡು,
ಯಾಕೆಂದರೆ ನಿನ್ನನ್ನು ನೀತಿವಂತನೆಂದು ಸ್ಥಾಪಿಸಲು ನನಗೆ ಸಂತೋಷ.
33 ಯೋಬನೇ, ಹೇಳುವುದಕ್ಕೆ ನಿನ್ನಲ್ಲಿ ಏನೂ ಇಲ್ಲದಿದ್ದರೆ ನನಗೆ ಕಿವಿಗೊಟ್ಟು ಮೌನವಾಗಿರು.
ನಾನು ನಿನಗೆ ಜ್ಞಾನವನ್ನು ಬೋಧಿಸುವೆನು.”