ಗೋಗ್ ಮತ್ತು ಅವನ ಸೈನ್ಯದ ಅಂತ್ಯ
39
“ನರಪುತ್ರನೇ, ನನ್ನ ಪರವಾಗಿ ಗೋಗನಿಗೆ ವಿರುದ್ಧವಾಗಿ ಹೇಳು. ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆಂದು ಅವನಿಗೆ ಹೇಳು: ‘ಗೋಗನೇ, ನೀನು ಮೆಷೆಕ್ ಮತ್ತು ತೂಬಲ್ ದೇಶಗಳ ಪ್ರಮುಖ ನಾಯಕನು. ಆದರೆ ನಾನು ನಿನಗೆ ವಿರುದ್ಧವಾಗಿದ್ದೇನೆ. ನಾನು ನಿನ್ನನ್ನು ಸೆರೆಹಿಡಿದು ಅತ್ಯಂತ ಉತ್ತರ ದಿಕ್ಕಿನಿಂದ ನಿನ್ನನ್ನು ಬರಮಾಡಿ ಇಸ್ರೇಲಿನ ಪರ್ವತಗಳ ವಿರುದ್ಧವಾಗಿ ಯುದ್ಧ ಮಾಡಿಸುವೆನು. ಆದರೆ ನಾನು ನಿನ್ನ ಎಡಗೈಯಲ್ಲಿರುವ ಬಿಲ್ಲಿಗೆ ಹೊಡೆಯುವೆನು, ಆಗ ನಿನ್ನ ಬಲಗೈಯಲ್ಲಿರುವ ಬಾಣವು ಬಿದ್ದುಹೋಗುವುದು! ನೀನು ಇಸ್ರೇಲಿನ ಪರ್ವತದಲ್ಲಿ ಸಾಯುವೆ, ನೀನೂ, ನಿನ್ನ ಎಲ್ಲಾ ಸೈನ್ಯ, ನಿನ್ನೊಂದಿಗೆ ಬಂದಿದ್ದ ಇತರ ದೇಶದವರೆಲ್ಲಾ ರಣರಂಗದಲ್ಲಿ ಸಾಯುವರು. ನಿಮ್ಮ ಹೆಣಗಳನ್ನು ಆಕಾಶದ ಸಕಲ ಮಾಂಸಹಾರಿ ಪಕ್ಷಿಗಳಿಗೂ, ಕಾಡುಪ್ರಾಣಿಗಳಿಗೂ ಆಹಾರವಾಗಿ ಕೊಡುವೆನು. ನೀನು ನಗರವನ್ನು ಪ್ರವೇಶಿಸುವದಿಲ್ಲ. ನಗರದ ಹೊರಗೆ ಹೊಲದಲ್ಲಿ ನೀನು ಕೊಲ್ಲಲ್ಪಡುವೆ. ಇದನ್ನು ನಾನು ನುಡಿದಿದ್ದೇನೆ.’” ಈ ಸಂಗತಿಗಳನ್ನು ನನ್ನ ಒಡೆಯನಾದ ಯೆಹೋವನು ನುಡಿದನು.
ದೇವರು ಹೇಳಿದ್ದೇನೆಂದರೆ, “ನಾನು ಮಾಗೋಗ್ ಮತ್ತು ಕಡಲ ತೀರದಲ್ಲಿ ವಾಸಿಸುವ ಜನರ ಮೇಲೆ ಬೆಂಕಿಯನ್ನು ಕಳುಹಿಸುತ್ತೇನೆ. ತಾವು ಸುರಕ್ಷಿತವಾಗಿದ್ದೇವೆ ಎಂದು ಅವರು ನೆನಸುತ್ತಾರೆ. ಆದರೆ ನಾನು ಯೆಹೋವನು ಎಂದು ಅವರಿಗೆ ತಿಳಿಯುವದು. ನನ್ನ ಜನರಾದ ಇಸ್ರೇಲರಲ್ಲಿ ನನ್ನ ಪವಿತ್ರನಾಮವನ್ನು ಪ್ರಸಿದ್ಧಿಪಡಿಸುವೆನು. ಅವರು ನನ್ನ ಪವಿತ್ರ ನಾಮವನ್ನು ಇನ್ನು ಮುಂದೆ ಅವಮಾನಕ್ಕೆ ಗುರಿಪಡಿಸುವದಿಲ್ಲ. ರಾಜ್ಯಗಳೆಲ್ಲಾ ನಾನು ಯೆಹೋವನೆಂದು ಅರಿತುಕೊಳ್ಳುವರು. ನಾನೇ ಇಸ್ರೇಲಿನ ಪವಿತ್ರನಾದ ದೇವರು ಎಂದು ತಿಳಿಯುವರು. ಅದು ಸಂಭವಿಸುವ ಸಮಯವು ಹತ್ತಿರ ಬಂದಿತು.” ಇದು ಯೆಹೋವನ ನುಡಿ. “ಆ ದಿವಸದ ವಿಷಯವಾಗಿ ನಾನು ಮಾತನಾಡುತ್ತಿದ್ದೇನೆ.
“ಆ ಸಮಯದಲ್ಲಿ ಇಸ್ರೇಲಿನ ನಗರಗಳಲ್ಲಿ ವಾಸಿಸುವ ಜನರು ಹೊರಗೆ ಬಯಲಿಗೆ ಹೋಗುವರು. ಅಲ್ಲಿ ಅವರು ವೈರಿಗಳ ಆಯುಧಗಳನ್ನು ಕೂಡಿಸಿ ಸುಟ್ಟುಬಿಡುವರು. ಎಲ್ಲಾ ಬಿಲ್ಲುಬಾಣಗಳನ್ನು, ಗುರಾಣಿ, ಬರ್ಜಿ, ಗದೆಗಳನ್ನೆಲ್ಲಾ ಬೆಂಕಿಯಲ್ಲಿ ಹಾಕುವರು. ಏಳು ವರ್ಷಗಳ ತನಕ ಈ ಆಯುಧಗಳನ್ನು ಸೌದೆಯಾಗಿ ಉಪಯೋಗಿಸುವರು. 10 ಆದ್ದರಿಂದ ಅವರಿಗೆ ಅಡವಿಯಿಂದ ಮತ್ತು ಬಯಲಿನಿಂದ ಸೌದೆಯನ್ನು ತೆಗೆಯುವ ಅವಶ್ಯಕತೆ ಇರುವದಿಲ್ಲ. ಅವರು ಸತ್ತ ಸೈನಿಕರಿಂದ ಬೆಲೆಬಾಳುವ ವಸ್ತುಗಳನ್ನು ದೋಚುವರು. ತಮ್ಮಿಂದ ದೋಚಿದ ಸೈನಿಕರಿಂದ ಅವರು ದೋಚುವರು.” ಇದು ಒಡೆಯನಾದ ಯೆಹೋವನ ನುಡಿ.
11 ದೇವರು ಹೇಳಿದ್ದೇನೆಂದರೆ, “ಆ ಸಮಯದಲ್ಲಿ ಗೋಗನನ್ನು ಹೂಣಿಡಲು ನಾನು ಇಸ್ರೇಲಿನಲ್ಲಿ ಸ್ಥಳವನ್ನು ಆರಿಸುತ್ತೇನೆ. ಇವನನ್ನು ಮೃತ್ಯುಸಮುದ್ರದ ಪೂರ್ವದಲ್ಲಿರುವ ‘ಪ್ರಯಾಣಿಕರ ಕಣಿವೆ’* ಯಲ್ಲಿ ಸಮಾಧಿ ಮಾಡಲಾಗುವುದು. ಅದು ಪ್ರವಾಸಿಗಳಿಗೆ ಅಡ್ಡಿಯಾಗುವದು. ಯಾಕೆಂದರೆ ಗೋಗನೂ ಅವನ ಸೈನ್ಯವೂ ಅಲ್ಲಿ ಹೂಣಿಡಲ್ಪಡುವವು. ಆ ಸ್ಥಳ ‘ಗೋಗ್ ಸೈನ್ಯದ ತಗ್ಗು’ ಎಂಬ ಹೊಸ ಹೆಸರಿನಿಂದ ಕರೆಯಲ್ಪಡುವದು. 12 ಇವರನ್ನೆಲ್ಲಾ ಸಮಾಧಿ ಮಾಡಲು ಇಸ್ರೇಲರಿಗೆ ಏಳು ತಿಂಗಳು ಬೇಕಾಗುವದು. ತಮ್ಮ ರಾಜ್ಯವನ್ನು ಶುದ್ಧಪಡಿಸಲು ಅವರು ಹಾಗೆ ಮಾಡಲೇಬೇಕು. 13 ಸಾಮಾನ್ಯ ಜನರು ಶತ್ರು ಸೈನಿಕರನ್ನು ಹೂಣಿಡುವರು. ನಾನು ನನ್ನ ಹೆಸರನ್ನು ಪ್ರಸಿದ್ಧಿಗೆ ತರುವ ದಿವಸ ಆ ಜನರು ಪ್ರಸಿದ್ಧರಾಗುವರು.” ಇದು ನನ್ನ ಒಡೆಯನಾದ ಯೆಹೋವನ ನುಡಿ.
14 “ಹೆಣಗಳನ್ನು ಹೂಳಿಟ್ಟು ದೇಶವನ್ನು ಶುದ್ಧಗೊಳಿಸುವ ಕೆಲಸಗಾರರಿಗೆ ಖಾಯಂ ಕೆಲಸ ಕೊಡಲಾಗುವದು. ಅವರು ದೇಶದಲ್ಲೆಲ್ಲಾ ಹೆಣಗಳನ್ನು ಹುಡುಕಿ ತೆಗೆಯುವರು. ಅವರಿಗೆ ಏಳು ತಿಂಗಳು ಬೇಕಾಗುವುದು. 15 ಅವರಲ್ಲೊಬ್ಬನಿಗೆ ಒಂದು ಎಲುಬು ನೋಡಸಿಕ್ಕಿದರೆ ಅವನು ಅಲ್ಲಿ ಒಂದು ಗುರುತನ್ನಿಡುವನು. ಹೂಣಿಡುವವರು ಬಂದು ಆ ಎಲುಬನ್ನು ತೆಗೆದು ಗೋಗನ ಸೈನ್ಯದ ತಗ್ಗಿನಲ್ಲಿ ಹೂಣಿಡುವ ತನಕ ಆ ಗುರುತು ಅಲ್ಲಿಯೇ ಇರುವದು. 16 ಸತ್ತವರ ಆ ನಗರವನ್ನು (ಸಮಾಧಿ) ಹಮೋನ ಎಂದು ಕರೆಯಲಾಗುವದು. ಈ ರೀತಿಯಾಗಿ ಅವರು ದೇಶವನ್ನು ಶುದ್ಧ ಮಾಡುವರು.”
17 ನನ್ನ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ, “ನರಪುತ್ರನೇ, ಎಲ್ಲಾ ಪಕ್ಷಿಗಳಿಗೂ ಕಾಡುಪ್ರಾಣಿಗಳಿಗೂ ಹೀಗೆ ಹೇಳು: ‘ನೀವೆಲ್ಲಾ ಕೂಡಿ ಬನ್ನಿರಿ. ನಾನು ನಿಮಗಾಗಿ ಇಸ್ರೇಲಿನ ಪರ್ವತಗಳಲ್ಲಿ ಮಾಡುವ ಮಹಾಯಜ್ಞಕ್ಕೆ ಎಲ್ಲಾ ಕಡೆಯಿಂದಲೂ ನೆರೆದುಬಂದು ಮಾಂಸವನ್ನು ತಿಂದು ರಕ್ತವನ್ನು ಕುಡಿಯಿರಿ. 18 ನೀವು ರಣವೀರರ ಮಾಂಸವನ್ನು ತಿನ್ನುವಿರಿ, ಪ್ರಪಂಚದ ನಾಯಕರ ರಕ್ತವನ್ನು ಕುಡಿಯುವಿರಿ. ಅವರೆಲ್ಲಾ ಬಾಷಾನಿನ ಕುರಿ, ಹೋತ, ಹೋರಿಗಳಂತೆ ಕೊಬ್ಬಿಕೊಂಡಿದ್ದಾರೆ. 19 ನಿಮಗಾಗಿ ವಧಿಸಿರುವ ಯಜ್ಞಪಶುಗಳ ಮಾಂಸವನ್ನು ಹೊಟ್ಟೆತುಂಬ ತಿನ್ನಿರಿ; ಅಮಲೇರುವ ತನಕ ರಕ್ತವನ್ನು ಕುಡಿಯಿರಿ. 20 ನನ್ನ ಈ ಔತಣದಲ್ಲಿ ಕುದುರೆಗಳ, ರಾಹುತರ, ಶೂರರ ಮತ್ತು ಸೈನಿಕರ ಮಾಂಸವನ್ನು ಬೇಕಾದಷ್ಟು ತಿನ್ನುವಿರಿ.’” ನನ್ನ ಒಡೆಯನಾದ ಯೆಹೋವನ ನುಡಿಗಳಿವು.
21 ದೇವರು ಹೇಳಿದ್ದೇನೆಂದರೆ, “ನಾನು ಮಾಡಿದ್ದನ್ನು ಇತರ ದೇಶಗಳವರು ನೋಡುವಂತೆ ಮಾಡುವೆನು. ಆಗ ಆ ದೇಶದವರು ನನ್ನನ್ನು ಗೌರವಿಸಲು ಪ್ರಾರಂಭಿಸುವರು. ಆ ಶತ್ರುವಿಗೆದುರಾಗಿ ನನ್ನ ಸಾಮರ್ಥ್ಯ ತೋರಿಸಿದುದನ್ನು ಅವರು ನೋಡುವರು. 22 ಆ ದಿವಸದಿಂದ ಇಸ್ರೇಲಿನ ಜನಾಂಗ ನಾನು ಅವರ ಒಡೆಯನಾದ ಯೆಹೋವನೆಂದು ಅರಿಯುವರು. 23 ಎಲ್ಲಾ ಜನಾಂಗಗಳವರಿಗೆ ನಾನು ಯಾಕೆ ಇಸ್ರೇಲರು ಸೆರೆಹಿಡಿಯಲ್ಪಟ್ಟು ಚದರಿಹೋಗುವಂತೆ ಮಾಡಿದೆನು ಎಂದು ತಿಳಿಯುವರು. ನನ್ನ ಜನರು ನನಗೆ ವಿರುದ್ಧವಾಗಿ ತಿರುಗಿ ಬಿದ್ದರು. ಆಗ ನಾನು ಅವರಿಂದ ದೂರ ಹೋದೆನು. ಅವರ ವೈರಿಗಳು ಅವರನ್ನು ಸೋಲಿಸುವಂತೆ ಮಾಡಿದೆನು. ಆದ್ದರಿಂದ ಅವರು ರಣರಂಗದಲ್ಲಿ ಮಡಿದರು. 24 ಅವರು ಪಾಪ ಮಾಡಿ ತಮ್ಮನ್ನು ಅಶುದ್ಧರನ್ನಾಗಿ ಮಾಡಿಕೊಂಡರು. ಅದಕ್ಕಾಗಿ ನಾನು ಅವರನ್ನು ಶಿಕ್ಷಿಸಿದೆನು. ಅವರಿಂದ ನಾನು ದೂರವಾಗಿ ಅವರಿಗೆ ಸಹಾಯ ಮಾಡಲು ನಿರಾಕರಿಸಿದೆನು.”
25 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಈಗ ನಾನು ಯಾಕೋಬನ ವಂಶದವರನ್ನು ಸೆರೆಯಿಂದ ಬಿಡಿಸಿ ಹಿಂದಕ್ಕೆ ತರುವೆನು. ಇಸ್ರೇಲಿನ ಜನಾಂಗದವರ ಮೇಲೆಲ್ಲಾ ನನ್ನ ದಯೆ ಇರುವದು. ನನ್ನ ಪವಿತ್ರನಾಮದ ಸಲುವಾಗಿ ಅವರನ್ನು ಉದ್ಧರಿಸುವೆನು. 26 ಆ ಜನರು ತಮಗೊದಗಿದ ಅವಮಾನವನ್ನೂ ನನಗೆ ವಿರುದ್ಧವಾಗಿ ವರ್ತಿಸಿದ್ದನ್ನೂ ಮರೆತುಬಿಡುವರು. ತಮ್ಮ ಸಬದೇಶದಲ್ಲಿ ಸುರಕ್ಷಿತವಾಗಿ ವಾಸಿಸುವರು. ಅವರು ಯಾರಿಗೂ ಹೆದರಬೇಕಾಗಿಲ್ಲ. 27 ಬೇರೆಬೇರೆ ದೇಶಗಳಿಂದ ನಾನು ನನ್ನ ಜನರನ್ನು ಹಿಂದಕ್ಕೆ ತರಿಸುವೆನು. ಅವರ ಶತ್ರುಗಳ ದೇಶದಿಂದ ನಾನು ಅವರನ್ನು ಒಟ್ಟುಗೂಡಿಸುವೆನು. ಆಗ ಅನೇಕ ಜನಾಂಗಗಳು ನಾನು ಎಷ್ಟು ಪವಿತ್ರನೆಂದು ಅರಿತುಕೊಳ್ಳುವರು. 28 ನಾನು ಅವರ ಒಡೆಯನಾದ ಯೆಹೋವನೆಂದು ತಿಳಿಯುವರು. ಯಾಕೆಂದರೆ ನಾನು, ಅವರನ್ನು ಅವರ ಸಬದೇಶವನ್ನು ಬಿಟ್ಟು ಸೆರೆಹಿಡಿಯಲ್ಪಟ್ಟವರಾಗಿ ಬೇರೆ ದೇಶಗಳಿಗೆ ಹೋಗುವಂತೆ ಮಾಡಿದೆನು. ಆಮೇಲೆ ತಿರುಗಿ ಅವರನ್ನು ಒಟ್ಟುಗೂಡಿಸಿ ಅವರ ದೇಶಕ್ಕೆ ಹಿಂದಕ್ಕೆ ಕರೆಸಿದೆನು. 29 ನಾನು ಇಸ್ರೇಲ್ ಜನಾಂಗದವರ ಮೇಲೆ ನನ್ನ ಆತ್ಮವನ್ನು ಸುರಿಸುವೆನು. ಅನಂತರ ನಾನು ಎಂದಿಗೂ ಅವರಿಗೆ ವಿಮುಖನಾಗಿರುವದಿಲ್ಲ.” ಇದು ನನ್ನ ಒಡೆಯನಾದ ಯೆಹೋವನ ನುಡಿ.

* 39:11: ಪ್ರಯಾಣಿಕರ ಕಣಿವೆ “ಅರಾಬಾ” ಎಂಬ ಪದದ ಮೇಲೆ ಇಲ್ಲಿ ಶಬ್ದ ಚಮತ್ಕಾರವನ್ನು ಬಳಸಲಾಗಿದೆ. “ಅರಾಬ” ಎಂದರೆ ಮರುಭೂಮಿ. “ಅವರಿಮ್” ಎಂದರೆ ಪ್ರಯಾಣಿಕರು ಕಣಿವೆಯನ್ನು ಸಮಾಧಿಸ್ಥಳವನ್ನಾಗಿ ಪರಿವರ್ತಿಸಿದ್ದುದರಿಂದ ಭೂಮಿಯು ಅಶುದ್ಧವಾಗುತ್ತಿದ್ದ ಕಾರಣದಿಂದ ಪ್ರಯಾಣಿಕರು ಆ ಸ್ಥಳವನ್ನು ಸುತ್ತಿಕೊಂಡು ಹೋಗಬೇಕಾಗುತ್ತಿತ್ತು.