ಥೆಸಲೋನಿಕದಲ್ಲಿ ಪೌಲನ ಕಾರ್ಯ
2
ಸಹೋದರ ಸಹೋದರಿಯರೇ, ನಾವು ನಿಮ್ಮಲ್ಲಿಗೆ ಬಂದದ್ದು ವ್ಯರ್ಥವಾಗಲಿಲ್ಲ ಎಂಬುದು ನಿಮಗೆ ತಿಳಿದಿದೆ. ನಿಮ್ಮಲ್ಲಿಗೆ ಬರುವುದಕ್ಕೆ ಮೊದಲೇ ಫಿಲಿಪ್ಪಿಯಲ್ಲಿ ಹಿಂಸೆಯನ್ನು ಅನುಭವಿಸಿದೆವು. ಅಲ್ಲಿಯ ಜನರು ನಮ್ಮ ವಿರುದ್ಧವಾಗಿ ಕೆಟ್ಟದ್ದನ್ನು ಹೇಳಿದರು. ಅದೆಲ್ಲವೂ ನಿಮಗೆ ತಿಳಿದಿದೆ. ನಿಮ್ಮ ಬಳಿಗೆ ಬಂದಾಗ, ಅನೇಕ ಜನರು ನಮಗೆ ವಿರುದ್ಧವಾಗಿದ್ದರು. ಆದರೆ ಧೈರ್ಯದಿಂದ ಇರಲು ಮತ್ತು ನಿಮಗೆ ಸುವಾರ್ತೆಯನ್ನು ತಿಳಿಸಲು ದೇವರು ನಮಗೆ ಸಹಾಯ ಮಾಡಿದನು. ನಮ್ಮ ಬೋಧನೆಯು ತಪ್ಪೂ ಅಲ್ಲ ಮತ್ತು ಅಶುದ್ಧವಾದ ಉದ್ದೇಶವನ್ನು ಹೊಂದಿಯೂ ಇಲ್ಲ ಮತ್ತು ನಿಮ್ಮನ್ನು ಮೋಸಗೊಳಿಸುವ ಪ್ರಯತ್ನವೂ ಅಲ್ಲ. ನಾವು ಸುವಾರ್ತೆಯನ್ನು ತಿಳಿಸುತ್ತೇವೆ. ಏಕೆಂದರೆ ದೇವರು ನಮ್ಮನ್ನು ಪರಿಶೋಧಿಸಿದ್ದಾನೆ ಮತ್ತು ಸುವಾರ್ತೆಯನ್ನು ತಿಳಿಸಲು ನಮ್ಮನ್ನು ನೇಮಿಸಿದ್ದಾನೆ. ಆದುದರಿಂದ ಜನರನ್ನು ಮೆಚ್ಚಿಸಲು ಪ್ರಯತ್ನಿಸದೆ ನಮ್ಮ ಹೃದಯಗಳನ್ನು ಪರೀಕ್ಷಿಸುವಾತನಾದ ದೇವರನ್ನೇ ಮೆಚ್ಚಿಸಲು ಪ್ರಯತ್ನಿಸುತ್ತೇವೆ.
ನಿಮ್ಮ ಬಗ್ಗೆ ಒಳ್ಳೆಯದನ್ನು ಹೇಳಿ ನಿಮ್ಮನ್ನು ಮರುಳು ಮಾಡಬೇಕೆಂದು ನಾವೆಂದೂ ಪ್ರಯತ್ನಿಸಿಲ್ಲವೆಂಬುದು ನಿಮಗೆ ತಿಳಿದಿದೆ. ನಾವು ನಿಮ್ಮ ಹಣವನ್ನು ಕಸಿದುಕೊಳ್ಳಲು ಪ್ರಯತ್ನಿಸಿಲ್ಲ; ನಮ್ಮ ಸ್ವಾರ್ಥವನ್ನು ಮರೆಮಾಡಿಕೊಂಡು ವೇಶಧಾರಿಗಳಾಗಿರಲಿಲ್ಲ. ಇದು ನಿಜವೆಂಬುದು ದೇವರಿಗೆ ತಿಳಿದಿದೆ. ಜನರಿಂದ ಬರುವ ಮಾನಮರ್ಯಾದೆಗಳನ್ನು ನಿಮ್ಮಿಂದಾಗಲಿ ಇತರ ಜನರಿಂದಾಗಲಿ ನಾವೆಂದೂ ಬಯಸಲಿಲ್ಲ.
ನಾವು ಕ್ರಿಸ್ತನ ಅಪೊಸ್ತಲರಾಗಿ ನಿಮ್ಮೊಡಗಿದ್ದಾಗ, ನಿಮ್ಮಿಂದ ದುಡಿಸಿಕೊಳ್ಳಲು ನಮ್ಮ ಅಧಿಕಾರವನ್ನು ಬಳಸಬಹುದಾಗಿತ್ತು. ಆದರೆ ನಿಮ್ಮೊಡನೆ ಬಹಳ ಸಾತ್ವಿಕರಾಗಿದ್ದೆವು. ತಾಯಿಯು ತನ್ನ ಸ್ವಂತ ಚಿಕ್ಕ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ನಾವು ನಡೆದುಕೊಂಡೆವು. ನಿಮ್ಮನ್ನು ಬಹಳವಾಗಿ ಪ್ರೀತಿಸಿದೆವು. ಆದುದರಿಂದ ದೇವರ ಸುವಾರ್ತೆಯನ್ನು ನಿಮ್ಮೊಡನೆ ಹಂಚಿಕೊಳ್ಳಲು, ಮಾತ್ರವೇ ಅಲ್ಲ, ನಿಮಗೋಸ್ಕರ ಸ್ವಂತ ಪ್ರಾಣವನ್ನೇ ಕೊಡಲು ಸಿದ್ಧರಾಗಿದ್ದೆವು. ಸಹೋದರ ಸಹೋದರಿಯರೇ, ನಾವು ಅನುಭವಿಸಿದ ಕಷ್ಟ ಕಾರ್ಪಣ್ಯಗಳು ನಿಮ್ಮ ನೆನಪಿನಲ್ಲೇ ಇವೆ. ನಿಮಗೆ ದೇವರ ಸುವಾರ್ತೆಯನ್ನು ಉಪದೇಶಿಸಿದಾಗ ನೀವು ನಮಗೆ ವೇತನ ನೀಡುವ ಭಾರವನ್ನು ನಿಮ್ಮ ಮೇಲೆ ಹಾಕಬಾರದೆಂದು ಹಗಲಿರುಳು ದುಡಿದು ಜೀವನ ಸಾಗಿಸಿದೆವು.
10 ವಿಶ್ವಾಸಿಗಳಾದ ನಿಮ್ಮೊಡನೆ ನಾವಿದ್ದಾಗ ತಪ್ಪಿಲ್ಲದವರಾಗಿಯೂ ಪರಿಶುದ್ಧರಾಗಿಯೂ ಮತ್ತು ನಿರ್ದೋಷಿಗಳಾಗಿಯೂ ಜೀವಿಸಿದ್ದೆವು. ಇದು ನಿಜವೆಂಬುದು ನಿಮಗೂ ತಿಳಿದಿದೆ ಮತ್ತು ದೇವರಿಗೂ ತಿಳಿದಿದೆ. 11 ತಂದೆಯು ತನ್ನ ಸ್ವಂತ ಮಕ್ಕಳೊಡನೆ ನಡೆದುಕೊಳ್ಳುವಂತೆ ನಿಮ್ಮಲ್ಲಿ ಪ್ರತಿಯೊಬ್ಬರೊಡನೆಯೂ ನಡೆದುಕೊಂಡೆವೆಂಬುದು ನಿಮಗೆ ತಿಳಿದಿದೆ. 12 ನಿಮ್ಮನ್ನು ಬಲಗೊಳಿಸಿದೆವು ಮತ್ತು ಸಂತೈಸಿದೆವು. ನಿಮ್ಮನ್ನು ತನ್ನ ರಾಜ್ಯಕ್ಕೂ ಮಹಿಮೆಗೂ ಕರೆದ ದೇವರಿಗಾಗಿ ಯೋಗ್ಯವಾದ ರೀತಿಯಲ್ಲಿ ಜೀವಿಸಿರಿ ಎಂದು ನಾವು ನಿಮಗೆ ತಿಳಿಸಿದೆವು.
13 ನೀವು ದೇವರ ಸಂದೇಶವನ್ನು ಸ್ವೀಕರಿಸಿಕೊಂಡದ್ದಕ್ಕಾಗಿ ದೇವರಿಗೆ ಯಾವಾಗಲೂ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ. ನೀವು ಆ ಸಂದೇಶವನ್ನು ನಮ್ಮಿಂದ ಕೇಳಿ, ಅದನ್ನು ದೇವರ ವಾಕ್ಯದಂತೆ ಒಪ್ಪಿಕೊಂಡಿರೇ ಹೊರತು ಮಾನವನ ವಾಕ್ಯಗಳೆಂದಲ್ಲ. ಅದು ನಿಜವಾಗಿಯೂ ದೇವರ ಸಂದೇಶ. ಆ ಸಂದೇಶವು ನಂಬುವವರಾದ ನಿಮ್ಮಲ್ಲಿ ಕಾರ್ಯಮಾಡುತ್ತದೆ. 14 ಸಹೋದರ ಸಹೋದರಿಯರೇ, ನೀವು ಜುದೇಯದಲ್ಲಿರುವ ದೇವರ ಸಭೆಗಳಂತಿದ್ದೀರಿ. ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸವಿಟ್ಟಿರುವ ಅವರು ಇತರ ಯೆಹೂದ್ಯರಿಂದ ಹಿಂಸಿಸಲ್ಪಟ್ಟರು. ಅದೇ ರೀತಿಯಲ್ಲಿ ನೀವೂ ನಿಮ್ಮ ದೇಶದ ಇತರ ಜನರಿಂದ ಹಿಂಸಿಸಲ್ಪಟ್ಟವರಾಗಿದ್ದೀರಿ. 15 ಆ ಯೆಹೂದ್ಯರು ಪ್ರಭುವಾದ ಯೇಸುವನ್ನೂ ಪ್ರವಾದಿಗಳನ್ನೂ ಕೊಂದುಹಾಕಿದರು. ತಮ್ಮ ದೇಶದಿಂದ (ಜುದೇಯ) ನಮ್ಮನ್ನು ಬಲವಂತವಾಗಿ ಹೊರಗಟ್ಟಿದರು. ಅವರು ದೇವರಿಗೆ ಮೆಚ್ಚಿಕೆಯಾದವರಾಗಿಲ್ಲ ಮತ್ತು ಜನರೆಲ್ಲರ ವಿರುದ್ಧವಾಗಿದ್ದಾರೆ. 16 ಹೌದು, ಯೆಹೂದ್ಯರಲ್ಲದವರಿಗೆ ರಕ್ಷಣೆ ನೀಡುವ ಸುವಾರ್ತೆಯನ್ನು ನಾವು ಉಪದೇಶಿಸದಂತೆ ನಮ್ಮನ್ನು ತಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಹೀಗೆ ಅವರು ತಮ್ಮ ಪಾಪಗಳಿಗೆ ಮತ್ತಷ್ಟು ಪಾಪಗಳನ್ನು ಕೂಡಿಸುತ್ತಿದ್ದಾರೆ. ಕೊನೆಗೆ, ದೇವರ ಕೋಪವು ಅವರ ಮೇಲೆ ಬರುತ್ತದೆ.
ಥೆಸಲೋನಿಕದವರನ್ನು ಮತ್ತೆ ನೋಡಲು ಪೌಲನ ಆಸೆ
17 ಸಹೋದರ ಸಹೋದರಿಯರೇ, ನಿಮ್ಮಿಂದ ಸ್ವಲ್ಪಕಾಲ ಅಗಲಿ ಹೋಗಿದ್ದೆವು. (ನಾವು ನಿಮ್ಮೊಡನೆ ಇರಲಿಲ್ಲ. ಆದರೆ ನಮ್ಮ ಆಲೋಚನೆಗಳು ನಿಮ್ಮೊಡನೆ ಇನ್ನೂ ಇವೆ.) ನಿಮ್ಮನ್ನು ನೋಡಲು ಅತ್ಯಾಸೆಯಿಂದ ಬಹಳ ಪ್ರಯತ್ನಪಟ್ಟೆವು. 18 ಹೌದು, ನಾವು ನಿಮ್ಮಲ್ಲಿಗೆ ಬರಬೇಕೆಂದಿದ್ದೆವು. ಪೌಲನಾದ ನಾನು, ನಿಜವಾಗಿಯೂ ಅನೇಕ ಸಲ ಬರಲು ಪ್ರಯತ್ನಿಸಿದೆನು, ಆದರೆ ನಮ್ಮನ್ನು ಸೈತಾನನು ನಿಲ್ಲಿಸಿದನು. 19 ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ ನಾವು ಹೊಗಳಿಕೊಳ್ಳುವ ನಮ್ಮ ನಿರೀಕ್ಷೆ, ನಮ್ಮ ಸಂತೋಷ, ನಮ್ಮ ಕಿರೀಟ ನೀವೇ ಆಗಿದ್ದೀರಿ. 20 ನಿಜವಾಗಿಯೂ ನೀವೇ ನಮ್ಮ ಸಂತೋಷ ಮತ್ತು ಗೌರವವಾಗಿದ್ದೀರಿ.