ಜೆರುಸಲೇಮಿನ ಜನರು ಚದುರಿಹೋಗುವ ಸೂಚನೆ
5
1-2 “ನರಪುತ್ರನೇ, ಈ ಕಾರ್ಯಗಳನ್ನು ಮುತ್ತಿಗೆಯ ಕಾಲ ಮುಗಿಯಿತೆಂದು ಸೂಚಿಸುವ ಅವಧಿಯ ನಂತರ ಮಾಡಬೇಕು. ನೀನು ಕ್ಷೌರಕನ ಹರಿತವಾದ ಕ್ಷೌರಕತ್ತಿಯನ್ನು ತೆಗೆದುಕೊಳ್ಳಬೇಕು. ನಿನ್ನ ತಲೆಯ ಕೂದಲನ್ನೂ ಗಡ್ಡವನ್ನೂ ಬೋಳಿಸು. ಕೂದಲನ್ನು ತ್ರಾಸಿನಲ್ಲಿ ಹಾಕಿ ಅದನ್ನು ತೂಕ ಮಾಡು. ಆ ಕೂದಲುಗಳನ್ನು ಮೂರು ಪಾಲಾಗಿ ಮಾಡು. ಅದರ ಒಂದು ಪಾಲನ್ನು ನೀನು ಚಿತ್ರಿಸಿದ್ದ ಇಟ್ಟಿಗೆಯ ಮೇಲೆ ಹಾಕು. ಆ ನಗರದ ಮೇಲೆ ಕೂದಲನ್ನು ಸುಟ್ಟುಬಿಡು. ಇದು, ಜನರಲ್ಲಿ ಕೆಲವು ಮಂದಿ ನಗರದಲ್ಲಿ ಸಾಯುವರು ಎಂಬುದಕ್ಕೆ ಗುರುತಾಗಿದೆ. ನೀನು ಕೂದಲಲ್ಲಿ ಮೂರನೆ ಒಂದು ಭಾಗವನ್ನು ತೆಗೆದುಕೊಂಡು ಅದನ್ನು ಪಟ್ಟಣದ ಹೊರಗೆ ಸುತ್ತಲೆಲ್ಲಾ ನಿನ್ನ ಕ್ಷೌರಕತ್ತಿಯಿಂದ ಕತ್ತರಿಸು. ಕೆಲವು ಜನರು ಪಟ್ಟಣದ ಹೊರಗೆ ಸಾಯುತ್ತಾರೆ ಎಂಬುದನ್ನು ಇದು ಸೂಚಿಸುತ್ತದೆ. ಬಳಿಕ ನಿನ್ನ ಕೂದಲಿನ ಉಳಿದ ಮೂರನೆಯ ಒಂದು ಭಾಗವನ್ನು ಗಾಳಿಯಲ್ಲಿ ತೂರಿಬಿಡು. ಗಾಳಿಯು ಅದನ್ನು ಬಹುದೂರದವರೆಗೆ ಬಡಿದುಕೊಂಡು ಹೋಗಲಿ. ಇದೇ ರೀತಿಯಲ್ಲಿ ನಾನು ಖಡ್ಗವನ್ನು ಇರಿದು ಅವರನ್ನು ಬಹುದೂರದ ದೇಶಗಳಿಗೆ ಅಟ್ಟಿಸಿ ಬಿಡುವೆನು.
3 ಆದರೆ ನೀನು ಅದರಿಂದ ಕೆಲವು ಕೂದಲನ್ನು ತೆಗೆದು ನಿನ್ನ ಮೇಲಂಗಿಯ ಅಂಚಿನಲ್ಲಿ ಸುತ್ತಿಡು. ನಾನು ನನ್ನ ಜನರಲ್ಲಿ ಕೆಲವರನ್ನು ರಕ್ಷಿಸುವೆನು ಎಂಬುದಕ್ಕೆ ಇದು ಗುರುತಾಗಿದೆ.
4 ಬಳಿಕ ಕೂದಲಲ್ಲಿ ಸ್ವಲ್ಪವನ್ನು ಮತ್ತೆ ತೆಗೆದುಕೊಂಡು ಬೆಂಕಿಯಲ್ಲಿ ಹಾಕಿ ಸುಟ್ಟುಬಿಡು. ಅಲ್ಲಿಂದ ಬೆಂಕಿಯು ಹಬ್ಬಿ ಇಡೀ ಇಸ್ರೇಲ್ ಜನಾಂಗವನ್ನು ನಾಶಮಾಡುವುದು.”
5 ಆಮೇಲೆ ನನ್ನ ಒಡೆಯನಾದ ಯೆಹೋವನು ಹೀಗೆಂದನು: “ಆ ಇಟ್ಟಿಗೆಯು ಜೆರುಸಲೇಮಿನ ಚಿತ್ರ. ನಾನು ಜೆರುಸಲೇಮನ್ನು ಇತರ ಜನಾಂಗಗಳ ಮಧ್ಯದಲ್ಲಿ ನೆಲೆಗೊಳಿಸಿದ್ದೇನೆ. ಆಕೆಯ ಸುತ್ತಲೂ ಬೇರೆ ದೇಶಗಳಿವೆ.
6 ಜೆರುಸಲೇಮಿನ ನಿವಾಸಿಗಳು ನನ್ನ ಆಜ್ಞೆಗಳಿಗೆ ದಂಗೆ ಎದ್ದಿದ್ದಾರೆ. ಅವರು ಇತರ ಜನಾಂಗಗಳಿಗಿಂತ ಕೆಟ್ಟವರು. ಅವರು ತಮ್ಮ ಸುತ್ತಲಿರುವ ಬೇರೆ ದೇಶಗಳಿಗಿಂತ ಹೆಚ್ಚಾಗಿ ನನ್ನ ಕಟ್ಟಳೆಗಳನ್ನು ಉಲ್ಲಂಬಿಸಿದ್ದಾರೆ. ಅವರು ನನ್ನ ಆಜ್ಞೆಗಳನ್ನು ತಿರಸ್ಕರಿಸಿದರು. ಅವರು ನನ್ನ ಕಟ್ಟಳೆಗಳನ್ನು ಅನುಸರಿಸಲಿಲ್ಲ.”
7 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ: “ನೀವು ಸುತ್ತಲಿರುವ ಜನಾಂಗಗಳಿಗಿಂತ ಹೆಚ್ಚು ಕೆಡುಕನ್ನು ಮಾಡಿದ್ದೀರಿ. ನೀವು ನನ್ನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ; ನನ್ನ ಕಟ್ಟಳೆಗಳನ್ನು ಅನುಸರಿಸಲಿಲ್ಲ. ನಿಮ್ಮ ಸುತ್ತಲಿರುವ ಜನಾಂಗಗಳ ನಿಯಮಗಳನ್ನೂ ಅನುಸರಿಸಲಿಲ್ಲ.”
8 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನಾನು ನಿಮಗೆ ವಿರೋಧವಾಗಿದ್ದೇನೆ. ಬೇರೆ ಜನರ ಕಣ್ಣೆದುರಿನಲ್ಲಿಯೇ ನಿಮ್ಮನ್ನು ದಂಡಿಸುವೆನು.
9 ನಿಮ್ಮ ಎಲ್ಲಾ ಅಸಹ್ಯಕೃತ್ಯಗಳ ದೆಸೆಯಿಂದ ನಾನು ಹಿಂದೆಂದೂ ಮಾಡಿಲ್ಲದ, ಮುಂದೆಂದೂ ಮಾಡದ ಸಂಗತಿಗಳನ್ನು ನಿಮಗೆ ಬರಮಾಡುವೆನು.
10 ಜೆರುಸಲೇಮಿನ ಜನರು ಹಸಿವೆ ತಾಳಲಾರದೆ ತಮ್ಮ ಸ್ವಂತ ಮಕ್ಕಳನ್ನು ಕಬಳಿಸುವರು ಮತ್ತು ಮಕ್ಕಳು ತಮ್ಮ ತಂದೆತಾಯಿಗಳನ್ನೆ ತಿನ್ನುವರು. ಬೇರೆಬೇರೆ ರೀತಿಯಲ್ಲಿ ನಾನು ನಿಮ್ಮನ್ನು ಶಿಕ್ಷಿಸುವೆನು. ಜೀವದಿಂದುಳಿದವರನ್ನು ನಾನು ಗಾಳಿಗೆ ತೂರಿಬಿಡುವೆನು.”
11 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಜೆರುಸಲೇಮೇ, ನನ್ನ ಜೀವದಾಣೆ! ನಾನು ನಿನ್ನನ್ನು ಶಿಕ್ಷಿಸುವೆನು. ಯಾಕೆಂದರೆ ನೀನು ನನ್ನ ಪವಿತ್ರ ಸ್ಥಳಕ್ಕೆ ಮಹತ್ವವನ್ನು ಕೊಡಲಿಲ್ಲ. ಅಸಹ್ಯವಾದ ಮತ್ತು ಗಾಬರಿಗೊಳಿಸುವ ನಿನ್ನ ಎಲ್ಲಾ ಕಾರ್ಯಗಳಿಂದ ನೀನು ಅದನ್ನು ಅಶುದ್ಧಗೊಳಿಸಿರುವಿ. ನಾನು ನಿನಗೆ ಕನಿಕರತೋರಿಸದೆ ಶಿಕ್ಷಿಸುವೆನು. ನಿನ್ನ ಮೇಲೆ ನನಗೆ ದಯೆಯಿರದು.
12 ನಿನ್ನ ಜನರಲ್ಲಿ ಮೂರನೆ ಒಂದು ಭಾಗ ಪಟ್ಟಣದೊಳಗೆ ರೋಗದಿಂದಲೂ ಹಸಿವಿನಿಂದಲೂ ಸಾಯುವರು. ಮೂರರಲ್ಲಿ ಇನ್ನೊಂದು ಭಾಗ ಪಟ್ಟಣದ ಹೊರಗೆ ರಣರಂಗದಲ್ಲಿ ಸಾಯುವರು. ಅನಂತರ ನಾನು ನನ್ನ ಖಡ್ಗವನ್ನು ಇರಿದು ಉಳಿದವರನ್ನು ಬಹುದೂರದ ದೇಶಕ್ಕೆ ಅಟ್ಟಿಬಿಡುವೆನು.
13 ಆಗಲೇ ನನ್ನ ಕೋಪವು ಶಮನವಾಗುವುದು. ನಾನು ಅವರ ವಿರುದ್ಧವಾಗಿ ನನ್ನ ಕೋಪವನ್ನು ಬಳಸಿ ತೃಪ್ತನಾಗುವೆನು. ನನ್ನ ಕೋಪವನ್ನು ಸುರಿದಾಗ ಯೆಹೋವನಾದ ನಾನೇ ಅವರೊಂದಿಗೆ ಕೋಪದಿಂದ ಮಾತಾಡಿದೆನೆಂದು ಅವರಿಗೆ ಗೊತ್ತಾಗುವುದು.”
14 ದೇವರು ಹೇಳಿದ್ದೇನೆಂದರೆ, “ಜೆರುಸಲೇಮೇ, ನಾನು ನಿನ್ನನ್ನು ನಾಶಮಾಡುವೆನು. ನೀನು ಕಲ್ಲುಗಳ ರಾಶಿಯಾಗಿ ಹೋಗುವಿ. ನಿನ್ನ ಸುತ್ತಲೂ ಇರುವ ಜನಾಂಗಗಳು ನಿನ್ನನ್ನು ಗೇಲಿ ಮಾಡುತ್ತವೆ. ನಿನ್ನನ್ನು ದಾಟಿಹೋಗುವ ಪ್ರತಿಯೊಬ್ಬನೂ ನಿನ್ನನ್ನು ಕಂಡು ಹಾಸ್ಯಮಾಡುವನು.
15 ನಿನ್ನ ಸುತ್ತಲೂ ಇರುವ ಜನಾಂಗಗಳು ನಿನಗೆ ಅವಮಾನ ಮಾಡಿ ಗೇಲಿ ಮಾಡುತ್ತವೆ. ನೀನು ಅವರಿಗೆ ಎಚ್ಚರಿಕೆಯಾಗಿಯೂ ಭಯೋತ್ಪಾದಕಕಾರಿಯಾಗಿಯೂ ಇರುವಿ. ನಾನು ನನ್ನ ಮಹಾಕೋಪದಿಂದ ನಿನ್ನನ್ನು ದಂಡಿಸಿದಾಗ ಇದು ಸಂಭವಿಸುವುದು. ಯೆಹೋವನಾದ ನಾನೇ ಇದನ್ನು ಹೇಳಿದ್ದೇನೆ.
16 ಬರಗಾಲವೆಂಬ ಮರಣಕರವಾದ ಮತ್ತು ನಾಶಕರವಾದ ಬಾಣಗಳಿಂದ ನಾನು ನಿನ್ನನ್ನು ನಾಶಗೊಳಿಸುವದಕ್ಕಾಗಿಯೇ ಹೊಡೆಯುತ್ತೇನೆ. ನಾನು ನಿನ್ನ ದೇಶಕ್ಕೆ ಕ್ಷಾಮದ ಮೇಲೆ ಕ್ಷಾಮವನ್ನು ಬರಮಾಡುವೆನು ಮತ್ತು ನಿನ್ನ ಆಹಾರ ಸರಬರಾಜನ್ನು ನಿಲ್ಲಿಸುವೆನು.
17 ನಾನು ನಿನಗೆ ವಿರುದ್ಧವಾಗಿ ಬರಗಾಲಗಳನ್ನು ಮತ್ತು ಕ್ರೂರಪ್ರಾಣಿಗಳನ್ನು ಕಳುಹಿಸುವೆನು. ಅವು ನಿನ್ನ ಮಕ್ಕಳನ್ನು ಕೊಲ್ಲುತ್ತವೆ. ನಿನ್ನನ್ನು ಕೊಲ್ಲುವುದಕ್ಕಾಗಿ ರೋಗಗಳನ್ನು, ಹಿಂಸೆಯನ್ನು ಮತ್ತು ಯುದ್ಧಗಳನ್ನು ಕಳುಹಿಸುವೆನು. ಯೆಹೋವನಾದ ನಾನೇ ಇದನ್ನು ಹೇಳಿದ್ದೇನೆ. ಮತ್ತು ಇದು ನೆರವೇರುತ್ತದೆ.”