ಯೆಹೋವನ ಬಳಿಗೆ ಹಿಂದಿರುಗಿರಿ
14
ಇಸ್ರೇಲೇ, ನೀನು ಜಾರಿಬಿದ್ದು ದೇವರಿಗೆ ವಿರುದ್ಧವಾಗಿ ಪಾಪಮಾಡಿದಿ. ನಿನ್ನ ದೇವರಾದ ಯೆಹೋವನ ಬಳಿಗೆ ಹಿಂದಿರುಗಿ ಬಾ. ನೀನು ಹೇಳಬೇಕಾದ ವಿಷಯಗಳ ಕುರಿತು ನೀನು ಆಲೋಚಿಸು ಮತ್ತು ಯೆಹೋವನ ಬಳಿಗೆ ಹಿಂದಿರುಗಿ ಬಾ ಮತ್ತು ಆತನಿಗೆ ಹೀಗೆ ಹೇಳು:
“ನಮ್ಮ ಪಾಪಗಳನ್ನು ನಮ್ಮಿಂದ ತೆಗೆ.
ನಾವು ಮಾಡುವ ಒಳ್ಳೆಯ ಕಾರ್ಯಗಳನ್ನು ಸ್ವೀಕರಿಸು.
ಆಗ ನಮ್ಮ ತುಟಿಗಳಿಂದ ನಿನಗೆ ಸ್ತೋತ್ರವೆಂಬ ಕಾಣಿಕೆಯನ್ನು ಸಮರ್ಪಿಸುವೆವು.
ಅಶ್ಶೂರವು ನಮ್ಮನ್ನು ರಕ್ಷಿಸಲಾರದು.
ನಾವು ಕುದುರೆ ಮೇಲೆ ಸವಾರಿ ಮಾಡುವದಿಲ್ಲ.
ನಮ್ಮ ಕೈಗಳು ತಯಾರಿಸಿದ ಬೊಂಬೆಗಳಿಗೆ ನಾವು ಇನ್ನು
‘ನಮ್ಮ ದೇವರು’ ಎಂದು ಹೇಳುವದಿಲ್ಲ.
ಯಾಕೆಂದರೆ ಅನಾಥರಿಗೆ
ಕರುಣೆಯನ್ನು ತೋರಿಸುವವನು ನೀನೇ.”
ಯೆಹೋವನು ಇಸ್ರೇಲನ್ನು ಕ್ಷಮಿಸುವನು
ಯೆಹೋವನು ಹೇಳುವುದೇನೆಂದರೆ,
“ಅವರು ನನ್ನನ್ನು ತೊರೆದುಬಿಟ್ಟಿದ್ದನ್ನು ನಾನು ಕ್ಷಮಿಸುವೆನು.
ಅವರನ್ನು ಅಧಿಕವಾಗಿಯೂ ಸ್ವಇಚ್ಛೆಯಿಂದಲೂ ಪ್ರೀತಿಸುವೆನು.
ಈಗ ಅವರ ಮೇಲೆ ನಾನು ಕೋಪಿಸುವದಿಲ್ಲ.
ಇಸ್ರೇಲಿಗೆ ನಾನು ಇಬ್ಬನಿಯಂತಿರುವೆನು.
ನೆಲದಾವರೆಯಂತೆ ಇಸ್ರೇಲ್ ಅರಳುವನು.
ಲೆಬನೋನಿನ ದೇವದಾರು ವೃಕ್ಷಗಳಂತೆ ಸೊಂಪಾಗಿ ಬೆಳೆಯುವನು.
ಅವನ ಕೊಂಬೆಗಳು ಬೆಳೆದು ಹರಡಿಕೊಳ್ಳುತ್ತವೆ;
ಅವನು ಅಂದವಾದ ಆಲೀವ್ ಮರದಂತಿರುವನು.
ಲೆಬನೋನಿನ ದೇವದಾರು ಮರಗಳ ಸುವಾಸನೆಯಂತೆ
ಅವನು ಗಮಗಮಿಸುವನು.
ಇಸ್ರೇಲಿನ ಜನರು ಮತ್ತೆ ನನ್ನ ಆಶ್ರಯದಲ್ಲಿ ವಾಸಿಸುವರು.
ಧಾನ್ಯದ ಸಸಿಗಳಂತೆ ಬೆಳೆಯುವರು,
ದ್ರಾಕ್ಷಾಲತೆಯಿಂದ ಚಿಗುರುವರು.
ಲೆಬನೋನಿನ ದ್ರಾಕ್ಷಿಬಳ್ಳಿಯಂತೆ ಅವರು ಇರುವರು.”
ವಿಗ್ರಹಗಳ ಬಗ್ಗೆ ಯೆಹೋವನ ಎಚ್ಚರಿಕೆ
“ಎಫ್ರಾಯೀಮೇ, ಇನ್ನುಮುಂದೆ ವಿಗ್ರಹವು ನಿನ್ನಲ್ಲಿರಬಾರದು.
ನಿನ್ನ ಪ್ರಾರ್ಥನೆಗೆ ಉತ್ತರಿಸುವವನು ನಾನೇ. ನಿನ್ನನ್ನು ಕಾಯುವವನು ನಾನೇ.
ನಾನು ತುರಾಯಿ ಮರದಂತೆ ಸದಾ ಹಸಿರಾಗಿರುವೆನು.
ನಿನ್ನ ಫಲಗಳು ನನ್ನಿಂದ ಬರುವದು.”
ಅಂತಿಮ ಸಲಹೆ
ಬುದ್ಧಿವಂತ ಮನುಷ್ಯನು ಇವುಗಳನ್ನು ಅರ್ಥಮಾಡಿಕೊಳ್ಳುತ್ತಾನೆ.
ಜಾಣನು ಇದನ್ನು ಕಲಿತುಕೊಳ್ಳುತ್ತಾನೆ.
ಯೆಹೋವನ ಮಾರ್ಗವು ಸರಿಯಾದದ್ದು.
ಒಳ್ಳೆಯ ಜನರು ಅವರೊಂದಿಗೆ ಜೀವಿಸುವರು.
ಪಾಪಿಗಳು ಅವುಗಳಿಂದ ಸಾಯುವರು.