27
ಬಳಿಕ ಯೋಬನು ತನ್ನ ಮಾತನ್ನು ಮುಂದುವರಿಸಿದನು:
“ದೇವರ ಮೇಲೆ ಆಣೆಯಿಟ್ಟು ಹೇಳುವೆ.
ಆತನು ನನಗೆ ನ್ಯಾಯವನ್ನು ದೊರಕಿಸದೆ ನನ್ನ ಜೀವನವನ್ನು ಕಹಿಯನ್ನಾಗಿ ಮಾಡಿದನು.
ಆದರೆ ಜೀವವು ನನ್ನೊಳಗಿರುವ ತನಕ,
ದೇವರ ಜೀವಶ್ವಾಸವು ನನ್ನ ಮೂಗಿನಲ್ಲಿ ಇರುವವರೆಗೆ,
ನನ್ನ ತುಟಿಗಳು ಕೆಟ್ಟ ಮಾತುಗಳನ್ನು ಆಡುವುದಿಲ್ಲ;
ನನ್ನ ನಾಲಿಗೆಯು ಸುಳ್ಳಾಡುವುದಿಲ್ಲ.
ನೀವು ನ್ಯಾಯವಂತರೆಂದು ನಾನು ಒಪ್ಪಿಕೊಳ್ಳುವುದಿಲ್ಲ.
ನಾನು ನಿರಪರಾಧಿಯೆಂದು ನನ್ನ ಮರಣದ ದಿನದವರೆಗೂ ಹೇಳುತ್ತಲೇ ಇರುವೆನು.
ನನ್ನ ನೀತಿಯನ್ನು ಬಲವಾಗಿ ಹಿಡಿದುಕೊಳ್ಳುವೆನು; ಅದನ್ನೆಂದಿಗೂ ಬಿಟ್ಟುಕೊಡೆನು.
ನಾನು ಜೀವದಿಂದಿರುವತನಕ ನನ್ನ ಮನಸ್ಸಾಕ್ಷಿಯು ನನ್ನನ್ನು ಕಾಡಿಸುವುದೇ ಇಲ್ಲ.
ನನ್ನ ವೈರಿಗಳಿಗೆ ದುಷ್ಟರ ಗತಿಯಾಗಲಿ.
ನನ್ನ ವಿರೋಧಿಗಳಿಗೆ ಅನೀತಿವಂತರ ಗತಿಯಾಗಲಿ.
ದೈವಿಕನಲ್ಲದವನ ಜೀವವನ್ನು ದೇವರು ತೆಗೆದುಹಾಕುವಾಗ
ಅವನಿಗೆ ನಿರೀಕ್ಷೆಯೇ ಇರುವುದಿಲ್ಲ.
ಆ ದುಷ್ಟನು ಆಪತ್ತುಗಳಲ್ಲಿರುವಾಗ ದೇವರಿಗೆ ಮೊರೆಯಿಡುವನು;
ಆದರೆ ದೇವರು ಅವನಿಗೆ ಕಿವಿಗೊಡುವುದಿಲ್ಲ.
10 ಅವನು ಸರ್ವಶಕ್ತನಾದ ದೇವರಲ್ಲಿ ಆನಂದಿಸಬೇಕಿತ್ತು;
ಯಾವಾಗಲೂ ಆತನಿಗೆ ಪ್ರಾರ್ಥಿಸಬೇಕಿತ್ತು.
11 “ನಾನು ನಿಮಗೆ ದೇವರ ಶಕ್ತಿಯ ಬಗ್ಗೆ ಉಪದೇಶಿಸುವೆನು.
ಸರ್ವಶಕ್ತನಾದ ದೇವರ ಆಲೋಚನೆಗಳನ್ನು ನಾನು ನಿಮಗೆ ಮರೆಮಾಡುವುದಿಲ್ಲ.
12 ನೀವೆಲ್ಲರೂ ಇವುಗಳನ್ನು ಕಣ್ಣಾರೆ ನೋಡಿದ್ದೀರಿ.
ಹೀಗಿರಲು ಅಂಥ ನಿಷ್ಪ್ರಯೋಜಕ ಸಂಗತಿಗಳನ್ನು ಯಾಕೆ ಹೇಳುವಿರಿ?
13 “ದೇವರು ದುಷ್ಟರಿಗೋಸ್ಕರ ಮಾಡಿರುವ ಯೋಜನೆಯೂ
ಸರ್ವಶಕ್ತನಾದ ದೇವರಿಂದ ಹಿಂಸಕನಿಗೆ ದೊರೆಯುವ ಸ್ವಾಸ್ತ್ಯವೂ ಹೀಗಿವೆ:
14 ದುಷ್ಟನು ಅನೇಕ ಮಕ್ಕಳನ್ನು ಪಡೆದುಕೊಂಡರೂ ಅವರು ಯುದ್ಧದಲ್ಲಿ ಕೊಲ್ಲಲ್ಪಡುವರು;
ಅವರಿಗೆ ಊಟಕ್ಕೂ ಇರುವುದಿಲ್ಲ.
15 ದುಷ್ಟನ ಮಕ್ಕಳೂ ಇನ್ನೂ ಉಳಿದುಕೊಂಡಿದ್ದರೆ ಭಯಂಕರವಾದ ರೋಗಗಳಿಂದ ಸಾಯುವರು;
ಅವರ ವಿಧವೆಯರು ಅವರಿಗೋಸ್ಕರ ದುಃಖಿಸುವುದಿಲ್ಲ.
16 ದುಷ್ಟನು ಬೆಳ್ಳಿಯನ್ನು ಧೂಳಿನಂತೆ ರಾಶಿಮಾಡಿಕೊಂಡರೂ
ಬಟ್ಟೆಗಳನ್ನು ಮಣ್ಣಿನ ರಾಶಿಗಳಂತೆ ಪಡೆದುಕೊಂಡರೂ
17 ಆ ಬಟ್ಟೆಗಳನ್ನು ನೀತಿವಂತರು ಧರಿಸಿಕೊಳ್ಳುವರು;
ಅವನ ಬೆಳ್ಳಿಯನ್ನು ನಿರ್ದೋಷಿಗಳು ಹಂಚಿಕೊಳ್ಳುವರು.
18 ದುಷ್ಟನು ಕಟ್ಟುವ ಮನೆಯು ಜೇಡರ ಬಲೆಯಂತೆಯೂ
ಕಾವಲುಗಾರನ ಗುಡಾರದಂತೆಯೂ ಕ್ಷಣಿಕವಾಗಿರುವುದು.
19 ದುಷ್ಟನು ಮಲಗಿಕೊಳ್ಳುವಾಗ ಐಶ್ವರ್ಯವಂತನಾಗಿದ್ದರೂ
ನಿದ್ರೆಯಿಂದ ಎಚ್ಚೆತ್ತಾಗ ಅವನ ಐಶ್ವರ್ಯವೆಲ್ಲಾ ಹೊರಟುಹೋಗಿರುವುದು.
20 ಆಪತ್ತುಗಳು ಇದ್ದಕ್ಕಿದ್ದಂತೆ ಬರುವ ಪ್ರವಾಹದಂತೆ ಅವನನ್ನು ಆವರಿಸಿಕೊಳ್ಳುತ್ತವೆ.
ಬಿರುಗಾಳಿಯು ಅವನನ್ನು ರಾತ್ರಿಯಲ್ಲಿ ಹೊತ್ತುಕೊಂಡು ಹೋಗುವುದು.
21 ಪೂರ್ವದ ಗಾಳಿಯು ಅವನನ್ನು ಹೊತ್ತುಕೊಂಡು ಹೋಗುವುದರಿಂದ ಅವನು ಇಲ್ಲವಾಗುವನು.
ಬಿರುಗಾಳಿಯು ಅವನನ್ನು ಮನೆಯೊಳಗಿಂದ ಹೊತ್ತುಕೊಂಡುಹೋಗುವುದು.
22 ದುಷ್ಟನು ಬಿರುಗಾಳಿಯ ಶಕ್ತಿಯಿಂದ ಓಡಿಹೋಗಲು ಪ್ರಯತ್ನಿಸುವನು.
ಆದರೆ ಬಿರುಗಾಳಿಯು ಕರುಣೆಯಿಲ್ಲದೆ ಅವನಿಗೆ ಬಡಿಯುವುದು.
23 ದುಷ್ಟನು ಓಡಿಹೋಗುತ್ತಿರಲು ಜನರು ಚಪ್ಪಾಳೆ ತಟ್ಟುವರು;
ಅವನ ಮನೆಯೊಳಗಿಂದ ಓಡಿಹೋಗುತ್ತಿರಲು ಜನರು ಸೀಟಿ ಹೊಡೆಯುವರು.”